ಸರ್ವೈಕಲ್ ಡಿಸ್ಟೋನಿಯಾ online desk
ಅಂಕಣಗಳು

ಸರ್ವೈಕಲ್ ಡಿಸ್ಟೋನಿಯಾ; ರೋಗ ಲಕ್ಷಣ, ಚಿಕಿತ್ಸೆ ಬಗ್ಗೆ ಇಲ್ಲಿದೆ ಮಾಹಿತಿ (ಕುಶಲವೇ ಕ್ಷೇಮವೇ)

ನಾನು ಅವರನ್ನು ವಿವರವಾಗಿ ವಿಚಾರಿಸಿದಾಗ ಅವರಿಗೆ ಸರ್ವೈಕಲ್ ಡಿಸ್ಟೋನಿಯಾ ಎಂಬ ನರಮಂಡಲಕ್ಕೆ ಸಂಬಂಧಿಸಿದ ಚಲನೆಗೆ ತೊಂದರೆಯುಂಟುವಾಡುವ ಕಾಯಿಲೆ ಎಂದು ಗೊತ್ತಾಯಿತು.

ಒಂದು ದಿನ ಸಂಜೆ ನಲವತ್ತೈದು ವರ್ಷದ ರಾಮಣ್ಣ ಎಂಬವವರು ನನ್ನ ಕ್ಲಿನಿಕ್ಕಿಗೆ ಬಂದು “ಡಾಕ್ಟರ್, ಕೆಲವು ತಿಂಗಳುಗಳಿಂದ ನನ್ನ ಕುತ್ತಿಗೆ ತನ್ನಷ್ಟಕ್ಕೆ ಒಂದು ಬದಿಗೆ ತಿರುಗುತ್ತಿದೆ. ನೇರವಾಗಿ ತಲೆ ಹಿಡಿದುಕೊಳ್ಳಲು ಆಗುತ್ತಿಲ್ಲ. ಕುತ್ತಿಗೆಯಲ್ಲಿ ನೋವು ಇದೆ. ಕೆಲವೊಮ್ಮೆ ತಲೆ ನಡುಗುವಂತೆಯೂ ಆಗುತ್ತದೆ. ಕೆಲಸ ಮಾಡುವಾಗ ಮತ್ತು ನಡೆಯುವಾಗ ತುಂಬಾ ಸಂಕೋಚವಾಗುತ್ತಿದೆ,” ಎಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.

ನಾನು ಅವರನ್ನು ವಿವರವಾಗಿ ವಿಚಾರಿಸಿದಾಗ ಅವರಿಗೆ ಸರ್ವೈಕಲ್ ಡಿಸ್ಟೋನಿಯಾ ಎಂಬ ನರಮಂಡಲಕ್ಕೆ ಸಂಬಂಧಿಸಿದ ಚಲನೆಗೆ ತೊಂದರೆಯುಂಟುವಾಡುವ ಕಾಯಿಲೆ ಎಂದು ಗೊತ್ತಾಯಿತು.

ಸರ್ವೈಕಲ್ ಡಿಸ್ಟೋನಿಯಾ ಕಾಯಿಲೆ ಬಂದರೆ ಕುತ್ತಿಗೆಯ ಸ್ನಾಯುಗಳು ಅನಿಯಂತ್ರಿತವಾಗಿ ಸಂಕುಚಿತಗೊಳ್ಳುವ ಕಾರಣ ತಲೆ ತನ್ನಷ್ಟಕ್ಕೆ ಒಂದು ದಿಕ್ಕಿಗೆ ತಿರುಗುವುದು ಮುಂದೆ ಅಥವಾ ಹಿಂದೆ ವಾಲುವುದು ಅಥವಾ ಒಂದು ಬದಿಗೆ ಓರೆಯಾಗುವುದು. ಇದು ಅಪರೂಪದ ನರಮಂಡಲದ ಕಾಯಿಲೆಯಾಗಿದ್ದು ಮೆದುಳು ಮತ್ತು ಸ್ನಾಯುಗಳ ನಡುವಿನ ಚಲನೆಯ ನಿಯಂತ್ರಣದಲ್ಲಿ ಉಂಟಾಗುವ ವ್ಯತ್ಯಾಸದಿಂದ ಕಾಣಿಸಿಕೊಳ್ಳುತ್ತದೆ.

ಹೆಚ್ಚಿನ ಪ್ರಕರಣಗಳಲ್ಲಿ ಈ ರೋಗಕ್ಕೆ ನಿಖರವಾದ ಕಾರಣ ತಿಳಿದಿರುವುದಿಲ್ಲ. ಆದರೆ ಕೆಲವರಲ್ಲಿ ಆನುವಂಶಿಕ ಕಾರಣಗಳು, ತಲೆ ಅಥವಾ ಕುತ್ತಿಗೆಗೆ ಆಗಿರುವ ಗಾಯ, ಕೆಲವು ನರಮಂಡಲದ ಕಾಯಿಲೆಗಳು ಅಥವಾ ಅಪರೂಪವಾಗಿ ಕೆಲವು ಔಷಧಿಗಳ ಅಡ್ಡಪರಿಣಾಮಗಳಿಂದಲೂ ಇದು ಉಂಟಾಗಬಹುದು. ಸರ್ವಿಕಲ್ ಡಿಸ್ಟೋನಿಯಾ ಸಾಮಾನ್ಯವಾಗಿ ಮಧ್ಯವಯಸ್ಕರಲ್ಲಿ ಕಂಡುಬರುತ್ತದೆ. ಒಮ್ಮೆ ಗಂಭೀರವಾದ ಗಾಯ ಅಥವಾ ಆಘಾತಕ್ಕೊಳಗಾದವರಿಗೆ ಇದರ ಅಪಾಯ ಹೆಚ್ಚು ಇರುತ್ತದೆ.

ಈ ಕಾಯಿಲೆಯ ಪ್ರಮುಖ ಲಕ್ಷಣಗಳೆಂದರೆ ಕುತ್ತಿಗೆ ತನ್ನಷ್ಟಕ್ಕೆ ತಿರುಗುವುದು ಅಥವಾ ಬಾಗುವುದು; ಜೊತೆಗೆ ಕುತ್ತಿಗೆಯಲ್ಲಿ ನೋವು, ಸ್ನಾಯು ಬಿಗಿತ, ತಲೆ ನಡುಗುವುದು, ತಲೆ ನೇರವಾಗಿ ಇಡಲು ಕಷ್ಟವಾಗುವುದು ಮತ್ತು ದೀರ್ಘಕಾಲ ಒಂದೇ ಭಂಗಿಯಲ್ಲಿ ಇರಲು ತೊಂದರೆ ಕಾಣಿಸಿಕೊಳ್ಳುವುದು. ಕೆಲವರಿಗೆ ಮಾನಸಿಕ ಒತ್ತಡದ ಸಂದರ್ಭದಲ್ಲಿ ಈ ಲಕ್ಷಣಗಳು ಹೆಚ್ಚಾಗಬಹುದು. ಕೆಲವರು ಗಲ್ಲ ಅಥವಾ ತಲೆಯ ಒಂದು ಭಾಗವನ್ನು ಕೈಯಿಂದ ಮೆಲ್ಲಗೆ ಸ್ಪರ್ಶಿಸಿದಾಗ ಸ್ವಲ್ಪ ಕಾಲ ಕುತ್ತಿಗೆ ಸರಿಯಾದ ಸ್ಥಿತಿಗೆ ಬರುವ ಅನುಭವವೂ ಇರಬಹುದು.

ಈ ಕಾಯಿಲೆಯ ನಿರ್ಣಯವನ್ನು ಮುಖ್ಯವಾಗಿ ನರರೋಗ ತಜ್ಞರು ದೈಹಿಕ ಪರೀಕ್ಷೆಯ ಮೂಲಕ ಮಾಡುತ್ತಾರೆ. ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಬೊಟುಲಿನಮ್ ಟಾಕ್ಸಿನ್ ಚುಚ್ಚುಮದ್ದು ಪ್ರಮುಖ ಪಾತ್ರ ವಹಿಸುತ್ತದೆ. ಇದು ಹೆಚ್ಚು ಬಿಗಿಯಾಗಿರುವ ಸ್ನಾಯುಗಳನ್ನು ತಾತ್ಕಾಲಿಕವಾಗಿ ಸಡಿಲಗೊಳಿಸಿ ತಲೆ ತಿರುಗುವಿಕೆಯನ್ನು ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಪರಿಣಾಮ ಕೆಲವು ತಿಂಗಳುಗಳವರೆಗೆ ಇರುತ್ತದೆ ಮತ್ತು ಅಗತ್ಯವಿದ್ದರೆ ಮರುಚಿಕಿತ್ಸೆ ನೀಡಲಾಗುತ್ತದೆ.

ಕೆಲವು ಸಂದರ್ಭಗಳಲ್ಲಿ ಸ್ನಾಯು ಸಡಿಲಗೊಳಿಸುವ ಅಥವಾ ಇತರ ಔಷಧಿಗಳನ್ನು ನೀಡಬಹುದು. ಫಿಸಿಯೋಥೆರಪಿ, ಕುತ್ತಿಗೆಯ ವ್ಯಾಯಾಮಗಳು ಮತ್ತು ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳುವುದೂ ಚಿಕಿತ್ಸೆಗೆ ಪೂರಕವಾಗಿರುತ್ತದೆ. ಅಪರೂಪದ ತೀವ್ರ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಅಥವಾ ʼಡೀಪ್ ಬ್ರೇನ್ ಸ್ಟಿಮ್ಯುಲೇಷನ್ʼ ಎಂಬ ವಿಶೇಷ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಸರ್ವೈಕಲ್ ಡಿಸ್ಟೋನಿಯಾವನ್ನು ಸಂಪೂರ್ಣವಾಗಿ ತಡೆಯುವ ಯಾವುದೇ ಖಚಿತವಾದ ವಿಧಾನವಿಲ್ಲ. ಆದರೂ ಕುತ್ತಿಗೆಗೆ ಗಾಯವಾಗದಂತೆ ಎಚ್ಚರಿಕೆ ವಹಿಸುವುದು, ಯಾವುದೇ ಔಷಧಿಗಳನ್ನು ವೈದ್ಯರ ಸಲಹೆಯಂತೆ ಮಾತ್ರ ಬಳಸುವುದು, ದೀರ್ಘಕಾಲ ಒಂದೇ ಭಂಗಿಯಲ್ಲಿ ಕೆಲಸ ಮಾಡದಿರುವುದು, ನಿಯಮಿತ ವ್ಯಾಯಾಮ ಮಾಡುವುದು ಮತ್ತು ಕುತ್ತಿಗೆಯ ಸ್ನಾಯುಗಳನ್ನು ಆರೋಗ್ಯಕರವಾಗಿಡುವುದು ಸಹಾಯಕವಾಗಬಹುದು.

ಒತ್ತಡ ನಿರ್ವಹಣೆಯ ಮೂಲಕ ಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡಬಹುದು. ಯೋಗ, ಧ್ಯಾನ ಮತ್ತು ಕೆಲಸ ಮಾಡುವಾಗ ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ವಿಶೇಷವಾಗಿ ಮೊಬೈಲ್ ಅಥವಾ ಕಂಪ್ಯೂಟರ್ ಬಳಸುವಾಗ ಕುತ್ತಿಗೆಯನ್ನು ಹೆಚ್ಚು ಕಾಲ ಬಗ್ಗಿಸುವುದನ್ನು ತಪ್ಪಿಸಬೇಕು. ಅನೇಕ ಜನರು ಇದನ್ನು ಸಾಮಾನ್ಯ ಕುತ್ತಿಗೆ ನೋವು ಎಂದು ನಿರ್ಲಕ್ಷಿಸುತ್ತಾರೆ. ಆದರೆ ಇದು ದೀರ್ಘಕಾಲದವರೆಗೆ ಇದ್ದರೆ ಕುತ್ತಿಗೆಯ ಎಲುಬುಗಳ ಸವೆತಕ್ಕೆ ದಾರಿ ಮಾಡಿಕೊಡಬಹುದು. ಹಾಗಾಗಿ ಯಾವುದೇ ಅಸಹಜ ಲಕ್ಷಣಗಳು ಕಂಡುಬಂದ ತಕ್ಷಣ ನರರೋಗ ತಜ್ಞರನ್ನು ಭೇಟಿ ಮಾಡಬೇಕು.

ಆಯುರ್ವೇದ ಶಾಸ್ತ್ರದಲ್ಲಿ ಸರ್ವಿಕಲ್ ಡಿಸ್ಟೋನಿಯಾವನ್ನು 'ವಾತ ವ್ಯಾಧಿ' ಅಥವಾ 'ಗ್ರೀವಾಸ್ತಂಭ' ಎಂದು ಪರಿಗಣಿಸಲಾಗುತ್ತದೆ. ದೇಹದ ನರಮಂಡಲ ಮತ್ತು ಸ್ನಾಯುಗಳ ಚಲನೆಯನ್ನು ನಿಯಂತ್ರಿಸುವ 'ವಾತ ದೋಷ'ವು ಅಸಮತೋಲನಗೊಳ್ಳುವುದೇ ಈ ಸಮಸ್ಯೆಗೆ ಮೂಲ ಕಾರಣ. ಮಾನಸಿಕ ಒತ್ತಡ, ಪೌಷ್ಟಿಕಾಂಶದ ಕೊರತೆ ಅಥವಾ ಅತಿಯಾದ ಆಯಾಸದಿಂದ ವಾತವು ಪ್ರಕೋಪಗೊಂಡು ಕುತ್ತಿಗೆಯ ಸ್ನಾಯುಗಳಲ್ಲಿ ಆವರಿಸಿಕೊಂಡು ಸೆಳೆತ ಮತ್ತು ನೋವನ್ನು ಉಂಟುಮಾಡುತ್ತದೆ.

ಚಿಕಿತ್ಸೆಯು ಮುಖ್ಯವಾಗಿ ಈ ಪ್ರಕೋಪಗೊಂಡ ವಾತವನ್ನು ಶಾಂತಗೊಳಿಸುವತ್ತ ಗಮನಹರಿಸುತ್ತದೆ. ಧನ್ವಂತರ ಅಥವಾ ಮಹಾನಾರಾಯಣ ತೈಲಗಳಂತಹ ವಾತಹರ ತೈಲಗಳನ್ನು ಬಳಸಿ ಕುತ್ತಿಗೆಗೆ ಮೃದುವಾದ ಮಸಾಜ್ (ಅಭ್ಯಂಗ) ಮಾಡುವುದು ಮತ್ತು ಬೆಚ್ಚಗಿನ ಶಾಖ ನೀಡುವುದು ಉತ್ತಮ ಪರಿಣಾಮ ಬೀರುತ್ತದೆ. ಇದರ ಜೊತೆಗೆ 'ಬಸ್ತಿ' ಚಿಕಿತ್ಸೆ ಮತ್ತು ನಸ್ಯ ಕರ್ಮದ ಮೂಲಕ ದೇಹದ ಆಳವಾದ ವಾತದ ಅಸಮತೋಲನವನ್ನು ಸರಿಪಡಿಸಲಾಗುತ್ತದೆ. ಅಶ್ವಗಂಧದಂತಹ ಔಷಧೀಯ ಗಿಡಮೂಲಿಕೆಗಳು ನರಗಳಿಗೆ ಬಲ ನೀಡುತ್ತವೆ. ಯೋಗ, ಪ್ರಾಣಾಯಾಮ ಮತ್ತು ಒತ್ತಡ ನಿರ್ವಹಣೆಯು ಈ ಚಿಕಿತ್ಸೆಯ ಅವಿಭಾಜ್ಯ ಅಂಗಗಳಾಗಿವೆ. ಪಂಚಕರ್ಮ ಚಿಕಿತ್ಸೆಗಳನ್ನು ಅನುಸರಿಸುವುದು ರೋಗಿಗಳ ಆರೋಗ್ಯ ಸುಧಾರಣೆಗೆ ಅತ್ಯಂತ ಪರಿಣಾಮಕಾರಿಯಾಗಿದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸದ್ಯದಲ್ಲೇ ಮೋದಿ ಸಂಪುಟ ಪುನರ್ ರಚನೆ: ಅಮಿತ್ ಶಾಗೆ ಉಪ ಪ್ರಧಾನಿ ಪಟ್ಟ? ವರದಿಗಳು

ಶ್ರೀರಂಗಪಟ್ಟಣದಲ್ಲಿ ಬೃಹತ್ ಭೂ ಹಗರಣ: ಬರೋಬ್ಬರಿ 200 ಎಕರೆ ಸರ್ಕಾರಿ ಭೂಮಿ ಕಬಳಿಸಲು ನಕಲಿ ದಾಖಲೆ ಸೃಷ್ಟಿ; 9 ಜನರ ಬಂಧನ!

ಆಗ್ರಾ: ಸೋನಂ, ಸಿಯಾ ಆಯ್ತು, ಈಗ ರೂಬಿ; ಪತಿಯನ್ನು ಕೊಂದು, ಶವವನ್ನು ಬಾತ್ ರೂಂನ ಟೈಲ್ಸ್ ಕೆಳಗೆ ಹೂತು ಹಾಕಿದ್ದ ಮಹಿಳೆಯ ಬಂಧನ!

ಘೋರ ದುರಂತ: ಬಾವಿಗೆ ಬಿದ್ದ ಹೋರಿ ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ದಾರುಣ ಸಾವು!

Video: ವಿಶ್ವದ ಹಲವು ದೇಶಗಳು ಯುವಕರಿಗೆ ತರಬೇತಿ ನೀಡಲು RSS ಸಹಕಾರ ಕೇಳುತ್ತಿವೆ: ಮೋಹನ್ ಭಾಗವತ್