ತನ್ನ ಅತ್ಯಂತ ಕಿರಿದಾದ ಭಾಗದಲ್ಲಿ ಕೇವಲ 33 ಕಿಲೋಮೀಟರ್ ಅಷ್ಟೇ ಅಗಲವಿರುವ ಒಂದು ಸಣ್ಣ ಜಲಸಂಧಿಯನ್ನು ಕಲ್ಪಿಸಿಕೊಳ್ಳಿ. ಆದರೆ, ಪ್ರತಿದಿನವೂ ಈ ಜಲಸಂಧಿಯ ಮೂಲಕವೇ ಜಗತ್ತಿನ ಒಟ್ಟು ತೈಲದ ಬಹುತೇಕ ಐದನೇ ಒಂದು ಭಾಗ ಹಾದುಹೋಗುತ್ತದೆ. ಈ ಜಲಸಂಧಿಯೇ ಹೊರ್ಮುಸ್ ಜಲಸಂಧಿ. ಈಗ, ಸಮುದ್ರದ ಈ ಸಣ್ಣ ಭಾಗ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದ್ದು, ಜಗತ್ತು ಸಂಪೂರ್ಣವಾಗಿ ಇದರತ್ತಲೇ ದೃಷ್ಟಿ ನೆಟ್ಟಿದೆ.
ಈ ಜಲಸಂಧಿಯ ಕುರಿತು ನಡೆಯುತ್ತಿರುವುದು ಏನು? ಇದನ್ನು ನಾವು ಸರಳವಾಗಿ ಈ ಲೇಖನದ ಮೂಲಕ ಗಮನಿಸೋಣ.
ಅಮೆರಿಕ ಮತ್ತು ಇರಾನಿನ ನಡುವೆ ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ಶಾಂತಿ ಮಾತುಕತೆಗಳು ನಡೆದವು. ಉಭಯ ಪಕ್ಷಗಳೂ ಸುದೀರ್ಘ 21 ಗಂಟೆಗಳ ಕಾಲ ಪರಸ್ಪರ ಚರ್ಚೆ ನಡೆಸಿದವು. ಆದರೆ, ಶಾಂತಿ ಮಾತುಕತೆಗಳು ಮಾತ್ರ ಸಂಪೂರ್ಣ ವೈಫಲ್ಯದಲ್ಲಿ ಅಂತ್ಯ ಕಂಡವು. ಇರಾನ್ ತನ್ನ ಪರಮಾಣು ಸಂವರ್ಧನಾ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಲು ನಿರಾಕರಿಸಿತು. ಅಂದರೆ, ಇರಾನ್ ತಾನು ಪರಮಾಣು ಸಾಮರ್ಥ್ಯ ಅಭಿವೃದ್ಧಿ ಪಡಿಸುವುದಕ್ಕೆ ಹಾಕಿಕೊಂಡಿರುವ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎನ್ನುವ ಸಂದೇಶ ರವಾನಿಸಿದೆ. ಸದ್ಯದಲ್ಲಿ ಯಾವುದೇ ಒಪ್ಪಂದ ಕಾಣದಿರುವುದರಿಂದ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಪ್ರಿಲ್ 13ರಂದು ಸಂಜೆ ಭಾರತೀಯ ಕಾಲಮಾನದಲ್ಲಿ 7:30ಕ್ಕೆ ಸರಿಯಾಗಿ ಹೊರ್ಮುಸ್ ಜಲಸಂಧಿಯಲ್ಲಿ ನೌಕಾಪಡೆಯ ದಿಗ್ಬಂಧನಕ್ಕೆ ಆದೇಶ ಹೊರಡಿಸಿದರು. ಈ ಆದೇಶವನ್ನು ಸೆಂಟ್‌ಕಾಮ್ ಎಂದು ಕರೆಯಲ್ಪಡುವ ಅಮೆರಿಕದ ಸೆಂಟ್ರಲ್ ಕಮಾಂಡ್ ಜಾರಿಗೆ ತರುತ್ತಿದೆ.
ಈ ದಿಗ್ಬಂಧನವನ್ನು ಸರಳವಾಗಿ ವಿವರಿಸುವುದಾದರೆ, ಈಗ ಅಮೆರಿಕನ್ ನೌಕಾಪಡೆ ಹಡಗುಗಳನ್ನು ತಡೆದು, ಅವುಗಳ ಪರಿಶೀಲನೆ ನಡೆಸಬಹುದು. ಆದರೆ, ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ಒಂದು ಪ್ರಮುಖ ವಿಚಾರವೂ ಇದೆ. ಅಮೆರಿಕದ ದಿಗ್ಬಂಧನ ಎಂದರೆ, ಹೊರ್ಮುಸ್ ಜಲಸಂಧಿ ಸಂಪೂರ್ಣ ಮುಚ್ಚಲ್ಪಟ್ಟಿದೆ ಎಂದರ್ಥವಲ್ಲ. ಸೌದಿ ಅರೇಬಿಯಾ, ಯುಎಇ, ಅಥವಾ ಕುವೈತ್‌ನಂತಹ ದೇಶಗಳಿಗೆ ತೆರಳುವ, ಅಥವಾ ಅಲ್ಲಿಂದ ಬರುವ ಹಡಗುಗಳು ಯಾವುದೇ ತಡೆಯಿಲ್ಲದೆ ಮುಕ್ತವಾಗಿ ಸಂಚರಿಸಲು ಅನುಮತಿ ಇದೆ ಎಂದು ಸೆಂಟ್‌ಕಾಮ್ ಸ್ಪಷ್ಟಪಡಿಸಿದೆ. ಆದರೆ, ಇರಾನಿನ ಬಂದರುಗಳಿಗೆ ತೆರಳುವ, ಅಥವಾ ಅಲ್ಲಿಂದ ಮರಳುವ ಹಡಗುಗಳನ್ನು ತಡೆಯಲಾಗುತ್ತದೆ. ಇರಾನಿನ ಆದಾಯವನ್ನು ಸಂಪೂರ್ಣವಾಗಿ ತಡೆಗಟ್ಟಿ, ಟೆಹರಾನ್ ಮೇಲೆ ಗರಿಷ್ಠ ಒತ್ತಡ ಹೇರಿ, ಅದು ಮತ್ತೆ ಮಾತುಕತೆಯ ಮೇಜಿಗೆ ಮರಳುವಂತೆ ಮಾಡುವುದು ಈ ಕ್ರಮದ ಹಿಂದಿರುವ ಅಮೆರಿಕದ ಉದ್ದೇಶ.
ಇರಾನ್ ಈಗ ಸುಲಿಗೆಕೋರನಂತೆ ವರ್ತಿಸಲಾರಂಭಿಸಿದೆ ಎಂದೂ ಟ್ರಂಪ್ ಆರೋಪಿಸಿದ್ದಾರೆ. ಇರಾನಿಯನ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೊರ್ಮುಸ್ ಜಲಸಂಧಿಯ ಮೂಲಕ ಮುಕ್ತವಾಗಿ ಹಾದು ಹೋಗುವುದಕ್ಕೇ ಪ್ರತಿ ಹಡಗಿನಿಂದ ತಲಾ 2 ಮಿಲಿಯನ್ ಡಾಲರ್ ತನಕ ಹಣ ವಸೂಲಿ ಮಾಡುತ್ತಿದೆ. ಟ್ರಂಪ್ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದು, ತಾನು ಇದನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವುದು ಇಲ್ಲಿ. ಇರಾನಿನ ಐಆರ್‌ಜಿಸಿ ಪಡೆ ಹೊರ್ಮುಸ್ ಜಲಸಂಧಿಯ ಒಳ ಭಾಗದಲ್ಲಿ ಸಮುದ್ರ ಮೈನ್‌ಗಳನ್ನು ಅಳವಡಿಸಿದೆ ಎನ್ನಲಾಗಿದೆ. ಸಮುದ್ರ ಮೈನ್‌ಗಳೆಂದರೆ ನೀರಿನಾಳದಲ್ಲಿ ಅಳವಡಿಸುವ ಒಂದು ವಿಧದ ಸ್ಫೋಟಕವಾಗಿದೆ. ಒಂದು ಹಡಗು ಇದರ ಮೇಲಿನಿಂದ ಹಾದು ಹೋದಾಗ ಮೈನ್ ಸ್ಫೋಟಗೊಳ್ಳುತ್ತದೆ. ಆ ಮೂಲಕ ಹಡಗು, ಅದರ ಸಿಬ್ಬಂದಿ, ಮತ್ತು ಅದು ಸಾಗಿಸುತ್ತಿರುವ ಸರಕುಗಳನ್ನು ನಾಶಗೊಳಿಸುತ್ತದೆ. ಈ ಅಗೋಚರ ಕೊಲೆಗಾರ ಸ್ಫೋಟಕಗಳು ಸಂಪೂರ್ಣ ಪ್ರದೇಶವನ್ನೇ ತೈಲ ಟ್ಯಾಂಕರ್‌ಗಳು ಮತ್ತು ಸರಕು ಸಾಗಾಣಿಕಾ ಹಡಗುಗಳಿಗೆ ಅಪಾಯಕಾರಿಯಾಗಿಸಿವೆ.
ಹೊರ್ಮುಸ್ ಜಲಸಂಧಿಯ ಬಳಿ ವಾರಗಳ ಕಾಲ ಅಂದಾಜು 800 ಹಡಗುಗಳು ಬಾಕಿಯಾಗಿದ್ದವು. ಸಮುದ್ರದ ಆಳದಲ್ಲಿದ್ದ ಮೈನ್‌ಗಳು ಮತ್ತು ಮುಂದುವರಿದ ಯುದ್ಧದ ಕಾರಣದಿಂದಾಗಿ ಅವುಗಳು ಚಲಿಸಲು ಸಾಧ್ಯವಾಗಿರಲಿಲ್ಲ.
ಅಮೆರಿಕ ಈಗಾಗಲೇ ಹೊರ್ಮುಸ್ ಪ್ರದೇಶಕ್ಕೆ ಯುಎಸ್ಎಸ್ ಫ್ರ್ಯಾಂಕ್ ಇ ಪೀಟರ್ಸನ್ ಮತ್ತು ಯುಎಸ್ಎಸ್ ಮೈಕೆಲ್ ಮರ್ಫಿ ಎನ್ನುವ ಎರಡು ಶಕ್ತಿಶಾಲಿ ಗೈಡೆಡ್ ಮಿಸೈಲ್ ಡೆಸ್ಟ್ರಾಯರ್ ನೌಕೆಗಳನ್ನು ಕಳುಹಿಸಿದೆ. ಆದರೆ, ಈ ಯುದ್ಧ ನೌಕೆಗಳು ಕೇವಲ ಸೆಣಸಾಡಲು ಅಲ್ಲಿಗೆ ತೆರಳುತ್ತಿಲ್ಲ. ಅವು ಜಾಗರೂಕವಾಗಿ ಯೋಜಿಸಿರುವ ಮೈನ್ ತೆರವು ಕಾರ್ಯಾಚರಣೆಯಲ್ಲೂ ಭಾಗಿಯಾಗಲಿವೆ.
ನೇರವಾಗಿ ನಾವಿಕರನ್ನು ಅಪಾಯಕಾರಿ ಮೈನ್‌ಗಳು ತುಂಬಿರುವ ಸಮುದ್ರಕ್ಕೆ ಕಳುಹಿಸುವ ಬದಲು, ಅಮೆರಿಕನ್ ನೌಕಾಪಡೆ ಅನ್‌ಮ್ಯಾನ್ಡ್ ಅಂಡರ್‌ವಾಟರ್ ವೆಹಿಕಲ್ಸ್ (ಯುಯುವಿ) ಎಂದು ಕರೆಯುವ ರೊಬಾಟಿಕ್ ನೀರಿನಾಳದ ಯಂತ್ರಗಳನ್ನು ರವಾನಿಸಿದೆ. ಇವುಗಳನ್ನು ಟಾರ್ಪಿಡೋ ಆಕಾರದ, ನೀರಿನಾಳದ ಡ್ರೋನ್‌ಗಳು ಎಂದು ಪರಿಗಣಿಸಿ. ಇವು ತಮ್ಮ ಪಾಡಿಗೆ ನೀರಿನಾಳದಲ್ಲಿ ಈಜುತ್ತಾ ಸಾಗಿ, ಆಧುನಿಕ ಸೋನಾರ್‌ಗಳನ್ನು ಬಳಸಿ (ಸೋನಾರ್ ಎಂದರೆ ಶಬ್ದ ಆಧಾರಿತ ರೇಡಾರ್) ಸಮುದ್ರದ ತಳದಲ್ಲಿ ಬಚ್ಚಿಟ್ಟುಕೊಂಡಿರುವ ಮೈನ್‌ಗಳನ್ನು ಶೋಧಿಸುತ್ತವೆ.
ಸಮುದ್ರದ ಮೇಲಿನಿಂದ, ಎಂಎಚ್-60ರಂತಹ ಮಿಲಿಟರಿ ಹೆಲಿಕಾಪ್ಟರ್‌ಗಳು ಹಾರಾಟ ನಡೆಸುತ್ತಾ, ಏರ್‌ಬಾರ್ನ್ ಲೇಸರ್ ಮೈನ್ ಡಿಟೆಕ್ಷನ್ ಸಿಸ್ಟಮ್ (ಎಎಲ್ಎಂಡಿಎಸ್) ಎನ್ನುವ ವಿಶೇಷ ಲೇಸರ್ ವ್ಯವಸ್ಥೆಯನ್ನು ಬಳಸುತ್ತವೆ. ಈ ಲೇಸರ್‌ಗಳು ಸಾಕಷ್ಟು ಎತ್ತರದಿಂದಲೇ ಸಮುದ್ರದ ಮೇಲ್ಮೈಯಲ್ಲಿರುವ ಅಥವಾ ಸ್ವಲ್ಪ ಒಳಭಾಗದಲ್ಲಿ ತೇಲುತ್ತಿರುವ ಮೈನ್‌ಗಳನ್ನು ಗುರುತಿಸುತ್ತವೆ.
ಒಂದು ಬಾರಿ ಡ್ರೋನ್‌ಗಳ ಮೂಲಕ ಅಥವಾ ಹೆಲಿಕಾಪ್ಟರ್‌ಗಳ ಮೂಲಕ ಮೈನ್‌ಗಳನ್ನು ಪತ್ತೆಹಚ್ಚಿದ ಬಳಿಕ, ಅದನ್ನು ಏರ್‌ಬಾರ್ನ್ ಮೈನ್ ನ್ಯೂಟ್ರಲೈಸೇಶನ್ ಸಿಸ್ಟಮ್ (ಎಎಂಎನ್ಎಸ್) ಎನ್ನುವ ರಿಮೋಟ್ ವ್ಯವಸ್ಥೆಯ ಮೂಲಕ ಅವುಗಳನ್ನು ನಾಶಪಡಿಸಲಾಗುತ್ತದೆ. ಈ ವ್ಯವಸ್ಥೆ ಸಣ್ಣ ರೋಬಾಟಿಕ್ ಉಪಕರಣವನ್ನು ನೇರವಾಗಿ ಮೈನ್‌ನತ್ತ ಕಳುಹಿಸಿ, ಅದು ಸುರಕ್ಷಿತವಾಗಿ ಸ್ಫೋಟಿಸಿವಂತೆ ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಮಾನವ ಜೀವಕ್ಕೆ ಅಪಾಯ ಉಂಟಾಗುವುದಿಲ್ಲ.
ಈ ಎರಡು ಡೆಸ್ಟ್ರಾಯರ್‌ಗಳಿಗೂ ಏಜಿಸ್ ಕಾಂಬ್ಯಾಟ್ ಸಿಸ್ಟಮ್ ಮತ್ತು ಅಡ್ವಾನ್ಸ್ಡ್ ಇಂಟರ್‌ಸೆಪ್ಟರ್ ಕ್ಷಿಪಣಿಗಳನ್ನು ಅಳವಡಿಸಲಾಗಿದ್ದು, ಆಗಸದಲ್ಲಿ ಅಥವಾ ಸಮುದ್ರದಲ್ಲಿ ಬರುವ ಯಾವುದೇ ಅಪಾಯವನ್ನು ಹೊಡೆದುರುಳಿಸಬಲ್ಲವು. ಇವು ಮೈನ್ಸ್ ನಿವಾರಣಾ ಕಾರ್ಯಾಚರಣೆಗೆ ಪೂರ್ಣ ಸುರಕ್ಷತೆ ಒದಗಿಸುತ್ತವೆ.
ಅಮೆರಿಕದ ಅಡ್ಮಿರಲ್ ಬ್ರಾಡ್ ಕೂಪರ್ ಅವರು ಈಗಾಗಲೇ ಒಂದು ನೂತನ, ಸುರಕ್ಷಿತ ಸಾಗಾಣಿಕಾ ಮಾರ್ಗವನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಘೋಷಿಸಿದ್ದು, ಅದನ್ನು ಸದ್ಯದಲ್ಲೇ ಜಾಗತಿಕ ಸಾಗಾಣಿಕಾ ಉದ್ಯಮದೊಡನೆ ಹಂಚಿಕೊಳ್ಳಲಾಗುತ್ತದೆ ಎಂದಿದ್ದಾರೆ.
ಹೊರ್ಮುಸ್ ಜಲಸಂಧಿಯ ಮೂಲಕ ಜಗತ್ತಿನ ಬಹುತೇಕ 20% ತೈಲ ಮತ್ತು ಅನಿಲ ಪ್ರತಿದಿನವೂ ಹಾದು ಹೋಗುತ್ತದೆ. ಇವೆಲ್ಲ ಉದ್ವಿಗ್ನತೆಗಳ ಪರಿಣಾಮವಾಗಿ, ಜಾಗತಿಕ ತೈಲ ಬೆಲೆಗಳು ಈಗಾಗಲೇ ಪ್ರತಿ ಬ್ಯಾರಲ್‌ಗೆ 100 ಡಾಲರ್ ದಾಟಿವೆ. ಇದು ತೈಲ ಬೆಲೆಯಲ್ಲಿ ಅಂದಾಜು 8% ಹೆಚ್ಚಳವಾಗಿದೆ. ಇನ್ನು ತನ್ನ ತೈಲದ ದೊಡ್ಡ ಪ್ರಮಾಣವನ್ನು ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವ ಭಾರತಕ್ಕೂ ಪೆಟ್ರೋಲ್, ಡೀಸೆಲ್, ಮತ್ತು ಅಡುಗೆ ಅನಿಲ ದರ ಹೆಚ್ಚಳದ ಬಿಸಿ ತಟ್ಟಬಹುದು.
ಯುಕೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಈಗಾಗಲೇ ತಾವು ಈ ದಿಗ್ಬಂಧನ ವಿಧಿಸುವ ಅಮೆರಿಕದ ಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಇರಾನಿನ ತೈಲದ ಬಹುದೊಡ್ಡ ಪಾಲನ್ನು ಖರೀದಿಸುವ ಚೀನಾ ಈಗಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ವಿಶ್ಲೇಷಕರಂತೂ ಈ ದಿಗ್ಬಂಧನ ಇನ್ನಷ್ಟು ಬಿಗಿಯಾದರೆ, ಆಗ ಸ್ವತಃ ಚೀನಾ ನೇರವಾಗಿ ಚಕಮಕಿಯಲ್ಲಿ ಪಾಲ್ಗೊಳ್ಳಬೇಕಾಗಿ ಬರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದು ಈಗಾಗಲೇ ಉದ್ವಿಗ್ನಗೊಂಡಿರುವ ಪರಿಸ್ಥಿತಿಯನ್ನು ಇನ್ನಷ್ಟು ಅಪಾಯಕಾರಿಯಾಗಿ ಬದಲಾಯಿಸಬಹುದು.
ಈಗ ಸಂಪೂರ್ಣ ಜಗತ್ತು ಕುತೂಹಲದಿಂದ ಮಧ್ಯ ಪೂರ್ವದತ್ತ ದೃಷ್ಟಿ ನೆಟ್ಟಿದೆ. ಹೊರ್ಮುಸ್ ಜಲಸಂಧಿಯನ್ನು ದಾಟುವ, ಅಥವಾ ದಾಟದಿರುವ ಪ್ರತಿಯೊಂದು ಹಡಗೂ ಸಹ ಜಾಗತಿಕ ಪರಿಣಾಮದ ತೂಕವನ್ನು ತನ್ನ ಹೆಗಲ ಮೇಲೆ ಹೊತ್ತಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com