ಎರಡನೇ ವಿಶ್ವ ಯುದ್ಧದ ನಂತರ ಸುಮಾರು 50ರ ದಶಕದಲ್ಲಿ ವಿಶ್ವಾದ್ಯಂತ ಮಲೇರಿಯಾ ನಿಯಂತ್ರಣಕ್ಕೆ Dichloro-Diphenyl-Trichloroethane ಎಂಬ ರಾಸಾಯನಿಕವನ್ನು ಬಳಸಲಾಯಿತು.
Dichloro-Diphenyl-Trichloroethaneಯನ್ನು ಭಾರತದಲ್ಲೂ ಬಳಸಲಾಯಿತು. ಆದರೆ ಅದರ ಪೂರ್ತಿ ಹೆಸರಿನ ಬದಲಿಗೆ DDT ಪೌಡರ್ ಎಂದರೆ ಎಲ್ಲರಿಗೂ ಅರ್ಥ ಆಗುತ್ತದೆ. ಈ ಡಿಡಿಟಿ ಪುಡಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಪುಡಿ ರೂಪದಲ್ಲಿ, ಸಿಂಪಡನೆಗೆ ಯಥೇಚ್ಚವಾಗಿ ಬಳಸಲಾಯಿತು. ಇದು ಒಂದು ಸಾಂಕ್ರಾಮಿಕ ರೋಗಗಳನ್ನು ತಡೆಯಿತಾದರೂ ದೀರ್ಘಕಾಲದವರೆಗೆ, ಅಂದರೆ ನೂರು ವರ್ಷದವರೆಗೆ ಭೂಮಿಯಲ್ಲಿ ಕರಗದೆ ಹಾನಿಕಾರಕವಾಗಿರುತ್ತದೆ ಎಂಬುದು ತಿಳಿಯಿತು.
70ರ ದಶಕದಲ್ಲೇ ಅಮೆರಿಕದಲ್ಲಿ ಇದನ್ನು ನಿಷೇಧಿಸಲಾಯಿತಾದರೂ ಭಾರತದಲ್ಲಿ ಇನ್ನೂ ಬಳಕೆಯಲ್ಲಿದೆ. ಹಂತಹಂತವಾಗಿ ಇದರ ಬಳಕೆ ನಿಲ್ಲಿಸಲಾಗುವುದು ಎಂದು ಸ್ಟಾಕ್‌ಹೋಮ್ ಸಮ್ಮೇಳನದಲ್ಲಿ ಭಾರತ ತಿಳಿಸಿದೆಯಾದರೂ ಉಳಿದೆಲ್ಲ ದೇಶಗಳು ಉತ್ಪಾದನೆ ಸ್ಥಗಿತಗೊಳಿಸಿದರೂ ಭಾರತ ಮಾತ್ರ ನಿಲ್ಲಿಸಿಲ್ಲ. 2007ವರೆಗೆ ಭಾರತ-ಚೀನಾ ಡಿಡಿಟಿ ಉತ್ಪಾದಿಸುತ್ತಿದ್ದವು. 2007ರಲ್ಲಿ ಚೀನಾ ಸ್ಥಗಿತಗೊಳಿಸಿತು. ಇದೀಗ ಭಾರತ ಮಾತ್ರ ಡಿಡಿಟಿ ಉತ್ಪಾದಿಸುತ್ತಿರುವ ಏಕಮಾತ್ರ ದೇಶ. ಇದರ ಬಳಕೆಯನ್ನು ನಿಲ್ಲಿಸುವ 2024ರ ಡೆಡ್‌ಲೈನ್ ಮುಗಿದು ಎರಡು ವರ್ಷ ಆಯಿತು, ಇನ್ನೂ ನಿಲ್ಲಿಸಲು ಆಗಿಲ್ಲ.
ಇದಿಷ್ಟೂ ಒಂದು ಕೆಮಿಕಲ್ ವಿಷಯವಾಯಿತು. ಆದರೆ ಈ ಲೇಖನದ ಉದ್ದೇಶ ಆ ಡಿಟಿಟಿ ಬಗೆಗಲ್ಲ, ರಾಜಕೀಯ ಕ್ಷೇತ್ರದಲ್ಲಿರುವ ಡಿಡಿಟಿ ಬಗ್ಗೆ. ಅಮೆರಿಕ ಸೇರಿದಂತೆ ಅನೇಕ ದೇಶಗಳ ರಾಜಕಾರಣದಲ್ಲಿ ಅನೌಪಚಾರಿಕವಾಗಿ ಈ ಪದ ಬಳಕೆಯಲ್ಲಿದೆ. ಈ ಡಿಡಿಟಿಯನ್ನು Department of Dirty Politics ಎನ್ನಲಾಗುತ್ತದೆ. ಯಾವುದೇ ಸರ್ಕಾರ ತನ್ನ ಕಬಂಧ ಬಾಹು, ಅಪರಿಮಿತ ಅಧಿಕಾರವನ್ನು ಬಳಸಿ ಕಾನೂನು ಮಾರ್ಗವನ್ನು ಹೊರತುಪಡಿಸಿ ತನ್ನ ವಿರೋಧಿಗಳನ್ನು ಮಟ್ಟ ಹಾಕಲು ನಡೆಸುವ ಪ್ರಯತ್ನವನ್ನು DDT ಎನ್ನಲಾಗುತ್ತದೆ. ವಿಶೇಷವೆಂದರೆ ರಾಜಕೀಯ ಕ್ಷೇತ್ರದ ಡಿಡಿಟಿ ಸಹ ಅದೇ ವಿಶ್ವಯುದ್ಧದ ಸಮಯದಲ್ಲಿ ಅಮೆರಿಕದ Central Intelligence Agency (CIA) ತನ್ನ ವಿರೋಧಿಗಳ ಕುರಿತು ನಡೆಸುತ್ತಿದ್ದ ಅನೈತಿಕ, ಅಪ್ರಾಮಾಣಿಕ ಕೃತ್ಯಗಳನ್ನು ವಿವರಿಸಲು DDT ಬಳಸಲಾಯಿತು.
ಭಾರತದಲ್ಲೂ ರಾಸಾಯನಿಕ ಡಿಡಿಟಿಯಷ್ಟೇ ಪ್ರಮಾಣದಲ್ಲಿ ರಾಜಕೀಯ ಡಿಡಿಟಿ ಬಳಕೆ ಆಗಿದೆ. 1975ರಲ್ಲಿ ದೇಶದ ಜನರ ಮೇಲೆ ತುರ್ತುಪರಿಸ್ಥಿತಿ ಹೇರಿದ್ದು ಇಂತಹ ಡಿಡಿಟಿ ಕ್ರಮಗಳ ಅತ್ಯಂತ ಗೋಚರ ಉದಾಹರಣೆ. ರಾಜಕೀಯದ ಡಿಡಿಟಿಯ ಇನ್ನೊಂದು ಗುಣಲಕ್ಷಣವೆಂದರೆ, ಎಲ್ಲವನ್ನೂ ಪ್ರಸ್ತುತ ಕಾನೂನಿಗೆ, ಸಂವಿಧಾನಕ್ಕೆ ಅನುಗುಣವಾಗಿಯೇ ಮಾಡುವುದು. ತಾವು ಮಾಡುತ್ತಿರುವುದಕ್ಕೆ ಎಲ್ಲ ಕಾನೂನುಗಳನ್ನೂ ಸೂಕ್ತವಾಗಿ ಬಳಸಿಕೊಳ್ಳುವುದು. ಹೀಗೆಯೇ ವಿರೋಧ ಪಕ್ಷಗಳನ್ನು ಹಣಿಯಲು, ವಿರೋಧಿ ಅಭಿಪ್ರಾಯ ಹೊಂದಿರುವವರನ್ನು ಮುಗಿಸಲು ಸರ್ಕಾರದ ವಿವಿಧ ಅಧಿಕೃತ ಇಲಾಖೆಗಳ ಮೂಲಕ ಅನಧಿಕೃತ ಕೆಲಸ ಮಾಡಿಸುವುದು.
2014ರ ಏಪ್ರಿಲ್‌ನಲ್ಲಿ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪಶ್ಚಿಮ ಬಂಗಾಳ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿಯವರು, ಭಾರತದ ಕೇಂದ್ರೀಯ ತನಿಖಾ ದಳವು (CBI) ಕೇಂದ್ರ ಸರ್ಕಾರದ DDT ಆಗಿದೆ ಎಂದು ಟೀಕಿಸಿದ್ದರು. ಎದುರಾಳಿಗಳನ್ನು ಹಣಿಯಲು ಇದು ‘ಗರಗಸ’ದಂತೆ ಬಳಕೆಯಾಗುತ್ತಿದೆ ಎಂದು ಹೇಳಿದ್ದರು. ಅಂದಹಾಗೆ 2014ರ ಎಂದ ಕೂಡಲೆ ಮೋದಿ ಪ್ರಧಾನಿಯಾಗಿದ್ದರು ಎಂದು ತಿಳಿಯಬೇಕಿಲ್ಲ, ಮೋದಿ ಪ್ರಧಾನಿಯಾಗಿದ್ದು 2014ರ ಮೇ ತಿಂಗಳಲ್ಲಿ. ಗೋಪಾಲಕೃಷ್ಣ ಗಾಂಧಿ ಈ ಮಾತನ್ನು ಹೇಳಿದ್ದು ಇನ್ನೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ. 2014ರ ಮೇ ನಂತರ ಇದೇನು ನಿಂತಿದೆ ಎಂದೂ ತಿಳಿಯಬೇಕಿಲ್ಲ. ಯಾವುದೇ ಸರ್ಕಾರಗಳು ತಮ್ಮ ಎದುರಾಳಿಗಳನ್ನು ನಿಯಂತ್ರಿಸುವ ಯಾವುದೇ ಕಾನೂನು, ಕಾಯ್ದೆಗಳನ್ನು ರದ್ದುಗೊಳಿಸುವುದಿಲ್ಲ. ಈ ವಿಚಾರದಲ್ಲಿ ಎಲ್ಲ ಪಕ್ಷಗಳೂ ಸಮಾನ ಕ್ರಿಯಾಯೋಜನೆ ಹೊಂದಿವೆ.
ಇದೀಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಂಥದ್ದೊಂದು ಹೊಸ ‘ಗರಗಸ’ವನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಆ ಗರಗಸಕ್ಕೆ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ-2025 ಎಂದು (ಸಂಕ್ಷಿಪ್ತವಾಗಿ: ದ್ವೇಷ ಭಾಷಣ ಮಸೂದೆ) ಹೆಸರಿಟ್ಟಿದೆ. ಬೆಳಗಾವಿ ಅಧಿವೇಶನದಲ್ಲಿ ಇದಕ್ಕೆ ಒಪ್ಪಿಗೆ ಪಡೆದು ರಾಜ್ಯಪಾಲರ ಸಹಿಗೆ ಕಳಿಸಿದೆ. ರಾಜ್ಯಪಾಲರು ಅಂಕಿತ ಹಾಕಿದರೆಂದರೆ ಮಸೂದೆಯು ಕಾಯ್ದೆಯಾಗುತ್ತದೆ.
ಮುಖ್ಯವಾಗಿ ಈ ಕಾಯ್ದೆ ಸಂವಿಧಾನದತ್ತವಾಗಿ ಅನುಚ್ಛೇದ 19(1)(ಎ)ಯಲ್ಲಿ ಲಭಿಸಿರುವ ‘ವಾಕ್ ಸ್ವಾತಂತ್ರ್ಯದ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಹೊಂದಿರತಕ್ಕದ್ದು’ ಎಂಬುದಕ್ಕೆ ವಿರುದ್ಧವಾಗಿದೆ ಎನ್ನುವುದು ಕಾಣುತ್ತಿದೆ. ಹಾಗೆ ನೋಡಿದರೆ ಈ ಕಾಯ್ದೆಯು ತನ್ನ ‘ಅಕ್ಷರ’ (Letter)ದಲ್ಲಿ ಸಂವಿಧಾನದತ್ತ ವಾಕ್‌ಸ್ವಾತಂತ್ರ್ಯದ ವಿರುದ್ಧ ಎಂದು ತೋರುವುದಿಲ್ಲ. ಏಕೆಂದರೆ ಮಸೂದೆಯ ಮಸೂದೆಯ 2 (1) (ii)ನೇ ಅಂಶದಲ್ಲಿ, “ಧರ್ಮ, ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಲಿಂಗತ್ವ, ಲೈಂಗಿಕ ಮನೋಗುಣ (Sexual Orientation), ಜನ್ಮ ಸ್ಥಳ, ವಾಸ ಸ್ಥಳ, ಭಾಷೆ, ನ್ಯೂನತೆ (ದೈಹಿಕ, ಮಾನಸಿಕ ವೈಕಲ್ಯ), ಪಂಗಡ” ಇವುಗಳ ವಿರುದ್ಧ ಅಸಾಮರಸ್ಯಕ್ಕೆ, ಹಿಂಸೆಗೆ ಪ್ರಚೋದನೆ ನೀಡುವುದು ಅಥವಾ ಪೂರ್ವಾಗ್ರಹವನ್ನು ಒಳಗೊಳ್ಳುವುದು’ ಈ ಮಸೂದೆಯ ಪ್ರಕಾರ ಅಪರಾಧವಾಗುತ್ತದೆ ಎಂದು ತಿಳಿಸಲಾಗಿದೆ. ಮೇಲ್ನೋಟಕ್ಕೆ ಇದು ಸರಿಯಾದ ಹೆಜ್ಜೆಯೇ ಆಗಿದೆ ಎನ್ನಿಸುತ್ತದೆ. ಧರ್ಮ, ಜನಾಂಗ ಮುಂತಾದವನ್ನು ಕುರಿತು ಪೂರ್ವಾಗ್ರಹ ಹೊಂದಿರುವುದು ಯಾವುದೇ ನಾಗರಿಕ ಸಮಾಜದ ಲಕ್ಷಣ ಆಗಬಾರದು ಅಲ್ಲವೇ? ಹಾಗಾಗಿ ಈ ಕಾಯ್ದೆ ಜಾರಿಯಾದರೆ ಸಮಾಜದಲ್ಲಿ ಶಾಂತಿ ಮೂಡುತ್ತದೆ ಅಲ್ಲವೇ ಎಂದು ಕೆಲವು ಹಿರಿಯ ಪತ್ರಕರ್ತರೂ ಸೇರಿ ಅನೇಕರು ಹೇಳುತ್ತಿದ್ದಾರೆ.
ಆದರೆ ಸಂವಿಧಾನವಿರಲಿ ಅಥವಾ ಯಾವುದೇ ಕಾನೂನಿರಲಿ ಅದರಿಂದ ಒಳ್ಳೆಯದಾಗುವುದು ಅಥವಾ ಕೆಡುಕಾಗುವುದು ಅದರಲ್ಲಿರುವ ‘ಅಕ್ಷರ’ದ(Letter) ಆಧಾರದಲ್ಲಲ್ಲ, ಅದನ್ನು ರೂಪಿಸಿದವರ ಮತ್ತು ಜಾರಿಗೊಳಿಸುವವರ ‘ಉದ್ದೇಶ’ದಲ್ಲಿ ( Spirit). ಸಂವಿಧಾನದ ಕುರಿತು ಈ ಮಾತನ್ನು ಸ್ವತಃ ಡಾ. ಬಿ.ಆರ್. ಅಂಬೇಡ್ಕರ್ ಅವರೇ ಹೇಳಿದ್ದಾರೆ. ಇದೀಗ ಕರ್ನಾಟಕ ಸರ್ಕಾರ ಜಾರಿ ಮಾಡಲು ಮುಂದಾಗಿರುವ ದ್ವೇಷ ಭಾಷಣ ಮಸೂದೆಯೂ ಅಕ್ಷರದಲ್ಲಿ ಉದಾತ್ತ ಆಶಯಗಳನ್ನು ಹೊಂದಿದೆ. ಆದರೆ ಕಾಯ್ದೆಯ ಒಳಗಿರುವ ಬಿಡುಬೀಸಾದ ವ್ಯಾಖ್ಯಾನಗಳು, ಅಸ್ಪಷ್ಟ ಪರಿಭಾಷೆಗಳನ್ನು ನೋಡಿದಾಗ ಅದರ ಉದ್ದೇಶದ ಕುರಿತು ಅನುಮಾನ ಮೂಡುತ್ತದೆ. ಅದರಲ್ಲೂ, ಕರ್ನಾಟಕದಲ್ಲಿ ಇನ್ನು ಎರಡು ವರ್ಷದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಸರ್ಕಾರವು ಎದುರಾಳಿಗಳನ್ನು ಕಟ್ಟಿಹಾಕಲು ಇದನ್ನು ಹೇಗೆಲ್ಲ ಬಳಸಿಕೊಳ್ಳಬಹುದು ಎನ್ನುವುದನ್ನು ಆಲೋಚಿಸಿದರೆ ಭಯಾನಕ ಪರಿಸ್ಥಿತಿ ಎದುರಾಗುವ ಆತಂಕವಿದೆ.
ಮಸೂದೆಯ 2 (1) (iii)ನೇ ಅಂಶದ ಪ್ರಕಾರ, ಬದುಕಿರುವ ಅಥವಾ ಮೃತನಾಗಿರುವ ಯಾರೇ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹ ಅಥವಾ ಸಂಸ್ಥೆಯ ವಿರುದ್ಧ ದ್ವೇಷ ಭಾವನೆಯನ್ನು ಮೂಡಿಸಲು ಮಾಡುವ ಭಾಷಣ, ಪ್ರಕಟಿಸುವ ಮುದ್ರಿತ ಸಂಗತಿಗಳು, ಅವುಗಳನ್ನು ಪ್ರಚಾರ ಮಾಡುವ ಕಾರ್ಯಗಳನ್ನು ದ್ವೇಷ ಅಪರಾಧ ಒಳಗೊಳ್ಳುತ್ತದೆ. ಯಾವುದೇ ಭಾಷಣವನ್ನು ಹೀಗೆ ತೀರ್ಮಾನಿಸಿ ತಕ್ಷಣವೇ ಜಾಮೀನುರಹಿತ ವಾರೆಂಟ್ ಹೊರಡಿಸಿ ಬಂಧಿಸುವ ಅಧಿಕಾರವನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಉಪ ಪೊಲೀಸ್ ವರಿಷ್ಠಾಧಿಕಾರಿಗಿಂತ (ಡಿಎಸ್‌ಪಿ) ಮೇಲಿನ ಅಧಿಕಾರಿಗೆ ನೀಡಲಾಗಿದೆ. ಯಾವುದು ದ್ವೇಷ ಭಾಷಣ, ದ್ವೇಷ ಅಪರಾಧ ಎನ್ನುವುದನ್ನು ನಿರ್ಧರಿಸುವ ವಿವೇಚನೆ, ಅಧ್ಯಯ, ಓದು, ತರಬೇತಿಯು ಈ ಮಟ್ಟದ ವ್ಯಕ್ತಿಗಳಿಗೆ ಇರುತ್ತದೆಯೇ? ಈ ಕಾಯ್ದೆಯಡಿಯಲ್ಲಿ ಒಂದು ದೂರು ದಾಖಲಾದ ತಕ್ಷಣ ಬಂಧಿಸಿ ಜೈಲಿಗಟ್ಟಿ, ಅದು ವಿಚಾರಣೆ ನಡೆದು, ನ್ಯಾಯಾಲಯದಲ್ಲಿ ವಾದ-ವಿವಾದ ನಡೆದು, ನ್ಯಾಯಾಧೀಶರು ಆರೋಪಿಯನ್ನು ‘ನಿರಪರಾಧಿ’ ಎಂದು ತೀರ್ಪು ನೀಡುವವರೆಗೆ ಆರೋಪಿ ಜೈಲಿನಲ್ಲೇ ಇರಬೇಕಾಗುತ್ತದೆ. ನಮ್ಮ ದೇಶದಲ್ಲಿ ಇದೀಗ ನ್ಯಾಯಾಂಗ ವ್ಯವಸ್ಥೆಯ ಸ್ಥಿತಿ, ಅಲ್ಲಿನ ಪ್ರಕರಣಗಳ ಒತ್ತಡಗಳನ್ನು ಗಮನಿಸಿದರೆ ಈ ತೀರ್ಪು ಬರುವ ಸಮಯಾವಕಾಶ ಎಷ್ಟು ಎಂದು ಊಹಿಸಬಹುದು. ಅಂತಿಮ ತೀರ್ಪಿನಲ್ಲಿ ನಿರಪರಾಧಿ ಎಂದು ಹೇಳಿದರೂ, ಅಲ್ಲಿವರೆಗಿನ ಕಾನೂನಾತ್ಮಕ ಪ್ರಕ್ರಿಯೆಯೇ ‘ಶಿಕ್ಷೆ’ ಆಗಿಬಿಟ್ಟಿರುತ್ತದೆ. 2022ರಲ್ಲಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ. ರಮಣ ಅವರೆ, “ನಮ್ಮ ನ್ಯಾಯದಾನ ವ್ಯವಸ್ಥೆಯಲ್ಲಿ, ‘ಪ್ರಕ್ರಿಯೆಯೇ ಶಿಕ್ಷೆಯಾಗಿದೆ’” (process is the punishment) ಎಂದು ಹೇಳಿದ್ದರು.
ಇದೀಗ ದೇಶದಲ್ಲಿ ಜಾರಿಯಲ್ಲಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಕಾನೂನುಗಳ ಅಡಿಯಲ್ಲೇ ಕ್ರಿಮಿನಲ್ ಪ್ರಕ್ರಿಯೆ ಎನ್ನುವುದು, ಯಾರು ಜಾರಿ ಮಾಡುತ್ತಾರೋ ಅವರ ‘ಉದ್ದೇಶ’ಕ್ಕೆ (Spirit) ಅನುಗುಣವಾಗಿ ಬಾಗಿಸಲಾಗುತ್ತಿದೆ. ಕರ್ನಾಟಕ ಸರ್ಕಾರದ ದ್ವೇಷ ಭಾಷಣ ಮಸೂದೆಯಂತೂ ಅತ್ಯಂತ ಅಸ್ಪಷ್ಟ, ಹೇಗೆಬೇಕಾದರೂ ಅನ್ವಯ ಮಾಡಬಹುದಾದ ಅಂಶಗಳನ್ನು ಒಳಗೊಂಡಿರುವಾಗ ಆ ಕಾನೂನನ್ನು ಸರ್ಕಾರ ಹೇಗೆ ಬಳಸಬಹುದು ಎನ್ನುವುದನ್ನು ಊಹಿಸಬಹುದು. ಕೇವಲ ಊಹಾತ್ಮಕವಾಗಿಯೇ ಈ ಮಸೂದೆಯನ್ನು ವಿರೋಧಿಸಬೇಕೆಂದೂ ಇಲ್ಲ. ಈಗಾಗಲೆ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಆರೋಪದಲ್ಲಿ ದಾಖಲಾಗಿರುವ ಕೆಲವು ಪ್ರಕರಣಗಳನ್ನು ನೋಡಿದರೂ ಈ ಹೊಸ ಮಸೂದೆ ಎಷ್ಟು ಅಪಾಯಕಾರಿ ಆಗಬಲ್ಲದು ಎನ್ನುವುದು ತಿಳಿಯುತ್ತದೆ. ಸಿಬಿಐ ಕುರಿತ ಉದಾಹರಣೆಯಲ್ಲಿ ತಿಳಿಸಿದಂತೆಯೇ ಈ ಕಾನೂನನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡುತ್ತಿದೆಯಾದರೂ ಮುಂದೆ ಬರುವ ಯಾವುದೇ ಸರ್ಕಾರಕ್ಕೆ ಇದು ವರ್ಜ್ಯ ಆಗುವುದಿಲ್ಲ. ಯಾವುದೇ ಪಕ್ಷದ ಸರ್ಕಾರ ತನ್ನ ವಿರೋಧಿಗಳ ನಿಯಂತ್ರಣದ ಹಗ್ಗವನ್ನು ಕಳೆದುಕೊಳ್ಳಲು ಇಚ್ಛೆಪಡುವುದಿಲ್ಲ. ಈ ಹಿನ್ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧಿಯಾದ ಈ ಕಾಯ್ದೆಯ ಉದ್ದೇಶವನ್ನು ನಾಗರಿಕ ಸಮಾಜವು ಅರಿತು, ನಿರ್ಧಾರ ಮಾಡಬೇಕಿದೆ. ರಾಜ್ಯಪಾಲರ ಅಥವಾ ರಾಷ್ಟ್ರಪತಿಯವರ ಅಂಗೀಕಾರಕ್ಕೂ ಮುನ್ನವೇ ಅದರ ಭವಿಷ್ಯ, ಅಂದರೆ ಸಮಾಜದ ಭವಿಷ್ಯ ನಿರ್ಧಾರ ಆಗಬೇಕಿದೆ.
- ರಮೇಶ್ ದೊಡ್ಡಪುರ
journoramesha@gmail.com
(ವಿ.ಸೂ: ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ವೈಯಯಕ್ತಿಕವಾದವು. ಅವರು ಕಾರ್ಯನಿರ್ವಹಿಸುವ ಸಂಸ್ಥೆಗಾಗಲಿ, ಇದೀಗ ಲೇಖನ ಪ್ರಕಟಿಸಿರುವ ಸಂಸ್ಥೆಗಾಗಲಿ ಅದು ಸಂಬಂಧಿಸಿರುವುದಿಲ್ಲ.)