ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ ಪೆಟ್ರೋಲಿಯಂ (ತೈಲ) ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಕೇವಲ ವಾಹನಗಳಿಗೆ ಇಂಧನವಷ್ಟೇ ಅಲ್ಲ, ಉದ್ಯಮ, ಸಾರಿಗೆ, ರಕ್ಷಣಾ ವ್ಯವಸ್ಥೆ ಮತ್ತು ಜಾಗತಿಕ ವ್ಯಾಪಾರಕ್ಕೂ ನಿತ್ಯ ಬೇಕಾಗುವ ಅತ್ಯಂತ ಪ್ರಮುಖ ಅಂಶವಾಗಿದೆ. ಪ್ರತಿ ದಿನ ವಿಶ್ವದಲ್ಲಿ ಸರಿ ಸುಮಾರು ೧೦೦ ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲ ಬಳಕೆಯಾಗುತ್ತದೆ. ಇದರ ಮೌಲ್ಯ ದಿನಕ್ಕೆ ಹಲವಾರು ಬಿಲಿಯನ್ ಡಾಲರ್‌ಗಳಷ್ಟಾಗಿದ್ದು, ವರ್ಷಕ್ಕೆ ಟ್ರಿಲಿಯನ್ ಡಾಲರ್‌ಗಳ ಮಟ್ಟವನ್ನು ತಲುಪುತ್ತದೆ.ಜಾಗತಿಕ ರಾಜಕೀಯದಲ್ಲಿ ತೈಲ ಬಹಳ ಪ್ರಮುಖ ಪಾತ್ರವಹಿಸುತ್ತದೆ . ಅನೇಕ ರಾಜಕೀಯ ಬದಲಾವಣೆಗಳು , ನಿರ್ಧಾರಗಳು ಇದರ ಸುತ್ತಲೇ ಏಕೆ ಸುತ್ತುತ್ತವೆ ಎನ್ನುವುದರ ಅರಿವಾಯ್ತು ಎಂದುಕೊಳ್ಳುತ್ತೇನೆ.
ಮಧ್ಯಪೂರ್ವ ದೇಶಗಳು ವಿಶ್ವದ ತೈಲ ಆರ್ಥಿಕತೆಯ ಕೇಂದ್ರವಾಗಿವೆ. ಸೌದಿ ಅರೇಬಿಯಾ ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದು. ದಿನಕ್ಕೆ ಸುಮಾರು ೧೦ ರಿಂದ ೧೨ ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲ ಉತ್ಪಾದಿಸುತ್ತದೆ. ಇದು “ಸ್ವಿಂಗ್ ಪ್ರೊಡ್ಯೂಸರ್” ಎಂದು ಕರೆಯಲ್ಪಡುತ್ತದೆ. ಅಂದರೆ ಇದು ತನ್ನ ಉತ್ಪಾದನೆಯನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಮೂಲಕ ಜಾಗತಿಕ ಬೆಲೆಗಳನ್ನುನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ ಎಂದರ್ಥ. ಇಂತಹ ಸೌದಿ ಅಮೆರಿಕಾ ದೇಶದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ ಎಂದು ನಂಬಲಾಗುತ್ತಿದ್ದೆ. ಆದರೆ ವಸ್ತುಸ್ಥಿತಿ ಬೇರೆಯದಿದೆ. ಸೌದಿಗೆ ಬೇರೆ ದಾರಿಯಿಲ್ಲದ ಕಾರಣ ಮತ್ತು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಅದು ಅಮೇರಿಕಾ ದೇಶದೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ. ಹೀಗಾಗಿ ಪೆಟ್ರೋ ಡಾಲರ್ ನಂಟು ಇಷ್ಟು ವರ್ಷಗಳಿಂದ ಜಗತ್ತನ್ನು ಆಳುತ್ತಾ ಬಂದಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕೂಡ ಪ್ರಮುಖ ತೈಲ ಉತ್ಪಾದಕ ದೇಶವಾಗಿದ್ದು, ದಿನಕ್ಕೆ ಸುಮಾರು ೩ ರಿಂದ ೫ ಮಿಲಿಯನ್ ಬ್ಯಾರೆಲ್ ಉತ್ಪಾದನೆ ಮಾಡುತ್ತದೆ. ಕಡಿಮೆ ವೆಚ್ಚದಲ್ಲಿ ತೈಲ ಉತ್ಪಾದಿಸುವ ಸಾಮರ್ಥ್ಯದಿಂದ ಇದು ಹೆಚ್ಚು ಲಾಭ ಗಳಿಸುತ್ತದೆ. ಇತ್ತೀಚೆಗೆ ಯುಎಇ OPEC ಸಂಘಟನೆಯಿಂದ ಹೊರಬಂದಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಗಮನಿಸಿ ಬರೋಬ್ಬರಿ ೫೯ ವರ್ಷಗಳ ನಂತರ ಯುಎಇ ಒಪೆಕ್ ಒಕ್ಕೊಟದಿಂದ ಹೊರಬಂದಿದೆ. ಇಲ್ಲಿಯವರೆಗೂ ಒಪೆಕ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಇದು ಬದ್ದವಾಗಿರಬೇಕಿತ್ತು. ಅಂದರೆ ಜಗತ್ಕ ಮಾರುಕಟ್ಟೆಯಲ್ಲಿ ಬೆಲೆಯನ್ನು ಏರಿಸಲು ಅಥವಾ ಇಳಿಸಲು ಈ ಒಕ್ಕೊಟ ತನ್ನ ಎಲ್ಲಾ ಸದಸ್ಯ ದೇಶಗಳಿಗೆ ತೈಲ ಉತ್ಪಾದನೆಯನ್ನು ಹೆಚ್ಚಿಸುವಂತೆ ಅಥವಾ ಇಳಿಸುವಂತೆ ತಾಕೀತು ಮಾಡುತ್ತಿತ್ತು. ಸದಸ್ಯ ದೇಶಗಳು ಅದರಂತೆ ನಡೆದುಕೊಳ್ಳಬೇಕಾಗಿತ್ತು. ಈಗ ಯುಎಇ ಒಕ್ಕೊಟದಿಂದ ಹೊರಬಂದಿರುವ ಕಾರಣ , ಅದು ತನ್ನ ಇಚ್ಚೆಯಂತೆ ತೈಲ ಉತ್ಪಾದನೆಯಲ್ಲಿ ತೊಡಗಬಹುದು. ಈ ರೀತಿ ಅದು ಒಕ್ಕೊಟದಿಂದ ಹೊರಬರಲು ಪ್ರಮುಖ ಕಾರಣ , ಪೆಟ್ರೋ ಡಾಲರ್ ಸಮೀಕರಣ ಕೆಲಸ ಮಾಡುತ್ತಿಲ್ಲ ಎನ್ನುವುದಾಗಿದೆ. ಇರಾನಿನ ಯುದ್ಧ ಹಲವು ನೂನ್ಯತೆಗಳನ್ನು ಎತ್ತಿ ತೋರಿಸುತ್ತಿದೆ. ಅದರಲ್ಲಿ ಪ್ರಮುಖವಾಗಿ ಪೆಟ್ರೋ ಡಾಲರ್ ನಂಟು ಕರಗಿ ಹೋಗಿರುವುದಾಗಿದೆ. ಈ ಬೆಳವಣಿಗೆ ಸೌದಿ ಮತ್ತು OPEC ನ ನಿಯಂತ್ರಣ ಸಾಮರ್ಥ್ಯವನ್ನು ಅಷ್ಟರ ಮಟ್ಟಿಗೆ ಕಡಿಮೆ ಮಾಡಿದೆ. ಯುಎಇ ತನ್ನ ಪೂರ್ಣ ಸಾಮರ್ಥ್ಯದಿಂದ ತೈಲ ಉತ್ಪಾದನೆ ಮಾಡಿದರೆ ಅದರ ಹೆಚ್ಚು ಲಾಭ ಪಡೆದುಕೊಳ್ಳುವುದು ಭಾರತ! ಯುಎಇ ಜೊತೆಗೆ ಭಾರತ ಅತ್ಯುತ್ತಮ ಬಾಂಧ್ಯವವನ್ನು ಹೊಂದಿದೆ. ಈ ಕಾರಣದಿಂದ ಅಲ್ಲಿ ಉತ್ಪಾದನೆಯಾಗುವ ತೈಲದ ಬಹುಪಾಲು ಭಾರತ ಖರೀದಿಸುತ್ತದೆ.
ಇರಾನ್ ತೈಲ ಸಂಪತ್ತಿನ ದೃಷ್ಟಿಯಿಂದ ಅತ್ಯಂತ ಪ್ರಮುಖ ದೇಶವಾಗಿದ್ದು, ಇದರ ಭೌಗೋಳಿಕ ಸ್ಥಾನ ಅತ್ಯಂತ ಮುಖ್ಯವಾಗಿದೆ ಅದೇ ಸಮಯದಲ್ಲಿ ಸೂಕ್ಷ್ಮವೂ ಆಗಿದೆ. Strait of Hormuz ಎಂಬ ಸಮುದ್ರ ಮಾರ್ಗವನ್ನು ಇದು ನಿಯಂತ್ರಿಸುವುದರಿಂದ, ವಿಶ್ವದ ಸುಮಾರು ೨೦ ಪ್ರತಿಶತ ತೈಲ ಸಾಗಣೆ ಈ ಮಾರ್ಗದಿಂದಲೇ ನಡೆಯುತ್ತದೆ.
ಇರಾನ್ ಮತ್ತು ಅಮೆರಿಕಾ ನಡುವಿನ ಉದ್ವಿಗ್ನತೆ ತೈಲ ಮಾರುಕಟ್ಟೆಯಲ್ಲಿ ನೇರ ಪರಿಣಾಮ ಬೀರುತ್ತದೆ. ಯುದ್ಧ ಭೀತಿ ಉಂಟಾದಾಗ,ಅಥವಾ ಯುದ್ಧದ ಸಮಯದಲ್ಲಿ ಈ ಮಾರ್ಗದಲ್ಲಿ ಸಾಗಾಣಿಕೆ ಕಷ್ಟವಾಗುತ್ತದೆ. ಇದರಿಂದ ತೈಲ ಸರಬರಾಜು ಕಡಿಮೆಯಾಗುವ ಸಾಧ್ಯತೆ ಇರುತ್ತದೆ, ಮತ್ತು ಬೆಲೆಗಳು ತಕ್ಷಣವೇ ಏರಿಕೆಯಾಗುತ್ತವೆ.ನಾವೆಲ್ಲರೂ ಗ್ಯಾಸ್ ಸಿಲಿಂಡರ್ ಇಲ್ಲದೆ ಪರದಾಡುತ್ತಿರುವುದಕ್ಕೂ ಇದೆ ಕಾರಣವಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ತೈಲದ ಕೊರತೆ ಉಂಟಾಗಿಲ್ಲ ಮತ್ತು ಅದರ ಬೆಲೆಯಲ್ಲಿ ಕೂಡ ಏರುಪೇರಾಗಿಲ್ಲ. ಇದಕ್ಕೆ ಭಾರತದ ರಾಜತಾಂತ್ರಿಕ ಅಂದರೆ ಡಿಪ್ಲೊಮೆಸಿ ಕಾರಣ ಎನ್ನುವುದು ಸ್ಪಷ್ಟ.
ಅಮೆರಿಕಾ ಇರಾನ್ ಮೇಲೆ ವಿಧಿಸಿರುವ ಆರ್ಥಿಕ ನಿರ್ಬಂಧಗಳು ಅದರ ತೈಲ ರಫ್ತನ್ನು ತೀವ್ರವಾಗಿ ಕಡಿಮೆ ಮಾಡಿವೆ. ಇದರಿಂದ ಇರಾನ್ ಆರ್ಥಿಕತೆ ದುರ್ಬಲಗೊಂಡಿದೆ. ಆದಾಗ್ಯೂ, ಇರಾನ್ ತನ್ನ ತೈಲವನ್ನು ಅನೌಪಚಾರಿಕ ಮಾರ್ಗಗಳ ಮೂಲಕ ಮಾರಾಟ ಮಾಡುವ ಪ್ರಯತ್ನ ಮಾಡುತ್ತಿದೆ, ಇದು ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆಯನ್ನು ಹೆಚ್ಚಿಸಿದೆ. ಈ ನಿಟ್ಟಿನಲ್ಲಿ ನೋಡಿದಾಗ ಬಹಳ ಸಮಯದವರೆಗೆ Strait of Hormuz ಮುಚ್ಚುವುದು ಇರಾನಿಗೆ ಕೂಡ ಸಾಧ್ಯವಿಲ್ಲ. ದೀರ್ಘ ಕಾಲ ಮುಚ್ಚುವುದು ಎಂದರೆ ಅದು ತನ್ನ ಅವನತಿಯನ್ನು ತಾನೇ ಬರೆದುಕೊಂಡಂತೆ. ಅಮೇರಿಕಾ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಅದು ಕೂಡ ದೀರ್ಘಕಾಲ ಯುದ್ಧವನ್ನು ಮಾಡುವ ಪರಿಸ್ಥಿತಿಯಲಿಲ್ಲ.
ಅಮೆರಿಕಾ ಇಂದು ವಿಶ್ವದ ಅತಿ ದೊಡ್ಡ ತೈಲ ಉತ್ಪಾದಕ ದೇಶವಾಗಿದೆ. ಶೇಲ್ ತೈಲ ತಂತ್ರಜ್ಞಾನದಿಂದ ಅದು ತನ್ನ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಇದು ಕೇವಲ ಉತ್ಪಾದಕವಷ್ಟೇ ಅಲ್ಲ, ಜಾಗತಿಕ ರಾಜಕೀಯದಲ್ಲಿ ಪ್ರಭಾವಿ ಶಕ್ತಿಯೂ ಆಗಿದೆ.ಅಮೆರಿಕಾ ತನ್ನ ರಾಜಕೀಯ ಮತ್ತು ಮಿಲಿಟರಿ ಶಕ್ತಿಯನ್ನು ಬಳಸಿ ತೈಲ ಮಾರುಕಟ್ಟೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತದೆ. ಉದಾಹರಣೆಗೆ, ಇರಾನ್ ಅಥವಾ ರಷ್ಯಾ ಮೇಲೆ ವಿಧಿಸುವ ನಿರ್ಬಂಧಗಳು ಜಾಗತಿಕ ಸರಬರಾಜನ್ನು ನೇರವಾಗಿ ಪ್ರಭಾವಿಸುತ್ತವೆ. ಈ ಕ್ರಮಗಳು ಕೆಲವೊಮ್ಮೆ ಬೆಲೆ ಏರಿಕೆಗೆ ಕಾರಣವಾಗುತ್ತವೆ, ಇದು ಇತರ ದೇಶಗಳ ಆರ್ಥಿಕತೆಯನ್ನು ಕಂಗೆಡಿಸುತ್ತದೆ.ಸಣ್ಣ ಪುಟ್ಟ ದೇಶಗಳಲ್ಲಿ ಅರಾಜಕತೆ ಸೃಷ್ಟಿಸುವುದು ಚಿಟಿಕೆ ಹೊಡೆದಷ್ಟು ಸುಲಭ ಎನ್ನುವಂತಾಗಿದೆ. ಹೀಗಿದ್ದೂ ಅಮೇರಿಕಾ ಕೂಡ ಹೆಚ್ಚು ಸಮಯದ ವರೆಗೆ ಯುದ್ಧವನ್ನು ಮಾಡಲು ಸಾಧ್ಯವಿಲ್ಲ. ಯುದ್ಧ ಶುರುವಾದ ಪ್ರಥಮ ಎರಡು ತಿಂಗಳಲ್ಲಿ ಯುದ್ಧದ ಎಲ್ಲಾ ನಿರ್ಧಾರಗಳನ್ನು ಅಲ್ಲಿನ ಅಧ್ಯಕ್ಷ ತೆಗೆದುಕೊಳ್ಳಬಹುದು. ಎರಡು ತಿಂಗಳ ನಂತರವೂ ಯುದ್ಧ ನಿಲ್ಲಲಿಲ್ಲ ಎಂದರೆ ಆ ನಂತರ ಪ್ರತಿಯೊಂದು ನಿರ್ಧಾರವೂ ಪಾರ್ಲಿಮೆಂಟಿನ ಮುಂದೆ ಇಡಬೇಕಾಗುತ್ತದೆ. ಅಲ್ಲಿನ ನಿರ್ಣಯ ಅಂತಿಮವಾಗಿರುತ್ತದೆ. ಕೆಲವೊಮ್ಮೆ ವೋಟಿಂಗ್ ಕೂಡ ಆಗಬಹುದು. ಮೇ ೧ ರ ನಂತರ ಯುದ್ಧದ ನಿರ್ಣಯಗಳು ಟ್ರಂಪ್ ಕೈಯಲ್ಲಿರುವುದಿಲ್ಲ. ಹೀಗಾಗಿ ಏಪ್ರಿಲ್ ೩೦ ನಿರ್ಣಾಯಕ ದಿನ ಎನ್ನುವಂತಾಗಿದೆ. ಏಪ್ರಿಲ್ ೨೯ ರಂದು ಚೀನಾ ತನ್ನೆಲ್ಲಾ ನಾಗರಿಕರಿಗೂ ಇರಾನಿನಿಂದ ಹೊರಹೋಗಲು ಸೂಚನೆ ನೀಡಿದೆ. ತನ್ನ ಕೈಲಿರುವ ಕೊನೆಯ ದಿನವನ್ನು ಟ್ರಂಪ್ ಹೇಗೆ ಉಪಯೋಗಿಸುತ್ತಾರೆ ಎನ್ನುವುದು ಸದ್ಯದ ಪ್ರಶ್ನೆ. ಚೀನಾ ತನ್ನ ನಾಗರಿಕರಿಗೆ ಎಚ್ಚರಿಕೆ ಕೊಟ್ಟಿರುವುದು ನೋಡಿದರೆ , ಅಮೇರಿಕಾ ಇರಾನಿನ ಮೇಲೆ ಇನ್ನಷ್ಟು ಪ್ರಬಲ ದಾಳಿ ಮಾಡುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.
ತೈಲವು ವಿಶ್ವದ ಅತಿದೊಡ್ಡ ಹಣಕಾಸು ವ್ಯವಹಾರಗಳಲ್ಲಿ ಒಂದಾಗಿದೆ. ಒಂದು ಬ್ಯಾರೆಲ್ ತೈಲದ ಬೆಲೆ ೭೦ ರಿಂದ ೧೧೦ ಡಾಲರು ನಡುವೆ ಇರುತ್ತದೆ. ಈ ಬೆಲೆಯಲ್ಲಿ ಪ್ರತಿದಿನ ೭ರಿಂದ ೧೦ ಬಿಲಿಯನ್ ಡಾಲರ್ ವ್ಯವಹಾರ ನಡೆಯುತ್ತದೆ. ವರ್ಷಕ್ಕೆ ಇದು ಎರಡರಿಂದ ಮೂರು ಟ್ರಿಲಿಯನ್‌ಗಿಂತ ಹೆಚ್ಚಾಗುತ್ತದೆ.ಸೌದಿ ಅರೇಬಿಯಾ ವರ್ಷಕ್ಕೆ ನೂರಾರು ಬಿಲಿಯನ್ ಡಾಲರ್ ಗಳನ್ನು ತೈಲದಿಂದ ಸಂಪಾದಿಸುತ್ತದೆ. ಯುಎಇ ತನ್ನ ತೈಲ ಆದಾಯವನ್ನು ಬಳಸಿ ವಿಶ್ವದ ಪ್ರಮುಖ ಹೂಡಿಕೆದಾರ ದೇಶಗಳಲ್ಲಿ ಒಂದಾಗಿದೆ. ಇರಾನ್ ನಿರ್ಬಂಧಗಳ ನಡುವೆಯೂ ತನ್ನ ಆರ್ಥಿಕತೆಯನ್ನು ತೈಲದ ಮೇಲೆ ನಂಬಿಕೊಂಡಿದೆ.ಈ ಒಂದು ಕಾರಣದಿಂದ ಕೂಡ,ತನ್ನ ಉಳಿವಿಗಾಗಿ ಅದು ಒಪೆಕ್ ನಿಂದ ಹೊರಬಂದಿದೆ. ಗಮನಿಸಿ ನೋಡಿ ಮೇಲ್ನೋಟಕ್ಕೆ ಇದು ಕೇವಲ ಹಣಕ್ಕಾಗಿ ಎನ್ನಿಸುತ್ತದೆ. ಆದರೆ ಇದರ ಹಿಂದೆ ಜಾಗತಿಕ ನಿಯಂತ್ರಣ , ಸೈನ್ಯಬಲ ಮತ್ತು ಅಧಿಕಾರದ ಹಪಹಪಿ ಇರುವುದು ಕಾಣುತ್ತದೆ.
ತೈಲವು ಜಿಯೋಪಾಲಿಟಿಕ್ಸ್‌ನ ಪ್ರಮುಖ ಸಾಧನವಾಗಿದೆ. ಯುದ್ಧಗಳು, ರಾಜಕೀಯ ಉದ್ವಿಗ್ನತೆಗಳು ಮತ್ತು ನಿರ್ಬಂಧಗಳು ತೈಲ ಮಾರುಕಟ್ಟೆಯನ್ನು ತೀವ್ರವಾಗಿ ಏರುಪೇರು ಮಾಡುತ್ತವೆ. ಇವತ್ತಿನ ಸಂಘರ್ಷ ಅಂದರೆ ಇರಾನ್ ಮತ್ತು ಅಮೇರಿಕಾ ಯುದ್ಧದ ಕಾರಣ ತೈಲ ಬೆಲೆ ೧೦೦-೧೧೦ ರ ಮಟ್ಟವನ್ನು ಮುಟ್ಟಿದೆ.ಈ ರೀತಿಯ ಅಸ್ಥಿರತೆ ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇಂಧನ ಬೆಲೆ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚುತ್ತದೆ, ಇದು ಆಹಾರ ಮತ್ತು ಇತರ ಅವಶ್ಯಕ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಮೊದಲೇ ಹೇಳಿದಂತೆ ಸಣ್ಣಪುಟ್ಟ ದೇಶಗಳ ಆರ್ಥಿಕತೆ ಸೂತ್ರ ಕಿತ್ತ ಗಾಳಿಪಟದಂತಾಗುತ್ತದೆ. ಭಾರತ ಇಂತಹ ಸಂಕಷ್ಟ ಸಮಯದಲ್ಲಿ ಕೂಡ ತೈಲದ ಬೆಲೆಯನ್ನು ಕಾಯ್ದು ಕೊಂಡಿದೆ. ಇದೆಷ್ಟು ದೊಡ್ಡ ಪ್ರಮಾಣದಲ್ಲಿ ಸಮಾಜವನ್ನು , ಭಾರತದ ಆರ್ಥಿಕತೆಯನ್ನು ಕಾಪಾಡಿವೆ ಎನ್ನುವುದನ್ನು ವಿತ್ತ ಜಗತ್ತು ನೋಡುತ್ತಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳು ತೈಲದ ಮೇಲೆ ಹೆಚ್ಚು ಅವಲಂಬಿತವಾಗಿವೆ. ತೈಲದ ಬೆಲೆ ಏರಿದಾಗ, ಇವುಗಳ ಆರ್ಥಿಕತೆ ಮೇಲೆ ಭಾರೀ ಒತ್ತಡ ಉಂಟಾಗುತ್ತದೆ.ಕೇಂದ್ರ ಸರಕಾರ ಇಲ್ಲಿಯವರೆಗೂ ಈ ಅಂಶವನ್ನು ಬಹಳ ಚನ್ನಾಗಿ ನಿಭಾಯಿಸಿದೆ.ಇತ್ತೀಚಿನ ವರ್ಷಗಳಲ್ಲಿ ತೈಲ ಆರ್ಥಿಕತೆಯಲ್ಲಿ ಬದಲಾವಣೆಗಳು ಕಾಣಿಸುತ್ತಿವೆ. ನವೀಕರಿಸಬಹುದಾದ ಶಕ್ತಿ ಮೂಲಗಳು, ವಿದ್ಯುತ್ ವಾಹನಗಳು ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳು ಬೆಳೆಯುತ್ತಿವೆ.ಭಾರತದ ಪ್ರಜೆಗಳು ಹೊಸತನ್ನು ಅಪ್ಪಿಕೊಳ್ಳುವುದರಲ್ಲಿ ಬಹಳ ಮುಂದಿದ್ದಾರೆ. ಕೆಲವು ದಿನಗಳ ಹಿಂದೆ ನಿತಿನ್ ಗಡ್ಕರಿಯವರು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಭವಿಷ್ಯವಿಲ್ಲ ಎನ್ನುವ ಮಾತನ್ನು ಆಡಿದ್ದನ್ನು ಕೂಡ ನಾವು ಗಮನಿಸಬೇಕು. ಹೈಬ್ರಿಡ್ ಮತ್ತು ಈವಿ ವಾಹನಗಳು ಭಾರತದ ರಸ್ತೆಯನ್ನು ಆಳಲಿವೆ. ಆದಾಗ್ಯೂ, ತೈಲದ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಏಕೆಂದರೆ ತೈಲ ಕೇವಲ ಓಡಾಟಕ್ಕೆ ಮಾತ್ರ ಸೀಮಿತವಲ್ಲ .ಮುಂದಿನ ಒಂದು ದಶಕದಲ್ಲಿ ಇದು ಕೂಡ ಬದಲಾಗುತ್ತದೆ. ಆದರೆ ಇವತ್ತಿನ ಲೆಕ್ಕಾಚಾರದಲ್ಲಿ ಮತ್ತು ತಕ್ಷಣದ ಭವಿಷ್ಯದಲ್ಲಿ ತೈಲವು ಜಾಗತಿಕ ಆರ್ಥಿಕತೆಯ ಕೇಂದ್ರವಾಗಿಯೇ ಉಳಿಯುತ್ತದೆ.
ಕೊನೆಮಾತು: ಅಮೇರಿಕಾ ದೇಶದ ಜಗತ್ತಿನ ಅತಿ ಹೆಚ್ಚು ತೈಲ ಉತ್ಪಾದಕ ದೇಶವಾಗಿದೆ. ಇದರ ಜೊತೆಗೆ ಅತಿ ಹೆಚ್ಚು ತೈಲ ನಿಕ್ಷೇಪ ಇರುವ ವೆನಿಜುವೆಲಾ ಮೇಲೆ ಕೂಡ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ. ಇನ್ನೊಂದು ದೊಡ್ಡ ತೈಲ ಉತ್ಪಾದಕ ದೇಶ ಇರಾನಿನ ಮೇಲೆ ಯುದ್ಧ ಮಾಡಿ ಅದನ್ನು ಬಹಳಷ್ಟು ನಷ್ಟಕ್ಕೆ ಈಡು ಮಾಡಿದೆ. ಇಷ್ಟೆಲ್ಲಾ ಪ್ರಹಸನಗಳ ಮಧ್ಯೆ ಕೂಡ ಪೆಟ್ರೋ ಡಾಲರ್ ಸಮೀಕರವನನ್ನು ಅದು ಉಳಿಸಿಕೊಳ್ಳಲು ಪರದಾಡುತ್ತಿದೆ. ಇರಾನ್ ಮತ್ತು ಅಮೇರಿಕಾ ಯುದ್ಧದಲ್ಲಿ ಅತ್ಯಂತ ಹೆಚ್ಚು ನಷ್ಟ ಅನುಭವಿಸಿರುವುದು ಯುಎಇ ! ಅದಕ್ಕೆ ಆಗಿರುವ ರೆಪ್ಯೂಟೇಷನ್ ಲಾಸ್ ಲೆಕ್ಕ ಮಾಡಬೇಕಿದೆ. ಇದರ ಜೊತೆಗೆ ನೇರ ಲೆಕ್ಕಾಚಾರದಲ್ಲೂ ಅದಕ್ಕೆ ಇನ್ನಿಲ್ಲದ ನಷ್ಟವಾಗಿದೆ. ಅದು ಒಪೆಕ್ ಒಕ್ಕೊಟದಿಂದ ಹೊರಬಂದಿರುವುದು ಅಮೆರಿಕಾದ ಸೋಲು. ಅದಕ್ಕಾದ ನಷ್ಟ. ಇದರ ಬಹುಪಾಲು ಲಾಭ ಭಾರತಕ್ಕೆ ಎನ್ನುವುದು ಕೂಡ ಸ್ಪಷ್ಟ.

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com