ಕಾವೇರಿ ನದಿ 
ಅಂಕಣಗಳು

ಕಾವೇರಿ: ಕರ್ನಾಟಕಕ್ಕೆ ಅನ್ಯಾಯಗಳ ಪರಂಪರೆ (ನೇರ ನೋಟ)

ಕಾವೇರಿ ಜಲ ವಿವಾದದ ವಿಚಾರದಲ್ಲಿ ರಾಜ್ಯದಲ್ಲಿ ರಾಜಕಾರಣ ನಡೆದಿದ್ದೇ ಹೆಚ್ಚು. ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳೂ ಸಂಕಷ್ಟ ಎದುರಾದಾಗ ಪ್ರಾರಂಭದಲ್ಲಿ ನೀರು ಬಿಡುವುದಿಲ್ಲ ಎಂದು ಹೇಳುತ್ತಲೇ ತಮಿಳುನಾಡಿಗೆ ನೀರು ಹರಿಸಿದ್ದಾರೆ.

ಅದು ಅನ್ಯಾಯಗಳ ಪರಂಪರೆ. ತಾರತಮ್ಯದ ತಳಹದಿಯ ಮೇಲೆಯೇ ಮೂಲ ಎರಡು ಒಪ್ಪಂದಗಳು. ನಂತರದ ಆದೇಶಗಳಿಗೂ ಒಂದು ರೀತಿ ಈ ಒಪ್ಪಂದಗಳೇ ಆಧಾರ. ಹೀಗಾಗಿ, ಒಂದು ರೀತಿ ಅನ್ಯಾಯಗಳ ಪರಂಪರೆ ಮುಂದುವರಿಕೆ. ಕರ್ನಾಟಕಕ್ಕೆ ಇತಿಹಾಸದ ಉದ್ದಕ್ಕೂ ಇದೇ ದುಸ್ಥಿತಿ. ಗಾಯದ ಮೇಲೆ ಬರೆಗಳು. ನೀರಿಲ್ಲದಿದ್ದರೂ ನೀರು ಬಿಡಬೇಕೆಂಬ ಆದೇಶಗಳು. ಇದು ಕರ್ನಾಟಕ-ತಮಿಳುನಾಡು ನಡುವಿನ ಕಾವೇರಿ ಜಲವಿವಾದದಲ್ಲಿ ಕರ್ನಾಟಕದ ಪರಿಸ್ಥಿತಿ.

ಕಾವೇರಿ ನದಿ ನೀರಿನಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೆರಿ ರಾಜ್ಯಗಳಿಗೆ ಹಕ್ಕಿವೆ. ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆಯಾಗಿ ಮಂಡ್ಯದ ಕೃಷ್ಣರಾಜಸಾಗರ, ಮೈಸೂರಿನ ಕಪಿಲಾ, ಕೊಡಗಿನ ಹಾರಂಗಿ, ಹಾಸನದ ಹೇಮಾವತಿ ಜಲಾಶಯಗಳು ತುಂಬಿದರೆ ಯಾವುದೇ ಸಮಸ್ಯೆಯೇ ಇಲ್ಲ. ಮಳೆ ಕೊರತೆಯಾದಾಗ ನೀರಿನ ಹಂಚಿಕೆ ವಿವಾದ ಭುಗಿಲೇಳುತ್ತದೆ. ತಮಿಳುನಾಡು ನ್ಯಾಯಾಲಯದ ಕದ ತಟ್ಟುತ್ತದೆ. ಆದೇಶಗಳು ಹೊರಬೀಳುತ್ತವೆ.

ಕರ್ನಾಟಕದಲ್ಲಿ ಈಗ ಮತ್ತೆ ಅಂಥದ್ದೇ ಪರಿಸ್ಥಿತಿ. ಬಹುತೇಕ ತಾಲೂಕುಗಳಲ್ಲಿ ಬರ. ಕುಡಿಯಲು ನೀರಿನ ಅಭಾವ. ಬೆಳೆಗಳಿಗೆ ನೀರಿಲ್ಲ. ಆದರೆ, ಜಲಾಶಯಗಳಲ್ಲಿರುವ ನೀರನ್ನೇ ತಮಿಳುನಾಡಿಗೆ ಹರಿಸಬೇಕು. ಇಂತಹ ಆದೇಶಗಳ ವಿರುದ್ಧ ಹೋರಾಟ ನಡೆಯುತ್ತಲೇ ಇದೆ. ಈಗ ಮತ್ತೆ ಅಂಥದ್ದೇ ಆದೇಶ. ಕಾವೇರಿ ಕೊಳ್ಳದ ಪ್ರದೇಶದಲ್ಲಿ ಆಕ್ರೋಶ ಭುಗಿಲೆದ್ದಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸಿನ ಪ್ರಕಾರ ಕರ್ನಾಟಕ ಪ್ರತಿದಿನ ತಮಿಳುನಾಡಿಗೆ 3,500 ಕ್ಯುಸೆಕ್‌ ನೀರನ್ನು 15 ದಿನಗಳ ಕಾಲ ಹರಿಸಬೇಕು. ಬಿಳಿಗುಂಡ್ಲು ಮೂಲಕ ತಮಿಳುನಾಡಿಗೆ 4.6 ಟಿಎಂಸಿ ನೀರು ಹರಿಯಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಾಕೀತು ಮಾಡಿದೆ. ಈ ಆದೇಶ ಜುಲೈ 29 ರಿಂದಲೇ ಜಾರಿಗೆ ಬಂದಿದೆ. ಆದರೆ, ರಾಜ್ಯ ಸರಕಾರ ಪ್ರಾಧಿಕಾರದ ಆದೇಶವನ್ನು ಧಿಕ್ಕರಿಸಿದೆ. ಆಗಸ್ಟ್‌ 2 ರಂದು ಸರ್ವಪಕ್ಷಗಳ ಸಭೆ ಕರೆದಿದೆ. ಇಂತಹ ಸಭೆಗಳು ಅನೇಕ ಬಾರಿ ರಾಜಕೀಯ ಪಕ್ಷಗಳ ಮೇಲಾಟವೇ ಆಗಿರುತ್ತವೆ.

ಕಾವೇರಿ ಜಲ ವಿವಾದದ ವಿಚಾರದಲ್ಲಿ ರಾಜ್ಯದಲ್ಲಿ ರಾಜಕಾರಣ ನಡೆದಿದ್ದೇ ಹೆಚ್ಚು. ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳೂ ಸಂಕಷ್ಟ ಎದುರಾದಾಗ ಪ್ರಾರಂಭದಲ್ಲಿ ನೀರು ಬಿಡುವುದಿಲ್ಲ ಎಂದು ಹೇಳುತ್ತಲೇ ತಮಿಳುನಾಡಿಗೆ ನೀರು ಹರಿಸಿದ್ದಾರೆ. ರಾತ್ರೋರಾತ್ರಿ ನೀರು ಬಿಟ್ಟ ನಿದರ್ಶನಗಳೂ ಕಡಿಮೆಯಿಲ್ಲ. ನ್ಯಾಯಮಂಡಳಿ, ಪ್ರಾಧಿಕಾರ, ಸುಪ್ರೀಂಕೋರ್ಟ್‌ ಆದೇಶಗಳು ಇರುವಾಗ ನೀರು ಹರಿಸದೇ ಸರಕಾರಕ್ಕೂ ವಿಧಿ ಇಲ್ಲ. ಇಲ್ಲದಿದ್ದರೆ ಅಧಿಕಾರ ಬಿಟ್ಟು ಕೆಳಗಿಳಿಯಬೇಕಾಗುತ್ತದೆ. ನ್ಯಾಯಾಲಯದ ಆದೇಶಕ್ಕೆ ಪ್ರಾರಂಭದಲ್ಲಿ ಸಡ್ಡು ಹೊಡೆದವರೂ ನಂತರ ಕೈಚೆಲ್ಲಿದ್ದಾರೆ. ಇದು ಇತಿಹಾಸ.

ಕರ್ನಾಟಕದಲ್ಲಿ ಪ್ರಮುಖವಾಗಿ ಮುಂಗಾರು ಬೆಳೆಗಳು. ನೀರಿನ ಅಗತ್ಯ ಹೆಚ್ಚು. ಅದೇ ಸಮಯದಲ್ಲಿ ತಮಿಳುನಾಡಿನಲ್ಲಿ ಕುರುವೈ ಬೆಳೆ. ಈ ವೇಳೆ ತಮಿಳುನಾಡಿನಲ್ಲಿ ನೀರಿನ ಅವಶ್ಯಕತೆ ಕಡಿಮೆ. ತಮಿಳುನಾಡಿಗೆ ಬಿಡಬೇಕಿರುವ ನೀರನ್ನು ಮಾಸಿಕ ಕಂತುಗಳಲ್ಲಿ ನಿಖರವಾಗಿ ನಿಗದಿಗೊಳಿಸುವ ಬದಲು ಸನ್ನಿವೇಶಕ್ಕೆ ತಕ್ಕಂತೆ ಬದಲಾಯಿಸಲು ಅವಕಾಶ ಇರಬೇಕು. ಆದರೆ, ಇದಾಗಿಲ್ಲ. ಮಳೆಯಾಗದೇ ಕರ್ನಾಟಕದ ಜಲಾಶಯಗಳಲ್ಲಿ ನೀರು ಕಡಿಮೆಯಾದರೆ ನದಿ ನೀರಿನ ಹಂಚಿಕೆಯನ್ನು ಹೇಗೆ ಮಾಡಬೇಕೆಂಬ ಬಗ್ಗೆ ಸಂಕಷ್ಟ ಸೂತ್ರವೇ ಇಲ್ಲ. ತಮಿಳುನಾಡು ಕರ್ನಾಟಕಕ್ಕೆ ವಿದ್ಯುತ್‌ ಕೊಟ್ಟು ನೀರನ್ನು ಬಿಡಿಸಿಕೊಳ್ಳುತ್ತಿದ್ದ ಒಂದು ಕಾಲವೂ ಇತ್ತು.

ಕೊಡಗಿನ ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ಜೀವನದಿ. ಕರ್ನಾಟಕದಲ್ಲಿ 381 ಕಿ.ಮೀ ಹರಿಯುತ್ತದೆ. ತಮಿಳುನಾಡಿನಲ್ಲಿ 416 ಕಿ.ಮೀ ದೂರ ಕ್ರಮಿಸುತ್ತದೆ. ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ 64 ಕಿ.ಮೀ ದೂರ ಗಡಿಯಾಗುತ್ತದೆ. ಕೊನೆಗೆ ಪೂಂಪುಹಾರ್‌ನಲ್ಲಿ ಬಂಗಾಳಕೊಲ್ಲಿ ಸೇರುತ್ತದೆ. ಕರ್ನಾಟಕದಲ್ಲಿ ಪಶ್ಚಿಮಘಟ್ಟಗಳಲ್ಲಿ ಸುರಿಯುವ ಮಳೆ, ತಮಿಳುನಾಡಿನಲ್ಲಿ ಹಿಂಗಾರಿನ ಚಂಡಮಾರುತಗಳು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿದಾಗ ಆಗುವ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿಯುತ್ತದೆ.

ಕಾವೇರಿ ನದಿ ನೀರಿನ ಉಪಯೋಗದ ತಗಾದೆಗೆ 200 ವರ್ಷಗಳಿಗೂ ಅಧಿಕ ಇತಿಹಾಸವಿದೆ. ಹಿಂದಿನ ಮದ್ರಾಸ್‌ ಸರಕಾರ 1804ರಲ್ಲೇ ಕಾವೇರಿ ನದಿ ನೀರಿನ ಬಳಕೆ ಕುರಿತು ಕ್ಯಾತೆ ತೆಗೆಯಿತು. ಬ್ರಿಟಿಷರಿಂದ ಮೈಸೂರು ಸಂಸ್ಥಾನಕ್ಕೆ ಅನ್ಯಾಯವಾಗುತ್ತಲೇ ಬಂತು.

ಊಟಿಯಲ್ಲಿ 1890ರಲ್ಲೇ ಮೈಸೂರು ಸಂಸ್ಥಾನ ಹಾಗೂ ಮದ್ರಾಸ್‌ ರಾಜ್ಯಗಳ ಅಧಿಕಾರಿಗಳ ಮಧ್ಯೆ ಕಾವೇರಿ ನದಿ ನೀರಿನ ಹಂಚಿಕೆ ಬಗ್ಗೆ ಮಾತುಕತೆ ನಡೆದಿತ್ತು. ನಂತರ 1892ರಲ್ಲಿ ಆದ ಒಪ್ಪಂದದಲ್ಲಿ ಮೈಸೂರು ಸಂಸ್ಥಾನ ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ನೀರಾವರಿ ಯೋಜನೆಗಳನ್ನು ಪ್ರಾರಂಭಿಸುವ ಮುನ್ನ ಮದ್ರಾಸ್‌ ಸರಕಾರದ ಅನುಮತಿ ಪಡೆಯಬೇಕಾಯಿತು.

ನಂತರ 1924ರಲ್ಲಿ ಮತ್ತೊಂದು ಒಪ್ಪಂದವಾಯಿತು. ಇದು 50 ವರ್ಷಗಳ ಸುದೀರ್ಘ ಅವಧಿಯ ಒಪ್ಪಂದ. ಈ ಒಪ್ಪಂದದಲ್ಲಿ ಕಾವೇರಿ ನದಿ ನೀರಿನ ಬಳಕೆಯಲ್ಲಿ ಮೈಸೂರು ಸರಕಾರಕ್ಕೆ ಮಾತ್ರ ನಿರ್ಬಂಧಗಳನ್ನು ವಿಧಿಸಲಾಯಿತು. ಮದ್ರಾಸ್‌ ಸರಕಾರಕ್ಕೆ ಯಾವುದೇ ನಿರ್ಬಂಧ ಇರಲಿಲ್ಲ.

ಈ 1924ರ ಒಪ್ಪಂದದಲ್ಲಿ ಕೃಷ್ಣರಾಜ ಸಾಗರ ಜಲಾಶಯಕ್ಕೆ ಹರಿದ ಬರುವ ನೀರಿನ ಪ್ರಮಾಣವನ್ನು ಪ್ರತಿ ದಿನವೂ ಎರಡು ಬಾರಿ ಲೆಕ್ಕ ಹಾಕಬೇಕಿತ್ತು. ಮದ್ರಾಸ್‌ ಪ್ರಾಂತ್ಯದ ನೀರಾವರಿಯ ಬಳಕೆಗಾಗಿ ತಂಜಾವೂರು ಕಾವೇರಿ ಜಲಾಶಯದ ಮೇಲೆ ಪ್ರತಿತಿಂಗಳು ಇಂತಿಷ್ಟು ಅಡಿ ಎತ್ತರ ನೀರು ಹರಿಯಬೇಕೆಂದು ನಿರ್ಧರಿಸಲಾಯಿತು. ಮುಂಗಾರಿನಲ್ಲಿ ಈ ಮಟ್ಟ ಹೆಚ್ಚಿಸಿ ಹಿಂಗಾರಿನಿಲ್ಲಿ ಇಳಿಸಲಾಯಿತು. ಇದರಿಂದ ಮುಂಗಾರಿನಲ್ಲಿ ಕಾವೇರಿ ನೀರಿನ ಸಿಂಹಪಾಲು ಮದ್ರಾಸಿಗೆ ದೊರೆಯಿತು. ಮದ್ರಾಸ್‌ನಲ್ಲಿ ದೊಡ್ಡ ಜಲಾಶಯವಿಲ್ಲ ಎಂದು ಆಗ ಕಾರಣ ಕೊಡಲಾಗಿತ್ತು. ಮೆಟ್ಟೂರು ಜಲಾಶಯಕ್ಕೆ ಮುಂದೆ ಮೈಸೂರು ಸರಕಾರ ಒಪ್ಪಿಗೆ ಕೊಟ್ಟರೂ ಈ ಸಂಗ್ರಹಣಾ ಸೂತ್ರ ಬದಲಾಗಲಿಲ್ಲ. ಈಗ ಇನ್ನೂ ಹೆಚ್ಚಿನ ಜಲಾಶಯಗಳು ತಮಿಳುನಾಡಿನಲ್ಲಿವೆ.

1924ರ ಒಪ್ಪಂದದ ಪ್ರಕಾರ ಕರ್ನಾಟಕದ ಕೆಆರ್‌ಎಸ್‌ ಅಣೆಕಟ್ಟೆಯ ಸಾಮರ್ಥ್ಯ 43.56 ಟಿಎಂಸಿ ಅಡಿ. ತಮಿಳುನಾಡಿನ ಮೆಟ್ಟೂರಿನ ಜಲಾಶಯದ ಸಾಮರ್ಥ್ಯ 93.5 ಟಿಎಂಸಿ ಅಡಿ. ಕೆ.ಆರ್‌.ಎಸ್‌ ಜಲಾಶಯದಿಂದ 1,25,000 ಎಕರೆ ನೀರಾವರಿ ಸೌಲಭ್ಯ. ಮೆಟ್ಟೂರು ಜಲಾಶಯದಿಂದ 3,01,000 ಎಕರೆ ಮೊದಲ ಬೆಳೆ ಮತ್ತು 20 ಸಾವಿರ ಎಕರೆ ಎರಡನೆಯ ಬೆಳೆಗೆ ನೀರಾವರಿ ಸೌಲಭ್ಯ. ಡೆಲ್ಟಾ ಪ್ರದೇಶದಲ್ಲಿ 70 ಸಾವಿರ ಎಕರೆ ಎರಡನೆ ಬೆಳೆ ವಿಸ್ತರಣೆಗೆ ನೀರು. ಈ ಒಪ್ಪಂದದಂತೆ ಕಾವೇರಿ ನದಿ ನೀರಿನ ಬಳಕೆಯಲ್ಲಿ ಮೈಸೂರು ಸಂಸ್ಥಾನಕ್ಕೆ ಮಾತ್ರ ನಿರ್ಬಂಧಗಳಿತ್ತು.

ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನೀರಾವರಿ ಯೋಜನೆಗಳು ವಿಳಂಬವಾಗಲು ಮೈಸೂರು ಸಂಸ್ಥಾನ ಹಾಗೂ ಬ್ರಿಟಿಷ್‌ ಪ್ರೆಸಿಡೆನ್ಸಿ ಆಡಳಿತಕ್ಕೆ ಒಳಪಟ್ಟ ಮದ್ರಾಸ್‌ ಸರಕಾರದ ನಡುವೆ ಏರ್ಪಟ್ಟ 1892 ಹಾಗೂ 1924ರ ಒಪ್ಪಂದಗಳೇ ಕಾರಣ. ಮೈಸೂರು ಸಂಸ್ಥಾನದ ಮೇಲೆ ಬ್ರಿಟಿಷ್‌ ಆಡಳಿತ ಈ ಒಪ್ಪಂದಗಳನ್ನು ಹೇರಿತು.

ಕರ್ನಾಟಕ 1970ರಲ್ಲಿ ಮೊದಲ ಬಾರಿಗೆ ಈ ಒಪ್ಪಂದದ ಮುಂದುವರಿಕೆಯನ್ನು ಪ್ರಶ್ನಿಸಿತು. ಈ ಒಪ್ಪಂದ ಈಗ ಇಲ್ಲದಿದ್ದರೂ ಇದರ ಕರಾಳ ಸೂತ್ರಗಳ ಮುಂದುವರಿಕೆ ಬೇರೆ ರೂಪದಲ್ಲಿವೆ ಎಂಬುದನ್ನು ನೀರಾವರಿ ತಜ್ಞರು ಗುರುತಿಸುತ್ತಾರೆ.

ತಮಿಳುನಾಡು ಸರಕಾರ ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ತಂಜಾವೂರಿನ ರೈತರ ಮೂಲಕ ಸುಪ್ರೀಂಕೋರ್ಟ್‌ಗೆ 1983ರಲ್ಲಿ ರಿಟ್‌ ಅರ್ಜಿ ಹಾಕಿಸಿತು. ಇದು ಅಂತಿಮ ಘಟ್ಟವನ್ನು 1990ರಲ್ಲಿ ತಲುಪಿತು. ಉಭಯ ರಾಜ್ಯಗಳು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳದಿದ್ದರೆ ನ್ಯಾಯಮಂಡಳಿಗೆ ಒಪ್ಪಿಸುತ್ತೇವೆ ಎಂದು ಸುಪ್ರೀಂಕೋರ್ಟ್‌ ಹೇಳಿತು. ತಮಿಳುನಾಡು ಸರಕಾರ ಮಾತುಕತೆ ಮುಂದುವರಿಸಲು ನಿರಾಕರಿಸಿತು. ನ್ಯಾಯಮಂಡಳಿ ರಚಿಸಲು ಕೇಂದ್ರ ಸರಕಾರವನ್ನು ಕೋರಿತು. ಕರ್ನಾಟಕ ಮಾತುಕತೆಗೆ ಸಿದ್ದವೆಂದು ಸತತವಾಗಿ ಹೇಳುತ್ತಲೇ ಬಂದಿತು.

ಆಗ ಕೇಂದ್ರದಲ್ಲಿ ಪ್ರಧಾನಿ ವಿ.ಪಿ.ಸಿಂಗ್‌ ನೇತೃತ್ವದಲ್ಲಿ ರಾಷ್ಟ್ರೀಯರಂಗ ಸರಕಾರವಿತ್ತು. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿತ್ತು. ವಿ.ಪಿ.ಸಿಂಗ್ ಅವರ ಜನತಾದಳದ ಮಿತ್ರಪಕ್ಷವಾಗಿತ್ತು. ಕರ್ನಾಟಕದಿಂದ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಗಳು ನಡೆಯುತ್ತಲೇ ಇತ್ತು. ಕೇಂದ್ರ ಸರಕಾರವು 1990ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿ ವಿವಾದ ಇತ್ಯರ್ಥಕ್ಕೆ ತಾನು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತಿಳಿಸಿ ಸೂಕ್ತ ಆದೇಶಕ್ಕೆ ಮನವಿ ಮಾಡಿತು. ಸುಪ್ರೀಂಕೋರ್ಟ್‌ ನ್ಯಾಯಾಧಿಕರಣ ರಚನೆಗೆ ಆದೇಶ ಹೊರಡಿಸಿತು. ಕೇಂದ್ರ ಸರಕಾರ 2 ಜೂನ್‌ 1990ರಂದು ನ್ಯಾಯಾಧಿಕರಣ ರಚಿಸಿ ಆದೇಶ ಹೊರಡಿಸಿತು. ಅಲ್ಲಿಂದ ಕಾವೇರಿ ಜಲವಿವಾದದ ಹೊಸ ಅಧ್ಯಾಯ ಆರಂಭವಾಯಿತು.

ಬಾಂಬೆ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಚಿತ್ತತೋಷ್‌ ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿ ನ್ಯಾಯಾಧಿಕರಣ ರಚನೆಯಾಯಿತು. ನ್ಯಾಯಾಧಿಕರಣ 25 ಜೂನ್‌ 1991ರಲ್ಲಿ ಮಧ್ಯಂತರ ಆದೇಶ ನೀಡಿ ಪ್ರತಿವರ್ಷ ಜೂನ್‌ ನಿಂದ ಮುಂದಿನ ವರ್ಷದ ಮೇ ವರೆಗೆ ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ 205 ಟಿಎಂಸಿ ನೀರು ಲಭ್ಯವಿರುವಂತೆ ನೀರು ಹರಿಸಬೇಕು ಎಂದು ಕರ್ನಾಟಕಕ್ಕೆ ಸೂಚಿಸಿತು. ಕಾವೇರಿ ನದಿ ನೀರಿನಿಂದ ಕರ್ನಾಟಕದಲ್ಲಿ ವಾರ್ಷಿಕ ನೀರಾವರಿಯಾಗುವ ಪ್ರದೇಶ 11.2 ಲಕ್ಷ ಎಕರೆ ಪ್ರದೇಶ ಮೀರದಂತೆ ನಿರ್ಬಂಧ ವಿಧಿಸಿತು. ದೇಶದಲ್ಲಿ ಯಾವುದೇ ಜಲ ನ್ಯಾಯಮಂಡಳಿ ಅಲ್ಲಿಯವರೆಗೂ ಮಧ್ಯಂತರ ಆದೇಶವನ್ನು ನೀಡಿದ ಉದಾಹರಣೆಯೇ ಇರಲಿಲ್ಲ.

ರಾಜ್ಯದಲ್ಲಿ ಆಗ ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿ. ತಮಿಳುನಾಡಿಗೆ ನೀರು ಬಿಡಬೇಕೆಂಬ ನ್ಯಾಯಮಂಡಳಿ ಮಧ್ಯಂತರ ಆದೇಶ ಧಿಕ್ಕರಿಸಿ ಕಾವೇರಿ ನೀರಾವರಿ ಯೋಜನೆಗಳ ರಕ್ಷಣಾ ಸುಗ್ರೀವಾಜ್ಞೆ ಹೊರಡಿಸಿದರು. ಸಂವಿಧಾನ ಬಿಕ್ಕಟ್ಟು ಸೃಷ್ಟಿಯಾಯಿತು. ರಾಷ್ಟ್ರಪತಿಗಳು ಮಧ್ಯೆಪ್ರವೇಶಿಸಿದರು. ಈ ಸುಗ್ರೀವಾಜ್ಞೆಯ ಸಂವಿಧಾನಬದ್ಧತೆ, ನ್ಯಾಯಾಧಿಕರಣಕ್ಕೆ ಮಧ್ಯಂತರ ತೀರ್ಪು ನೀಡುವ ಹಕ್ಕುಕುರಿತಂತೆ ಪರಿಶೀಲಿಸಿ ಅಭಿಪ್ರಾಯ ನೀಡುವಂತೆ ಸುಪ್ರೀಂಕೋರ್ಟ್‌ ಅನ್ನು ಕೋರಿದರು. ಸುಪ್ರೀಂಕೋರ್ಟಿನ ವಿಶೇಷ ಸಂವಿಧಾನ ಪೀಠವು ವಿಚಾರಣೆ ನಡೆಸಿ ಕರ್ನಾಟಕ ಸರಕಾರದ ಸುಗ್ರೀವಾಜ್ಞೆಯನ್ನು ಅನೂರ್ಜಿತಗೊಳಿಸಿತು. ನ್ಯಾಯಾಧಿಕರಣಕ್ಕೆ ಮಧ್ಯಂತರ ಆದೇಶ ನೀಡುವ ಹಕ್ಕಿದೆ ಎಂದಿತು. ಕೇಂದ್ರ ಸರಕಾರ ಈ ಮಧ್ಯಂತರ ಆದೇಶವನ್ನು ಗೆಜೆಟ್‌ನಲ್ಲಿ ಪ್ರಕಟಿಸಿತು. ಕರ್ನಾಟಕದಲ್ಲಿ ಗಲಭೆ ಸೃಷ್ಟಿಯಾಯಿತು.

ನ್ಯಾಯಾಧಿಕರಣದ ಮಧ್ಯಂತರ ಆದೇಶದ ಜಾರಿಗಾಗಿ ಯೋಜನೆ ರೂಪಿಸಲು ಕೇಂದ್ರ ಸರಕಾರ ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರಾಗಿರುವ ಕಾವೇರಿ ಪ್ರಾಧಿಕಾರವನ್ನು 1998ರಲ್ಲಿ ರಚಿಸಿತು. ಈ ಪ್ರಾಧಿಕಾರಕ್ಕೆ ತಾಂತ್ರಿಕ ನೆರವು ನೀಡಲು ಉಸ್ತುವಾರಿ ಸಮಿತಿ ಅಸ್ತಿತ್ವಕ್ಕೆ ಬಂತು.

ಆಗ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ. ರಾಜ್ಯದಲ್ಲಿ ಬರಗಾಲ. ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶ. ಕೃಷ್ಣ ಈ ಆದೇಶವನ್ನು ಧಿಕ್ಕರಿಸಿ ಬೆಂಗಳೂರಿನಿಂದ ಮಂಡ್ಯಕ್ಕೆ ಪಾದಯಾತ್ರೆ ಹೊರಟರು. ನ್ಯಾಯಾಂಗ ನಿಂದನೆಯ ಎಚ್ಚರಿಕೆ ಬಂತು. ಕೃಷ್ಣ ಪಾದಯಾತ್ರೆ ಮೊಟಕುಗೊಳಿಸಿ ತಮಿಳುನಾಡಿಗೆ ನೀರು ಹರಿಸಿದರು.

ಕಾವೇರಿ ನ್ಯಾಯಾಧಿಕರಣದ ಅಂತಿಮ ವರದಿ 5 ಫೆಬ್ರುವರಿ 2007 ರಂದು ಹೊರಬಿತ್ತು. ಅದರಂತೆ, ತಮಿಳುನಾಡಿಗೆ 419 ಟಿಎಂಸಿ ಅಡಿ, ಕರ್ನಾಟಕಕ್ಕೆ 270 ಟಿಎಂಸಿ ಅಡಿ ನೀರು ಹಂಚಲಾಯಿತು. ಈ ಆದೇಶವನ್ನು ಸುಪ್ರೀಂಕೋರ್ಟ್‌ 2018ರಲ್ಲಿ ಮಾರ್ಪಾಡು ಮಾಡಿತು. ಅದರಂತೆ ತಮಿಳುನಾಡಿಗೆ 177.25 ಟಿಎಂಸಿ, ಕರ್ನಾಟಕಕ್ಕೆ 284.75 ಟಿಎಂಸಿ, ಕೇರಳ 30 ಟಿಎಂಸಿ, ಪುದುಚೆರಿಗೆ 7 ಟಿಎಂಸಿ ಅಡಿ ನೀರು ಹಂಚಲಾಯಿತು. ಈ ಆದೇಶದಂತೆ ಕರ್ನಾಟಕವು ಪ್ರತಿವರ್ಷ ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ಹರಿಸಬೇಕು. ಕಳೆದ ಹತ್ತು ವರ್ಷಗಳಲ್ಲಿ ಇದು 1,772.50 ಟಿಎಂಸಿ ನೀರು ಆಗಲಿದೆ. ಇದೇ ಪ್ರಮಾಣದಲ್ಲಿ ನೋಡುವುದಾದರೆ ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕವು ತಮಿಳುನಾಡಿಗೆ 2,746 ಟಿಎಂಸಿ ನೀರನ್ನು ಹರಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕವು ಸುಪ್ರೀಂಕೋರ್ಟ್‌ ಆದೇಶಿಸಿದ್ದಕ್ಕಿಂತಲೂ 970 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಅಧಿಕವಾಗಿಯೇ ಹರಿಸಿದೆ.

ಕಾವೇರಿ ಕರ್ನಾಟಕದ ಜೀವನದಿ. ಕಾವೇರಿ ಜಲವಿವಾದ ಎಂದಾಕ್ಷಣ ಅಲ್ಲಿ ಭಾವನೆಗಳಿವೆ, ಭಾವೋದ್ರೇಕವಿದೆ. ಕನ್ನಡಿಗರ ಕಣ್ಣೀರಿನ ಕಥೆ ಇದೆ. ಆಕ್ರೋಶವಿದೆ, ಹೋರಾಟವಿದೆ, ಕಾನೂನಿನ ಸಮರವಿದೆ. ಮಾತುಕತೆಗಳಿವೆ. ರಾಜಕೀಯ ಆಯಾಮವಿದೆ. ಅನ್ಯಾಯದ ಐತಿಹಾಸಿಕ ಹಿನ್ನೆಲೆಯಂತೂ ಇದ್ದೇ ಇದೆ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಿತ್ತಾಟದ ನಡುವೆ ರಾಜ್ಯಕ್ಕೆ ಹವಾಮಾನ ಇಲಾಖೆ ಸಿಹಿ ಸುದ್ದಿ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಸಾಧ್ಯತೆ!

'ಕರ್ನಾಟಕಕ್ಕೆ ನೀರು ನೀಡಲು ನಮ್ಮ ವಿರೋಧವಿಲ್ಲ.. ಆದ್ರೆ ಮೇಕೆದಾಟು ಬೇಡ": ಕಾವೇರಿ ವಿವಾದ ಕುರಿತು AIADMK ಸಂಸದ ಎಂ. ತಂಬಿದುರೈ

'ನಾನು ಯಂಗ್ ಹೃತಿಕ್ ರೋಷನ್ ತರಹ ಕಾಣುತ್ತೇನೆ ಅಂತ...': ಕಂಗನಾಗೆ CJP ವಕ್ತಾರ ಸೌರವ್ ದಾಸ್ ತಪರಾಕಿ!

ಕಾವೇರಿ ಕಿಚ್ಚಿನ ಮಧ್ಯೆ ಮಂಡ್ಯದಲ್ಲಿ ಘೋರ ದುರಂತ: ರೈತ ದಂಪತಿ ನೇಣಿಗೆ ಶರಣು; ಸರ್ಕಾರ ಸಮಸ್ಯೆ ಪರಿಹರಿಸಬೇಕು - ಬಿಜೆಪಿ ಆಗ್ರಹ

30 ದಿನ ಜೈಲು ಶಿಕ್ಷೆ ಆದ್ರೆ ಸಿಎಂ, ಪ್ರಧಾನಿ ಹುದ್ದೆ ಕಳೆದುಕೊಳ್ಳಬೇಕೇ?; ಮಹತ್ವದ ಮಸೂದೆ ಪರಿಶೀಲನೆಗೆ ಸಂಸತ್ ಸಮಿತಿಗೆ ಮತ್ತಷ್ಟು ಕಾಲಾವಕಾಶ