ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ online desk
ಅಂಕಣಗಳು

ಉಪ ಚುನಾವಣೆ ನಂತರ ಮತ್ತೆ ಮುನ್ನೆಲೆಗೆ ನಾಯಕತ್ವ ಬದಲಾವಣೆ (ನೇರ ನೋಟ)

ರಾಜ್ಯ ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಸ್ತಾಂತರದ ಸಮರದಲ್ಲಿ ಸಿದ್ದರಾಮಯ್ಯ ಅವರ ಹಿಂದೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಇದ್ದರೆ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ...

ಬಾಗಲಕೋಟೆ, ದಾವಣಗೆರೆ ಉಪ ಚುನಾವಣೆ ಫಲಿತಾಂಶ ಏನೇ ಆಗಿರಲಿ ಕರ್ನಾಟಕದ ಕಾಂಗ್ರೆಸ್‌ ರಾಜಕಾರಣದಲ್ಲಿ ಮುಖ್ಯಮಂತ್ರಿ ಪಟ್ಟದ ಹಸ್ತಾಂತರದ ಸಪ್ಪಳ ಮತ್ತಷ್ಟು ಜೋರಾಗುವುದು ಮಾತ್ರ ಗ್ಯಾರಂಟಿ.

ಪಂಚ ರಾಜ್ಯಗಳ ಜೊತೆಯಲ್ಲೇ ಬಾಗಲಕೋಟೆ, ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆಯುತ್ತಿದೆ. ಈ ಎರಡು ಕ್ಷೇತ್ರಗಳಲ್ಲಿ ಏಪ್ರಿಲ್‌ 9 ರಂದು ಮತದಾನ. ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆಯೇ ನೇರ ಹಣಾಹಣಿ. ಫಲಿತಾಂಶ ಹೊರಬಿದ್ದ ನಂತರ ಕಾಂಗ್ರೆಸ್‌ ಶಾಸಕಾಂಗ ಪಕ್ಷದಲ್ಲಿ ಎದ್ದಿರುವ ನಾಯಕತ್ವದ ಬದಲಾವಣೆ ಪ್ರಶ್ನೆಯ ಚರ್ಚೆ ಮತ್ತೆ ಗರಿಗೆದರಲಿದೆ. ಪಂಚ ರಾಜ್ಯಗಳಲ್ಲಿ ಅದರಲ್ಲೂ ಮುಖ್ಯವಾಗಿ ಕೇರಳ ಹಾಗೂ ಅಸ್ಸಾಂನಲ್ಲಿ ಕಾಂಗ್ರೆಸ್‌ ಸೋಲು-ಗೆಲುವು ಕೂಡ ಇದಕ್ಕೆ ಮತ್ತಷ್ಟು ತಿದಿ ಒತ್ತುವುದು ಖಚಿತ.

ರಾಜ್ಯ ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಸ್ತಾಂತರದ ಸಮರದಲ್ಲಿ ಸಿದ್ದರಾಮಯ್ಯ ಅವರ ಹಿಂದೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಇದ್ದರೆ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ನಿಂತಿದ್ದಾರೆ. ರಾಹುಲ್‌ ಗಾಂಧಿ ಆಪ್ತ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ), ಸಂಸದ ಕೆ.ಸಿ.ವೇಣುಗೋಪಾಲ್ ಕೇರಳದವರು. ಸಿದ್ದರಾಮಯ್ಯ ಕೇರಳದ ಚುನಾವಣಾ ಪ್ರಚಾರಕ್ಕೆ ತೆರಳುವರು. ಪ್ರಿಯಾಂಕಾ ಗಾಂಧಿ ವಾದ್ರಾ ಅಸ್ಸಾಂ ಚುನಾವಣೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊತ್ತವರು. ಶಿವಕುಮಾರ್‌ ಅಸ್ಸಾಂ ಕಾಂಗ್ರೆಸ್‌ ಚುನಾವಣಾ ಸಮಿತಿಯ ಸದಸ್ಯರು. ಅಲ್ಲಿ ಈಗಾಗಲೇ ಒಂದು ಸುತ್ತಿನ ಚುನಾವಣಾ ಪ್ರಚಾರ ಮುಗಿಸಿ ವಾಪಸಾಗಿದ್ದಾರೆ.

ಉಪ ಚುನಾವಣೆ ಫಲಿತಾಂಶ ರಾಜ್ಯ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ನಿಜ. ಹಾಗೇ ನೋಡಿದರೆ ಉಪ ಚುನಾವಣೆಗಳಲ್ಲಿ ಆಳುವ ಪಕ್ಷಕ್ಕೆ ಅನುಕೂಲಕರ ಪರಿಸ್ಥಿತಿಯೇ. ಬಾಗಲಕೋಟೆ ಹಾಗೂ ದಾವಣಗೆರೆ ಕಾಂಗ್ರೆಸ್‌ ಕ್ಷೇತ್ರಗಳೇ. ಹೀಗಿದ್ದರೂ ಯಾವುದಾದರೂ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋತರೂ ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಪಕ್ಷದಲ್ಲಿ ಗುಸುಗುಸು ಇನ್ನೂ ಹೆಚ್ಚಾಗಬಹುದು. ಅದರಲ್ಲೂ ಬಾಗಲಕೋಟೆಯಲ್ಲಿ ಸೋತರೆ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಸ್ವಲ್ಪ ಧಕ್ಕೆ ಆಗಲಿದೆ. ಏಕೆಂದರೆ, ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಅವರ ಕುರುಬ ಸಮಾಜದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ ಕುರುಬ ಸಮುದಾಯದವರು. ಸಿದ್ದರಾಮಯ್ಯ ಬಾಗಲಕೋಟೆ ಪ್ರಚಾರದಲ್ಲಿ ತಾವೇ ಅಭ್ಯರ್ಥಿ ಎಂದು ಭಾವಿಸಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಪಾಲಿಗೆ ದಾವಣಗೆರೆಗಿಂತ ಬಾಗಲಕೋಟೆಯೇ ಒಂದು ತೂಕ ಹೆಚ್ಚು.

ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಗೆಲುವಿಗೆ ಬಿಜೆಪಿ ನಾಯಕರು ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ಸಿನ ಎಚ್‌.ವೈ.ಮೇಟಿ ಕಳೆದ ಚುನಾವಣೆಯಲ್ಲಿ ವೀರಣ್ಣ ಚರಂತಿಮಠ ಅವರನ್ನು ಸುಮಾರು ಆರು ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

ಇನ್ನು ದಾವಣಗೆರೆ ಉಪ ಚುನಾವಣೆಗೆ ಬರುವುದಾದರೆ ಕಾಂಗ್ರೆಸ್‌ನಲ್ಲಿ ಚುನಾವಣೆ ಘೋಷಣೆಗೆ ಮುನ್ನವೇ ಗೊಂದಲ ಕಾಣಿಸಿಕೊಂಡಿತು. ವಿಧಾನಪರಿಷತ್‌ ಸದಸ್ಯ ಅಬ್ದುಲ್ ಜಬ್ಬಾರ್‌ ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ನೀಡಬೇಕೆಂದು ಪ್ರಾರಂಭದಲ್ಲಿ ಪಟ್ಟು ಹಿಡಿದರು. ಸಚಿವ ಜಮೀರ್‌ ಅಹಮದ್‌ ಖಾನ್‌ ಅಖಾಡಕ್ಕೆ ಇಳಿದು ಕ್ಷೇತ್ರದಲ್ಲಿ ಸಭೆ ನಡೆಸಿ ಅಲ್ಪಸಂಖ್ಯಾತ ಮುಸ್ಲಿಮರಿಗೆ ಟಿಕೆಟ್‌ ನೀಡಬೇಕೆಂದು ಧ್ವನಿ ಎತ್ತಿದರು. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಕೆಂಡಾಮಂಡಲರಾದರು. ಜಮೀರ್ ಅವರಿಗೂ ದಾವಣಗೆರೆಗೂ ಏನು ಸಂಬಂಧ ಎಂದು ಪ್ರಶ್ನಿಸಿದರು. ಇದು ಚುನಾವಣಾ ಪ್ರಚಾರದ ದಿಕ್ಕನ್ನೇ ಬದಲಿಸಿತು.

ಮುಸ್ಲಿಮರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಲು ಜಮೀರ್‌ ಅವರಿಗೆ ಸಾಧ್ಯವಾಗಿಲ್ಲದಿರಬಹುದು. ಆದರೆ, ಶಾಮನೂರು ಕುಟುಂಬ ಸಾಮ್ರಾಜ್ಯದಲ್ಲಿ ಅಹಿಂದ ಕಿಡಿಯನ್ನು ಹೊತ್ತಿಸುವ ಪ್ರಯತ್ನವಂತೂ ನಡೆಸಿದರು. ಪ್ರಚಾರ ಅಂತ್ಯಕ್ಕೆ ಇನ್ನು ಐದು ದಿನಗಳಿವೆ. ಜಮೀರ್‌ ದಾವಣಗೆರೆಗೆ ಕಾಲಿಟ್ಟಿಲ್ಲ. ವಿಧಾನಪರಿಷತ್‌ ಸದಸ್ಯ, ಸ್ಥಳೀಯರಾದ ಅಬ್ದುಲ್‌ ಜಬ್ಬಾರ್‌ ಪ್ರಚಾರದಲ್ಲಿ ಈವರೆಗೂ ಕಾಣಿಸಿಕೊಂಡಿಲ್ಲ. ಮುಸ್ಲಿಮರು 22 ಮಂದಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ 14 ಮಂದಿ ಕಣದಲ್ಲಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್‌ ಕೊಡ್ಲಿಪೇಟೆ ಕಣದಲ್ಲಿದ್ದು ಕುತೂಹಲ ಕೆರಳಿಸಿದ್ದಾರೆ. ಮುಸ್ಲಿಂ ಮತಗಳು ಚದುರಿದರೆ ಕಾಂಗ್ರೆಸ್ಸಿಗೆ ಕಷ್ಟ.

ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್‌ ಶಾಮನೂರು ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದಾಗ ಬಂಡಾಯ ಅಭ್ಯರ್ಥಿಯಾಗಿ ಸಾದಿಕ್‌ ಪೈಲ್ವಾನ್‌ ನಾಮಪತ್ರ ಸಲ್ಲಿಸಿ ಜಂಗೀ ಕುಸ್ತಿಗೆ ಅಖಾಡ ಸಿದ್ದಪಡಿಸಿದರು. ಆದರೆ, ಸಿದ್ದರಾಮಯ್ಯ ಕರೆಸಿ ಮಾತಾಡಿದ ನಂತರ ಪೈಲ್ವಾನ್‌ ತೊಡೆ ತಟ್ಟಲಿಲ್ಲ. ಅಖಾಡಕ್ಕೆ ಇಳಿಯುವ ಮುನ್ನವೇ ಚಿತ್‌ ಆಗಿದ್ದರು. ಇತ್ತ ಹೈಕಮಾಂಡ್‌ ಘೋಷಣೆಗೂ ಮುನ್ನವೇ ಸಮರ್ಥ್‌ ಕಾಂಗ್ರೆಸ್‌ ಉಮೇದುವಾರರಾಗಿ ನಾಮಪತ್ರ ಸಲ್ಲಿಸಿ ಶಾಮನೂರು ಕುಟುಂಬದ ರಾಜಕೀಯ ಯಜಮಾನಿಕೆ ಧೋರಣೆಯನ್ನು ಪ್ರದರ್ಶಿಸಿ ತೊಡೆ ತಟ್ಟಿದ್ದರು. ಕುಟುಂಬ ರಾಜಕಾರಣದ ಇಂತಹ ಹೊತ್ತಲ್ಲೇ ದಾವಣಗೆರೆಯ ಹಿರಿಯ ತಲೆಮಾರಿನ ಜನರಿಗೆ ಒಂದು ಕಾಲದ ಕಾರ್ಮಿಕ ಮುಖಂಡ, ಕಮ್ಯುನಿಸ್ಟ್‌ ಪಕ್ಷದ ಪಂಪಾಪತಿ ಶಾಸಕರಾಗಿ ತಮ್ಮನ್ನು ಪ್ರತಿನಿಧಿಸಿದ್ದು ಗತಕಾಲದ ನೆನಪು.

ಸಮರ್ಥ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದು ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಶಾಮನೂರು ಶಿವಶಂಕರಪ್ಪ ಪುತ್ರ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಸಚಿವರು. ಮಲ್ಲಿಕಾರ್ಜುನ್ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಲೋಕಸಭಾ ಸದಸ್ಯರು. ಈಗ ಮಲ್ಲಿಕಾರ್ಜುನ್‌ ದಂಪತಿ ಪುತ್ರ ಸಮರ್ಥ್ ಕಾಂಗ್ರೆಸ್ ಹುರಿಯಾಳು. ಒಂದೇ ಕುಟುಂಬಕ್ಕೆ ಹೀಗೆ ಅಧಿಕಾರ ಕೊಟ್ಟರೆ ಹೇಗೆ? ಪಕ್ಷದಲ್ಲಿ ದುಡಿಯುತ್ತಿರುವ ಕಾರ್ಯಕರ್ತರಿಲ್ಲವೇ? ಪ್ರಚಾರದಲ್ಲಿ ಇದಕ್ಕೆ ಕಾಂಗ್ರೆಸ್‌ ಉತ್ತರ ಕೊಟ್ಟಿಲ್ಲ. ಇದನ್ನು ಪ್ರಶ್ನಿಸುವ ಸ್ಥಿತಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಕೂಡ ಇಲ್ಲ. ಏಕೆಂದರೆ ಕುಟುಂಬ ರಾಜಕಾರಣದಿಂದ ಆ ಪಕ್ಷಗಳೂ ಹೊರತಲ್ಲ. ಕುಟುಂಬ ರಾಜಕಾರಣ ಇವತ್ತು ಸರ್ವಾಂತರ್ಯಾಮಿ.

ಕಾಂಗ್ರೆಸ್‌ ಟಿಕೆಟ್‌ ವಿಚಾರದಲ್ಲಿ ಯಾವಾಗ ಅಹಿಂದ ಅಸ್ತ್ರವನ್ನು ಬಳಸಲಿಲ್ಲವೋ ಬಿಜೆಪಿ ಪ್ರಚಾರದಲ್ಲಿ ಇದೇ ದಾಳವನ್ನು ಉರುಳಿಸಲು ಹೊರಟಿದೆ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಮತ ಸೆಳೆಯಲು ತಂತ್ರ ರೂಪಿಸಿದೆ. ಬಿಜೆಪಿ ಅಭ್ಯರ್ಥಿ ಟಿ. ಶ್ರೀನಿವಾಸ ದಾಸಕರಿಯಪ್ಪ ವಾಲ್ಮೀಕಿ ಸಮಾಜದವರು. ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್‌ ಬೆಂಬಲಿಗರು. ಸಿದ್ದೇಶ್ವರ್‌ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರೋಧಿ ಪಾಳೆಯದವರು.

ಶಾಮನೂರು ಶಿವಶಂಕರಪ್ಪ ಅವರಿಗೆ ಬಿಜೆಪಿಯಲ್ಲಿಯೂ ನೆಂಟರಿದ್ದಾರೆ. ಅನೇಕರು ಆತ್ಮೀಯರಾಗಿದ್ದವರು. ಈ ಹಿಂದೆ 2024ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರ ಗೆಲ್ಲಬೇಕೆಂದು ಶಾಮನೂರು ಶಿವಶಂಕರಪ್ಪ ಬಹಿರಂಗವಾಗಿ ಹೇಳಿದ್ದರು. ಹೀಗಾಗಿಯೇ ಸಮರ್ಥ್‌ ಶಾಮನೂರು ಅವರಿಗೆ ಅನುಕೂಲವಾಗಲೆಂದು ಬಿಜೆಪಿ ಇಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ ಎಂಬ ‘ಒಳಒಪ್ಪಂದ’ದ ಮಾತುಗಳು ಇವೆ. ಕಳೆದ ಬಾರಿ ಬಿಜೆಪಿ ವೀರಶೈವ - ಲಿಂಗಾಯತ ಸಮುದಾಯಕ್ಕೆ ಟಿಕೆಟ್‌ ನೀಡಿತ್ತು.

ದಾವಣಗೆರೆ ದಕ್ಷಿಣ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದೇ 2008ರಲ್ಲಿ. ಆಗಿನಿಂದಲೂ ಶಾಮನೂರು ಶಿವಶಂಕರಪ್ಪ ಸತತವಾಗಿ ಇಲ್ಲಿ ಗೆಲ್ಲುತ್ತಾ ಬಂದಿದ್ದವರು. . ಅವರ ಗೆಲುವಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಪಾತ್ರ ಬಹು ದೊಡ್ಡದು. ಶಾಮನೂರು ಶಿವಶಂಕರಪ್ಪ ಸುಮಾರು 60 ವರ್ಷಗಳ ಕಾಲ ರಾಜಕಾರಣದಲ್ಲಿದ್ದವರು. ಮೊದಲಿನಿಂದಲೂ ಕಟ್ಟಾ ಕಾಂಗ್ರೆಸ್ಸಿಗರು.

ದಾವಣಗೆರೆ ದಕ್ಷಿಣದಲ್ಲಿ 2023ರ ವಿಧಾನಸಭಾ ಚುನಾವಣೆ ಫಲಿತಾಂಶ-

ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್‌) 84,298, ಬಿ.ಜಿ.ಅಜಯಕುಮಾರ್‌ (ಬಿಜೆಪಿ) 56,410, ಇಸ್ಮಾಯಿಲ್‌ ಜಬೀವುಲ್ಲಾ (ಎಸ್‌ಡಿಪಿಐ) 1,311, ಜೆ.ಅಮಾನುಲ್ಲಾ ಖಾನ್‌ (ಜೆಡಿಎಸ್‌) 1,296. ಶಾಮನೂರು ಶಿವಶಂಕರಪ್ಪ 27,888 ಮತಗಳ ಅಂತರದಿಂದ ಜಯ ಸಾಧಿಸಿದ್ದರು.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 2.30 ಲಕ್ಷ ಮತದಾರರಿದ್ದಾರೆ. ಸುಮಾರು 70 ಸಾವಿರ ಮುಸ್ಲಿಮರು, ಸುಮಾರು 40 ಸಾವಿರ ವೀರಶೈವ-ಲಿಂಗಾಯತ ಮತದಾರರಿದ್ದಾರೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಗೆಲ್ಲಬಹುದು ಇಲ್ಲವೇ ಸೋಲಬಹುದು. ಆದರೆ, ಕಾಂಗ್ರೆಸ್ ಪಾಲಿನ ಅಹಿಂದ ಇಲ್ಲಿ ಈಗಾಗಲೇ ಸೋತಿದೆ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ: ಇರಾನ್ ಪ್ರಮುಖ ಸೇತುವೆ ಧ್ವಂಸ, ತಡವಾಗುವ ಮುನ್ನ ಶಾಂತಿ ಒಪ್ಪಂದಕ್ಕೆ ಬನ್ನಿ; ಟೆಹ್ರಾನ್'ಗೆ ಟ್ರಂಪ್ ಎಚ್ಚರಿಕೆ

ಡಾಕ್ಟರ್ ಮಗ ಡಾಕ್ಟರ್ ಆಗ್ತಾನೆ, MLA ಮಗ MLA ಆಗೋದ್ರಲ್ಲಿ ತಪ್ಪೇನು?: ಕುಟುಂಬ ರಾಜಕೀಯಕ್ಕೆ ಎಂ.ಬಿ.ಪಾಟೀಲ್ ಸಮರ್ಥನೆ

LPG ಬಿಕ್ಕಟ್ಟು ತೀವ್ರ: ಬೆಂಗಳೂರಿನ ಆಟೋ ಚಾಲಕರ ಬದುಕು ಬೀದಿಗೆ!

"ದಿನಕ್ಕೊಂದು, ಕ್ಷಣಕ್ಕೊಂದು ಮಾತನಾಡಬೇಡಿ": ಇರಾನ್ ಯುದ್ಧದ ಬಗ್ಗೆ ಟ್ರಂಪ್​ಗೆ ಮ್ಯಾಕ್ರನ್ ಮಂಗಳಾರತಿ!

ಹಾರ್ಮುಜ್ ಜಲಸಂಧಿ ಕುರಿತು ಬ್ರಿಟನ್ ನೇತೃತ್ವದಲ್ಲಿ ಮಾತುಕತೆ; ಭಾರತ ಭಾಗಿ: ತೈಲ ಬಿಕ್ಕಟ್ಟಿಗೆ ಬ್ರೇಕ್?

SCROLL FOR NEXT