ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಭಾರತ- ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ (ಸಂಗ್ರಹ ಚಿತ್ರ) online desk
ಅಂಕಣಗಳು

ಯುದ್ದದಲ್ಲಿ ಗೆದ್ದು ಕೂಡ ಸೋಲುತ್ತಿರುವ ಅಮೇರಿಕಾ ಮತ್ತು ಚೀನಾ! (ಹಣಕ್ಲಾಸು)

ವಿಶ್ವದಲ್ಲಿ ಇಂದಿಗೆ ಅಮೇರಿಕಾ ವಿರುದ್ಧ ಸೊಲ್ಲೆತ್ತುವ ದೇಶಗಳಾಗಿ ಉಳಿದಿರುವುದು ಅಥವಾ ಆ ಶಕ್ತಿಯನ್ನು ಹೊಂದಿರುವುದು ರಷ್ಯಾ , ಚೀನಾ , ಭಾರತ ಮತ್ತು ನಾರ್ತ್ ಅಮೇರಿಕಾ ಮಾತ್ರ!

ಜಾಗತಿಕ ರಾಜಕೀಯವನ್ನು ಚದುರಂಗದಾಟಕ್ಕೆ ಹೋಲಿಕೆ ಮಾಡುವುದು ಸಾಮಾನ್ಯ. ಹೀಗೇಕೆ ಮಾಡುತ್ತಾರೆ ಎನ್ನುವುದಕ್ಕೆ ಕಾರಣ ಕೂಡ ಸರಳ. ಚೆಸ್ ಆಟದಲ್ಲಿ ಎಲ್ಲಕ್ಕೂ ಮುಖ್ಯ ಉದ್ದೇಶ ಎದುರಾಳಿಯ ರಾಜನನ್ನು ಚೆಕ್ಮೇಟ್ ಮಾಡುವುದು ಆಗಿರುತ್ತದೆ. ಒಮ್ಮೆ ರಾಜನನ್ನು ಎತ್ತಲೂ ಅಲುಗಾಡದಂತೆ ಬಂಧಿಸುವುದು ಅಥವಾ ರಾಜನನ್ನು ಎಲಿಮಿನೇಟ್ ಮಾಡುವುದು ಆಟದ ಉದ್ದೇಶ. ಹೀಗಾದಾಗ ಎದುರಾಳಿಯನ್ನು ಸೋತವನೆಂದೂ, ಚೆಕ್ಮೇಟ್ ಮಾಡಿ ರಾಜನನ್ನು ಎಲಿಮಿನೇಟ್ ಮಾಡಿವರನ್ನು ಗೆದ್ದವರೆಂದು ಪರಿಗಣಿಸಲಾಗುತ್ತದೆ.

ಈ ಕೊನೆಯ ಉದ್ದೇಶ ಅಷ್ಟು ಸುಲಭವಾಗಿ ಈಡೇರುವುದಿಲ್ಲ. ಸೈನಿಕರು , ಸೇನಾನಿಗಳು , ಆನೆ , ಕುದುರೆ , ಒಂಟೆ , ರಾಣಿ ಹೀಗೆ ಹಲವಾರು ಪದರಗಳನ್ನು ಛಿದ್ರಗೊಳಿಸಿ ಅನ್ಯ ಮಾರ್ಗವಿಲ್ಲ ಎಂದಾಗ ರಾಜ ಚೆಕ್ಮೇಟ್ ಆಗುತ್ತಾನೆ. ಆದರೆ ಬಹುತೇಕ ಬಾರಿ ಇವೆರಲ್ಲರೂ ಅಥವಾ ಇವೆರಲ್ಲಿ ಬಹುತೇಕರು ಉಳಿದಿದ್ದು ಕೂಡ ರಾಜನನ್ನು ಚೆಕ್ಮೇಟ್ ಮಾಡುವುದು ಅಥವಾ ಎಲಿಮಿನೇಟ್ ಮಾಡುವುದು ಕೂಡ ಸಾಧ್ಯ.

ಈಗ ಇದನ್ನು ನಾವು ಜಾಗತಿಕ ರಾಜಕೀಯಕ್ಕೆ ಹೋಲಿಸೋಣ. ಅಮೇರಿಕಾ ಸದಾ ಗೆಲ್ಲುವ ಆಟಗಾರ. ಅದು ಪಾಲಿಸುತ್ತಿರುವುದು ಚೆಸ್ ನಿಯಮಗಳನ್ನು ಎನ್ನುವುದು ಸ್ಪಷ್ಟ. ನೀವೇ ಗಮನಿಸಿ ನೋಡಿ ಯಾವೆಲ್ಲಾ ದೇಶಗಳು ಅವರ ಧ್ವನಿಗೆ ವಿರುದ್ಧ ಮಾತಾಡುತ್ತಾರೆ ಅವರ ದೇಶದ ಮುಖ್ಯಸ್ಥನನ್ನು ಅಂದರೆ ರಾಜನನ್ನು ಮುಗಿಸಿ ಬಿಡುತ್ತದೆ. ಇದಕ್ಕೆ ಅದಿಟ್ಟ ಹೆಸರು ರಿಜಿಮ್ ಚೇಂಜ್ ! ಕ್ಯೂಬಾ , ವಿಯೆಟ್ನಾಮ್ ಗಳಲ್ಲಿ ಅದಕ್ಕೆ ಮುಖಭಂಗ ಆದದ್ದು ಗೊತ್ತಿರುವ ವಿಚಾರ. ಅದನ್ನು ಹೊರತುಪಡಿಸಿ ಸಿರಿಯಾ , ಇರಾಕ್ , ವೆನಿಜುವೆಲಾ,ಲಿಬಿಯಾ ಸೇರಿದಂತೆ ಬಹುತೇಕ ದಕ್ಷಿಣ ಅಮೇರಿಕಾದಲ್ಲಿ ಆಗಿರುವುದು ಇದೆ ಕೆಲಸ. ಇನ್ನು ಕೆಲವು ಕಡೆ ಮಿತ್ರತ್ವದ ಹೆಸರಿನಲ್ಲಿ ಕಟ್ಟಿಹಾಕಿದ್ದರೆ. ನ್ಯಾಟೋ ಹೆಸರಿನಲ್ಲಿ ಯುರೋಪನ್ನು ಬಂಧಿಸಿ ಇಟ್ಟಿದ್ದಾರೆ.

ವಿಶ್ವದಲ್ಲಿ ಇಂದಿಗೆ ಅಮೇರಿಕಾ ವಿರುದ್ಧ ಸೊಲ್ಲೆತ್ತುವ ದೇಶಗಳಾಗಿ ಉಳಿದಿರುವುದು ಅಥವಾ ಆ ಶಕ್ತಿಯನ್ನು ಹೊಂದಿರುವುದು ರಷ್ಯಾ , ಚೀನಾ , ಭಾರತ ಮತ್ತು ನಾರ್ತ್ ಅಮೇರಿಕಾ ಮಾತ್ರ! ಅಮೇರಿಕಾ ವಿರುದ್ಧ ಭುಸುಗುಡುತ್ತಿದ್ದ ಇರಾನ್ ದೇಶದ ಮೇಲೆ ದಾಳಿ ಮಾಡಿ ಅಲ್ಲಿನ ಮುಖಸ್ಥನನ್ನು ಹತ್ಯೆ ಮಾಡಿರುವುದು ಕ್ಲಾಸಿಕ್ ಚೆಸ್ ಗೇಮಿನ ನಿಯಮ. ಅಲ್ಲಿ ತಮಗೆ ಬೇಕಾದವರರನ್ನು ಕೂಡಿಸಿ ಆಟದಲ್ಲಿ ಗೆದ್ದೆ ಎಂದು ಬೀಗುವುದು ಅಮೇರಿಕಾದ ಗೇಮ್ ಪ್ಲಾನ್. ಬಹಳ ಹಿಂದಿನಿಂದ ಅಮೇರಿಕಾ ಅನುಸರಿಸುತ್ತಿರುವುದು ಇದೆ ಪ್ಯಾಟ್ರನ್. ಸದ್ದಾಂ , ಗಡಾಫಿ ,ಹ್ಯೂಗೋ ಚಾವೇಸ್ , ನಿಕೊಲಸ್ ಮದುರೋ ,ಖಮೇನಿ ಹೀಗೆ ಪಟ್ಟಿ ದೊಡ್ಡದು.

ಆದರೆ ಇವತ್ತಿಗೆ ಆಟದ ನಿಯಮ ಮಾತ್ರ ಬದಲಾಗಿಲ್ಲ. ಆಟವೇ ಬದಲಾಗಿ ಹೋಗಿದೆ. ವಿಶ್ವಕ್ಕೆ ದೊಡ್ಡಣ್ಣ ಎಂದು ಬೀಗುವ ಅಮೆರಿಕಾದ ಮೂಗಿನ ಕೆಳೆಗೆ ಆಟವನ್ನೇ ಬದಲಿಸಿದ ಕೀರ್ತಿ ಮೊದಲಿಗೆ ತಲುಪಬೇಕಾದದ್ದು ಚೀನಾ ಎನ್ನುವ ಮಹಾನ್ ದೇಶಕ್ಕೆ! ಆ ನಂತರದ ಸ್ಥಾನ ಭಾರತಕ್ಕೆ ಎಂದು ಯಾವುದೇ ಸಂದೇಹವಿಲ್ಲದೆ ಹೇಳಬಹುದು. ಹೀಗೆ ಹೇಳಲು ಕಾರಣವಿದೆ. ಮೊದಲಿಗೆ ಚೀನಾ ವಿಚಾರವನ್ನು ತಿಳಿದುಕೊಳ್ಳೋಣ. ಆ ನಂತರ ಭಾರತದ ಸ್ಟ್ರಾಟೆಜಿ ಹೇಗೆ ಕೆಲಸ ಮಾಡುತ್ತಿದ್ದೆ ಎನ್ನುವುದನ್ನು ಕೂಡ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.

ಚೀನಾ ಎನ್ನುವ ಮಹಾನ್ ದೇಶ , ಅಮೆರಿಕಾದ ಅಭಿವೃದ್ಧಿ ಮಾಡಲ್ ಗಮನಿಸಿತು. ಅದನ್ನು ತನ್ನದಾಗಿಸಿ ಕೊಂಡಿತು. ಆದರೆ ಅದರ ಅಡ್ಮಿನಿಸ್ಟ್ರೇಟಿವ್ ಮಾಡಲ್ ನಲ್ಲಿರುವ ಹುಳುಕನ್ನು ಕೂಡ ಗಮನಿಸಿತು. ಮತ್ತು ಅದು ಆ ತಪ್ಪನ್ನು ಮಾಡದೆ ಹೊಸ ದಾರಿಯನ್ನು ಹುಡುಕಿಕೊಂಡಿತು. ಕಳೆದ ಎರಡು ದಶಕದಲ್ಲಿ ಚೀನಾ ಸದ್ದಿಲ್ಲದೇ ಹೊಸ ಆಟಕ್ಕೆ ಮುನ್ನುಡಿ ಬರೆಯಿತು. ಅಮೆರಿಕಾದ ಮಹಾನ್ ಮುತ್ಸದಿಗಳ ಕಣ್ಣಿಗೆ ಇದು ಬೀಳದೆ ಇದದ್ದು ಮಾತ್ರ ಆಶ್ಚರ್ಯ ! ಗಮನಿಸಿ ಅಮೇರಿಕಾ ತನ್ನ ವಿರುದ್ಧ ಸೊಲ್ಲೆತ್ತಿದ ದೇಶದ ಮುಖ್ಯಸ್ಥರನ್ನು ಇಲ್ಲವಾಗಿಸುವುದು ಅದರ ಸ್ಟ್ರಾಟರ್ಜಿ. ಚೀನಾ ಈ ರಣನೀತಿಯನ್ನು ಎಂದಿಗೂ ಅಳವಡಿಸಿಕೊಂಡಿಲ್ಲ. ಅದು ವಿರುದ್ಧ ಹೋಗುವವರೆಗೆ ಕಾಯುವುದಿಲ್ಲ. ಜಗತ್ತಿನ ಬಹುತೇಕ ದೇಶಗಳನ್ನು ಅದು ತನ್ನ ವ್ಯಾಪಾರದ ಮೂಲಕ ಕಟ್ಟಿ ಹಾಕಿ ಬಿಟ್ಟಿದೆ. ಇಂದಿಗೆ ಜಗತ್ತಿಗೆ ಫ್ಯಾಕ್ಟಾರಿ ಎನ್ನುವಂತಾಗಿದೆ. ಚೀನಾ ದೇಶವನ್ನು ಇನ್ನಿಲದೆ ದ್ವೇಷಿಸುವ ದೇಶಗಳು ಕೂಡ ಚೀನಾದಲ್ಲಿ ಉತ್ಪನ್ನವಾದ ಪದಾರ್ಥಗಳನ್ನು ಬಳಸದೆ ದಾರಿಯಿಲ್ಲ ಎನ್ನುವಂತಹ ಸನ್ನಿವೇಶವನ್ನು ಚೀನಾ ಸೃಷ್ಟಿಸಿದೆ. ಇದರ ಜೊತೆಗೆ ಬಹಳಷ್ಟು ದೇಶಗಳಲ್ಲಿ ಉತ್ಪನ್ನವಾಗುವ ವಸ್ತುಗಳಿಗೆ ಕಚ್ಚಾ ಪದಾರ್ಥವನ್ನು ಒದಗಿಸುವುದು ಕೂಡ ಚೀನಾ! ಇದರ ಜೊತೆಗೆ ರೇರ್ ಅರ್ಥ್ ಮೆಟೀರಿಯಲ್ಸ್ ಎನ್ನುವ ಪದಾರ್ಥಗಳನ್ನು ಇಂದಿಗೆ ಜಗತ್ತಿಗೆ ನೀಡುತ್ತಿರುವುದು ಚೀನಾ. ಹೀಗಾಗಿ ಚೀನಾದ ಮೇಲಿನ ಅವಲಂಬನೆ ಬಹಳವಾಗಿದೆ. ಚೀನಾ ಇಲ್ಲವೆಂದರೆ ಬಹಳಷ್ಟು ದೇಶಗಳ ಆರ್ಥಿಕತೆ ಯುದ್ಧ , ಸೆಣಸಾಟ ಇದ್ಯಾವುದೂ ಇಲ್ಲದೆ ಸೊರಗಿ ಹೋಗುತ್ತದೆ. ಚೀನಾ ಯಾವುದೇ ದೇಶದ ಮುಖ್ಯಸ್ಥನ್ನು ಕೊಲ್ಲುವ , ಚೆಕ್ಮೇಟ್ ಮಾಡುವ , ಬದಲಿಸುವ ಅವಶ್ಯಕತೆಯೇ ಇಲ್ಲ.

ಎರಡನೆಯದಾಗಿ ಚೀನಾ ಇನ್ನೊಂದು ತಂತ್ರವನ್ನು ಉಪಯೋಗಿಸಿಕೊಂಡಿತು. ಜಗತ್ತಿನ ಚಿಕ್ಕಪುಟ್ಟ ದೇಶಗಳಿಗೆ , ಬಡ ದೇಶಗಳಿಗೆ ಸಾಲ ನೀಡುವುದರ ಮೂಲಕ ಆ ದೇಶದ ಮೂಲಭೂತ ಸೌಕರ್ಯಗಳನ್ನು ಬಹಳಷ್ಟು ಮೇಲ್ದರ್ಜೆಗೆ ಏರಿಸಿತು. ಸಾಲದ ಋಣಭಾರದಲ್ಲಿ ಅವರನ್ನು ಸಿಲುಕಿಸಿದೆ. ಜಿಬೂಟಿ , ಶ್ರೀಲಂಕಾ ಜೊತೆಗೆ ಬಹುತೇಕ ಆಫ್ರಿಕನ್ ದೇಶಗಳ ಕಥೆಯಿದು. ಹೀಗಾಗಿ ಇಲ್ಲಿ ಕೂಡ ಚೀನಾ ಯಾವ ದೇಶದ ಲೀಡರ್ನನ್ನು ಕೂಡ ಬದಲಿಸುವ , ಅವರನ್ನು ಕೊಲ್ಲುವ ಅವಶ್ಯಕತೆಯಿಲ್ಲ.

ಮೂರನೆಯದಾಗಿ ಚೀನಾ ಯಾವುದಕ್ಕೂ ತಕ್ಷಣ ಸ್ಪಂದಿಸದೆ ಕಾಯ್ದು ನೋಡುವ ತಂತ್ರವನ್ನು ಅನುಸರಿಸುತ್ತದೆ. ಹೀಗಾಗಿ ಅದು ನೇರವಾಗಿ ಯುದ್ಧವನ್ನು ಮಾಡುವ ಸಂಭಾವ್ಯತೆಯನ್ನು ಕಡಿಮೆ ಮಾಡಿಕೊಳ್ಳುತ್ತದೆ. ಸೈನ್ಯ , ಹಣ ಇವುಗಳನ್ನು ಅದು ಖರ್ಚು ಮಾಡುವುದಿಲ್ಲ. ಅದರದೇನಿದ್ದರೂ ಮೈಂಡ್ ಗೇಮ್. ನೇರವಾಗಿ , ಭೌತಿಕ ಯುದ್ಧಕ್ಕೆ ಅದು ಬರುವುದಿಲ್ಲ. ಚೀನಾಕ್ಕೆ ಚನ್ನಾಗಿ ಗೊತ್ತಿದೆ , ಇದರ ಬೆಲೆ ಬಹಳ ಹೆಚ್ಚು ಎನ್ನುವುದು. ಹೀಗಾಗಿ ಅದು ಯುದ್ಧ ಬಯಸುವ ಶತ್ರವನ್ನು ಬೇರೆ ಮಾರ್ಗಗಳ ಮೂಲಕ ನಿತ್ರಾಣಗೊಳಿಸುತ್ತದೆ. ಇವತ್ತಿನ ಉದಾಹರಣೆಯನ್ನು ತೆಗೆದುಕೊಳ್ಳಿ. ಅಮೇರಿಕಾ ಇನ್ನೂ ತನ್ನ ಹಳೆಯ ಚೆಸ್ ಗೇಮಿನಲ್ಲಿ ಕುಳಿತಿದೆ. ಅದು ನೇರವಾಗಿ ಇರಾನ್ ಮೇಲೆ ಯುದ್ಧ ಮಾಡಿ ಖಮೇನಿಯನ್ನು ಕೊಂದಿತು. ಇದರಿಂದ ಯಾವ ಪ್ರಯೋಜನವು ಇಲ್ಲವಾಯ್ತು. ಇವತ್ತಿಗೆ 26ನೇ ದಿನಕ್ಕೆ ಯುದ್ಧ ಬಂದು ನಿಂತಿದೆ. ಇರಾನಿಗೆ ಯುದ್ಧದ ಖರ್ಚು ದಿನಕ್ಕೆ ಹತ್ತು ರೂಪಾಯಿ ಎಂದುಕೊಂಡರೆ, ಅಮೆರಿಕಕ್ಕೆ ಅದೇ ಯುದಕ್ಕೆ ನೂರೈವತ್ತು ರೂಪಾಯಿ ಖರ್ಚಾಗುತ್ತದೆ. ಅರ್ಥವಿಷ್ಟೆ ಇರಾನಿಗೆ ಯುದ್ಧದ ಖರ್ಚು ಕಡಿಮೆ, ಅಮೆರಿಕಕ್ಕೆ ಜಾಸ್ತಿ.

ಈ ಲೆಕ್ಕಾಚಾರದಲ್ಲಿ ಇರಾನ್ ಯುದ್ಧವನ್ನು ಬಹಳ ಸಮಯದ ವರೆಗೂ ಮುಂದುವರಿಸಬಲ್ಲದು. ಅಮೇರಿಕಾ ಬಹಳ ಕಾಲ ಇಷ್ಟೊಂದು ಖರ್ಚು ಮಾಡಿಕೊಂಡು ಯುದ್ಧವನ್ನು ಮುಂದುವರಿಸಲು ಸಾಧ್ಯವಿಲ್ಲ. ಇರಾನಿಗೆ ಅಷ್ಟೊಂದು ಮಿಸೈಲ್ ಸಂಗ್ರಹಣೆಗೆ ಚೀನಾ ಕಳೆದ ಐದಾರು ವರ್ಷದಿಂದ ಸಹಾಯ ಮಾಡಿದೆ. ಅಮೆರಿಕಾದೊಂದಿಗೆ ಇರಾನ್ ಅಣು ಒಪ್ಪಂದಕ್ಕೆ ಸಹಿ ಹಾಕಿದಾಗ ಮಿಸೈಲ್ ಬಗ್ಗೆ ಅಮೇರಿಕಾ ಪಟ್ಟು ಹಿಡಿದು ಸಹಿ ಹಾಕಿಸಿಕೊಳ್ಳಲಿಲ್ಲ. ಅದು ಇವತ್ತಿಗೆ ತಿರುಗುಬಾಣವಾಗಿದೆ. ಈ ಒಪ್ಪಂದದ ಪ್ರಕಾರ ಅಣು ತಂತ್ರಜ್ಞಾನವನ್ನು ಮಾತ್ರ ಇರಾನ್ ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತಿರಲಿಲ. ಆದರೆ ಮಿಸೈಲ್ ತಂತ್ರಜ್ಞಾನ ಮತ್ತು ಮಿಸೈಲ್ ಖರೀದಿಗೆ ಯಾವುದೇ ಅಡ್ಡಿಯಿರಲಿಲ್ಲ. ಇದನ್ನು ಬಳಸಿಕೊಂಡು ಹಾಡುಹಗಲು ಚೀನಾ ಇರಾನಿಗೆ ಮಿಸೈಲ್ ಸಂಗ್ರಹಣೆಗೆ ಸಹಾಯ ಮಾಡಿತು. ತನ್ನ ತಂತ್ರಜ್ಞಾನದ ಮೂಲಕ ನಿಖರವಾದ ಲೊಕೇಶನ್ ಲಾಕ್ ಮಾಡುವುದಕ್ಕೆ ಸಹಾಯ ಮಾಡುತ್ತಿದೆ. ಹೀಗಾಗಿ ಇರಾನ್ ಇಂದು ಸರಿಯಾಗಿ ತನ್ನ ಟಾರ್ಗೆಟ್ಗಳಿಗೆ ಮಾತ್ರ ದಾಳಿ ಮಾಡಲು ಸಹಾಯವಾಗುತ್ತಿದೆ. ಚೀನಾ ಅಮೆರಿಕಾದ ಮೇಲೆ ನೇರ ದಾಳಿ ಮಾಡುವುದಿಲ್ಲ , ಅಲ್ಲಿನ ರಿಜಿಮ್ ಬದಲಾವಣೆಗೆ ಕೂಗುವುದಿಲ್ಲ. ಅದು ತನ್ನ ಶತ್ರುವನ್ನು ಸುಸ್ತು ಮಾಡಿ ಬಿಡುತ್ತದೆ. ಯುದ್ಧದ ಸಾವು ನೋವು , ಹಣಕಾಸು ಖರ್ಚುಗಳಿಂದ ಅದರ ಮನೋಬಲ ಕುಗ್ಗುವಂತೆ ಮಾಡುತ್ತದೆ. ಹೀಗಾಗಿ ಚೆಸ್ ಆಟದ ನಿಯಮದ ಪ್ರಕಾರ ಅಮೇರಿಕಾ ಇರಾನ್ ಮೇಲೆ ವಿಜಯ ಸಾಧಿಸಿಯಾಗಿದೆ. ಆದರೆ ಬದಲಾದ ಆಟದಲ್ಲಿ ಅದು ಹೀನಾಯವಾಗಿ ಸೋತಿದೆ. ಸೋಲುತ್ತಿದೆ.

ಇನ್ನು ಭಾರತದ್ದು ಬೇರೆಯ ಕಥೆ! ಬೇರೆಯ ರಣನೀತಿ. ಭಾರತ ಇವತ್ತಿಗೆ ಆಫ್ರಿಕಾ ಖಂಡ ಸೇರಿದಂತೆ ಜಗತ್ತಿನ ಬಹಳಷ್ಟು ಅಂದರೆ ಸರಿಸುಮಾರು 150 ಕ್ಕೂ ಹೆಚ್ಚು ದೇಶಗಳಿಗೆ ನಾಯಕ. ಭಾರತ ಈ ಸ್ಥಾನವನ್ನು ಅಮೆರಿಕಾದಂತೆ ಚೆಸ್ ನಿಯಮ ಬಳಸಿ ಪಡೆದು ಕೊಳ್ಳಲಿಲ್ಲ. ಚೀನಾದಂತೆ ಆಟವನ್ನೇ ಬದಲಿಸಿ ಅಮೆರಿಕಕ್ಕೆ ಸೆಡ್ಡು ಹೊಡೆಯಲಿಲ್ಲ. ಭಾರತ ಮಾಡಿದ್ದು , ಸಾರಿದ್ದು 'ವಸುಧೈವ ಕುಟುಂಬಕಂ' ಎನ್ನುವ ಮಹಾಮಂತ್ರವನ್ನು! ಹೌದು ಜಗ್ಗತ್ತಿಗೆ ಬೇಕಿರುವುದು ಯುದ್ಧವಲ್ಲ, ಶಾಂತಿ ಮತ್ತು ಅಭಿವೃದ್ಧಿ ಎನ್ನುವುದನ್ನು , ಜಗತ್ತೆಲ್ಲಾ ಒಂದು ಮನೆ ಎನ್ನುವ ಅಂಶವನ್ನು ಅದು ಜಾಗತಿಕವಾಗಿ ಸಿಕ್ಕ ಅವಕಾಶಗಳಲ್ಲಿ ಸ್ಪಷ್ಟವಾಗಿ ಹೇಳುತ್ತಾ ಬಂದಿತು. ಇಂದಿಗೆ ಭಾರತದ ಪ್ರಧಾನಿ ಮಂತ್ರಿಯವರ ಈ ಮಂತ್ರ, ಈ ಸ್ಟ್ರಾಟೆಜಿ ಬಹಳ ಚನ್ನಾಗಿ ಕೆಲಸ ಮಾಡಿದೆ. ಪರಮ ಶತ್ರುಗಳಾದ ಇರಾನ್ ಮತ್ತು ಇಸ್ರೇಲ್ ಎರಡೂ ಇವತ್ತಿಗೆ ಭಾರತವನ್ನು ಗೌರವಿಸುತ್ತವೆ. ಭಾರತದ ಮೇಲೆ ಭುಸುಗುಟ್ಟಿದ ಟ್ರಂಪ್ ಬುಸುಗುವುದು ಬಿಟ್ಟು ಬೇರೇನೂ ಮಾಡಲಾಗಿಲ್ಲ. ಚೀನಾ ಮತ್ತು ರಷ್ಯಾ ಮತ್ತು ಇರಾನ್ ಬಹಳ ಆಪ್ತ ವಲಯದಲ್ಲಿವೆ. ಚೀನಾಗೆ ನಮ್ಮ ಮೇಲೆ ಅಂತಹ ಒಲವಿಲ್ಲ. ಆದರೆ ಅದರ ಆಪ್ತ ವಲಯದಲ್ಲಿರುವ ರಷ್ಯಾ ಮತ್ತು ಇರಾನ್ ಭಾರತದ ಬಗ್ಗೆ ಮೃದು ಧೋರಣೆ ಹೊಂದಿವೆ. ಎರಡು ದಶಕದಿಂದ ಭಾರತದಿಂದ ಅಂತರ ಕಾಪಾಡಿಕೊಂಡಿದ್ದ ಯೂರೋಪಿಯನ್ ಒಕ್ಕೂಟ ಭಾರತದೊಂದಿಗೆ ಟ್ರೇಡ್ ಅಗ್ರಿಮೆಂಟ್ ಸಹಿ ಮಾಡುತ್ತಾದೆ. ಇಂಗ್ಲೆಂಡ್ , ಆಸ್ಟ್ರೇಲಿಯಾ , ಕೊನೆಗೆ ಅಮೆರಿಕವೂ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳು ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ.

ಕೊನೆಮಾತು: ಅಮೇರಿಕಾ ಚೆಸ್ ಆಟದ ನಿಯಮಗಳ ಮೂಲಕ ಜಗತ್ತನ್ನು ನಿಯಂತ್ರಣದಲ್ಲಿಟ್ಟು ಕೊಂಡಿತು. ಚೀನಾ ಆಟದ ನಿಯಮವಲ್ಲ , ಆಟವನ್ನೇ ಬದಲಿಸಿ ಸುತ್ತುವರಿಕೆ , ಅವಲಂಬನೆಯ ಆಟವನ್ನು ಸೃಷ್ಟಿಸಿ ಅಮೆರಿಕಾವನ್ನು ಮಕಾಡೆ ಮಲಗಿಸಿತು. ಅದು ಅಮೇರಿಕಾ ಎನ್ನುವ ರಾಜನ್ನು ಮಕಾಡೆ ಮಲಗಿಸಿ ಕೂಡ ಗೆಲುವಿನ ನಗೆ ಬೀರಲಾಗುತ್ತಿಲ್ಲ. ಕಾರಣ ಭಾರತ ಎನ್ನುವ ಸಹೃದಯಿ ದೇಶ. ಅದು ಯಾರನ್ನು ಸ್ಪರ್ಧಿ ಎಂದು ನೋಡುತ್ತಿಲ್ಲ. ಬನ್ನಿ ನಾವೆಲ್ಲಾ ಒಂದೇ , ಒಟ್ಟಾಗಿ ಅಭಿವೃದ್ಧಿ ಪಥದಲ್ಲಿ ಸಾಗೋಣ . ಯುದ್ಧ ಬೇಡ ಶಾಂತಿ ಬೇಕು ಎಂದು ಹೇಳುತ್ತಾ ವಸುಧೈವ ಕುಟುಂಬಕಂ , ಪೂರ್ಣ ಜಗತ್ತು ಒಂದು ಕುಟುಂಬವಿದ್ದ ಹಾಗೆ ಎನ್ನುವ ಪ್ರೀತಿ ಮಾತನ್ನು ಆಡುತ್ತಿದೆ. ವಿಶ್ವ ಅದನ್ನು ಕೇಳುತ್ತಿದೆ. ನಿಧಾನವಾಗಿ ಭಾರತದ ಹಿಂದೆ ನಿಲ್ಲ ತೊಡಗಿವೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

'ಜೀವ ಬಾಯಿಗೆ ಬಂದಿತ್ತು': ಆಗಸದಲ್ಲೇ ಗಿರಕಿ ಹೊಡೆದ ಡಿಕೆ ಶಿವಕುಮಾರ್, ರೇವಣ್ಣ ಪ್ರಯಾಣಿಸುತ್ತಿದ್ದ ವಿಮಾನ, ಕೆಲಕಾಲ ಆತಂಕ! ಆಗಿದ್ದೇನು?

ಆಟೋ ಚಾಲನೆ ವೇಳೆ Reels ನೋಡುತ್ತಿದ್ದ ಚಾಲಕ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ! Video ಮಾಡಿದ ಮಹಿಳೆ

ಗ್ರಾಹಕರಿಗೆ 'ಎಣ್ಣೆ' ನೀಡುವ ಮುನ್ನ ವಯಸ್ಸು ಪರಿಶೀಲಿಸಿ: ಬಾರ್'ಗಳಿಗೆ ಹೈಕೋರ್ಟ್ ಆದೇಶ

ಭೀಕರ Video: ನೋಡ ನೋಡುತ್ತಲೇ ನದಿಗೆ ಉರುಳಿದ ಬಸ್, 40ಕ್ಕೂ ಹೆಚ್ಚು ಮಂದಿ ನಾಪತ್ತೆ, ಕನಿಷ್ಠ 23 ಮಂದಿ ಸಾವು!

SCROLL FOR NEXT