ಆಸ್ಟ್ರೇಲಿಯಾದಲ್ಲಿ ಮೊಳಗಿದ 'ಮಾ ತುಝೇ ಸಲಾಂ'; ಮೋದಿಗೆ ಅದ್ಧೂರಿ ಸ್ವಾಗತ, ತಬಲಾ-ಡಿಡ್ಜೆರಿಡೂ ಜುಗಲ್‌ಬಂದಿಗೆ ಮನಸೋತ ಪ್ರಧಾನಿ..!

ಮೆಲ್ಬೋರ್ನ್‌ನಲ್ಲಿ 'ಆಸ್ಟ್ರೇಲಿಯಾ–ಇಂಡಿಯಾ ಆರ್ಕೆಸ್ಟ್ರಾ' ತಂಡದ 10 ಕಲಾವಿದರು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಪ್ರಸಿದ್ಧ ದೇಶಭಕ್ತಿ ಗೀತೆ "ಮಾ ತುಝೆ ಸಲಾಮ್" ಅನ್ನು ಅದ್ಭುತವಾಗಿ ಪ್ರಸ್ತುತಪಡಿಸಿದರು.
PM modi
ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ
Updated on

ಮೆಲ್ಬೋರ್ನ್: ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮೆಲ್ಬೋರ್ನ್‌ನಲ್ಲಿ ಭಾರತೀಯ ಸಮುದಾಯದಿಂದ ಅದ್ಧೂರಿ ಮತ್ತು ಅಭೂತಪೂರ್ವ ಸಾಂಸ್ಕೃತಿಕ ಸ್ವಾಗತ ದೊರೆತಿದೆ.

ಆಸ್ಟ್ರೇಲಿಯಾದ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನೂರಾರು ಅನಿವಾಸಿ ಭಾರತೀಯರು ಭಾರತ ಮತ್ತು ಆಸ್ಟ್ರೇಲಿಯಾದ ಸಾಂಪ್ರದಾಯಿಕ ಕಲಾ ಪ್ರಕಾರಗಳ ಸಮ್ಮಿಲನದೊಂದಿಗೆ ಪ್ರಧಾನಿ ಮೋದಿಯವರನ್ನು ಬರಮಾಡಿಕೊಂಡರು.

ಮೆಲ್ಬೋರ್ನ್‌ನಲ್ಲಿ 'ಆಸ್ಟ್ರೇಲಿಯಾ–ಇಂಡಿಯಾ ಆರ್ಕೆಸ್ಟ್ರಾ' ತಂಡದ 10 ಕಲಾವಿದರು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಪ್ರಸಿದ್ಧ ದೇಶಭಕ್ತಿ ಗೀತೆ "ಮಾ ತುಝೆ ಸಲಾಮ್" ಅನ್ನು ಅದ್ಭುತವಾಗಿ ಪ್ರಸ್ತುತಪಡಿಸಿದರು.

ಈ ಪ್ರದರ್ಶನವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, "ಇದು 'ವಂದೇ ಮಾತರಂ' ಗೀತೆಯ ಜಾಗತಿಕ ಜನಪ್ರಿಯತೆ ಮತ್ತು ಭಾರತ-ಆಸ್ಟ್ರೇಲಿಯಾ ನಡುವಿನ ಆಪ್ತ ಬಾಂಧವ್ಯಕ್ಕೆ ಸಾಕ್ಷಿ" ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಇದೇ ವೇಳೆ 'ವಂದೇ ಮಾತರಂ' ಗೀತೆಯ 150ನೇ ವರ್ಷಾಚರಣೆಯ ಸಂದರ್ಭದಲ್ಲಿ ಅದರ ಜಾಗತಿಕ ಜನಪ್ರಿಯತೆಯನ್ನು ಈ ಕಾರ್ಯಕ್ರಮ ಮತ್ತೊಮ್ಮೆ ಎತ್ತಿ ತೋರಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಆಸ್ಟ್ರೇಲಿಯಾದ ಮೂಲ ನಿವಾಸಿಗಳ (Aboriginal) ಸಾಂಪ್ರದಾಯಿಕ ಸುಶಿರ ವಾದ್ಯವಾದ 'ಡಿಡ್ಜೆರಿಡೂ' (Didgeridoo) ಮತ್ತು ಭಾರತದ ಹೆಮ್ಮೆಯ 'ತಬಲಾ' ವಾದ್ಯಗಳ ಜುಗಲ್‌ಬಂದಿ ಜರುಗಿತು.

ಕಲಾಕಾರ ರಾನ್ ಮುರ್ರೆ ಮತ್ತು ತಬಲಾ ವಾದಕ ಡಾ. ಸ್ಯಾಮ್ ಇವಾನ್ಸ್ ಅವರ ಈ ಜುಗಲ್‌ಬಂದಿ ಉಭಯ ದೇಶಗಳ ಸಾಂಸ್ಕೃತಿಕ ಸ್ನೇಹದ ಸಂಕೇತವಾಗಿ ಮೂಡಿಬಂದಿತು. ಜೊತೆಗೆ ಕಥಕ್ ನೃತ್ಯ ಪ್ರದರ್ಶನವೂ ಗಮನ ಸೆಳೆಯಿತು.

PM modi
ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಜೊತೆ ಪ್ರಾಂಬನನ್ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ; Video

ಈ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, "ಆಸ್ಟ್ರೇಲಿಯಾದ ಪುರಾತನ ಡಿಡ್ಜೆರಿಡು ಮತ್ತು ಭಾರತದ ತಬಲಾ ವಾದ್ಯಗಳ ಸಂಗಮದ ಅದ್ಭುತ ಸಂಗೀತವನ್ನು ವೀಕ್ಷಿಸಿದೆ. ಈ ಎರಡು ಕಾಲಾತೀತ ವಾದ್ಯಗಳ ಸಮನ್ವಯ ನಮ್ಮ ಎರಡು ರಾಷ್ಟ್ರಗಳ ಆಳವಾದ ಸಾಂಸ್ಕೃತಿಕ ಬಾಂಧವ್ಯವನ್ನು ಸುಂದರವಾಗಿ ಪ್ರತಿಬಿಂಬಿಸಿತು. ನಮ್ಮ ಸಂಗೀತ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರಿಗೆ ಅಭಿನಂದನೆಗಳು" ಎಂದು ತಿಳಿಸಿದ್ದಾರೆ.

ಇದರ ಜೊತೆಗೆ ಭಾರತೀಯ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಡೆದ ಭರತನಾಟ್ಯ ಹಾಗೂ ಕಥಕ್ ನೃತ್ಯ ಪ್ರದರ್ಶನಗಳನ್ನೂ ಪ್ರಧಾನಿ ಮೋದಿ ವೀಕ್ಷಿಸಿದರು.

ಕಾರ್ಯಕ್ರಮದ ಬಳಿಕ ಕಲಾವಿದರನ್ನು ಭೇಟಿ ಮಾಡಿ ಅಭಿನಂದಿಸಿದ ಅವರು, "ಆಸ್ಟ್ರೇಲಿಯಾದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯಗಳಿಗೆ ಹೆಚ್ಚುತ್ತಿರುವ ಜನಪ್ರಿಯತೆ ಸಂತಸದ ವಿಚಾರ" ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸದ ಭಾಗವಾಗಿ, ಇಂದು (ಜುಲೈ 9, 2026) ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಶೃಂಗಸಭೆ ನಡೆಯಲಿದೆ.

ಈ ವೇಳೆ ರಕ್ಷಣೆ, ವ್ಯಾಪಾರ ಮತ್ತು ಯುರೇನಿಯಂ ರಫ್ತು ಒಪ್ಪಂದಗಳ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ. ಇದಾದ ಬಳಿಕ ಮೆಲ್ಬೋರ್ನ್‌ನ ಮಾರ್ವೆಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಬೃಹತ್ 'ಮೆಲ್ಬೋರ್ನ್ ಮೀಟ್ಸ್ ಮೋದಿ' ಸಮಾವೇಶದಲ್ಲಿ ಪ್ರಧಾನಿ ಅವರು 30,000ಕ್ಕೂ ಹೆಚ್ಚು ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ಬಳಿಕ ಪ್ರಧಾನಿ ಮೋದಿ ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಅಂತಿಮ ಹಂತವಾಗಿ ನ್ಯೂಜಿಲೆಂಡ್‌ಗೆ ಭೇಟಿ ನೀಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com