ಎಲಾನ್ ಮಸ್ಕ್ ಇಂದು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಆದರೆ ಸ್ಪೇಸ್‌ಎಕ್ಸ್‌ನ ಯಶೋಗಾಥೆಯನ್ನು ಕೇವಲ ಅವರ ವೈಯಕ್ತಿಕ ಸಂಪತ್ತಿನ ಕಥೆಯಾಗಿ ನೋಡಿದರೂ ಕೂಡ ಅದು ಮಹತ್ತರವಾದದ್ದು, ಆದರೆ ಅವರೊಬ್ಬರೇ ಶ್ರೀಮಂತರಾಗದೆ ಕಳೆದ ಎರಡು ದಶಕಗಳಲ್ಲಿ ಸ್ಪೇಸ್‌ಎಕ್ಸ್‌ನಲ್ಲಿ ಕೆಲಸ ಮಾಡಿದ ಸಾವಿರಾರು ಸಾಮಾನ್ಯ ಉದ್ಯೋಗಿಗಳಲ್ಲಿ ಬಹಳಷ್ಟು ಜನ ಮಿಲಿಯನೇರ್‌ಗಳಾಗಿದ್ದಾರೆ.
ಇವರಲ್ಲಿ ಏರೋಸ್ಪೇಸ್ ಇಂಜಿನಿಯರ್‌ಗಳು ಮಾತ್ರವಲ್ಲದೆ ವೆಲ್ಡರ್‌ಗಳು, ಮೆಕ್ಯಾನಿಕ್‌ಗಳು, ಮಶಿನಿಸ್ಟ್‌ಗಳು, ಎಲೆಕ್ಟ್ರಿಷಿಯನ್‌ಗಳು, ತಾಂತ್ರಿಕ ಸಹಾಯಕರು ಮತ್ತು ಉತ್ಪಾದನಾ ಘಟಕದ ಕಾರ್ಮಿಕರೂ ಸೇರಿದ್ದಾರೆ. ಆರ್ಥಿಕ ದೃಷ್ಟಿಯಿಂದ ನೋಡಿದರೆ, ಇದು ಸಂಬಳದ ಮೂಲಕ ಬಂದ ಸಂಪತ್ತಿನ ಕಥೆಯಲ್ಲ. ಇದು ಮಾಲೀಕತ್ವದ ಮೂಲಕ ಸೃಷ್ಟಿಯಾದ ಸಂಪತ್ತಿನ ಕಥೆಯಾಗಿದೆ. ಒಬ್ಬ ವ್ಯಕ್ತಿಯ ಕನಸು ಹೇಗೆ ತನ್ನ ಸುತ್ತಮುತ್ತಲಿನ ಏಕೋ ಸಿಸ್ಟಮ್ ಬದಲಿಸಬಲ್ಲದು ಎನ್ನುವುದಕ್ಕೆ ಈ ಕಥೆ ಬಹಳ ದೊಡ್ಡ ಉದಾಹರಣೆಯಾಗಿದೆ. ಜಾಗತಿಕ ಮಟ್ಟದಲ್ಲಿ ಈತನ ಸಾಧನೆ, ಮತ್ತು ಇದರಿಂದ ಜಗತ್ತಿನ ಜನರ ಜೀವನದಲ್ಲಿ ಆಗಬಹುದಾದ ಬದಲಾವಣೆಗಳನ್ನು ನಾವೆಲ್ಲರೂ ಬಲ್ಲೆವು. ಆದರೆ ಗೊತ್ತಿಲ್ಲದ ಕಥೆಗಳು ಬಹಳಷ್ಟಿರುತ್ತದೆ. ಅವುಗಳಲ್ಲಿ ಒಂದು ಇವತ್ತು ನಿಮ್ಮ ಮುಂದಿದೆ.
ಸ್ಪೇಸ್‌ಎಕ್ಸ್ ಅನ್ನು 2002ರಲ್ಲಿ ಎಲಾನ್ ಮಸ್ಕ್ ಸ್ಥಾಪಿಸುತ್ತಾರೆ. ಆರಂಭದಲ್ಲಿ ಕಂಪನಿಯ ಮೌಲ್ಯ ಕೆಲವೇ ದಶಲಕ್ಷ ಡಾಲರ್‌ಗಳಷ್ಟಿತ್ತು. ಮೊದಲ ನಾಲ್ಕು ಫಾಲ್ಕನ್-1 ಉಡಾವಣೆಗಳಲ್ಲಿ ಮೂರು ವಿಫಲವಾದವು. 2008 ರಲ್ಲಿ ಕಂಪನಿ ಬಹುತೇಕ ದಿವಾಳಿತನದ ಅಂಚಿನಲ್ಲಿತ್ತು. ಆ ಸಮಯದಲ್ಲಿ ಅನೇಕ ಉದ್ಯೋಗಿಗಳು ಹೆಚ್ಚಿನ ಸಂಬಳಕ್ಕಾಗಿ ಬೇರೆ ಕಂಪನಿಗಳಿಗೆ ಹೋಗಬಹುದಾಗಿತ್ತು. ಆದರೆ ಹಲವರು ಕಂಪನಿಯ ದೃಷ್ಟಿಕೋನವನ್ನು ನಂಬಿ ಅಲ್ಲೇ ಉಳಿದರು. ಆ ಸಮಯದಲ್ಲಿ ಸ್ಪೇಸ್‌ಎಕ್ಸ್ ತನ್ನ ಉದ್ಯೋಗಿಗಳಿಗೆ ಕೇವಲ ಸಂಬಳವಷ್ಟೇ ಅಲ್ಲದೆ ಸ್ಟಾಕ್ ಆಪ್ಷನ್‌ಗಳು ಮತ್ತು ಇಕ್ವಿಟಿ ಪಾಲುದಾರಿಕೆಯನ್ನು ನೀಡುತ್ತಿತ್ತು. ಆಗ ಅವುಗಳಿಗೆ ಹೆಚ್ಚಿನ ಮೌಲ್ಯ ಇರಲಿಲ್ಲ. ಆದರೆ ನಂತರ ಅದೇ ನಿರ್ಧಾರ ಸಾವಿರಾರು ಜನರ ಜೀವನವನ್ನು ಬದಲಾಯಿಸಿಬಿಟ್ಟಿತು. ಕನಸುಗಾರನ ನಂಬಿದ್ದು ಅವರ ಪಾಲಿಗೆ ವರದಾನವಾಲಾಯ್ತು.
ಸ್ಟಾಕ್ ಆಪ್ಷನ್ ಎಂದರೆ ಉದ್ಯೋಗಿಗೆ ಭವಿಷ್ಯದಲ್ಲಿ ನಿಗದಿತ ಬೆಲೆಗೆ ಕಂಪನಿಯ ಷೇರುಗಳನ್ನು ಖರೀದಿಸುವ ಹಕ್ಕು. ಉದಾಹರಣೆಗೆ, 2010 ರಲ್ಲಿ ಒಬ್ಬ ಮೆಕ್ಯಾನಿಕ್‌ಗೆ ಪ್ರತಿ ಷೇರಿಗೆ ಎರಡು ಡಾಲರ್ ದರದಲ್ಲಿ 10 ಸಾವಿರ ಷೇರುಗಳನ್ನು ಖರೀದಿಸುವ ಅವಕಾಶ ನೀಡಲಾಗಿದೆ ಎಂದು ಊಹಿಸೋಣ. ಇದಕ್ಕಾಗಿ ಅವರು ಒಟ್ಟು 20 ಸಾವಿರ ಡಾಲರ್ ಹೂಡಿಕೆ ಮಾಡಬೇಕಾಗುತ್ತದೆ. ಆ ಸಮಯದಲ್ಲಿ ಕಂಪನಿಯ ಮೌಲ್ಯ ಸೀಮಿತವಾಗಿದ್ದರಿಂದ ಈ ಹೂಡಿಕೆಗೆ ಹೆಚ್ಚಿನ ಮಹತ್ವ ಕಾಣಿಸದಿರಬಹುದು. ಆದರೆ ಇವತ್ತಿಗೆ ಒಂದು ಷೇರಿನ ಬೆಲೆ 191 ಡಾಲರಿಗಿಂತ ಹೆಚ್ಚಾಗಿದೆ. ಹೀಗಾಗಿ ಇವತ್ತಿನ ಲೆಕ್ಕಾಚಾರದಲ್ಲಿ ಹತ್ತು ಸಾವಿರ ಷೇರುಗಳ ಮೌಲ್ಯ ಸುಮಾರು 1.9 ಮಿಲಿಯನ್ ಆಗುತ್ತದೆ. ಅಂದರೆ ಆರಂಭದಲ್ಲಿ ಇದ್ದ 20 ಸಾವಿರ ಮೌಲ್ಯದ ಆಸ್ತಿ ನಂತರ ಸರಿಸುಮಾರು ಎರದ್ದು ಮಿಲಿಯನ್ ಆಗಿ ಬೆಳೆದಿದೆ. ಇದನ್ನು ಭಾರತೀಯ ರೂಪಾಯಿಗಳಲ್ಲಿ ಲೆಕ್ಕ ಹಾಕಿದರೆ ಇನ್ನೂ ಸ್ಪಷ್ಟವಾಗುತ್ತದೆ. ಒಂದು ಡಾಲರ್‌ಗೆ 95 ರೂಪಾಯಿ ವಿನಿಮಯ ದರ ಎಂದು ಪರಿಗಣಿಸಿದರೆ, 1.9 ಮಿಲಿಯನ್, 18 ಕೋಟಿಗೂ ಚೂರು ಹೆಚ್ಚಾಗುತ್ತದೆ.
ಸ್ಪೇಸ್‌ಎಕ್ಸ್‌ನ ಯಶಸ್ಸಿಗೆ ಕಾರಣವಾದ ಪ್ರಮುಖ ಆರ್ಥಿಕ ಅಂಶವೆಂದರೆ ಕಂಪನಿಯ ಮೌಲ್ಯದಲ್ಲಿ ಸಂಭವಿಸಿದ ಅಸಾಧಾರಣ ಏರಿಕೆ. 2008 ರಲ್ಲಿ ಕಂಪನಿಯ ಮೌಲ್ಯ ಸುಮಾರು 1 ಬಿಲಿಯನ್‌ಗಿಂತ ಕಡಿಮೆಯಿತ್ತು. 2012 ರಲ್ಲಿ ಅದು ಸುಮಾರು 4.8 ಬಿಲಿಯನ್ ಆಗಿತ್ತು. 2015 ರಲ್ಲಿ ಸುಮಾರು 12 ಬಿಲಿಯನ್, 2020 ರಲ್ಲಿ ಸುಮಾರು 46 ಬಿಲಿಯನ್, 2021 ರಲ್ಲಿ ಸುಮಾರು 100 ಬಿಲಿಯನ್, 2023 ರಲ್ಲಿ ಸುಮಾರು 180 ಬಿಲಿಯನ್ ಮತ್ತು ಈ ವರ್ಷ ಐಪಿಒ ನಂತರ 2.65 ಟ್ರಿಲಿಯನ್ ಆಗಿದೆ. ಈ ವರ್ಷದ ಅಂತ್ಯದ ವೇಳೆಗೆ ಸುಮಾರು 4 ಟ್ರಿಲಿಯನ್ ಡಾಲರಿಗೂ ಹೆಚ್ಚು ಮೌಲ್ಯ ತಲುಪಲಿದೆ ಎಂದು ಹೂಡಿಕೆದಾರರು ಅಂದಾಜು ಮಾಡುತ್ತಿದ್ದಾರೆ. ಅಂದರೆ ಒಂದು ದಶಕದಲ್ಲಿ ಕಂಪನಿಯ ಮೌಲ್ಯ ನೂರಾರು ಪಟ್ಟು ಹೆಚ್ಚಾಗಿದೆ. ಈ ಬೆಳವಣಿಗೆಯ ಲಾಭವನ್ನು ಕೇವಲ ಸಂಸ್ಥಾಪಕರು ಮಾತ್ರವಲ್ಲ, ಷೇರುಗಳನ್ನು ಹೊಂದಿದ್ದ ಉದ್ಯೋಗಿಗಳೂ ಕೂಡ ಪಡೆದು ಕೊಂಡರು.
ಆರ್ಥಿಕವಾಗಿ ನೋಡಿದರೆ, ಈ ಸಂಪತ್ತು “ವೇತನ ಆಧಾರಿತ ಆದಾಯ”ದಿಂದ ಬಂದಿಲ್ಲ. ಒಬ್ಬ ವೆಲ್ಡರ್ ವರ್ಷಕ್ಕೆ 80 ಸಾವಿರ ಡಾಲರ್ ಸಂಬಳ ಪಡೆದಿದ್ದಾನೆ ಎಂದು ಊಹಿಸೋಣ. 15 ವರ್ಷಗಳ ಕಾಲ ಕೆಲಸ ಮಾಡಿದರೆ ಒಟ್ಟು 1.2 ಮಿಲಿಯನ್ ಸಂಬಳ ಸಿಗಬಹುದು. ತೆರಿಗೆ, ಜೀವನ ವೆಚ್ಚ ಮತ್ತು ಇತರ ಖರ್ಚುಗಳನ್ನು ತೆಗೆದರೆ ಉಳಿಯುವ ಉಳಿತಾಯ ಅದರ ಒಂದು ಭಾಗ ಮಾತ್ರ. ಆದರೆ ಅದೇ ಉದ್ಯೋಗಿಯು ಕಂಪನಿಯ ಬೆಳವಣಿಗೆಯಿಂದ 3 ಮಿಲಿಯನ್ ಮೌಲ್ಯದ ಷೇರುಗಳನ್ನು ಹೊಂದಿದ್ದರೆ, ಅವನ ಒಟ್ಟು ಸಂಪತ್ತಿನ ಬಹುಪಾಲು ಸಂಬಳದಿಂದ ಅಲ್ಲ, ಬಂಡವಾಳದ ಮೌಲ್ಯವರ್ಧನೆಯಿಂದ ಬಂದಿದೆ ಎಂದಾಯ್ತು. ಎಲಾನ್ ಮಸ್ಕ್ ನ ಸ್ಪೇಸ್ ಎಕ್ಸ್ ಸಂಸ್ಥೆಯಲ್ಲಿ ಹೀಗೆ ಸಂಪತ್ತು ವೃದ್ಧಿಸಿಕೊಂಡವರ ಸಂಖ್ಯೆಯೇ ಸಾವಿರಾರು ಸಂಖ್ಯೆಯ ಲೆಕ್ಕದಲ್ಲಿದೆ!
ಇದನ್ನೇ ಆರ್ಥಿಕ ತಜ್ಞರು “Labor Income” ಮತ್ತು “Capital Income” ನಡುವಿನ ವ್ಯತ್ಯಾಸ ಎಂದು ಕರೆಯುತ್ತಾರೆ. Labor Income ಎಂದರೆ ಕೆಲಸ ಮಾಡಿ ಸಂಪಾದಿಸುವ ಹಣ. Capital Income ಎಂದರೆ ನೀವು ಹೊಂದಿರುವ ಆಸ್ತಿಗಳ ಮೌಲ್ಯ ಹೆಚ್ಚಳದಿಂದ ಸೃಷ್ಟಿಯಾಗುವ ಸಂಪತ್ತು. ವಿಶ್ವದ ಬಹುತೇಕ ದೊಡ್ಡ ಶ್ರೀಮಂತರ ಸಂಪತ್ತು ಎರಡನೇ ವರ್ಗಕ್ಕೆ ಸೇರಿದೆ. ಎಲಾನ್ ಮಸ್ಕ್ ಅವರ ಸಂಪತ್ತಿನ ಬಹುಪಾಲು ಅವರ ಮಾಲೀಕತ್ವದಲ್ಲಿರುವ ಷೇರುಗಳಿಂದ ಬಂದಿದೆ. ಇದೇ ತತ್ವ ಸಣ್ಣ ಪ್ರಮಾಣದಲ್ಲಿ ಸ್ಪೇಸ್‌ಎಕ್ಸ್ ಉದ್ಯೋಗಿಗಳಿಗೂ ಅನ್ವಯವಾದ ಕಾರಣ ಅವರೆಲ್ಲರೂ ಮಿಲಿಯನೇರ್ ಗಳಾಗಿದ್ದಾರೆ.
ಇನ್ನೊಂದು ಪ್ರಮುಖ ಆರ್ಥಿಕ ಅಂಶವೆಂದರೆ “ಸ್ಕೇಲಬಿಲಿಟಿ”. ಒಂದು ರೆಸ್ಟೋರೆಂಟ್ ದಿನಕ್ಕೆ ೫೦೦ ಗ್ರಾಹಕರಿಗೆ ಮಾತ್ರ ಸೇವೆ ನೀಡಬಹುದು. ಆದರೆ ಒಂದು ತಂತ್ರಜ್ಞಾನ ಕಂಪನಿ ವಿಶ್ವದ ಕೋಟ್ಯಂತರ ಜನರಿಗೆ ಸೇವೆ ನೀಡಬಹುದು. ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ಯೋಜನೆ ಇದಕ್ಕೆ ಅತ್ಯುತ್ತಮ ಉದಾಹರಣೆ. ೨೦೨೬ ಈ ವೇಳೆಗೆ ಸ್ಟಾರ್‌ಲಿಂಕ್ ಜಾಲದಲ್ಲಿ 8 ಸಾವಿರಕ್ಕೂ ಹೆಚ್ಚು ಉಪಗ್ರಹಗಳಿದ್ದು, ಜಗತ್ತಿನ ಅನೇಕ ದೇಶಗಳಲ್ಲಿ ಲಕ್ಷಾಂತರ ಗ್ರಾಹಕರಿಗೆ ಇಂಟರ್ನೆಟ್ ಸೇವೆ ಒದಗಿಸುತ್ತಿದೆ. ಪ್ರತಿಯೊಬ್ಬ ಹೊಸ ಗ್ರಾಹಕನಿಂದ ಬರುವ ಆದಾಯ ಕಂಪನಿಯ ಮೌಲ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಉದ್ಯೋಗಿಗಳ ಷೇರುಗಳ ಮೌಲ್ಯವೂ ಏರುತ್ತದೆ.
ಸ್ಪೇಸ್‌ಎಕ್ಸ್‌ನ ಯಶಸ್ಸು ನಮಗೆ ಇನ್ನೊಂದು ಮಹತ್ವದ ಆರ್ಥಿಕ ಪಾಠವನ್ನು ಕಲಿಸುತ್ತದೆ. ಆರಂಭಿಕ ಹಂತದಲ್ಲಿ ಒಂದು ಸಂಸ್ಥೆಯಲ್ಲಿ ಸೇರುವುದು ಅಪಾಯಕಾರಿಯಾಗಿದೆ, ಆದರೆ ಯಶಸ್ವಿಯಾದರೆ ಅದರ ಲಾಭ ಅಸಾಧಾರಣವಾಗಿರುತ್ತದೆ. 2008ರಲ್ಲಿ ಸ್ಪೇಸ್‌ಎಕ್ಸ್‌ಗೆ ಸೇರಿದ ಒಬ್ಬ ಉದ್ಯೋಗಿ ಮತ್ತು 2026 ರಲ್ಲಿ ಸೇರಿದ ಒಬ್ಬ ಉದ್ಯೋಗಿಯನ್ನು ಹೋಲಿಸಿದರೆ, ಮೊದಲನೆಯವನಿಗೆ ಕಂಪನಿಯ ಬೆಳವಣಿಗೆಯಿಂದ ಹೆಚ್ಚಿನ ಲಾಭ ಸಿಕ್ಕಿದೆ. ಕಾರಣ, ಕಂಪನಿಯ ಮೌಲ್ಯ ಕಡಿಮೆ ಇರುವಾಗ ಪಡೆದ ಷೇರುಗಳು ನಂತರದ ಹಂತದಲ್ಲಿ ಬಹಳ ಹೆಚ್ಚು ಮೌಲ್ಯ ಪಡೆದು ಕೊಂಡ ಕಾರಣ ಸಂಪತ್ತು ಹೆಚ್ಚಾಯ್ತು. ಮುಂಬರುವ ದಿನಗಳಲ್ಲಿ ಅದು ಇನ್ನೂ ದುಪ್ಪಟ್ಟಾಗುವ ಸಾಧ್ಯತೆ ಹೆಚ್ಚು.
ಇದೇ ಕಾರಣಕ್ಕೆ ಅಮೆರಿಕದ ಅನೇಕ ತಂತ್ರಜ್ಞಾನ ಕಂಪನಿಗಳಲ್ಲಿ ಸಾವಿರಾರು ಸಾಮಾನ್ಯ ಉದ್ಯೋಗಿಗಳು ಮಿಲಿಯನೇರ್‌ಗಳಾಗಿದ್ದಾರೆ. Microsoft 1986 ರಲ್ಲಿ ಸಾರ್ವಜನಿಕ ಷೇರು ಮಾರುಕಟ್ಟೆಗೆ ಬಂದಾಗ ಅನೇಕ ಉದ್ಯೋಗಿಗಳು ಕೋಟ್ಯಾಧಿಪತಿಗಳಾದರು. Google 2004 ರಲ್ಲಿ IPO ಮಾಡಿದಾಗ ಸುಮಾರು ಸಾವಿರಕ್ಕೂ ಹೆಚ್ಚು ಆರಂಭಿಕ ಉದ್ಯೋಗಿಗಳು ಮಿಲಿಯನೇರ್‌ಗಳಾದರು ಎಂದು ಅಂದಾಜಿಸಲಾಗಿದೆ. Facebook IPO ನಂತರ ಸಾವಿರಾರು ಉದ್ಯೋಗಿಗಳು ದೊಡ್ಡ ಪ್ರಮಾಣದ ಸಂಪತ್ತು ಗಳಿಸಿದರು. ಈಗ ಅದೇ ಮಾದರಿಯನ್ನು ಸ್ಪೇಸ್‌ಎಕ್ಸ್ ಪುನರಾವರ್ತಿಸಿದೆ.
ಭಾರತದ ದೃಷ್ಟಿಯಿಂದ ನೋಡಿದರೆ, ಈ ಕಥೆ ಅತ್ಯಂತ ಮಹತ್ವದ್ದಾಗಿದೆ. ನಮ್ಮಲ್ಲಿ ಹೆಚ್ಚಿನವರು ಉತ್ತಮ ವೇತನವೇ ಆರ್ಥಿಕ ಯಶಸ್ಸಿನ ಪ್ರಮುಖ ಮಾರ್ಗ ಎಂದು ಭಾವಿಸುತ್ತಾರೆ. ಆದರೆ ಜಾಗತಿಕ ಆರ್ಥಿಕತೆಯಲ್ಲಿ ದೊಡ್ಡ ಮಟ್ಟದ ಸಂಪತ್ತು ಸೃಷ್ಟಿಯಾಗುವುದು ಮಾಲೀಕತ್ವದಿಂದ. ಮುಂದಿನ ೧೦ರಿಂದ ೨೦ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ ತಂತ್ರಜ್ಞಾನ, ರಕ್ಷಣಾ ಉತ್ಪಾದನೆ, ಸೆಮಿಕಂಡಕ್ಟರ್‌ಗಳು, ರೋಬೋಟಿಕ್ಸ್ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಳೆಯುವ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಇದೇ ರೀತಿಯ ಅವಕಾಶಗಳು ದೊರೆಯಬಹುದು. ವಿಶೇಷವಾಗಿ ಕಂಪನಿಯ ಷೇರು ಕೊಳ್ಳುವ ಯೋಜನೆಗಳಲ್ಲಿ ಭಾಗವಹಿಸುವವರು ಹೆಚ್ಚಿನ ಲಾಭ ಪಡೆಯುವ ಸಾಧ್ಯತೆ ಇದೆ.
ಕೊನೆಯದಾಗಿ , ಸ್ಪೇಸ್‌ಎಕ್ಸ್‌ನ ವೆಲ್ಡರ್‌ಗಳು, ಮೆಕ್ಯಾನಿಕ್‌ಗಳು ಮತ್ತು ಇತರ ಸಾಮಾನ್ಯ ಉದ್ಯೋಗಿಗಳು ಮಿಲಿಯನೇರ್‌ಗಳಾದದ್ದು ಅದೃಷ್ಟದಿಂದ ಅಲ್ಲ. ಅವರು ಸರಿಯಾದ ಸಮಯದಲ್ಲಿ ಸರಿಯಾದ ಸಂಸ್ಥೆಯಲ್ಲಿ ಸೇರಿದರು, ಕಂಪನಿಯ ಮಾಲೀಕತ್ವದ ಭಾಗವನ್ನು ಪಡೆದರು, ಕಠಿಣ ವರ್ಷಗಳನ್ನು ತಾಳ್ಮೆಯಿಂದ ಎದುರಿಸಿದರು ಮತ್ತು ತಮ್ಮ ಷೇರುಗಳನ್ನು ದೀರ್ಘಾವಧಿಗೆ ಉಳಿಸಿಕೊಂಡರು. ಕಂಪನಿಯ ಮೌಲ್ಯ ಸುಮಾರು 1 ಬಿಲಿಯನ್‌ನಿಂದ 2.65 ಟ್ರಿಲಿಯನ್ ಆಗಿದೆ. ಸಂಸ್ಥೆಯ ಮೌಲ್ಯ ಹೆಚ್ಚಾದಂತೆ ಅವರ ವೈಯಕ್ತಿಕ ಸಂಪತ್ತೂ ನೂರಾರು ಪಟ್ಟು ಹೆಚ್ಚಾಯಿತು. ಆರ್ಥಿಕ ದೃಷ್ಟಿಯಿಂದ ಈ ಕಥೆಯ ಸಾರಾಂಶ ತುಂಬಾ ಸರಳ, ವೇತನದಿಂದ ಜೀವನ ನಡೆಸಬಹುದು ಅಷ್ಟೇ, ಆದರೆ ಬೆಳೆಯುತ್ತಿರುವ ಸಂಸ್ಥೆಯಲ್ಲಿನ ಮಾಲೀಕತ್ವ ಜೀವನವನ್ನು ಬದಲಿಸುವ ಸಂಪತ್ತನ್ನು ಸೃಷ್ಟಿಸುತ್ತದೆ. ಎಲಾನ್ ಮಸ್ಕ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದರೆ, ಅವರೊಂದಿಗೆ ಕೆಲಸ ಮಾಡಿದ ಅನೇಕ ವೆಲ್ಡರ್‌ಗಳು ಮತ್ತು ಮೆಕ್ಯಾನಿಕ್‌ಗಳು ಕೂಡ ಹೆಚ್ಚು ಸದ್ದುಗದ್ದಲವಿಲ್ಲದೆ ಕೋಟ್ಯಾಧಿಪತಿಗಳಾದರು. ಇದೇ ಆಧುನಿಕ ಬಂಡವಾಳಶಾಹಿ ವ್ಯವಸ್ಥೆಯ ಅತ್ಯಂತ ಶಕ್ತಿಶಾಲಿ ಲಕ್ಷಣವಾಗಿದೆ.
ಕೊನೆಮಾತು: ಭಾರತದಲ್ಲಿ ಈ ರೀತಿಯ ರಿಸೆರ್ಚ್ ಅಂಡ್ ಡೆವಲಪ್ಮೆಂಟ್ ಮೇಲೆ ಹಣ ಹೂಡುವ ಸಂಸ್ಥೆಗಳಿಲ್ಲ. ನಾವು ಈ ಆಟದಲ್ಲಿ ಬಹಳ ಹಿಂದೆ ಇದ್ದೇವೆ. ಮುಂಬರುವ ದಿನಗಳಲ್ಲಿ ನಮ್ಮ ಮನಸ್ಸಿನ ಮಾತನ್ನು ಜಗತ್ತಿಗೆ ಹೇಳಬೇಕು ಮತ್ತು ಅವರು ಅದನ್ನು ಸಂಯಮದಿಂದ ಕೇಳಬೇಕು ಎಂದರೆ ನಾವು ಹೆಚ್ಚು AI ಕ್ಷೇತ್ರದಲ್ಲಿ ಮತ್ತು ರಿಸೆರ್ಚ್ ಅಂಡ್ ಡೆವಲಪ್ಮೆಂಟ್ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮಾಡಬೇಕು. ಹೆಚ್ಚು ಒಳ್ಳೆಯ ಫಲಿತಾಂಶವನ್ನು ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ನಾವು ಕನ್ಸಮ್ಷನ್ ದೇಶವಾಗಿ ಉಳಿದುಕೊಳ್ಳುತ್ತೇವೆ. ಎಲ್ಲಿಯವರೆಗೆ ನಾವು ಕೇವಲ ಸೇವೆ ಪಡೆದುಕೊಳ್ಳುವ ದೇಶವಾಗಿ ಉಳಿದುಕೊಳ್ಳುತ್ತೇವೆ ಅಲ್ಲಿಯವರೆಗೆ ಜಾಗತಿಕ ಮಟ್ಟದಲ್ಲಿ ನಮಗೆ ಹೆಚ್ಚಿನ ಮಹತ್ವವಿರುವುದಿಲ್ಲ. ನಾವು ಸೇವೆ ನೀಡುವ ಮಟ್ಟಕ್ಕೆ ಬೆಳವಣಿಗೆ ಕಾಣಬೇಕಿದೆ.

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com