ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು- ಇರಾನ್ ಪ್ರತಿಭಟನೆ- ಅಮೆರಿಕ ಅಧ್ಯಕ್ಷ ಟ್ರಂಪ್ online desk
ಅಂಕಣಗಳು

ಇರಾನ್ ತನ್ನ ಐಡೆಂಟಿಟಿ ಹುಡುಕಿಕೊಳ್ಳುತ್ತಿದೆಯೋ ಅಥವಾ ಅಮೆರಿಕದ ಚಿತ್ರಕಥೆಯ ಪಾತ್ರವಾಗುತ್ತಿದೆಯೋ? (ತೆರೆದ ಕಿಟಕಿ)

ಈ ಇರಾನ್ ಎಂಬುದು ಸಹ ಯಾವುದೇ ಇಸ್ಲಾಮಿಕ್ ತತ್ತ್ವವನ್ನು ಬಿಂಬಿಸುತ್ತಿಲ್ಲ. ಇರಾನ್ಶಹರ್ ಎಂಬ ಪ್ರಾಚೀನ ಹೆಸರು ಸೂಚಿಸುವ ಅರ್ಥ - ಆರ್ಯರ ನೆಲ, ಲ್ಯಾಂಡ್ ಆಫ್ ಆರ್ಯಾಸ್ ಎಂದು. ಇಸ್ಲಾಮಿಕ್ ದೇಶವೊಂದಕ್ಕೆ ತಾನು ಆರ್ಯರ ನೆಲ ಎಂದು ನೆನಪಿಸಿಕೊಳ್ಳುವ ಅಗತ್ಯವೇಕೆ ಎಂಬುದು ಪ್ರಶ್ನೆ.

ಇರಾನಿನಲ್ಲಿ ಇತ್ತೀಚಿನ ದಿನಗಳಲ್ಲಿ ಉಗ್ರ ಪ್ರತಿಭಟನೆಗಳು ನಡೆಯುತ್ತಿದ್ದು, ಜನರು ಮುಲ್ಲಾಗಳನ್ನು ಬೆಂಬಲಿಸುತ್ತಿದ್ದರೂ ಈಗ ಅವರ ವಿರುದ್ಧ ದಂಗೆ ಎದ್ದಿದ್ದಾರೆ. ಪಹಲವಿ ರಾಜಮನೆತನದ ಕರೆಗೆ ಸ್ಪಂದಿಸಿ, ಜನರು ತಮ್ಮ ಬೇರುಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಬದಲಾವಣೆ ಅಮೆರಿಕದ ಪ್ರಭಾವದಿಂದ ಆಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಇರಾನಿನಲ್ಲಿ ಅಧಿಕಾರ ಬದಲಾವಣೆ ಇನ್ನೇನು ನಿಶ್ಚಿತವೇನೋ ಎಂಬಂತೆ ಪರಿಸ್ಥಿತಿ ಬದಲಾಗಿದೆ. ಬಹಳ ಇತ್ತೀಚಿನವರೆಗೂ ಯಾರು ಅಲ್ಲಿ ಮತಗುರು ಖಮೇನಿಯ ಆಡಳಿತವನ್ನು ಬೆಂಬಲಿಸಿದ್ದರೋ ಆ ಜನರೇ ಈಗ ಬೀದಿಗಿಳಿದು ಉಗ್ರ ಪ್ರತಿಭಟನೆ ಮಾಡುತ್ತಿದ್ದಾರೆ. ದೇಶದಿಂದ ಹೊರಗಿರುವ ಇರಾನ್ ರಾಜಮನೆತನದ ಪಹಲವಿ ಕರೆಯ ಮೇರೆಗೆ ಹೊತ್ತಿಕೊಂಡಿರುವ ಕಿಡಿ ಇದು. ಈ ಬಾರಿ ಅದು ಅಧಿಕಾರ ಬದಲಾವಣೆಯಲ್ಲೇ ಪರ್ಯವಸನವಾಗಬಹುದು ಎಂಬುದಕ್ಕೆ ಹಲವು ಸೂಚನೆಗಳಿವೆ.

ಆದರೆ, ಇರಾನ್ ಹೀಗೆಲ್ಲ ಕ್ರಾಂತಿಯ ಕಿಡಿ ಹೊತ್ತಿಸಿಕೊಂಡಿರುವುದು ತನ್ನ ಬೇರುಗಳಿಗೆ ಮರಳುವುದಕ್ಕೆ ಎಂಬ ಅತ್ಯುತ್ಸಾಹದ ವಿಶ್ಲೇಷಣೆಯೊಂದಿದೆ. ಅಂದರೆ, ಇರಾನ್ ಎಂಬ ಇಸ್ಲಾಮಿ ನೆಲವು ನಿಧಾನಕ್ಕೆ ಪರ್ಶಿಯಾ ಆಗುವುದು. ಪರ್ಶಿಯಾ ಎಂಬುದು ಇತಿಹಾಸದಲ್ಲಿ ಅಗ್ನಿ ಆರಾಧಕ ಜೊರಾಸ್ಟ್ರಿಯನ್ನರ ನೆಲವಾಗಿತ್ತು. ದೀರ್ಘಾವಧಿಯಲ್ಲಿ ಜಗತ್ತಿನ ಎಲ್ಲರೂ ತಮ್ಮ ನಾಗರಿಕತೆಯ ಬೇರುಗಳನ್ನು ಹುಡುಕಿಕೊಳ್ಳುವ ಪರಿಸ್ಥಿತಿ ಬರುತ್ತದೇನೋ. ಆದರೆ, ಇರಾನಿನಲ್ಲಿ ಸದ್ಯದ ಪರಿಸ್ಥಿತಿ ತೀರ ಅದರ ಬೇರುಗಳ ಹುಡುಕಾಟ ಎಂದು ಆಸೆ ಇಟ್ಟುಕೊಳ್ಳುವುದಕ್ಕೆ ಪೂರಕವಾಗಿ ಕಾರಣಗಳು ಸಿಗುತ್ತಿಲ್ಲ. ಆದರೆ ಅಂಥದೊಂದು ಸಾಧ್ಯತೆಯನ್ನೂ ವಿಶ್ಲೇಷಿಸುತ್ತ, ಸದ್ಯಕ್ಕೆ ಇರಾನನ್ನು ಪ್ರಭಾವಿಸುತ್ತಿರುವ ಜಾಗತಿಕ ಪ್ರಭಾವಳಿಗಳು ಯಾವವು ಎಂದು ನೋಡೋಣ.

ಮುಲ್ಲಾಗಳನ್ನು ಬೆಂಬಲಿಸಿದ್ದೂ ಇದೇ ಮಂದಿ ಅಲ್ಲವೇ, ಈಗೇನು ಬದಲಾವಣೆ?

ಯುವತಿಯೊಬ್ಬಳು ತನ್ನ ಬಾಯಲ್ಲಿರುವ ಸಿಗರೇಟಿನ ತುದಿಯಂಚಿಗೆ ಇರಾನಿನ ಪರಮೋಚ್ಛ ನಾಯಕ ಅಲಿ ಖಮೇನಿಯ ಫೋಟೊ ಇರಿಸಿ ಬೆಂಕಿ ತಾಗಿಸುತ್ತಿರುವುದು ಇತ್ತೀಚಿನ ದಿನಗಳ ಟ್ರೆಂಡಿಂಗ್ ಚಿತ್ರ. ಹಿಜಾಬ್ ಕಿತ್ತೊಗೆಯುವ ಮಹಿಳೆಯರ ಅಭಿಯಾನವೂ ವರ್ಷಗಳ ಹಿಂದೆ ಅಲ್ಲಿ ಆಗಿತ್ತು.

ಆದರೆ, ಈಗಿವರು ಬಯಸುತ್ತಿರುವ ಎಲ್ಲ ಆಧುನಿಕ ಜೀವನಶೈಲಿಗಳೂ 1979ರ ಪೂರ್ವದ ಇರಾನಿನಲ್ಲಿದ್ದವು. ರಾಜಾಡಳಿತದ ಶಾ ಪಹಲವಿ ಅಮೆರಿಕವನ್ನು ತನ್ನ ನೆಲಕ್ಕೆ ಬಿಟ್ಟುಕೊಂಡು ಸಂಪನ್ಮೂಲಗಳನ್ನು ಅಮೆರಿಕ ನಿಯಂತ್ರಣದಲ್ಲಿರಿಸಿದ್ದರೆಂಬುದೊಂದು ದೋಷ. ಉಳಿದಂತೆ ಯಾವ ಬಗೆಯ ಧಿರಿಸು ಉಡುವುದಕ್ಕೂ, ಆಮೋದ-ಪ್ರಮೋದಗಳಲ್ಲಿ ಪಾಲ್ಗೊಳ್ಳುವುದಕ್ಕೂ ಜನರಿಗೆ ಸ್ವಾತಂತ್ರ್ಯವಿತ್ತು. ಆಗ ರಾಜಾಡಳಿತವನ್ನು ವಿರೋಧಿಸಿ, ಆ ನೆಲದಲ್ಲಿ ಇಸ್ಲಾಮಿನ ಆಡಳಿತವಿರಬೇಕು ಎಂದು ಬಂದ ರೊಹುಲ್ಲ ಖೊಮೇನಿ ಎಂಬ ಮತಪ್ರಮುಖನ ಬೆನ್ನಿಗೆ ಇರಾನಿಗರು ನಿಂತಿದ್ದರಿಂದಲೇ ಇಸ್ಲಾಮಿಕ್ ಕ್ರಾಂತಿ ಸಾಧ್ಯವಾಯಿತು. ಈಗ ಅದೇ ಇಸ್ಲಾಮಿಕ್ ಆಡಳಿತದ ವಿರುದ್ಧ ಜನ ದೇಶದುದ್ದಕ್ಕೂ ದಂಗೆ ಎದ್ದಿದ್ದಾರೆ. ಯಾವ ಪಹಲವಿ ಮನೆತನದ ವಿರುದ್ಧ ಅವತ್ತು ಆಕ್ರೋಶಿತರಾಗಿ ದಂಗೆ ಎದ್ದಿದ್ದರೋ ಅದೇ ಮನೆತನದ ರಾಜಕುವರನ ಕರೆಗೆ ಸ್ಪಂದಿಸಿ ಈಗಿನ ಪೀಳಿಗೆಯ ಇರಾನಿಗರು ಮತ್ತದೇ ತೀವ್ರಮಟ್ಟದಲ್ಲಿ ಪ್ರತಿಭಟಿಸುತ್ತಿದ್ದಾರೆ.

ಇರಾನಿನ ನಗರಗಳಿಗೆಲ್ಲ ಮುತ್ತಿಗೆ ಹಾಕಿ ವಶಪಡಿಸಿಕೊಳ್ಳಿ ಎಂದು ರೆಜಾ ಪಹಲವಿ ಕರೆ ಕೊಡುತ್ತಿರುವುದು ಅಮೆರಿಕದ ನೆಲದಲ್ಲಿ ನಿಂತುಕೊಂಡೇ. ಹೀಗಾಗಿ, ಇರಾನಿಯನ್ನರು ತಾವು ತಿರಸ್ಕರಿಸಿದ ರಾಜಮನೆತನವನ್ನಷ್ಟೇ ಅಲ್ಲ, ಅಮೆರಿಕವನ್ನೂ ಒಪ್ಪಿಕೊಳ್ಳುತ್ತಿದ್ದಾರೆ ಎಂದಾಯಿತು. ಅಥವಾ ತತ್ಕಾಲಕ್ಕೆ ಅಂಥದೊಂದು ಟ್ರೆಂಡ್ ಇದೆ ಎಂಬುದನ್ನಂತೂ ಒಪ್ಪಬೇಕಾಗುತ್ತದೆ. ಇದೇ ಜನರ ಹಿರಿ ಪೀಳಿಗೆ ಇಸ್ಲಾಮಿಕ್ ಕ್ರಾಂತಿಯ ಸಂದರ್ಭದಲ್ಲಿ ಅಮೆರಿಕದ ದೂತಾವಾಸಕ್ಕೆ ಮುತ್ತಿಗೆ ಹಾಕಿತ್ತು. ಅಮೆರಿಕ ವಿನಾಶವಾಗಲಿ ಎಂಬ ಮತೀಯ ನಾಯಕರ ಘೋಷಣೆಗಳಿಗೆ ಅವರೆಲ್ಲ ದನಿಗೂಡಿಸಿದ್ದರು. ಈಗೇನಾಗಿಹೋಯಿತು?

ಈ ಕ್ಷಣದ ಸಿಟ್ಟಿನಸ್ಫೋಟಕ್ಕೆ ಹಲವು ಆರ್ಥಿಕ ಕಾರಣಗಳು ಇವೆ. ದೇಶದ ಆರ್ಥಿಕ ಸ್ಥಿತಿ ಇನ್ನಿಲ್ಲದಂತೆ ಕುಸಿದಿದೆ. ಅದಕ್ಕೆ ಅಮೆರಿಕ ಪ್ರಣೀತ ಪಾಶ್ಚಾತ್ಯ ನಿರ್ಬಂಧಗಳೂ ಕೊಡುಗೆ ಕೊಟ್ಟಿವೆ. ದೇಶದ ಆಣೆಕಟ್ಟುಗಳಲ್ಲಿ ನೀರಿನಮಟ್ಟವೂ ಅತಿಯಾಗಿ ಕುಸಿದು ದೇಶದಲ್ಲೆಲ್ಲ ಬರದ ಛಾಯೆ. ಇವೆಲ್ಲದರ ನಡುವೆಯೂ ಖಮೇನಿಯ ಅಧಿಕಾರವಲಯವು ಇಸ್ಲಾಂ ಹೆಸರಲ್ಲಿ ತನ್ನ ಶಕ್ತಿ ಪ್ರದರ್ಶನದ ಮೂಲಕ ಜನರಲ್ಲೊಂದು ವಿಶ್ವಾಸವನ್ನು ಉಳಿಸಿಕೊಂಡಿರುತ್ತಿತ್ತೇನೋ. ಆದರೆ, ಕಳೆದೆರಡು ವರ್ಷಗಳಲ್ಲಿ ಇಸ್ರೇಲ್ ಕೊಟ್ಟಿರುವ ಆಘಾತ ಇದೆಯಲ್ಲ…ಅದು ಅಂಥದೊಂದು ವಿಶ್ವಾಸವನ್ನೇ ಮುಕ್ಕಾಗಿಸಿಬಿಟ್ಟಿದೆ. ಅದ್ಯಾವುದೋ ದೊಡ್ಡ ಭೂತ ಎಂಬಂತೆ ಬಿಂಬಿಸಲಾಗಿದ್ದ ಹಿಜ್ಬುಲ್ಲ ಉಗ್ರ ಗುಂಪನ್ನು ಜೋಕರುಗಳಂತಾಗಿಸಿಬಿಟ್ಟಿತು ಇಸ್ರೇಲ್. ಇರಾನಿನ ಅಗ್ರಶ್ರೇಣಿಯಲ್ಲಿರುವ ನಾಯಕರನ್ನೆಲ್ಲ ಅವರಿದ್ದಲ್ಲೇ ಗುರಿ ನಿರ್ದೇಶಿತ ದಾಳಿಗಳ ಮೂಲಕ ಮುಗಿಸಿಬಿಟ್ಟಿತು ಇಸ್ರೇಲ್. ಕೇವಲ ಎರಡು ವರ್ಷದ ಹಿಂದೆ, ಇರಾನ್ ಯಾವಾಗಲಾದರೂ ಅಣ್ವಸ್ತ್ರ ಶಕ್ತಿ ಸಂಪಾದಿಸಬಲ್ಲದೆಂಬ ಗ್ರಹಿಕೆ ಇತ್ತು. ಆ ಭಯವನ್ನು ಇಸ್ರೇಲಿ ಕಾರ್ಯಾಚರಣೆಗಳು ತೊಡೆದುಹಾಕಿಬಿಟ್ಟವು. ಇರಾನಿನ ಜನಸ್ತೋಮವು ಮತಗುರುಗಳ ನಾಯಕತ್ವದ ಬಗ್ಗೆ ಕಳೆದುಕೊಂಡಿರುವ ವಿಶ್ವಾಸದ ನಿರ್ವಾತವನ್ನು ಪ್ರತಿಭಟನೆಗಳು ತುಂಬುತ್ತಿವೆ.

ಇಷ್ಟಕ್ಕೂ ಇರಾನಿನ ಐಡೆಂಟಿಟಿ ಕ್ರೈಸಿಸ್ ಎಲ್ಲಿದೆ?

ಎಂಟನೇ ಶತಮಾನದ ಪ್ರಾರಂಭ ಭಾಗದಲ್ಲೇ ಇಸ್ಲಾಮಿನ ಪದಾಘಾತಕ್ಕೆ ಸುಲಭದ ತುತ್ತಾಗಿದ್ದು ಪರ್ಶಿಯಾ. ಆದರೆ ಅದು ಇರಾನ್ ಎಂದು ಹೆಸರು ಬದಲಿಸಿಕೊಂಡಿದ್ದು 1935ರಲ್ಲಷ್ಟೆ. ಈ ನಾಮಕರಣ ಮಾಡಿದ್ದು ಪಹಲವಿ ಮನೆತನದ ರಾಜಾಡಳಿತವೇ. ಅವರೂ ಇಸ್ಲಾಂ ಮತಸ್ಥರೇ ಆಗಿದ್ದರೂ ಇಲ್ಲಿದ್ದದ್ದು ತನ್ನತನ ಹಾಗೂ ಬೇರಿನ ಹುಡುಕಾಟವೇ.

ಇರಾನಿನ ನೈರುತ್ಯ ಭಾಗದ ನಗರ ಪೆರ್ಸಿಸ್. ಅಕಮೆನಿಡ್ ಸಾಮ್ರಾಜ್ಯ ಬೆಳೆದಿದ್ದು ಅಲ್ಲಿಂದಲೇ. ಆ ಪ್ರದೇಶವಾಚಕವೇ ನಂತರ ಆ ಇಡೀ ಭೂಗೋಳದ ಜನರನ್ನು ಸೂಚಿಸುವುದಕ್ಕೆ ಬಳಕೆಯಾಗತೊಡಗಿತು. ಫಾರ್ಸಿ ಎಂಬ ಶಬ್ದ, ಪರ್ಶಿಯಾ ಎಂಬ ಹೆಸರು ಎಲ್ಲವೂ ರೂಪುಗೊಂಡಿದ್ದು ಅಲ್ಲಿಂದ.

ಪಹಲವಿಗಳು ಆ ನೆಲದ ಆಡಳಿತ ಸೂತ್ರವನ್ನು ಹಿಡಿದಾಗ ಅವರು ಎತ್ತಿದ ಪ್ರಶ್ನೆ ನಾವೇಕೆ ಹೊರಗಿನವರು, ಅಂದರೆ ಅವತ್ತಿನ ಗ್ರೀಕರು ನಮ್ಮನ್ನು ಪರ್ಶಿಯಾ ಎಂದು ಗುರುತಿಸಿದ್ದನ್ನು ನಾವೇಕೆ ನೆಚ್ಚಿಕೊಳ್ಳಬೇಕು ಎಂದು ಇರಾನ್ ಎಂದು ಬದಲಿಸಿದರು. ನಮಗೆ ಗೊತ್ತಿರಬೇಕು, ಈ ಇರಾನ್ ಎಂಬುದು ಸಹ ಯಾವುದೇ ಇಸ್ಲಾಮಿಕ್ ತತ್ತ್ವವನ್ನು ಬಿಂಬಿಸುತ್ತಿಲ್ಲ. ಇರಾನ್ಶಹರ್ ಎಂಬ ಪ್ರಾಚೀನ ಹೆಸರು ಸೂಚಿಸುವ ಅರ್ಥ - ಆರ್ಯರ ನೆಲ, ಲ್ಯಾಂಡ್ ಆಫ್ ಆರ್ಯಾಸ್ ಎಂದು.

ಇಸ್ಲಾಮಿಕ್ ದೇಶವೊಂದಕ್ಕೆ ತಾನು ಆರ್ಯರ ನೆಲ ಎಂದು ನೆನಪಿಸಿಕೊಳ್ಳುವ ಅಗತ್ಯವೇಕೆ ಎಂಬುದು ಪ್ರಶ್ನೆ. ಇರಾನಿನ ಇತಿಹಾಸ ಅದಕ್ಕೆ ಕೆಲವು ಸುಳಿಹುಗಳನ್ನು ಕೊಡುತ್ತದೆ. ಇರಾನ್ ಎಂಬುದು ಇಸ್ಲಾಮಿಕ್ ನೆಲವಾದ ನಂತರವೂ, ಅಲ್ಲಿನವರೆಲ್ಲ ಇಸ್ಲಾಮನ್ನು ಒಪ್ಪಿಕೊಂಡ ನಂತರವೂ ಐಡೆಂಟಿಟಿ ಸಂಘರ್ಷವೊಂದು ಉಳಿದುಹೋಯಿತು. ಅದು ಮತಕ್ಕೆ ಸಂಬಂಧಿಸಿದ್ದಲ್ಲ.

ಅರಬ್ಬರು ಪರ್ಶಿಯಾವನ್ನು ಬಹಳ ಬೇಗ ಗೆದ್ದುಕೊಂಡಿದ್ದೇನೋ ಹೌದು. ಆದರೆ ತುರ್ಕರು ಬಂದು ಉಮಾಯದ್ ಖಲೀಫತ್ ಅನ್ನು ತೆಗೆದುಹಾಕಿದರು. ನಂತರದ ಸೆಲ್ಜುಕ್ ಸಾಮ್ರಾಜ್ಯ ತುರ್ಕರದ್ದು. ಜೆಂಗೇಸ್ ಖಾನನ ಮೊಮ್ಮಗ ಹುಲಾಗು ಖಾನ್ ಸ್ಥಾಪಿಸಿದ ಇಲ್ಖಾನೇಟ್ ಸಾಮ್ರಾಜ್ಯ ಮಂಗೋಲ್ ಮೂಲದ್ದು. ನಂತರ ತೈಮೂರನು ಸಮರಖಂಡದಿಂದಲೇ ಪರ್ಶಿಯಾವನ್ನು ಆಳಿದ. ನಂತರದ ಸಫವೀದ್ ಆಡಳಿತವು ಕುರ್ದಿಶ್ ಜನಾಂಗದ್ದು. ನಂತರದ ಅಫಶರೀದ್, ಕ್ವಜಾರ್ ವಂಶಗಳ ಆಡಳಿತಗಳು ಸಹ ತುರ್ಕಿ ಮೂಲದ್ದು. 1925ರಲ್ಲಿ ಪಹಲವಿಗಳು ಆಡಳಿತಕ್ಕೆ ಬಂದಾಗ ಅವರು ಪರ್ಶಿಯಾದಲ್ಲೇ ಬಹಳ ವರ್ಷಗಳಿಂದ ಇದ್ದವರಾಗಿದ್ದರು.

ಹೀಗಾಗಿ ಆ ನೆಲವನ್ನು ಟರ್ಕಿ-ಅಜರ್ಬೈಜಾನ್ ಪ್ರಾಂತ್ಯದ ಬುಡಕಟ್ಟಿನಿಂದ ಪ್ರತ್ಯೇಕಗೊಳಿಸುವ, ಆರ್ಯರ ಐಡೆಂಟಿಟಿಯಲ್ಲಿ ತಮ್ಮನ್ನು ಬಿಂಬಿಸಿಕೊಳ್ಳುವ ಮಾರ್ಗದತ್ತ ವಾಲಿದ ಅವರು, ಪರ್ಶಿಯಾವನ್ನು ಇರಾನ್ ಎಂದು ಮರುನಾಮಕರಣಗೊಳಿಸಿದರು. ಮೇಲೆ ಉದಾಹರಿಸಿದವರೆಲ್ಲ ಇಸ್ಲಾಂ ಅನುಯಾಯಿಗಳೇ ಆದರೂ ಜನಾಂಗೀಯ ಆಧಾರದಲ್ಲಿ ಭಿನ್ನರಾಗುತ್ತಾರೆ. ಇವತ್ತಿಗೆ ಇರಾನ್ ಆಡಳಿತ ಸೂತ್ರದಲ್ಲಿ ಹಾಗೂ ಮಿಲಿಟರಿ ವಲಯದಲ್ಲಿರುವ ಶೇಕಡ ಮೂವತ್ತಕ್ಕಿಂತ ಹೆಚ್ಚಿನ ಜನರು ಈ ತುರ್ಕಿಕ್-ಅಜೆರಿಕ್ ಸಮೂಹಕ್ಕೆ ಸೇರಿದವರು. ಇವತ್ತಿನ ಪರಮೋಚ್ಛ ನಾಯಕ ಅಲಿ ಖಮೇನಿ ಅಜರ್ಬೈಜಾನ್ ಮೂಲದ ತುರ್ಕ್ ಪಂಗಡಕ್ಕೆ ಸೇರಿದ ವ್ಯಕ್ತಿ.

ಈ ಇತಿಹಾಸ ಗಮನದಲ್ಲಿರಿಸಿಕೊಂಡಾಗ ಇರಾನ್ ಯಾವ ಐಡೆಂಟಿಟಿ ಬಿಕ್ಕಟ್ಟಿನಲ್ಲಿದೆ ಹಾಗೂ ಯಾವ ಬದಲಾವಣೆಯನ್ನು ನಿರೀಕ್ಷಿಸುತ್ತಿದೆ ಎಂಬುದರ ಚಿತ್ರಣ ಸಿಗುತ್ತದೆ.

ಪರ್ಶಿಯಾ ಬಗ್ಗೆ ಇಸ್ರೇಲಿಗಿದೆ ಪ್ರೇಮ!

ಈ ಎಲ್ಲ ವಿವರಣೆಗಳನ್ನು ಓದಿಕೊಂಡಮೇಲೂ ಇರಾನ್ ಎಂಬುದು ತನ್ನ ನಾಗರಿಕತೆಯ ಐಡೆಂಟಿಟಿ ಕಂಡುಕೊಳ್ಳಲು ಹೊರಟಿದೆ ಎಂದೆಲ್ಲ ಅಂದುಕೊಳ್ಳಲಾಗುವುದಿಲ್ಲ. ಏಕೆಂದರೆ ಇಲ್ಲಿರುವುದು ಭಯಂಕರವಾದ ಜಿಯೊಪಾಲಿಟಿಕ್ಸ್. ಇರಾನಿನ ಜನಮಾನಸಕ್ಕೆ ತಾನೇನಾಗಬೇಕು ಎಂದಿದೆ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ. ಆದರೆ ಅಮೆರಿಕವು ಅವರನ್ನು ಏನನ್ನಾಗಿಸುವುದಕ್ಕೆ ಹೊರಟಿದೆ ಎಂಬುದು ಮುಖ್ಯವಾಗುತ್ತದೆ. ಇರಾನಿಗರು ವೋಕ್ ಆಗುತ್ತಾರಾ, ಸ್ವೇಚ್ಛಾಚಾರಿಗಳಲಾಗಲಿದ್ದಾರಾ, ನಿಧಾನಕ್ಕೆ ಕ್ರೈಸ್ತರಾಗಿ ಬದಲಾಗುತ್ತಾರಾ ಎಂಬುದೆಲ್ಲ ಅಮೆರಿಕದ ಡೀಪ್ ಸ್ಟೇಟ್ ಏನನ್ನು ಬಯಸಿದೆ ಎಂಬುದರ ಮೇಲೆ ಅವಲಂಬಿಸಿದೆ.

ಆದರೆ ಈ ಕತೆಯಲ್ಲೊಂದು ಟ್ವಿಸ್ಟ್ ಇದೆ. ಅದುವೇ ಇರಾನಿನ ವಿಷಯದಲ್ಲಿ ಇಸ್ರೇಲ್ ಏನನ್ನು ಬಯಸುತ್ತಿದೆ ಅನ್ನೋದು. ಏಕೆಂದರೆ, ಅಮೆರಿಕಕ್ಕಿಂತ ಹೆಚ್ಚಾಗಿ ಇಸ್ರೇಲಿನ ಕಾರ್ಯಾಚರಣೆಗಳೇ ಇರಾನಿನ ಪರಮೋಚ್ಛ ಆಡಳಿತವನ್ನು ಈ ಅಸಹಾಯಕ ಸ್ಥಿತಿಗೆ ತಂದು ನಿಲ್ಲಿಸಿರುವುದು. ಚಾರಿತ್ರಿಕವಾಗಿ ನೋಡುವುದಾದರೆ ಇಸ್ರೇಲಿಗೆ ಪ್ರಾಚೀನ ಪರ್ಶಿಯಾದ ಮೇಲೊಂದು ಅಗಾಧ ಗೌರವವಿದೆ. ಏಕೆಂದರೆ, ಪುರಾತನ ಸಮುದಾಯವಾಗಿರುವ ಯಹೂದಿಗಳನ್ನು ಪರ್ಶಿಯಾ ಸಾಮ್ರಾಜ್ಯದ ದೊರೆಗಳು ಮಾತ್ರವೇ ಘನತೆಯಿಂದ ನಡೆಸಿಕೊಂಡಿರುವುದು. ಈಜಿಪ್ತಿನ ಫೆರೊಗಳು, ಬ್ಯಾಬಿಲೋನಿಯನ್ನರು, ರೋಮನ್ನರು ಯಹೂದಿಗಳ ನೆಲವನ್ನು ಗೆದ್ದಾಗಲೆಲ್ಲ ಇವರ ಮತಾಚರಣೆಗಳಿಗೆ ಅಡ್ಡಿಯಾಗಿದೆ, ಬಲವಂತದ ವಲಸೆಗಳಾಗಿವೆ, ಪೂಜಾಸ್ಥಳಗಳು ಧ್ವಂಸವಾಗಿವೆ. ಆದರೆ ಪರ್ಶಿಯನ್ನರು ಯಹೂದಿಗಳ ನೆಲವನ್ನು ಗೆದ್ದುಕೊಂಡಾಗ ಯಹೂದಿಗಳಿಗೆ ಮತ್ತೆ ಒಂದೆಡೆ ನೆಲೆಸುವುದಕ್ಕೆ ಅನುವು ಮಾಡಿಕೊಟ್ಟರು. ರಾಜ ಸೈರಸ್ ಇವರಿಗೆ ಎರಡನೇ ದೇವಾಲಯವನ್ನು ಕಟ್ಟಿಕೊಟ್ಟಿದ್ದ. ಹಿಬ್ರೂ ಬೈಬಲ್ಲಿನಲ್ಲಿ ಸೈರಸ್ ದಿ ಗ್ರೇಟ್ ಎಂದು ಕೊಂಡಾಡಲಾಗಿದೆ.

ಹೀಗಾಗಿ, ದೀರ್ಘಾವಧಿಯಲ್ಲಿ ಇರಾನ್ ಯಾವ ಐಡೆಂಟಿಟಿಗೆ ಮರಳಬೇಕು ಎಂಬುದರ ಬಗ್ಗೆ ಇಸ್ರೇಲ್ ರಹಸ್ಯವಾಗಿ ಏನು ಯೋಚಿಸುತ್ತಿದೆ ಎಂಬುದು ಬಹಳ ಮುಖ್ಯ. ಅದ್ಯಾವ ಟ್ರಂಪ್ ಅಮೆರಿಕದಲ್ಲಿ ಅಧಿಕಾರದಲ್ಲಿದ್ದರೂ ತನ್ನ ಕಾರ್ಯತಂತ್ರ ಈಡೇರಿಸಿಕೊಳ್ಳುವುದು ಹೇಗೆ ಎಂಬುದು ಇಸ್ರೇಲಿಗೆ ಗೊತ್ತಿದೆ!

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ 'ಇರಾನ್ ದಾಳಿ' ಬೆದರಿಕೆ: ಕತಾರ್‌ನ ಅಮೆರಿಕ ಸೇನಾ ನೆಲೆಯಿಂದ ಕೆಲವು ಸಿಬ್ಬಂದಿ ಸ್ಥಳಾಂತರ!

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಪ್ರಬಲ ಸ್ಫೋಟ: ಮೂವರು ಸಾವು, ಇಬ್ಬರು ಗಂಭೀರ ಗಾಯ

ರಾಜ್‌ಕೋಟ್​ ಪಂದ್ಯ: ಬೌಲರ್ ಗಳ ಬೆಂಡೆತ್ತಿದ ಕೀವಿಸ್ ಪಡೆ; ಭಾರತಕ್ಕೆ ಹೀನಾಯ ಸೋಲು!

ಕೂಡಲೇ ಇರಾನ್ ತೊರೆಯಿರಿ: ಭಾರತೀಯ ನಾಗರಿಕರಿಗೆ 2ನೇ ಬಾರಿಗೆ ಸಲಹೆ!

ಚೀನಾದ ಆಡಳಿತರೂಢ ಕಮ್ಯುನಿಸ್ಟ್ ಪಕ್ಷದೊಂದಿಗೆ ನೋಂದಾಯಿಸದ ಆರ್‌ಎಸ್‌ಎಸ್‌ಗೆ ಏನು ಕೆಲಸ?: ಪ್ರಿಯಾಂಕ್ ಖರ್ಗೆ

SCROLL FOR NEXT