

ಮನಾಮಾ (ಬಹ್ರೇನ್): ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಆವರಿಸಿದೆ. ಬಹ್ರೇನ್‌ನ ಮನಾಮಾದಲ್ಲಿರುವ ಅಮೆರಿಕ ನೌಕಾಪಡೆಯ ಅತ್ಯಂತ ಆಯಕಟ್ಟಿನ 'ಫಿಫ್ತ್ ಫ್ಲೀಟ್' (Fifth Fleet) ಪ್ರಧಾನ ಕಚೇರಿಯ ಮೇಲೆ ಇರಾನ್ ಭೀಕರ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದು, ದಾಳಿಯ ಬೆನ್ನಲ್ಲೇ ಇಡೀ ಮಿಲಿಟರಿ ನೆಲೆ ಹೊತ್ತಿ ಉರಿಯುತ್ತಿದ್ದು, ಭಾರಿ ಪ್ರಮಾಣದ ಬೆಂಕಿ ಮತ್ತು ದಟ್ಟವಾದ ಹೊಗೆ ಆವರಿಸಿದೆ.
ಇತ್ತೀಚೆಗಷ್ಟೇ ಅಮೆರಿಕದ ಸೆಂಟ್ರಲ್ ಕಮಾಂಡ್ ಇರಾನ್‌ನ ಮಿಲಿಟರಿ ನೆಲೆಗಳ ಮೇಲೆ ತೀವ್ರ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಇರಾನ್ ಎಚ್ಚರಿಸಿತ್ತು.
ಅದರಂತೆಯೇ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬಹ್ರೇನ್‌ನ ಜುಫೇರ್ ಜಿಲ್ಲೆಯಲ್ಲಿರುವ ಯುಎಸ್ ನೆವಲ್ ಸಪೋರ್ಟ್ ಆಕ್ಟಿವಿಟಿ (NSA) ಮತ್ತು ಸಲ್ಮಾನ್ ಪೋರ್ಟ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ಸಂಘಟಿಸಿದೆ.
ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮುನ್ನುಗ್ಗುತ್ತಿದ್ದಂತೆ ಬಹ್ರೇನ್ ರಾಜಧಾನಿ ಮನಾಮಾದಾದ್ಯಂತ ಏರ್-ರೈಡ್ ಸೈರನ್‌ಗಳು (ದಾಳಿ ಮುನ್ಸೂಚನೆ ನೀಡುವ ಶಬ್ಧ) ಮೊಳಗಿದವು. ಇದರಿಂದಾಗಿ ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಕೇವಲ ಬಹ್ರೇನ್ ಮಾತ್ರವಲ್ಲದೆ, ಕುವೈತ್‌ನಲ್ಲಿರುವ 'ಅಲಿ ಅಲ್-ಸಲೇಮ್' ಅಮೆರಿಕ ವೈಮಾನಿಕ ನೆಲೆಯನ್ನೂ ಸಹ ಇರಾನ್ ಗುರಿಯಾಗಿಸಿಕೊಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಸಲ್ಮಾನ್ ಪೋರ್ಟ್ ಮತ್ತು ಯುಎಸ್ ಸೇವಾ ಕೇಂದ್ರಗಳು ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೀಡಿಯೋ ವೈರಲ ಆಗಿದೆ.
ಶತ್ರು ದೇಶಗಳ ನೌಕಾಪಡೆಗೆ ಸಿಂಹಸ್ವಪ್ನವಾಗಿದ್ದ ಫಿಫ್ತ್ ಫ್ಲೀಟ್ ಆವರಣದಲ್ಲೇ ಈ ಮಟ್ಟದ ಹಾನಿಯಾಗಿರುವುದು ಅಮೆರಿಕಕ್ಕೆ ದೊಡ್ಡ ಆಘಾತ ತಂದಿದೆ.
ದಾಳಿಯಿಂದ ಆಗಿರುವ ನಿಖರವಾದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟದ ವಿವರಗಳು ಇನ್ನು ಲಭ್ಯವಾಗಿಲ್ಲ. ಸ್ಥಳೀಯ ಭದ್ರತಾ ಪಡೆಗಳು ಮತ್ತು ಅಮೆರಿಕದ ರಕ್ಷಣಾ ವಿಭಾಗಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿವೆ.
ಈ ದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ (Middle East) ಯುದ್ಧದ ವಾತಾವರಣ ಮತ್ತಷ್ಟು ಕಠಿಣವಾಗಿದ್ದು, ಅಮೆರಿಕ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಐಆರ್‌ಜಿಸಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಅಮೆರಿಕದ ಸೇನೆಗೆ ಸಂಬಂಧಿಸಿದ 85 ಗುರಿಗಳನ್ನು ಉದ್ದೇಶಿಸಿ ಕ್ಷಿಪಣಿ ಹಾಗೂ ಡ್ರೋನ್‌ಗಳ ಸಂಯೋಜಿತ ಕಾರ್ಯಾಚರಣೆ ನಡೆಸಲಾಗಿದೆ. ಬಹ್ರೇನ್‌ನ ಸಲ್ಮಾನ್ ಬಂದರಿನಲ್ಲಿರುವ ಅಮೆರಿಕದ ಐದನೇ ನೌಕಾಪಡೆ ಮುಖ್ಯಸ್ಥಾನ ಹಾಗೂ ಕುವೈತ್‌ನ ಅಲಿ ಅಲ್ ಸಲೇಮ್ ವಾಯುನೆಲೆ ಪ್ರಮುಖ ಗುರಿಗಳಾಗಿದ್ದವು ಎಂದು ಹೇಳಿಕೊಂಡಿದೆ.
ಇರಾನ್ ಸರ್ಕಾರಿ ಮಾಧ್ಯಮಗಳ ವರದಿ ಪ್ರಕಾರ, ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೂ ಪ್ರತಿದಾಳಿ ನಡೆಸಲಾಗಿದೆ. ದಾಳಿಯ ನಂತರದ ದೃಶ್ಯಗಳು ಎನ್ನಲಾದ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಮೆರಿಕದ ಪಡೆಗಳಿರುವ ಸೇನಾ ಸ್ಥಾಪನೆಗಳ ಮೇಲೆ ಕ್ಷಿಪಣಿ ದಾಳಿ ನಡೆದಿದೆ ಎಂದು ಹೇಳಿವೆ. ಇದೇ ವೇಳೆ ಜೋರ್ಡಾನ್‌ನ ಅಜ್ರಾಕ್ ವಾಯುನೆಲೆಯೂ ದಾಳಿಗೆ ಗುರಿಯಾಗಿದೆ ಎಂಬ ವರದಿಗಳೂ ಹೊರಬಿದ್ದಿವೆ.
ಇರಾನ್‌ಗೆ ಸಂಬಂಧಿಸಿದ ಫಾರ್ಸ್ ಸುದ್ದಿಸಂಸ್ಥೆ, ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗವನ್ನು ಉಲ್ಲೇಖಿಸಿ, ಬಹ್ರೇನ್‌ನ ಶೇಖ್ ಈಸಾ ವಾಯುನೆಲೆಯ ಮೇಲೂ ಇರಾನ್ ಸೇನೆಯ ಡ್ರೋನ್‌ಗಳು ದಾಳಿ ನಡೆಸಿವೆ ಎಂದು ವರದಿ ಮಾಡಿದೆ. ಅಮೆರಿಕದ ಇತ್ತೀಚಿನ ಸೇನಾ ಕಾರ್ಯಾಚರಣೆಗೆ ಪ್ರತಿಯಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಲಾಗಿದೆ.
ಇದರ ಜೊತೆಗೆ, ಬುಶೆಹರ್ ಪ್ರಾಂತ್ಯದ ಮೇಲೆ ಹಾರಾಟ ನಡೆಸುತ್ತಿದ್ದ ಅಮೆರಿಕದ MQ-9 ರೀಪರ್ ಮಾನವರಹಿತ ಯುದ್ಧ ವಿಮಾನವನ್ನು ತಮ್ಮ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಇರಾನ್ ಹೇಳಿಕೊಂಡಿದೆ. ಅಮೆರಿಕದ ವೈಮಾನಿಕ ದಾಳಿಯ ನಂತರ ಈ ಡ್ರೋನ್ ಅನ್ನು ಗುರಿಯಾಗಿಸಲಾಗಿದೆ ಎಂದು ಇರಾನ್ ಆರೋಪಿಸಿದೆ.
ಈ ಪ್ರತಿದಾಳಿ ನಡೆಯುವ ಒಂದು ದಿನದ ಮೊದಲು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM), ಇರಾನ್‌ನೊಳಗಿನ 80ಕ್ಕೂ ಹೆಚ್ಚು ಮಿಲಿಟರಿ ಗುರಿಗಳ ಮೇಲೆ ನಿಖರ ದಾಳಿ ನಡೆಸಿರುವುದಾಗಿ ಘೋಷಿಸಿತ್ತು. ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳು, ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ರಾಡಾರ್ ಕೇಂದ್ರಗಳು, ಹಡಗು ವಿರೋಧಿ ಕ್ಷಿಪಣಿ ನೆಲೆಗಳು ಹಾಗೂ ಐಆರ್‌ಜಿಸಿ ಬಳಸುತ್ತಿದ್ದ ವೇಗದ ದಾಳಿ ದೋಣಿಗಳನ್ನು ಗುರಿಯಾಗಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಮೆರಿಕ ಹೇಳಿತ್ತು.
ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುತ್ತಿದ್ದ ಮೂರು ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ್ದು, ಅದು ಕದನ ವಿರಾಮದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಅಮೆರಿಕ, ಸಮುದ್ರ ಮಾರ್ಗದ ಭದ್ರತೆಗೆ ಇರಾನ್ ಒಡ್ಡುತ್ತಿರುವ ಬೆದರಿಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿತ್ತು.
ಅಮೆರಿಕದ ದಾಳಿಯ ಬಳಿಕ ಇರಾನ್‌ನ ಬಂದರ್ ಅಬ್ಬಾಸ್, ಸಿರಿಕ್ ಮತ್ತು ಕೇಶ್‌ಮ್ ದ್ವೀಪ ಸೇರಿದಂತೆ ಹಲವು ದಕ್ಷಿಣ ಕರಾವಳಿ ಪ್ರದೇಶಗಳಲ್ಲಿ ಸ್ಫೋಟಗಳು ಹಾಗೂ ಬಂದರು ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ದಾಳಿಗಳಲ್ಲಿ ನಾಗರಿಕರು ಮೃತಪಟ್ಟಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.