ಅವತ್ತು ಅಸ್ಸಾಂನಲ್ಲಿ ಸೋತರು. ರಾಜಸ್ತಾನದಲ್ಲಿ ಗದ್ದುಗೆಯಿಂದ ಕೆಳಗಿಳಿದರು. ಮಧ್ಯಪ್ರದೇಶದಲ್ಲಿ ಮಗುಚಿ ಬಿದ್ದರು. ನಾಳೆ ಕರ್ನಾಟಕದಲ್ಲಿ...?
ಅಸ್ಸಾಂ, ರಾಜಸ್ತಾನ, ಮಧ್ಯಪ್ರದೇಶದಲ್ಲಿ ಸಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳದೇ ಕಾಂಗ್ರೆಸ್ ನಂತರದ ವಿಧಾನಸಭಾ ಚುನಾವಣೆಗಳಲ್ಲಿ ಸೋತಿತು. ಕರ್ನಾಟಕದ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲೂ ಈಗ ಅಂಥದ್ದೇ ಬಿಕ್ಕಟ್ಟು. ಅಧಿಕಾರ ಹಸ್ತಾಂತರದ ಗೊಂದಲ. ಆಡಳಿತಾರೂಢ ಕಾಂಗ್ರೆಸ್ ಶಾಸಕರು, ಸಚಿವರ ಮಧ್ಯೆ ವಾಕ್ಸಮರ. ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಅಸ್ಸಾಂ, ರಾಜಸ್ತಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಒದಗಿ ಬಂದ ಸ್ಥಿತಿಯೇ ಕರ್ನಾಟಕದಲ್ಲಿಯೂ ಬಂದರೆ ಅಚ್ಚರಿ ಇಲ್ಲ.
ಅಸ್ಸಾಂನಲ್ಲಿ ಆಗ ಕಾಂಗ್ರೆಸ್‌ನಲ್ಲಿ ಸಚಿವರಾಗಿದ್ದ ಹಿಮಂತ ಬಿಸ್ವಾ ಶರ್ಮಾ ಹಾಗೂ ಅಂದಿನ ಮುಖ್ಯಮಂತ್ರಿ ತರುಣ್ ಗೊಗಯ್, ರಾಜಸ್ತಾನದಲ್ಲಿ ಅಶೋಕ್ ಗೆಹಲೋತ್ ಹಾಗೂ ಸಚಿನ್ ಪೈಲಟ್, ಮಧ್ಯಪ್ರದೇಶದಲ್ಲಿ ಕಮಲ್ ಪಂತ್ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾ ನಡುವೆ ಮುಖ್ಯಮಂತ್ರಿ ಗಾದಿಗಾಗಿ ಕಿತ್ತಾಟ ಶುರುವಾಯಿತು. ಕಾಂಗ್ರೆಸ್ ಈ ಮೂರು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಬದಲಿಸಲಿಲ್ಲ. ಬಂಡೆದ್ದವರನ್ನು ಸಮಾಧಾನಪಡಿಸಲೂ ಇಲ್ಲ. ಸಕಾಲದಲ್ಲಿ ಮಧ್ಯಪ್ರವೇಶಿಸಿ ಮದ್ದು ಅರೆಯಲಿಲ್ಲ. ಪರಿಸ್ಥಿತಿ ಕೈಮೀರಿತು. ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿ ಈಗ ಅಲ್ಲಿ ಮುಖ್ಯಮಂತ್ರಿ. ಜ್ಯೋತಿರಾಧಿತ್ಯ ಸಿಂಧಿಯಾ ಕೇಸರಿ ಪಕ್ಷ ಸೇರಿ ಕೇಂದ್ರದಲ್ಲಿ ಈಗ ಸಚಿವರು. ಸಚಿನ್ ಪೈಲಟ್ ಕಾಂಗ್ರೆಸ್ ತ್ಯಜಿಸಲು ಮುಂದಾಗಿ ಕೊನೆ ಘಳಿಗೆಯಲ್ಲಿ ಮನಸ್ಸು ಬದಲಿಸಿದವರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವಿನ ಅಧಿಕಾರ ಹಸ್ತಾಂತರದ ಬಿಕ್ಕಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಇನ್ನೂ ಪರಿಹಾರ ಕಂಡುಕೊಂಡಿಲ್ಲ. ಹಾದಿಬೀದಿಗಳಲ್ಲಿ ಶಾಸಕರ ಮಧ್ಯೆ ವಾಗ್ವಾದ ಶುರುವಾಗಿದ್ದರೂ ಹೈಕಮಾಂಡ್ ಮಾತ್ರ ದಿವ್ಯಮೌನ. ಕಾಂಗ್ರೆಸ್‌ನಲ್ಲೇ ಕೆಲವರು ಹೇಳುವಂತೆ ಇದು ಹೈಕಮಾಂಡಿನ ಪಲಾಯನವಾದ. ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಇದ್ದರೂ ಬಿಕ್ಕಟ್ಟು ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ. ಎಐಸಿಸಿ ಅಧ್ಯಕ್ಷರ ತವರು ರಾಜ್ಯದಲ್ಲೇ ಕಾಂಗ್ರೆಸ್ಸಿಗೆ ಇಂತಹ ದುಸ್ಥಿತಿ. ಇನ್ನೊಂದು ವಾರದಲ್ಲಿ ತೀಮಾನ ಕೈಗೊಳ್ಳದಿದ್ದರೆ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡುವುದಾಗಿ ಕೆಲವು ಶಾಸಕರು ಎಚ್ಚರಿಸಿದರೂ ಪ್ರಯೋಜನವಾಗಿಲ್ಲ. ಹೈಕಮಾಂಡ್ ಮೌನವಾದಷ್ಟೂ ಬಿಕ್ಕಟ್ಟು ಜಟಿಲ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಇವತ್ತು ನಾಯಕತ್ವ ಬದಲಾವಣೆ, ದಲಿತ ಸಿಎಂ, ಮೊದಲ ಬಾರಿಗೆ ಗೆದ್ದಿರುವ ಶಾಸಕರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಈ ಮೂರು ವಿಷಯಗಳು ಕಾಡಿವೆ. ನಾಯಕತ್ವ ಬಿಕ್ಕಟ್ಟು ಇತ್ಯರ್ಥವಾಗುವವರೆಗೂ ಸಚಿವ ಸಂಪುಟ ಪುನಾರಚನೆ ಕಷ್ಟ. ಸಿದ್ದರಾಮಯ್ಯ ಅವರಿಗೆ ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟರೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಗಾದಿ ಇನ್ನೂ ದೂರ.
ಸಿದ್ದರಾಮಯ್ಯ ಅವರಿಗೆ ಸಚಿವ ಸಂಪುಟ ಪುನಾರಚನೆ ಆಗಬೇಕು. ಶಿವಕುಮಾರ ಅವರಿಗೆ ಇದು ಬೇಕಿಲ್ಲ. ಸಚಿವ ಸಂಪುಟ ಪುನಾರಚನೆಯಾದರೆ ಮುಖ್ಯಮಂತ್ರಿ ಗಾದಿಯಿಂದ ಸಿದ್ದರಾಮಯ್ಯ ಕೆಳಗಿಳಿಯುವುದು ಸದ್ಯಕ್ಕಂತೂ ಇಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಅಲ್ಲಿಗೆ ಶಿವಕುಮಾರ್ ಅವರಿಗೆ ಹಿನ್ನಡೆ ಆಗುತ್ತದೆ.
ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದೆ ಎನ್ನುವಾಗ ದಲಿತ ಸಿಎಂ ಕೂಗು ಏಳುತ್ತದೆ. ಈಗಲೂ ಅದೇ ಸ್ಥಿತಿ. ನೇಪಥ್ಯಕ್ಕೆ ಸರಿದಿದ್ದ ದಲಿತ ಸಿಎಂ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಅತ್ತ ಶಿವಕುಮಾರ್ ಅವರಿಗೆ ಪ್ರತಿಯಾಗಿ ಸಿದ್ದರಾಮಯ್ಯ ಅವರ ಬಣದಿಂದ ಮುಖ್ಯಮಂತ್ರಿ ಗಾದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೆಸರು ಬಲವಾಗುತ್ತಿದೆ. ಮುಖ್ಯಮಂತ್ರಿಯಾಗಲು ನನಗೂ ಹಿರಿತನ, ಸಾಮರ್ಥ್ಯವಿದೆ. ಕೆಪಿಸಿಸಿ ಅಧ್ಯಕ್ಷನಾಗಿ ಎಂಟು ವರ್ಷಗಳ ಕಾಲ ದುಡಿದಿದ್ದೇನೆ. ಎರಡು ಬಾರಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದೇನೆ. ಉಪಮುಖ್ಯಮಂತ್ರಿಯಾಗಿದ್ದೆ ಎಂದು ಹಕ್ಕೊತ್ತಾಯ ಮಂಡಿಸುತ್ತಾರೆ ಡಾ.ಪರಮೇಶ್ವರ್. ಅವರ ಮಾತಿನಲ್ಲಿ ಮೊದಲಿಗಿಂತ ಹೆಚ್ಚು ಆತ್ಮವಿಶ್ವಾಸ ಎದ್ದು ಕಾಣುತ್ತಿದೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಬಣದ ಬೆಂಬಲ.
ಅಧಿಕಾರ ಹಂಚಿಕೆಯ ಬಿಕ್ಕಟ್ಟು ಸ್ವಲ್ಪ ತಣ್ಣಗಾಗಿತ್ತು. ಅಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲವೂ ಮುಖ್ಯಮಂತ್ರಿ ಎಂದು ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ತಿದಿ ಊದಿದಾಗ ವಿವಾದ ಮತ್ತೆ ಮುನ್ನೆಲೆಗೆ ಬಂತು. ಯತೀಂದ್ರ ಹೇಳಿದ ಮೇಲೆ ಮುಗೀತು. ಅವರೇ ನಮ್ಮ ಹೈಕಮಾಂಡ್ ಎಂದು ಶಿವಕುಮಾರ್ ವ್ಯಂಗ್ಯದ ಚಾಟಿ ಬೀಸಿದ್ದರು.
ಸಿದ್ದರಾಮಯ್ಯ ಬಣ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಸಿದ್ದರಾಮಯ್ಯ ಅವರ ಆಪ್ತ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಇಲ್ಲಿ ನಾಯಕತ್ವದ ಚರ್ಚೆ ಎಲ್ಲಿದೆ? ಹೈಕೋರ್ಟ್ ಬೀದಿ ನಾಯಿಗಳನ್ನೆಲ್ಲಾ ಹಿಡಿದು ಒಳಗೆ ಹಾಕಿ ಅಂತ ಹೇಳುತ್ತಿದೆ. ಇಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ. ಬಾಲ ನಾಯಿಯನ್ನೇ ಅಲ್ಲಾಡಿಸಬಾರದು ಎಂದು ಅಧಿಕಾರ ಹಂಚಿಕೆಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದರು. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು.
ಮಹದೇವಪ್ಪ ಅವರ ಈ ಹೇಳಿಕೆಗೆ ಶಿವಕುಮಾರ್ ಸಹೋದರ, ಮಾಜಿ ಸಂಸದ ಡಿ.ಕೆ.ಸುರೇಶ್ ಕೆರಳಿದರು. ಕಟ್ಟಾ ಕಾಂಗ್ರೆಸ್ಸಿಗರು ಬೀದಿ ನಾಯಿಗಳಲ್ಲ. ಯಜಮಾನನ ಋಣ ತೀರಿಸುವ ನಿಯತ್ತಿನ ನಾಯಿಗಳು ಅಂತ ತಿರುಗೇಟು ಕೊಟ್ಟಿದ್ದರು. ಇದಕ್ಕೆ ಮಹದೇವಪ್ಪ ಪ್ರತಿಕ್ರಿಯಿಸಲಿಲ್ಲ. ಆದರೆ, ತಮ್ಮ ಬತ್ತಳಿಕೆಯಿಂದ ಮತ್ತೊಂದು ಅಸ್ತ್ರವನ್ನು ಹೊರ ತೆಗೆದರು. ಅದು ದಲಿತ ಸಿಎಂ ಪ್ರಸ್ತಾಪ. ಅದಕ್ಕೆ ಶಿವಕುಮಾರ್ ಅವರು, ಡಾ.ಮಹದೇವಪ್ಪ ದೊಡ್ಡವರು. ಅವರು ಕೂಡ ನಮ್ಮ ಹೈಕಮಾಂಡ್ ಆಗಿದ್ದಾರೆ. ಹೀಗಾಗಿ, ಅವರಿಗೆ ರಾಜ್ಯದಲ್ಲಿ ಸಿಎಂ ಬದಲಿಸುತ್ತಾರೆ ಎಂಬ ಮಾಹಿತಿ ತಿಳಿದಿರಬೇಕು. ಅದಕ್ಕಾಗಿಯೇ ಅವರು ದಲಿತ ಸಿಎಂ ವಿಚಾರ ಪ್ರಸ್ತಾಪ ಮಾಡಿರಬೇಕು ಎಂದು ತಿವಿದಿದ್ದರು.
ಅಲ್ಲಿಗೆ ಒಂದು ವಿಚಾರ ಸ್ಪಷ್ಟ. ಅಧಿಕಾರ ಹಸ್ತಾಂತರದ ಒತ್ತಡ ಹೆಚ್ಚಾದಂತೆಲ್ಲಾ ಸಿದ್ದರಾಮಯ್ಯ ಬಣದವರು ಆಕ್ರಮಣಕಾರಿ ಧೋರಣೆ ತಳೆಯುತ್ತಿದ್ದಾರೆ. ಶಿವಕುಮಾರ್ ಮೊದಲೆಲ್ಲಾ ಸಿದ್ದರಾಮಯ್ಯ ಬಣದ ಸಚಿವರು, ಶಾಸಕರ ಹೇಳಿಕೆಗಳಿಗೆ ಸಂಯಮ ತೋರುತ್ತಿದ್ದರು. ಆದರೆ, ಈಗ ವ್ಯಂಗ್ಯ, ಗೇಲಿ ಮಾಡುತ್ತಿದ್ದಾರೆ. ಶಿವಕುಮಾರ್ ಅವರನ್ನು ಕೆರಳಿಸುವ ಉದ್ದೇಶವೂ ಸಿದ್ದರಾಮಯ್ಯ ಬಣಕ್ಕೆ ಇದ್ದಂತಿದೆ.
ಸಿದ್ದರಾಮಯ್ಯ ಅವರ ಕುರ್ಚಿ ಯಾವಾಗೆಲ್ಲ ಅಲುಗಾಡಲು ಶುರುವಾಗುತ್ತದೆಯೋ ಆಗೆಲ್ಲ ದಲಿತ ಸಿಎಂ ಕೂಗು ಕೇಳಿ ಬಂದಿದೆ. ಸಿದ್ದರಾಮಯ್ಯ ಬೆಂಬಲಿಗರೇ ಈ ಬಗ್ಗೆ ಹೆಚ್ಚು ಮಾತಾಡುತ್ತಾರೆ. ಈಗಲೂ ಅಷ್ಟೇ. ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ಕುರಿತಂತೆ ಪ್ರಸ್ತಾಪವಾಗುತ್ತಿದ್ದಂತೆ ಸಚಿವ ಮಹದೇವಪ್ಪ ದಲಿತ ಸಿಎಂ ಕೂಗು ಹಾಕಿದ್ದಾರೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಏರುವುದನ್ನು ತಡೆಯುವುದೇ ದಲಿತ ಸಿಎಂ ಪ್ರಸ್ತಾಪ ಒಂದು ತಂತ್ರವೂ ಆಗಿರಬಹುದು.
ವಾಗ್ದಾನದಂತೆ ಮುಖ್ಯಮಂತ್ರಿ ಸ್ಥಾನ ಹಸ್ತಾಂತರಿಸಿ ಎಂಬುದು ಶಿವಕುಮಾರ್ ಪಟ್ಟು. ಹೈಕಮಾಂಡ್ ಸೂಚನೆಯನ್ನು ಪಾಲಿಸುವೆ ಎಂಬುದು ಸಿದ್ದರಾಮಯ್ಯ ತಿರುಗೇಟು. ಹೈಕಮಾಂಡ್ ತನ್ನ ನಿರ್ಧಾರ ಪ್ರಕಟಿಸಲು ಸಿದ್ದವಿಲ್ಲ. ಹೈಕಮಾಂಡ್‌ನಲ್ಲಿ ಯಾರು ನಿರ್ಧರಿಸಬೇಕು ಎಂಬುದೇ ಪ್ರಶ್ನೆ. ಏಕೆಂದರೆ, ಈ ಬಿಕ್ಕಟ್ಟಿಗೆ ಒಮ್ಮತದ ಸೂತ್ರ ಹೈಕಮಾಂಡ್‌ನಲ್ಲೇ ಇಲ್ಲ. ಜೊತೆಯಲ್ಲಿ ದುರ್ಬಲ ಕೂಡ.
ಇಂತಹ ಸನ್ನಿವೇಶದಲ್ಲೇ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ದಿನ ಫೆಬ್ರುವರಿ 20 ರಂದು ಪತ್ರಿಕೆಯೊಂದರಲ್ಲಿ ಬರೆದ ಲೇಖನ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಯಿತು.
ಸಾಮಾಜಿಕ ಬದಲಾವಣೆಗೆ ಕೈಹಾಕಿದವರನ್ನು ಇತಿಹಾಸದಲ್ಲಿ ವ್ಯವಸ್ಥಿತವಾಗಿ ದಮನ ಮಾಡಲಾಗಿದೆ. ಈಗ ಅದೇ ಇತಿಹಾಸ ಪುನರಾವರ್ತನೆ ಆಗುತ್ತಿದೆ. ರಾಜಕೀಯ ಷಡ್ಯಂತ್ರಗಳಿಗೆ ಮಣಿಯದೇ ಶೋಷಿತರ ಪರವಾಗಿ ಹೋರಾಡುವೆ. ನೀವು ನನ್ನನ್ನು ಎಷ್ಟು ತುಳಿಯಲು ಪ್ರಯತ್ನಿಸುತ್ತೀರೋ ನಾನು ಅಷ್ಟೇ ಬಲವಾಗಿ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಎದ್ದು ಬರುತ್ತೇನೆ ಎಂದು ಸಿದ್ದರಾಮಯ್ಯ ಈ ಲೇಖನದಲ್ಲಿ ಪ್ರಮುಖವಾಗಿ ಹೇಳಿದ್ದರು. ಕಾಂಗ್ರೆಸ್‌ನಲ್ಲಿ ನಾಯಕತ್ವದ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಈ ಮಾತು ಹೆಚ್ಚು ಅರ್ಥಪೂರ್ಣ. ಸ್ವಪಕ್ಷೀಯರಿಗೂ ಎಚ್ಚರಿಕೆ. ಹೈಕಮಾಂಡ್‌ಗೂ ಸಂದೇಶ.
ಕಾಂಗ್ರೆಸ್‌ನಲ್ಲಿ ತಮಗೆ ಹಿನ್ನಡೆಯಾದಾಗ ದೇವರಾಜ ಅರಸು ಅವರು ಕ್ರಾಂತಿರಂಗ, ಬಂಗಾರಪ್ಪ ಅವರು ಕರ್ನಾಟಕ ಕಾಂಗ್ರೆಸ್ ಪಕ್ಷ ಎಂಬ ಪ್ರಾದೇಶಿಕ ಪಕ್ಷ ಕಟ್ಟಿದವರು. ಜನತಾದಳದಿಂದ ಉಚ್ಛಾಟನೆಯಾದಾಗ ರಾಮಕೃಷ್ಣ ಹೆಗಡೆ ಅವರೂ ರಾಷ್ಟ್ರೀಯ ನವನಿರ್ಮಾಣ ವೇದಿಕೆ, ಲೋಕಶಕ್ತಿ ಸ್ಥಾಪಿಸಿದವರು. ದೇವೇಗೌಡರು ಜಾತ್ಯತೀತ ಜನತಾದಳವನ್ನು ಹುಟ್ಟು ಹಾಕಿದವರು. ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕರ್ನಾಟಕ ಜನತಾಪಕ್ಷವನ್ನು ಗಟ್ಟಿಗೊಳಿಸಲು ಪ್ರಯತ್ನಿಸಿ ಚುನಾವಣೆಯನ್ನು ಎದುರಿಸಿದವರು.
ಆದರೆ, ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಭಿನ್ನ. ಸಿದ್ದರಾಮಯ್ಯ ಜೆಡಿಎಸ್‌ನಿಂದ ಉಚ್ಛಾಟನೆಯಾದಾಗ ದೇವರಾಜ ಅರಸು, ಬಂಗಾರಪ್ಪ, ರಾಮಕೃಷ್ಣ ಹೆಗಡೆ, ದೇವೇಗೌಡರು, ಯಡಿಯೂರಪ್ಪ ಅವರ ರೀತಿ ಪ್ರಾದೇಶಿಕ ಪಕ್ಷ ಕಟ್ಟುವ ದುಸ್ಸಾಹಸಕ್ಕೆ ಕೈಹಾಕಿದವರಲ್ಲ. ಸಿದ್ದರಾಮಯ್ಯ ಅವರಿಗೆ ಅವರ ಮಿತಿಯೂ ಗೊತ್ತಿದೆ. ಹೀಗಾಗಿಯೇ ಕಾಂಗ್ರೆಸ್ ಸೇರಿ ಆ ಪಕ್ಷದಲ್ಲಿ ತಮ್ಮ ಪಾರುಪತ್ಯವನ್ನು ಸ್ಥಾಪಿಸಿದವರು. ತಮ್ಮ ದಾರಿಗೆ ಅಡ್ಡಲಾದವರನ್ನು ಉಪಾಯವಾಗಿ ಬದಿಗೆ ಸರಿಸಿದವರು ಇಲ್ಲವೇ ಸಾಗು ಹಾಕಿದವರು. ತಾವು ಸೇರಿದ ಕಾಂಗ್ರೆಸ್ಸಿಗೆ ತಮ್ಮ ಶಕ್ತಿಯನ್ನು ಸಂಪೂರ್ಣವಾಗಿ ಧಾರೆ ಎರೆಯುತ್ತಾ ಇದಕ್ಕೆ ಪ್ರತಿಫಲವನ್ನೂ ಪಡೆದವರು. ಎರಡು ಬಾರಿ ಮುಖ್ಯಮಂತ್ರಿಯಾದವರು. ಪ್ರತಿಫಲ ಸಿಗುವುದು ತಡವಾದರೆ ಮುನಿಸಿಕೊಂಡವರೂ ಹೌದು.
ದೇವರಾಜ ಅರಸು, ಬಂಗಾರಪ್ಪ ಅವರ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಶಕ್ತಿಯುತವಾಗಿತ್ತು. ರಾಜ್ಯದ ನಾಯಕರು ಹೈಕಮಾಂಡ್ ಹೇಳಿದಂತೆ ಕೇಳುತ್ತಿದ್ದರು. ಈಗ ಸಿದ್ದರಾಮಯ್ಯ ಕಾಲದಲ್ಲಿ ಹೈಕಮಾಂಡ್ ದುರ್ಬಲವಾಗಿದೆ. ಇಂತಹ ಸಂದರ್ಭದಲ್ಲಿ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ಪಡೆಯದೇ ನಾಯಕತ್ವದ ಬಗ್ಗೆ ತೀರ್ಮಾನಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com