ಬಾಂಬ್ ದಾಳಿಗಳ ಬಳಿಕ: ಅಮೆರಿಕ - ಇರಾನ್ ಒಪ್ಪಂದದ ಒಳನೋಟ (ಸಾಂಕೇತಿಕ ಚಿತ್ರ) online desk
ಅಂಕಣಗಳು

ಬಾಂಬ್ ದಾಳಿಗಳ ಬಳಿಕ: ಅಮೆರಿಕ - ಇರಾನ್ ಒಪ್ಪಂದದ ಒಳನೋಟ (ಜಾಗತಿಕ ಜಗಲಿ)

ಕೇವಲ ಅಮೆರಿಕ ಮಾತ್ರವೇ ಇಲ್ಲಿ ರಾಜಿ ಮಾಡಿಕೊಂಡಿದೆ ಎನ್ನುವುದು ತಪ್ಪಾಗಲಿದೆ. ಏಕೆಂದರೆ, ಇರಾನ್ ಸಹ ಒಂದಷ್ಟು ರಾಜಿ ಮಾಡಿಕೊಂಡಿದೆ. ತಾನು ಪರಮಾಣು ಶಸ್ತ್ರಾಸ್ತ್ರ ನಿರ್ಮಾಣ ನಡೆಸುವುದಿಲ್ಲ ಎಂದು ಇರಾನ್...

ಇರಾನ್ ಮತ್ತು ಅಮೆರಿಕ ನಡುವಿನ ದೀರ್ಘ, ಯಾತನಾಮಯ ಯುದ್ಧ ಕಡೆಗೂ ನಿಲುಗಡೆಗೆ ಬಂದಿದೆ. ಜೂನ್ 17, 2026ರಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ತಿಳಿವಳಿಕೆ ಒಡಂಬಡಿಕೆ ಅಥವಾ ಎಂಒಯು ಎನ್ನುವ 14 ಅಂಶಗಳ ಒಪ್ಪಂದಕ್ಕೆ ಸಹಿ ಹಾಕಿದರು.

ಇಲ್ಲಿ ಎಂಒಯು ಎಂದರೆ, ಉಭಯ ಪಕ್ಷಗಳು ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎನ್ನುವುದನ್ನು ಬರೆದಿರುವ ಒಂದು ಭರವಸೆಯ ಪತ್ರ. ಉಭಯ ದೇಶಗಳನ್ನು ಮಾತುಕತೆಯ ವೇದಿಕೆಗೆ ತರಲು ಪಾಕಿಸ್ತಾನ ಪ್ರಯತ್ನ ನಡೆಸಿದ್ದರಿಂದ, ಈ ಒಪ್ಪಂದದ ದಾಖಲೆಯನ್ನು 'ಇಸ್ಲಾಮಾಬಾದ್ ಎಂಒಯು' ಎಂದೂ ಕರೆಯಲಾಗಿದೆ. ಆದರೆ, ಆರಂಭದ ಹಂತದಿಂದಲೂ ಒಂದು ವಿಚಾರವನ್ನು ಸ್ಪಷ್ಟಪಡಿಸಲೇಬೇಕು. ಅದೇನೆಂದರೆ, ಇದು ಕೇವಲ ಮೊದಲ ಹೆಜ್ಜೆ, ಒಂದು ಚೌಕಟ್ಟು ಮಾತ್ರವೇ ಹೊರತು, ಇದೇ ಅಂತಿಮ ಶಾಂತಿ ಒಪ್ಪಂದವಲ್ಲ. ಉಭಯ ದೇಶಗಳೂ ಕಠಿಣ ಸವಾಲುಗಳಿಗೆ ಪರಸ್ಪರ ಉತ್ತರ ಕಂಡುಕೊಳ್ಳಲು ತಮಗೇ 60 ದಿನಗಳ ಸಮಯಾವಕಾಶ ನೀಡಿದ್ದು, ಅಂತಿಮ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಬೆಂಬಲ ಇರಲಿದೆ.

ಈ ಒಪ್ಪಂದ ಏಕೆ ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಇರಾನ್ ಯುದ್ಧ ಎಷ್ಟು ತೀವ್ರವಾಗಿತ್ತು ಎನ್ನುವುದನ್ನು ಒಮ್ಮೆ ನೆನಪಿಸಿಕೊಳ್ಳಿ. ಹಲವಾರು ತಿಂಗಳ ಕಾಲ, ಈ ಪ್ರದೇಶ ವಾಯು ದಾಳಿಯ ಭಯ, ಡ್ರೋನ್‌ಗಳು ಮತ್ತು ಕ್ಷಿಪಣಿಗಳು ತೀವ್ರ ಹಾನಿ ಮತ್ತು ಪ್ರಾಣ ಹಾನಿ ಉಂಟುಮಾಡುವ ಆತಂಕದಲ್ಲೇ ಜೀವನ ನಡೆಸುತ್ತಿತ್ತು. ಉಭಯ ಪಕ್ಷವೂ ಸಹ ತಾನು ಇನ್ನಷ್ಟು ತೀವ್ರವಾಗಿ ದಾಳಿ ನಡೆಸಿದರೆ ವಿರೋಧಿ ಮಣಿಯಬಹುದು ಎಂದು ಲೆಕ್ಕಾಚಾರ ಹಾಕಿತ್ತು. ಆದರೆ ಅಂತಿಮವಾಗಿ, ಒಂದು ಬದಿಯ ಬಾಂಬ್‌ಗಳಾಗಲಿ, ಇನ್ನೊಂದು ಬದಿಯ ಕ್ಷಿಪಣಿಗಳಾಗಲಿ ಯುದ್ಧವನ್ನು ಮುಕ್ತಾಯಗೊಳಿಸಲು ಸಾಧ್ಯವಾಗಲಿಲ್ಲ. ಕೊನೆಗೂ ಒಂದು ಪರಿಹಾರ ಕಂಡುಕೊಳ್ಳಲು ಸಾಧ್ಯವಾದದ್ದು ಮಾತುಕತೆಗೆ. ಸಮಾಲೋಚನೆಗಳು ನಿಧಾನ ಮತ್ತು ಕಠಿಣವಾಗಿದ್ದರೂ, ಅಂತಿಮವಾಗಿ ಒಂದಷ್ಟು ಶಾಂತಿ ತರಲು ಯಶಸ್ವಿಯಾಗಿವೆ.

ಈಗಿನ ಅತಿದೊಡ್ಡ ಸಮಾಧಾನವೆಂದರೆ, ಮದ್ದು ಗುಂಡುಗಳು ಮೌನವಾಗಿರುವುದು. ಪ್ರಸ್ತುತ ಒಪ್ಪಂದ, ಲೆಬನಾನ್ ಸೇರಿದಂತೆ ಎಲ್ಲ ಯುದ್ಧ ಪೀಡಿತ ಪ್ರದೇಶದಲ್ಲೂ ತಕ್ಷಣವೇ ಜಾರಿಗೆ ಬರುವಂತೆ ಶಾಶ್ವತ ಕದನ ವಿರಾಮಕ್ಕೆ ಆಗ್ರಹಿಸಿದೆ. ಪರ್ಷಿಯನ್ ಕೊಲ್ಲಿ ಮತ್ತು ಮುಕ್ತ ಸಮುದ್ರದ ನಡುವಿನ ಕಿರಿದಾದ, ಜಗತ್ತಿನ ಅತ್ಯಧಿಕ ತೈಲ ಮತ್ತು ಅನಿಲ ಸಂಚರಿಸುವ ಸಮುದ್ರ ಮಾರ್ಗವಾದ ಹೊರ್ಮುಸ್ ಜಲಸಂಧಿ ಮತ್ತೆ ವ್ಯಾಪಾರಿ ಹಡಗುಗಳಿಗೆ ಮುಕ್ತವಾಗಲಿದ್ದು, ಅಮೆರಿಕ ತನ್ನ ನೌಕಾ ದಿಗ್ಬಂಧನವನ್ನು ತೆರವುಗೊಳಿಸಲಿದೆ. 60 ದಿನಗಳ ಕಾಲ ಉಭಯ ಪಕ್ಷಗಳ ನಡುವೆ ಸಮಾಲೋಚನೆ ನಡೆಯುವ ವೇಳೆ ಹಡಗುಗಳು ಯಾವುದೇ ಶುಲ್ಕವಿಲ್ಲದೆ ಸಂಚರಿಸುವ ಸಾಧ್ಯತೆಗಳಿವೆ. ಜಗತ್ತಿನ ಬಹುತೇಕ ಇಂಧನ ಈ ಮಾರ್ಗದ ಮೂಲಕವೇ ಸಾಗುವುದರಿಂದ, ಹೊರ್ಮುಸ್ ಜಲಸಂಧಿಯಲ್ಲಿ ಯಾವುದೇ ವ್ಯತ್ಯಯ ಬೆಲೆಗಳನ್ನು ಹೆಚ್ಚಿಸಿ, ಗಲ್ಫ್ ರಾಷ್ಟ್ರಗಳಾಚೆಗೂ ಜಾಗತಿಕ ಆರ್ಥಿಕತೆಗಳನ್ನು ನಲುಗಿಸಬಲ್ಲದು. ಆದ್ದರಿಂದ ಹೊರ್ಮುಸ್ ಜಲಸಂಧಿಯನ್ನು ತೆರೆಯುವುದು ಬಹಳಷ್ಟು ದೇಶಗಳಿಗೆ ಸಮಾಧಾನ ತಂದಿದೆ.

ಎರಡೂ ದೇಶಗಳು ಪರಸ್ಪರರ ಗಡಿಗಳನ್ನು ಗೌರವಿಸಬೇಕು ಮತ್ತು ಪರಸ್ಪರ ಆಂತರಿಕ ವಿಚಾರಗಳಲ್ಲಿ ಮಧ್ಯ ಪ್ರವೇಶಿಸಬಾರದು ಎಂದು ಒಪ್ಪಂದ ಹೇಳುತ್ತದೆ. ಇಲ್ಲಿ 'ಎರಡು ದೇಶಗಳು' ಎಂದೇ ನಮೂದಾಗಿರುವುದನ್ನು ಗಮನಿಸಬೇಕು. ಅಂದರೆ, ಇದು ದ್ವಿಮುಖ ಭರವಸೆಯೇ ಹೊರತು, ಒಂದು ದೇಶ ಇನ್ನೊಂದರ ಮುಂದೆ ಶರಣಾಗಿರುವುದಲ್ಲ. ಇನ್ನು ಹಣದ ವಿಚಾರಕ್ಕೆ ಬಂದರೆ, ಒಪ್ಪಂದ ಮುಟ್ಟುಗೋಲಾಗಿರುವ ಇರಾನಿನ ಹಣವನ್ನು ಬಿಡುಗಡೆಗೊಳಿಸಲು ಹಾದಿ ಮಾಡಿಕೊಡಬಹುದು. ವರದಿಗಳ ಪ್ರಕಾರ, ಇರಾನಿನ 25 ಬಿಲಿಯನ್‌ನಿಂದ 100 ಬಿಲಿಯನ್ ಡಾಲರ್ ತನಕದ ಹಣ ಮುಟ್ಟುಗೋಲಾಗಿದೆ. ಇದರೊಡನೆ, ಇರಾನಿನ ಮರುನಿರ್ಮಾಣಕ್ಕೆ ಪ್ರಾದೇಶಿಕ ಸಹಯೋಗಿಗಳಿಂದ 300 ಬಿಲಿಯನ್ ಡಾಲರ್ ನೆರವು ಬರುವ ನಿರೀಕ್ಷೆಗಳಿವೆ. ಆದರೆ, ದೊಡ್ಡ ದೊಡ್ಡ ಸುದ್ದಿಗಳು ಬಚ್ಚಿಟ್ಟಿರುವ ಸಣ್ಣ ವಿಚಾರವೂ ಒಂದಿದೆ. ಈ ಪರಿಹಾರ ಒಂದೇ ಬಾರಿಗೆ ಹಸ್ತಾಂತರವಾಗುವುದಿಲ್ಲ. ಇದು ಇರಾನ್ ತನ್ನ ಮಾತು ಉಳಿಸಿಕೊಳ್ಳುವುದರ ಮೇಲೆ ಅವಲಂಬಿತವಾಗಿದೆ. ಆದರೆ, ಅಮೆರಿಕ ನೇರವಾಗಿ ಯಾವುದೇ ಹಣ ಪಾವತಿಸುವುದಿಲ್ಲ ಎಂದು ಅಮೆರಿಕನ್ ಅಧಿಕಾರಿಗಳು ಹೇಳಿದ್ದಾರೆ.

ಕೇವಲ ಅಮೆರಿಕ ಮಾತ್ರವೇ ಇಲ್ಲಿ ರಾಜಿ ಮಾಡಿಕೊಂಡಿದೆ ಎನ್ನುವುದು ತಪ್ಪಾಗಲಿದೆ. ಏಕೆಂದರೆ, ಇರಾನ್ ಸಹ ಒಂದಷ್ಟು ರಾಜಿ ಮಾಡಿಕೊಂಡಿದೆ. ತಾನು ಪರಮಾಣು ಶಸ್ತ್ರಾಸ್ತ್ರ ನಿರ್ಮಾಣ ನಡೆಸುವುದಿಲ್ಲ ಎಂದು ಇರಾನ್ ಭರವಸೆ ನೀಡಿದೆ. ತಾನು ಈಗಾಗಲೇ ಪುಷ್ಟೀಕರಿಸಿರುವ ಯುರೇನಿಯಂ ಅನ್ನು 'ಡೌನ್ ಬ್ಲೆಂಡ್' ಮಾಡುವುದಾಗಿಯೂ ಇರಾನ್ ಹೇಳಿದೆ. ಡೌನ್ ಬ್ಲೆಂಡ್ ಎಂದರೆ ಅದನ್ನು ದುರ್ಬಲಗೊಳಿಸಿ, ಅಣು ಬಾಂಬ್ ನಿರ್ಮಾಣಕ್ಕೆ ಬಳಕೆಯಾಗದಂತೆ ಮಾಡುವುದು. ಇದನ್ನು ವಿಶ್ವಸಂಸ್ಥೆಯ ನಿರೀಕ್ಷಕರ ಉಪಸ್ಥಿತಿಯಲ್ಲಿ ನಡೆಸಲಾಗುತ್ತದೆ. ಅಂತಿಮ ಒಪ್ಪಂದ ಸಿದ್ಧವಾಗುವ ತನಕ, ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಈಗಿನ ಹಂತವನ್ನು ಅಲ್ಲೇ ನಿಲ್ಲಿಸಲಿದೆ. ಇವೆಲ್ಲ ನೈಜ ಮತ್ತು ಗಂಭೀರ ಬದ್ಧತೆಗಳಾಗಿದ್ದು, ಸಣ್ಣ ವಿಚಾರಗಳಲ್ಲ.

ಹಾಗೆಂದು ಒಂದಷ್ಟು ದೊಡ್ಡ ಪ್ರಶ್ನೆಗಳು ಇನ್ನೂ ಹಾಗೇ ಇವೆ. ಅವುಗಳನ್ನು ಸರಳವಾಗಿ ಮುಂದಿನ ಸುತ್ತಿನ ಮಾತುಕತೆಗೆ ತಳ್ಳಲಾಗಿದೆ. ಇರಾನಿನ ಕ್ಷಿಪಣಿಗಳು, ಹೆಜ್ಬೊಲ್ಲಾ ಮತ್ತು ಹೌತಿಯಂತಹ ಗುಂಪುಗಳೊಡನೆ ಇರಾನಿನ ಸಂಬಂಧ, ಮತ್ತು ಅದರ ಪರಮಾಣು ಕಾರ್ಯಕ್ರಮದ ಸಂಪೂರ್ಣ ಭವಿಷ್ಯ, ಇವೆಲ್ಲವೂ ಮುಂದಿನ 60 ದಿನಗಳ ಸಮಾಲೋಚನೆಯಲ್ಲಿ ತೀರ್ಮಾನಕ್ಕೆ ಬರುವ ನಿರೀಕ್ಷೆಗಳಿವೆ. ಆದ್ದರಿಂದ, ಈ ವಿಚಾರಗಳು ಮಾತುಕತೆಯಿಂದ ಹೊರಗಿವೆ ಎನ್ನುವುದು ಸರಿಯಾಗದು. ಇವು ಇನ್ನೂ ಪೂರ್ಣಗೊಂಡಿಲ್ಲದ ವಿಚಾರಗಳೇ ಹೊರತು, ಮರೆತು ಹೋದ ಅಂಶಗಳಲ್ಲ.

ಇಲ್ಲಿ ಒಂದು ಇತಿಹಾಸದ ಪುನರಾವರ್ತನೆಯೂ ಕಾಣ ಬರುತ್ತದೆ. ಹಿಂದೆ, 1981ರಲ್ಲಿ, ಇರಾನಿನ ವಿದ್ಯಾರ್ಥಿಗಳು ಟೆಹರಾನಿನ ಅಮೆರಿಕನ್ ರಾಯಭಾರ ಕಚೇರಿಯನ್ನು ವಶಪಡಿಸಿಕೊಂಡು, ಅಮೆರಿಕನ್ನರನ್ನು 444 ದಿನಗಳ ಕಾಲ ಒತ್ತೆಯಾಳುಗಳಾಗಿ ಇರಿಸಿಕೊಂಡಾಗ, ಉಭಯ ಪಕ್ಷಗಳೂ ಅಲ್ಜೀರ್ಸ್ ಒಪ್ಪಂದದ ಮೂಲಕ ಈ ಬಿಕ್ಕಟ್ಟನ್ನು ಪರಿಹರಿಸಿದ್ದವು. ಆ ಒಪ್ಪಂದದ ಪ್ರಕಾರ, ಮುಟ್ಟುಗೋಲಾಗಿದ್ದ ಇರಾನಿನ ಹಣವನ್ನು ಬಿಡುಗಡೆಗೊಳಿಸಿ, ಅಮೆರಿಕ ತಾನು ಇರಾನಿನ ಆಂತರಿಕ ವಿಚಾರಗಳಿಂದ ಹೊರಗುಳಿಯುವುದಾಗಿ ಹೇಳಿತ್ತು. ಆದರೆ, ದಶಕಗಳ ಬಳಿಕ, ಮತ್ತೊಮ್ಮೆ ಮುಟ್ಟುಗೋಲಾದ ಹಣ ಮತ್ತು ಪರಸ್ಪರ ಮಧ್ಯಪ್ರವೇಶ ಮಾಡದಿರುವುದು ಒಪ್ಪಂದದಲ್ಲಿ ಮಹತ್ವದ ಅಂಶವಾಗಿದ್ದು, ಅಮೆರಿಕ ಮತ್ತು ಇರಾನ್ ಹೇಗೆ ಮತ್ತೆ ಮತ್ತೆ ಅದೇ ಚರ್ಚೆಯ ವಿಷಯಕ್ಕೆ ಮರಳಿ ಬರುತ್ತವೆ ಎನ್ನುವುದನ್ನು ತೋರಿಸಿದೆ.

ಕಾಗದ ಪತ್ರಗಳಲ್ಲಿ ಕಂಡುಬರುವ ಶಾಂತಿ ವಾಸ್ತವ ಚಿತ್ರಣದಲ್ಲೂ ಶಾಂತಿಯೇ ಆಗಿರುವುದಿಲ್ಲ. ಇರಾನಿನ ಒಳಗೆ, ತೀವ್ರಗಾಮಿಗಳು ಈ ಒಪ್ಪಂದದ ಕುರಿತು ಆಕ್ರೋಶದಿಂದ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಸ್ವತಃ ಇರಾನಿನ ಮಧ್ಯಸ್ಥಿಕೆದಾರರ ವಿರುದ್ಧ ಕೋಪದಿಂದ ಕೂಗಾಡಿದ್ದಾರೆ. ಇರಾನ್ ಇನ್ನೂ ಹಳೆಯ ಗಾಯಗಳನ್ನು ನೆನಪಿಟ್ಟುಕೊಂಡಿದ್ದು, 2026ರ ಆರಂಭದ ದಾಳಿಗಳನ್ನೂ ಅದು ಮರೆತಿಲ್ಲ. ಇನ್ನು ಇಸ್ರೇಲ್‌ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಹ ಅಸಮಾಧಾನ ಹೊಂದಿದ್ದಾರೆ. ಅದರಲ್ಲೂ ದಕ್ಷಿಣ ಲೆಬನಾನ್‌ನಿಂದ ಇಸ್ರೇಲಿ ಪಡೆಗಳನ್ನು ಹಿಂಪಡೆಯುವುದು ಅವರಿಗೆ ಸಮಾಧಾನವಿಲ್ಲದ ವಿಚಾರವಾಗಿದೆ. ಜಿ7 ಶೃಂಗಸಭೆಯಲ್ಲಿ ವಿಶ್ವ ನಾಯಕರು ಈ ಒಪ್ಪಂದವನ್ನು ಸ್ವಾಗತಿಸಿದರೂ, ಒಪ್ಪಂದದ ಮುಂದಿರುವ ಹಾದಿ ಎಷ್ಟರಮಟ್ಟಿಗೆ ಸುಗಮವಾಗಿರಲಿದೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ.

ಇದರಿಂದ ಕಲಿಯಬಹುದಾದ ಪಾಠವೇನು? ಮುಖ್ಯವಾದ ಪಾಠವೆಂದರೆ, ಕೇವಲ ಬಲ ಪ್ರಯೋಗದಿಂದ ಮಾತ್ರವೇ ಗೆಲುವು ಸಾಧಿಸುವುದು ಯಾರಿಗೂ ಸುಲಭವಲ್ಲ. ಮಾತುಕತೆಗೆ ಕುಳಿತುಕೊಳ್ಳುವುದು ಇಂದು ಅನಿವಾರ್ಯವಾಗಿದೆ. ಹಾಗೆಂದು ಇರಾನ್ ಏನನ್ನೂ ಕಳೆದುಕೊಳ್ಳದೆ ಉಳಿದಿಲ್ಲ. ಅದು ತನ್ನ ಪರಮಾಣು ಯೋಜನೆಯ ಮಾರ್ಗಕ್ಕೆ ಸ್ಪಷ್ಟ ಇತಿಮಿತಿಗಳನ್ನು ಹಾಕಿಕೊಳ್ಳಲು ಒಪ್ಪಿಗೆ ಸೂಚಿಸಿದೆ. ಇಲ್ಲಿನ ಪ್ರಾಮಾಣಿಕ ಚಿತ್ರಣವೆಂದರೆ, ಯಾವೊಂದು ಬದಿಯೂ ಸ್ಪಷ್ಟ ಗೆಲುವು ಸಾಧಿಸಿಲ್ಲ. ಒಂದಷ್ಟು ಭೀಕರ ವಿಧ್ವಂಸಗಳ ಬಳಿಕ, ಉಭಯ ಪಕ್ಷಗಳೂ ಅಂತಿಮವಾಗಿ ಇನ್ನಷ್ಟು ರಕ್ತಪಾತ ನಡೆಸುವ ಬದಲು, ರಾಜಿ ಮಾಡಿಕೊಳ್ಳಲು ಮುಂದಾಗಿವೆ. ಆದರೆ, ಈ ದುರ್ಬಲ ಶಾಂತಿ ನಿಜಕ್ಕೂ ಶಾಶ್ವತ ಶಾಂತಿಯ ರೂಪ ತಳೆಯುತ್ತದೋ ಎನ್ನುವುದು ಮುಂದಿನ 60 ದಿನಗಳ ಬೆಳವಣಿಗೆಯನ್ನು ಅವಲಂಬಿಸಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET ಪ್ರಶ್ನೆಪತ್ರಿಕೆ ಸೋರಿಕೆ ವಿವಾದ: 3ನೇ ದಿನಕ್ಕೆ ಕಾಲಿಟ್ಟ 'Cockroach Janta Party' ಪ್ರತಿಭಟನೆ, ಕೇಂದ್ರ ಸರ್ಕಾರದ ವಿರುದ್ಧ ಕಿಡಿ

ಸಿಂಧೂ ನದಿ ನೀರು ತಡೆದರೆ ಸುಮ್ಮನಿರಲ್ಲ, ಯುದ್ಧ ಖಚಿತ: ಭಾರತದ ವಿರುದ್ಧ ಮತ್ತೆ ಉದ್ಧಟತನ ತೋರಿದ ಪಾಕಿಸ್ತಾನ..!

ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಆಡಳಿತಾರೂಢ ಮಹಾಯುತಿಗೆ 17 ಸ್ಥಾನದಲ್ಲಿ 16 ಸ್ಥಾನ!

ಸ್ವಿಟ್ಜರ್ಲೆಂಡ್‌ನಲ್ಲಿ ಮಹಾ ಸಂಧಾನ: US-Iran ಹಸ್ತಲಾಘವ, ಹಿಜ್ಬುಲ್ಲಾ–ಇಸ್ರೇಲ್ ಸಂಘರ್ಷ ತಡೆಯಲು ಹೊಸ ಸಮನ್ವಯ ವ್ಯವಸ್ಥೆ ಜಾರಿಗೆ ಸಮ್ಮತಿ..!

ಆಯುಷ್ಮಾನ್ ವಿಮೆ ಅಲ್ಲ ಭರವಸೆ ಯೋಜನೆ, ಜನಔಷಧಿ ಕೇಂದ್ರಗಳ ಸರಿಪಡಿಸಬೇಕು: ಸಚಿವ ಯು.ಟಿ. ಖಾದರ್‌ (INTERVIEW)