ಹೊಸ ಆದಾಯ ತೆರಿಗೆ ನಿಯಮಗಳು online desk
ಅಂಕಣಗಳು

ಹೊಸ ವಿತ್ತೀಯ ವರ್ಷದಲ್ಲಿ ಆಗಿರುವ ಬದಲಾವಣೆಗಳೇನು ಗೊತ್ತಾ? (ಹಣಕ್ಲಾಸು)

ಹೊಸ ಆದಾಯ ತೆರಿಗೆ ವ್ಯವಸ್ಥೆ ಜಾರಿಗೆ ಬಂದಿದೆ. ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿ ಹೊಸ Income Tax Act, 2025 ಜಾರಿಗೆ ಬಂದಿದೆ.ಸ್ಲಾಬ್ ರೇಟುಗಳು ಹಾಗೆ ಇರಲಿವೆ.

2026ರ ಏಪ್ರಿಲ್ 1ರಿಂದ ಕೇಂದ್ರ ಸರಕಾರ ಹಲವಾರು ಮಹತ್ವದ ಹಣಕಾಸು, ತೆರಿಗೆ ಮತ್ತು ಡಿಜಿಟಲ್ ನಿಯಮಗಳನ್ನು ಜಾರಿಗೆ ತಂದಿದೆ. ಇವು ಸಾಮಾನ್ಯ ನಾಗರಿಕರಿಂದ ಹಿಡಿದು ಸಣ್ಣ ವ್ಯಾಪಾರಿಗಳು, ದೊಡ್ಡ ಕಂಪನಿಗಳು ಮತ್ತು ಸ್ಟಾಕ್ ಮಾರುಕಟ್ಟೆ ಹೂಡಿಕೆದಾರರ ತನಕ ಎಲ್ಲರ ಮೇಲೂ ಪರಿಣಾಮ ಬೀರುತ್ತವೆ. ಈ ಬದಲಾವಣೆಗಳ ಮುಖ್ಯ ಉದ್ದೇಶ ಸರಳತೆ, ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವುದಾಗಿದೆ. ಪ್ರತಿ ವರ್ಷವೂ ಒಂದಲ್ಲ ಒಂದು ಬದಲಾವಣೆ ಆಗುವುದು ಸಾಮಾನ್ಯ. ಆದರೆ ಈ ವರ್ಷ ಒಂದಷ್ಟು ಹೆಚ್ಚು ಬದಲಾವಣೆಗಳಾಗಿವೆ ಎಂದು ಹೇಳಬಹುದು. ಕೇಂದ್ರದ ಜೊತೆಗೆ ಕರ್ನಾಟಕ ಸರಕಾರ ಕೂಡ ಒಂದಷ್ಟು ಬದಲಾವಣೆಯನ್ನು ಜಾರಿಗೆ ತಂದಿದೆ. ಅವೆಲ್ಲವನ್ನೂ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಹೊಸ ಆದಾಯ ತೆರಿಗೆ ವ್ಯವಸ್ಥೆ ಜಾರಿಗೆ ಬಂದಿದೆ. ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿ ಹೊಸ Income Tax Act, 2025 ಜಾರಿಗೆ ಬಂದಿದೆ.ಸ್ಲಾಬ್ ರೇಟುಗಳು ಹಾಗೆ ಇರಲಿವೆ. ಈ ಹೊಸ ಆಕ್ಟ್ನಿಂದ ನಾವು ಕಟ್ಟುವ ತೆರಿಗೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ “Financial Year (FY)” ಮತ್ತು “Assessment Year (AY)” ಪದಗಳನ್ನು ತೆಗೆದುಹಾಕಿ “Tax Year” ಎನ್ನುವ ಒಂದು ಅಂಶವನ್ನು ಮಾತ್ರ ಹೇಳಲಾಗಿದೆ. ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ FY ಮತ್ತು AY ನಡುವಿನ ಗೊಂದಲ ಬಹಳ ಜನರಿಗೆ ಇತ್ತು. ಉದಾಹರಣೆಗೆ, 2025–26ರಲ್ಲಿ ಗಳಿಸಿದ ಆದಾಯಕ್ಕೆ 2026–27ರಲ್ಲಿ ತೆರಿಗೆ ಸಲ್ಲಿಕೆ ಮಾಡುವುದರಿಂದ ಹಲವರಿಗೆ ತಲೆಕೆಡಿಸಿಕೊಳ್ಳಬೇಕಾಗುತ್ತಿತ್ತು. ಈಗ “Tax Year” ಎಂಬ ಒಂದು ಪದ ಮಾತ್ರ ಇರುವುದರಿಂದ ಗೊಂದಲವೇ ಇಲ್ಲ. ಇದರಿಂದ ಕಾನೂನಿನ ಭಾಷೆ ಬಹಳ ಸರಳವಾಗಿದೆ. ಇದರ ಜೊತೆಗೆ ಅನಗತ್ಯ ಕ್ಲಾಜ್‌ಗಳು ಮತ್ತು ಉಪವಿಭಾಗಗಳನ್ನು ತೆಗೆದುಹಾಕಲಾಗಿದೆ, ಮತ್ತು ಡಿಜಿಟಲ್ ಫೈಲಿಂಗ್ ಪ್ರಕ್ರಿಯೆ ಸುಧಾರಿಸಲಾಗಿದೆ. ಮತ್ತೆ ಹೇಳುತ್ತಿದ್ದೇನೆ , ಈ ಹೊಸ ಕಾನೂನು ಕೆಲವು ಪ್ರಕ್ರಿಯೆಗಳನ್ನು ಸರಳವಾಗಿಸಲಿದೆ. ಆದರೆ ಇದರಿಂದ ನಾವು ಕಟ್ಟುವ ತೆರಿಗೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

STT ಅಂದರೆ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ ನಲ್ಲಿ ಏರಿಕೆಯಾಗಿದೆ. ಇದು ಸ್ಟಾಕ್ ಮಾರುಕಟ್ಟೆಯಲ್ಲಿ ಸಕ್ರಿಯವಾಗಿರುವವರಿಗೆ ಅದರಲ್ಲೂ ಪ್ರತಿ ದಿನ ಟ್ರೇಡ್ ಮಾಡುವವರಿಗೆ , Futures & Options (F&O) ವ್ಯವಹಾರ ಮಾಡುವವರಿಗೆ ಅನ್ವಯವಾಗುತ್ತದೆ. Futures ಮೇಲೆ STT: 0.02% ಇದ್ದ ತೆರಿಗೆಯನ್ನು 0.05% ಗೆ ಏರಿಸಲಾಗಿದೆ. ಅಂದರೆ ನೀವು ₹10 ಲಕ್ಷದ F&O ಟ್ರೇಡ್ ಮಾಡಿದರೆ ಹಳೆಯ ಸ್ಲಾಬ್ ಪ್ರಕಾರ 200 ರೂಪಾಯಿ ಇದ್ದ ತೆರಿಗೆ ಇದೀಗ 500 ರೂಪಾಯಿ ಆಗಲಿದೆ. ಸ್ಪೆಕುಲೇಟಿವ್ ಅಂದರೆ ಜೂಜಿನ ರೀತಿಯ ಹೂಡಿಕೆ ಬೇಡ ಎನ್ನುವುದು ಸರಕಾರ ನಿಲುವು ಎಂದು ನಾವು ಇದನ್ನು ಸಮರ್ಥಿಸಿಕೊಳ್ಳಬಹುದು. ದೀರ್ಘಾವಧಿ ಹೂಡಿಕೆಗೆ ಉತ್ತೇಜನ ನೀಡುತ್ತಿದೆ ಎನ್ನಬಹುದು.

ಬ್ಯಾಂಕಿಂಗ್ ಮತ್ತು ATM ನಿಯಮಗಳಲ್ಲಿ ಕೂಡ ಭಾರಿ ಬದಲಾವಣೆಯನ್ನು ತರಲಾಗಿದೆ. ನಗದು ಹಣದ ವ್ಯವಹಾರಕ್ಕೆ ಕಡಿವಾಣ ಹಾಕುವ ಸಲುವಾಗಿ ಹಣ ಕಟ್ಟಲು ಮತ್ತು ತೆರೆಯಲು ಹೆಚ್ಚಿನ ಶುಲ್ಕವನ್ನು ವಿಧಿಸಲಾಗಿದೆ. ಪಾನ್ ಕಡ್ಡಾಯವಾಗಿದೆ. ATM ಗಳಲ್ಲಿ ಹಣವನ್ನು ತೆಗೆಯುವುದಕ್ಕೆ ಕೂಡ ಹೆಚ್ಚಿನ ಶುಲ್ಕವನ್ನು ವಿಧಿಸಲಾಗಿದೆ. ಜನ ಸಾಮಾನ್ಯರಿಗೆ ಒಂದೇ ಒಂದು ಸಿಹಿ ಸುದ್ದಿಯೆಂದರೆ ಇನ್ನು ಮುಂದೆ ಮಿನಿಮಮ್ ಬ್ಯಾಲೆನ್ಸ್ ಇಡುವ ಅವಶ್ಯಕತೆಯಿಲ್ಲ. ಆದರೆ ಇದನ್ನು ಬ್ಯಾಂಕಿನವರು ಯಾವ ರೀತಿ ಜಾರಿಗೆ ತರುತ್ತಾರೆ ಎನ್ನುವುದು ಯಕ್ಷ ಪ್ರಶ್ನೆ. ಮಾಹಿತಿ ಕೊರತೆಯಿಂದ ಜನ ಹಳೆಯ ರೀತಿಯಲ್ಲೇ ಕನಿಷ್ಠ ಹಣವನ್ನು ಇಡಬೇಕು ಎಂದು ನಂಬುತ್ತಾರೆ. ಬ್ಯಾಂಕಿನವರು ಇದನ್ನು ತಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳುವ ಸಾಧ್ಯತೆ ಬಹಳ ಹೆಚ್ಚು. ಇದರ ಜೊತೆಗೆ ಡಿಜಿಟಲ್ ಪಾವತಿ ವಿಷಯದಲ್ಲಿ ಕೂಡ ಒಂದು ಬದಲಾವಣೆಯಾಗಿದೆ. ಹೆಚ್ಚುತ್ತಿರುವ ಸೈಬರ್ ಕ್ರೈಂ ಗಮನದಲ್ಲಿಟ್ಟು ಒಂದು ಈ ಬದಲಾವಣೆಯನ್ನು ತರಲಾಗಿದೆ. ಮೊದಲಿನಂತೆ ಕೇವಲ ಒಟಿಪಿ ಮೂಲಕ ಟ್ರಾನ್ಸಾಕ್ಷನ್ ಮುಗಿಸಲು ಸಾಧ್ಯವಿಲ್ಲ. ಟೂ ಫ್ಯಾಕ್ಟರ್ ಅಥವಾ ಮಲ್ಟಿ ಫಾಕ್ಕ್ಟರ್ ಅಥೆಂಟಿಕೇಷನ್ ಕಡ್ಡಾಯವಾಗಿದೆ. ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್ ಮೊತ್ತದಲ್ಲಿ ಒಂದಷ್ಟು ಹೆಚ್ಚಳವಾಗಲಿದೆ. ವಾರ್ಷಿಕ ಮೂರು ಸಾವಿರ ಇದದ್ದು ಇನ್ನು ಮುಂದೆ ಮೂರು ಸಾವಿರದ ಎಪ್ಪತೈದು ರೂಪಾಯಿ ನೀಡಬೇಕಾಗುತ್ತದೆ.

ಜಿಎಸ್ಟಿಯಲ್ಲಿ ಕೂಡ ಸುಧಾರಣೆಯಾಗಿದೆ. ರಿಫಂಡ್ ವಿಚಾರದಲ್ಲಿ ಆಗುತ್ತಿದ್ದ ತಕರಾರುಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ 90% ತನಕ ತ್ವರಿತ GST ರಿಫಂಡ್ ನೀಡಲು ಸೂಚಿಸಲಾಗಿದೆ. ಹೆಚ್ಚು ಹೆಚ್ಚು ವ್ಯವಹಾರಗಳಿಗೆ e-invoicing ಕಡ್ಡಾಯಗೊಳಿಸಲಾಗಿದೆ. ಇದರ ಜೊತೆಗೆ ಇವೆಲ್ಲವನ್ನೂ ರಿಯಲ್ ಟೈಮ್ ಟ್ರಾಕಿಂಗ್ ವ್ಯವಸ್ಥೆಗೆ ಸೇರಿಸಲಾಗಿದೆ. ಇದರಿಂದ ಪಾರದರ್ಶಕತೆ ಹೆಚ್ಚಾಗಲಿದೆ. ರಿಫಂಡ್ ಪಡೆದುಕೊಳ್ಳಲು ಎರಡರಿಂದ ಮೂರು ತಿಂಗಳು ವ್ಯಾಪಾರಸ್ಥರು ಹೆಣಗಬೇಕಾಗಿತ್ತು. ಈ ಬದಲಾವಣೆಯ ಕಾರಣ 90% ತನಕ ತಕ್ಷಣ ರಿಫಂಡ್ ಸಿಗಲಿದೆ. ಇದರ ಜೊತೆಗೆ SEZ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಕಡಿಮೆ ಸುಂಕದಲ್ಲಿ ಮಾರಾಟ ಮಾಡಬಹುದು ಎನ್ನುವುದನ್ನು ಕೂಡ ಹೇಳಲಾಗಿದೆ. ಇದರಿಂದ ಮೇಕ್ ಇನ್ ಇಂಡಿಯಾಗೆ ಇನ್ನಷ್ಟು ಬಲ ಬರಲಿದೆ.

ಚೀನಾ ಉತ್ಪನ್ನ CCTV ಕ್ಯಾಮರಾಗಳನ್ನು ಇನ್ನು ಮುಂದೆ ಅಳವಡಿಸುವಂತಿಲ್ಲ ಎನ್ನುವ ಫರ್ಮಾನು ಕೂಡ ಹೊರಡಿಸಿದೆ. ಡೇಟಾ ಸಂಬಂಧಿಸಿದಂತೆ ಕಠಿಣ ನಿಲುವ ಕೇಂದ್ರ ಸರಕಾರ ಕೈಗೊಂಡಿದೆ. ಇದರಿಂದ ಚೀನಾ ಕ್ಯಾಮರಾಗಳು ಬೇಡ ಎಂದಿದೆ.

ಕರ್ನಾಟಕ ಸರಕಾರ EV ಅಂದರೆ ಎಲೆಕ್ಟ್ರಿಕ್ ವೆಹಿಕಲ್ ಗಳ ಮೇಲೆ ರಿಜಿಸ್ಟ್ರೇಷನ್ ಚಾರ್ಜಸ್ ವಿಧಿಸಿದೆ. 2025 ಮಾರ್ಚ್ ಕೊನೆಯವರೆಗೆ ಎಲೆಕ್ಟ್ರಿಕ್ ವೆಹಿಕಲ್ ಮೇಲೆ ಯಾವುದೇ ಶುಲ್ಕವಿರಲಿಲ್ಲ. ಏಪ್ರಿಲ್ ಒಂದರಿಂದ ಹತ್ತು ಲಕ್ಷದ ಒಳಗಿನ ಕಾರುಗಳಿಗೆ 5 ಪ್ರತಿಶತ ಮತ್ತು ಹತ್ತು ಲಕ್ಷ ಮೇಲ್ಪಟ್ಟ ಕಾರುಗಳಿಗೆ 8 ಪ್ರತಿಶತ ತೆರಿಗೆಯನ್ನು ಹಾಕಲಾಗುತ್ತದೆ.

ಪ್ರವಾಸಿಗರಿಗೆ ಕೂಡ ಸಣ್ಣ ಸಿಹಿ ಸುದ್ದಿಯಿದೆ. ಈ ಹಿಂದೆ TCS ಅಂದರೆ ಟ್ಯಾಕ್ಸ್ ಕಲೆಕ್ಟೆಡ್ ಅಟ್ ಸೊರ್ಸ್ 5 ರಿಂದ 20 ಪ್ರತಿಶತವಿತ್ತು. ನಾವೆಷ್ಟು ಹಣವನ್ನು ಪ್ರವಾಸದ ಮೇಲೆ ವ್ಯಯ ಮಾಡುತ್ತೇವೆ ಎನ್ನುವುದರ ಮೇಲೆ ಇದು ನಿರ್ಧಾರವವಾಗುತಿತ್ತು. ಇದೀಗ ಪ್ರವಾಸದ ಹಣ ಎಷ್ಟಾದರೂ ಇರಲಿ ಎಲ್ಲರಿಗು 2 ಪ್ರತಿಶತ ಫ್ಲಾಟ್ ರೇಟ್ ವಿಧಿಸಲಾಗಿದೆ. ಇದು ಇದು ಎಜುಕೇಶನ್ ಮತ್ತು ಮೆಡಿಕಲ್ ಖರ್ಚುಗಳಿಗೂ ಅನ್ವಯವಾಗುತ್ತದೆ. ಆಲ್ಕೋಹಾಲ್ ಜೊತೆಗೆ ಕೆಲವು ಮಿನರಲ್ ಗಳಿಗೆ ಈ ಹಿಂದೆ ಒಂದು ಪ್ರತಿಶತವಿತ್ತು. ಈಗ ಅದನ್ನು 2 ಪ್ರತಿಶತಕ್ಕೆ ಏರಿಸಲಾಗಿದೆ.

ಸವರಿನ್ ಗೋಲ್ಡ್ ಬಾಂಡ್ ಸರಕಾರದ ಯೋಜನೆ ಮೂಲಕ ಕೊಂಡವರಿಗೆ , ಕೊನೆಯವರೆಗೂ ಅಂದರೆ ಅದರ ಅವಧಿ ಮುಗಿಯುವವರೆಗೂ ಇಟ್ಟು ಕೊಂಡಲ್ಲಿ , ಹೂಡಿಕೆಯ ಮೇಲಿನ ಲಾಭಕ್ಕೆ ಯಾವುದೇ ತೆರಿಗೆ ಕಟ್ಟುವ ಅವಶ್ಯಕತೆಯಿಲ್ಲ. ಆದರೆ ಯಾರೆಲ್ಲಾ ಸೆಕೆಂಡರಿ ಮಾರ್ಕೆಟ್ ಮೂಲಕ ಕೊಳ್ಳುತ್ತಾರೆ ಅವರು ತೆರಿಗೆಯನ್ನು ಕಟ್ಟಬೇಕಾಗುತ್ತದೆ ಎನ್ನುವ ಕ್ಲಾರಿಫಿಕೇಷನ್ ಸರಕಾರ ನೀಡಿದೆ. ಇದರ ಬಗ್ಗೆ ಸಾಕಷ್ಟು ಗೊಂದಲವಿತ್ತು. ಇದೀಗ ಅದಕ್ಕೆ ತೆರೆ ಬಿದ್ದಿದೆ.

ಕೊನೆಮಾತು: ಪ್ರತಿ ವರ್ಷವೂ ಒಂದಷ್ಟು ಬದಲಾವಣೆ ಸಾಮಾನ್ಯ. ಈ ವರ್ಷದ ಬದಲಾವಣೆಗಳು ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಮತ್ತು ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಮಾಡಲಾಗಿದೆ. ಹೊಸ ಭಾರತದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು , ಜನ ಸಾಮಾನ್ಯನನ್ನು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲು ಈ ಬದಲಾವಣೆಗಳನ್ನು ಮಾಡಿದ್ದಾರೆ. ಬದಲಾವಣೆಯೊಂದೆ ಶಾಶ್ವತ ಎನ್ನುವ ಮಾತಿನಂತೆ ಬದಲಾವಣೆಗೆ ನಾವು ಸಿದ್ಧವಾಗಿರಬೇಕಾಗಿದೆ. ಒಟ್ಟಾರೆ ಈ ವರ್ಷದ ಬದಲಾವಣೆಗಳು ಜನ ಸಾಮಾನ್ಯನಿಗೆ ಪೂರಕವಾಗಿವೆ. ಆದರೆ ಚೀನಾ ದೇಶದ ಸಿಸಿಟಿವಿ ಬ್ಯಾನ್ ಮಾಡಿದ ಕೇಂದ್ರ ಸರಕಾರ ಚೀನಾ ದೇಶದ ಎಲೆಕ್ಟ್ರಿಕಲ್ ವೆಹಿಕಲ್ ಮಾರಾಟಕ್ಕೆ ಮಾತ್ರ ಯಾವುದೇ ಕಡಿವಾಣ ಹಾಕದೆ ಇರುವುದು ಮಾತ್ರ ಅಚ್ಚರಿಯಾಗಿ ಉಳಿದುಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ದೇಶದ ಮೇಲೆ ಯುದ್ಧದ ಪರಿಣಾಮ ತಗ್ಗಿಸಲು ಕೇಂದ್ರ ಸಜ್ಜು; ಪ್ರಧಾನಿ ಮೋದಿ ಮಹತ್ವದ ಸಭೆ, LPG-LNG ಲಭ್ಯತೆ ಖಚಿತಪಡಿಸಲು ಖಡಕ್ ಸೂಚನೆ

'13 ರೂ. ಮೌಲ್ಯದ ಚೀಲಗಳನ್ನು 52 ರೂ.ಗೆ ಖರೀದಿ’: IAS ಅಧಿಕಾರಿ ರೋಹಿಣಿ ಸಿಂಧೂರಿಗೆ ಹೈಕೋರ್ಟ್ ಶಾಕ್, ತನಿಖೆಗೆ ಅನುಮತಿ

SSLC ಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್: ಸರ್ಕಾರದ ನಿರ್ಧಾರ ವಿರುದ್ಧ ಹೈಕೋರ್ಟ್ ಗೆ ಅರ್ಜಿ

ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ಬೆಂಗಳೂರು: ಧರ್ಮರಾಯಸ್ವಾಮಿ ದೇವಸ್ಥಾನದಿಂದ ವೈಭವದ ಕರಗ ಆರಂಭ, ಲಕ್ಷಾಂತರ ಭಕ್ತರು ಸಾಕ್ಷಿ

Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!

SCROLL FOR NEXT