ಗೌರವ್ ಗೊಗೋಯ್-ಹಿಮಂತ ಬಿಸ್ವ ಶರ್ಮಾ- ಪ್ರಿಯಾಂಕ ವಾಧ್ರ online desk
ಅಂಕಣಗಳು

ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್‌ ಸೆಣಸಾಟ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೂ ಪರೀಕ್ಷೆ (ನೇರ ನೋಟ)

ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್‌ನಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ, ತರುಣ್‌ ಗೊಗೊಯಿ ಅವರ ನೀಲಗಣ್ಣಿನ ಹುಡುಗ. ತರುಣ್‌ ಗೊಗೊಯಿ ನಂತರ ಹಿಮಂತ ಮುಖ್ಯಮಂತ್ರಿ ಗಾದಿ ಏರುವವರು ಎಂಬ ನಿರೀಕ್ಷೆ.

ದೇಶದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ನೇರ ಮುಖಾಮುಖಿ ಆಗಿರುವುದು ಅಸ್ಸಾಂನಲ್ಲಿ ಮಾತ್ರ. ಬಿಜೆಪಿ ಹಾಗೂ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಗಳ ನಡುವೆ ಸೆಣಸಾಟ. ಮುಖ್ಯಮಂತ್ರಿ ಬಿಜೆಪಿಯ ಹಿಮಂತ ಬಿಸ್ವಾ ಶರ್ಮಾ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಸಂಸದ ಗೌರವ್‌ ಗೊಗೊಯಿ ನಡುವಿನ ವ್ಯಕ್ತಿ ಪ್ರತಿಷ್ಠೆ ಕಣ. ಅಖಿಲ ಭಾರತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜಕೀಯ ತಂತ್ರಗಾರಿಕೆಯ ಪರೀಕ್ಷೆ ಕೂಡ.

ಪ್ರಿಯಾಂಕಾ ಗಾಂಧಿ ವಾದ್ರಾ ಮೊದಲ ಬಾರಿಗೆ ಇಲ್ಲಿ ಚುನಾವಣೆಯಲ್ಲಿ ಪಕ್ಷದ ನೇರ ಉಸ್ತುವಾರಿ. ಅಭ್ಯರ್ಥಿಗಳ ಆಯ್ಕೆ ಸಮಿತಿ ಅಧ್ಯಕ್ಷರೂ ಅವರೇ. ಚುನಾವಣಾ ಪ್ರಚಾರದ ರೂಪುರೇಷೆ ಅವರ ನಾಯಕತ್ವದಲ್ಲೇ. ಅಸ್ಸಾಂ ಚುನಾವಣೆ ಪ್ರಿಯಾಂಕಾ ಗಾಂಧಿ ಅವರಿಗೂ ಸವಾಲು.

ಅಸ್ಸಾಂನಲ್ಲಿ ಸತತ ಎರಡು ಬಾರಿ ಬಿಜೆಪಿ ಆಳ್ವಿಕೆ. ಮೊದಲ ಅವಧಿಯಲ್ಲಿ ಸರ್ಬಾನಂದ ಸೋನೋವಾಲ್‌ ಮುಖ್ಯಮಂತ್ರಿ. ಎರಡನೇ ಅವಧಿಯಲ್ಲಿ ಹಿಮಂತ ಬಿಸ್ವಾ ಶರ್ಮಾ ಆಡಳಿತ. ಸೋನೋವಾಲ್‌ ಕೇಂದ್ರದಲ್ಲಿ ಇವತ್ತು ಸಚಿವರು. ಒಂದು ಕಾಲದ ಕಾಂಗ್ರೆಸ್‌ ಭದ್ರಕೋಟೆ ಈಗ ದುರ್ಬಲ. ಬಿಜೆಪಿಗೆ ಹಿಂದುತ್ವದ ಅಜೆಂಡಾ. ಕಾಂಗ್ರೆಸ್ಸಿನದು ಅಲ್ಪಸಂಖ್ಯಾತರನ್ನು ಓಲೈಸುವ ರಾಜಕಾರಣ.

ಅಸ್ಸಾಮಿನಲ್ಲಿ 126 ವಿಧಾನಸಭಾ ಕ್ಷೇತ್ರಗಳು. ಇಪ್ಪತ್ತೈದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಒಂದೇ ಹಂತದಲ್ಲಿ ಮತದಾನ. ಅದು ಏಪ್ರಿಲ್‌ 9 ರಂದು. ಕ್ಷೇತ್ರಗಳ ಪುನರ್ವೀಂಗಡಣೆ ನಂತರ ಪ್ರಥಮ ಅಸೆಂಬ್ಲಿ ಎಲೆಕ್ಷನ್‌.

ಅಸ್ಸಾಂ ಕಾಂಗ್ರೆಸ್‌ನಲ್ಲಿ ಒಳಬೇಗುದಿ. ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನ. ಚುನಾವಣೆ ಹೊತ್ತಲ್ಲಿ ಕೆಲವು ಪ್ರಮುಖ ನಾಯಕರ ಪಕ್ಷಾಂತರ. ಕಾಂಗ್ರೆಸ್ಸಿನ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರೇ ಬಿಜೆಪಿಗೆ ವಲಸೆ. ಪ್ರದೇಶ ಕಾಂಗ್ರೆಸ್‌ ಸಮಿತಿ ಮಾಜಿ ಅಧ್ಯಕ್ಷ ಭೂಪೇನ್‌ ಕುಮಾರ್‌ ಬೋರಾ ಕಾಂಗ್ರೆಸ್‌ನಲ್ಲಿ ಸುಮಾರು 30 ವರ್ಷಗಳಿಂದಲೂ ಇದ್ದವರು. ಈಗ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿ ಅಭ್ಯರ್ಥಿ.

ಬೋರಾ ಪಕ್ಷ ತ್ಯಜಿಸಿದ ನಂತರ ನಾಗೌನ್‌ ಲೋಕಸಭಾ ಸದಸ್ಯ ಪ್ರದ್ಯುತ್‌ ಬೋರ್ಡೋಲೈ, ಅಸ್ಸಾಂ ಪ್ರದೇಶ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ನವಜ್ಯೋತಿ ತಾಲೂಕ್‌ದಾರ್‌ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿರುವುದು ಆ ಪಕ್ಷಕ್ಕೆ ಹಿನ್ನಡೆ. ಬೋರ್ಡೋಲೈ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಈಗ ಹುರಿಯಾಳು. ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದವರು. ಎರಡು ಬಾರಿ ಸಂಸದರು.

ಅಸ್ಸಾಮಿನ ಈ ಚುನಾವಣೆ ಹಿಮಂತ ಬಿಸ್ವಾ ಶರ್ಮಾ ಹಾಗೂ ಗೌರವ್‌ ಗೊಗೊಯಿ ನಡುವಿನ ವ್ಯಕ್ತಿ ಪ್ರತಿಷ್ಠೆಯ ಸಮರವೂ ಹೌದು. ಹಿಮಂತ ಆಕ್ರಮಣಶೀಲ ಮನೋಭಾವದವರು. ಮೂಲತಃ ಕಾಂಗ್ರೆಸ್ಸಿಗರು. ಬಿಜೆಪಿ ಸೇರಿ ಮುಖ್ಯಮಂತ್ರಿಯಾದವರು. ಹಿಂದುತ್ವದ ವಿಚಾರದಲ್ಲಿ ಬಿಜೆಪಿ ನಾಯಕರಿಗಿಂತಲೂ ಒಂದು ಹೆಜ್ಜೆ ಮುಂದೆ. ಟ್ರಬಲ್‌ ಶೂಟರ್‌ ಇಮೇಜು. ಬಿಜೆಪಿ 57 ವರ್ಷದ ಹಿಮಂತ ಬಿಸ್ವಾ ಶರ್ಮಾ ಅವರಲ್ಲಿ ಇಡೀ ಈಶಾನ್ಯ ಭಾರತದ ನಾಯಕನನ್ನು ಗುರುತಿಸಿದೆ. ತ್ರಿಪುರಾ, ಮಣಿಪುರ, ಅರುಣಾಚಲ ಪ್ರದೇಶಗಳಲ್ಲೂ ಬಿಜೆಪಿಯ ವಿಜಯದಲ್ಲಿ ಹಿಮಂತ ಪಾತ್ರ ಪ್ರಮುಖ. ಹಿಮಂತ ಬ್ರಾಹ್ಮಣ ಸಮುದಾಯದವರು.

ಕಾಂಗ್ರೆಸ್ಸಿನ ಗೌರವ್‌ ಗೊಗೊಯಿ ವಾಗ್ಮಿ. ಯುವ ಸಮೂಹವನ್ನು ಸೆಳೆಯಬಲ್ಲವರು. ರಾಹುಲ್‌ ಗಾಂಧಿ ಅವರಿಗೆ ಆಪ್ತರು. ಮೂರು ಬಾರಿ ಸಂಸದರು. ಲೋಕಸಭೆಯಲ್ಲಿ ಕಾಂಗ್ರೆಸ್ಸಿನ ಉಪ ನಾಯಕ. ಅಸ್ಸಾಂ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು. ಮೊದಲ ಬಾರಿಗೆ ಅಸೆಂಬ್ಲಿ ಚುನಾವಣಾ ಕಣಕ್ಕೆ. ಅವರ ತಂದೆ ತರುಣ್‌ ಗೊಗೊಯಿ ಕಾಂಗ್ರೆಸ್‌ನಿಂದ 2001 ರಿಂದ 16ರ ವರೆಗೆ ಮೂರು ಬಾರಿ ಮುಖ್ಯಮಂತ್ರಿಯಾದವರು. ಈ ಚುನಾವಣೆ ಗೌರವ್‌ ನಾಯಕತ್ವಕ್ಕೆ ಅಗ್ನಿ ಪರೀಕ್ಷೆ. ಗೌರವ್‌ ಗೊಗೊಯಿ ಹಿಂದುಳಿದ ಅಹೋಮ್‌ ಸಮುದಾಯಕ್ಕೆ ಸೇರಿದವರು. ಈ ಸಮುದಾಯ ಸೇರಿದಂತೆ ಒಟ್ಟು ಆರು ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬುದು ಹಕ್ಕೊತ್ತಾಯ.

ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್‌ನಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ, ತರುಣ್‌ ಗೊಗೊಯಿ ಅವರ ನೀಲಗಣ್ಣಿನ ಹುಡುಗ. ತರುಣ್‌ ಗೊಗೊಯಿ ನಂತರ ಹಿಮಂತ ಮುಖ್ಯಮಂತ್ರಿ ಗಾದಿ ಏರುವವರು ಎಂಬ ನಿರೀಕ್ಷೆ. ಆದರೆ, ಯಾವಾಗ ತರುಣ್ ಗೊಗೊಯಿ ಪುತ್ರ ಗೌರವ್‌ ಗೊಗೊಯಿ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮುಗಿಸಿ 2011ರಲ್ಲಿ ಸ್ವದೇಶಕ್ಕೆ ವಾಪಸಾದರೋ ಗುರು-ಶಿಷ್ಯರ ನಡುವೆ ಸಮರ ಆರಂಭ. ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಹಿಮಂತ ಬಂಡಾಯ.

ಹಿಮಂತ ಅವರಿಗೆ ಆಗ ಕಾಂಗ್ರೆಸ್‌ನಲ್ಲಿ ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲವಿತ್ತು. ಸೋನಿಯಾ ಗಾಂಧಿ ಅವರು ಹಿಮಂತ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ನಿರ್ಧರಿಸಿದರು. ಆದರೆ, ರಾಹುಲ್‌ ಗಾಂಧಿ ಒಪ್ಪಲಿಲ್ಲ. ಹಿಮಂತ ಕಿಡಿಕಿಡಿ. ಬಂಡಾಯ ಸ್ಫೋಟ. ಅನೇಕ ಶಾಸಕರೊಂದಿಗೆ 2015ರಲ್ಲಿ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿಗೆ ಸೇರ್ಪಡೆ. ಆಗ ಮುಖ್ಯಮಂತ್ರಿಯಾಗಿದ್ದ ತರುಣ್‌ ಗೊಗೊಯಿ ಅವರ ಪ್ರತಿಕ್ರಿಯೆ- “ಹಿಮಂತ ಅವರನ್ನು ಕುರುಡಾಗಿ ನಂಬಿದೆ”. ಅದಕ್ಕೆ ಹಿಮಂತ ಅವರ ಅಷ್ಟೇ ತಣ್ಣನೆಯ ಪ್ರತಿಕ್ರಿಯೆ-“ ನಾನೂ ತರುಣ್‌ ಗೊಗೊಯಿ ಅವರನ್ನು ಕುರುಡಾಗಿ ಹಿಂಬಾಲಿಸಿದೆ”. ತರುಣ್‌ ಗೊಗೊಯಿ ನಂತರ ಅವರ ಪುತ್ರ ಗೌರವ್‌ ಗೊಗೊಯಿ ಹಾಗೂ ಹಿಮಂತ ಮಧ್ಯೆ ವಾಕ್ಸಮರ ಮತ್ತೊಂದು ಮಜಲಿಗೆ.

ಬಿಜೆಪಿಗೆ ಇಲ್ಲಿ ಅಸ್ಸಾಂ ಗಣ ಪರಿಷತ್‌, ಬೋಡೋ ಲ್ಯಾಂಡ್‌ ಪೀಪಲ್ಸ್‌ ಫ್ರಂಟ್ (ಬಿಪಿಎಫ್‌), ರಭಾ ಹಸಂಗ್ ಜೌಥಾ ಮಂಚ್‌ (ಆರ್‌ಎಚ್‌ಜೆಎಂ) ಜೊತೆ ಸ್ಥಾನ ಹೊಂದಾಣಿಕೆ. ಹಿಮಂತ ಸರಕಾರದಲ್ಲಿ ಅಸ್ಸಾಂ ಗಣ ಪರಿಷತ್‌ (ಎಜಿಪಿ) ಭಾಗಿ. ಎಜಿಪಿ ಈ ಚುನಾವಣೆಯಲ್ಲಿ ಬಂಗಾಳಿ ಮಾತಾಡುವ ಮುಸ್ಲಿಂ ಸಮುದಾಯದವರಿಗೆ ಶೇ.50ರಷ್ಟು ಟಿಕೆಟ್‌ ನೀಡಿರುವುದು ಅಚ್ಚರಿಯ ಬೆಳವಣಿಗೆ.

ಅಸ್ಸಾಂ ಗಣ ಪರಿಷತ್ತಿನ 26 ಅಭ್ಯರ್ಥಿಗಳಲ್ಲಿ 13 ಮಂದಿ ಬಂಗಾಳಿ ಭಾಷೆ ಮಾತಾಡುವ ಮುಸ್ಲಿಂಮರು. ಇವರನ್ನು ಅಸ್ಸಾಂನಲ್ಲಿ ಮಿಯಾ ಮುಸ್ಲಿಂಮರು ಅಂತ ಕರೆಯುತ್ತಾರೆ. ಇವರು ಬಾಂಗ್ಲಾದೇಶಿ ವಲಸಿಗರು ಎಂದೇ ಇವರ ವಿರುದ್ಧ ಅಸ್ಸಾಂ ಗಣಪರಿಷತ್‌ ಹೋರಾಟ ನಡೆಸುತ್ತಾ ಬಂದು 1985ರಲ್ಲಿ ಅಧಿಕಾರಕ್ಕೂ ಏರಿತ್ತು. ಅಸ್ಸಾಮನ್ನು ಎರಡು ಬಾರಿ ಆಳಿತ್ತು.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಿಯಾ ಮುಸ್ಲಿಂಮರ ವಿರುದ್ಧ ಸಮರವನ್ನೇ ಸಾರಿದ್ದಾರೆ. ಮಿಯಾ ಮುಸ್ಲಿಂಮರು ನೆಲೆಸಿರುವ ಜಾಗದಿಂದ ತೆರವುಗೊಳಿಸುತ್ತಿದ್ದಾರೆ. ಹೀಗಿದ್ದರೂ ಬಿಜೆಪಿ ಮಿತ್ರ ಪಕ್ಷ ಅಸ್ಸಾಂ ಗಣ ಪರಿಷತ್‌ ಮಿಯಾ ಮುಸ್ಲಿಂಮರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ನೀಡಿ ಹೊಸ ದಾಳ ಉರುಳಿಸಿದೆ. ಹೊಸ ರಾಜಕೀಯ ಅಂಕಗಣಿತದ ಲೆಕ್ಕಾಚಾರ ಹಾಕಿದೆ. ಬಿಜೆಪಿಗೆ ಗೊತ್ತಿಲ್ಲದೇ ಮಿತ್ರ ಪಕ್ಷ ಎಜಿಪಿ ಮುಸ್ಲಿಂಮರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕೆ ಇಳಿಸಲು ಸಾಧ್ಯವೇ ಇಲ್ಲ. ಹಿಮಂತ ಅವರನ್ನು ನಿಯಂತ್ರಿಸಲು ಎಜಿಪಿಯ ಲೆಕ್ಕಾಚಾರವೂ ಇದಾಗಿರಬಹುದು.

ಬಿಜೆಪಿ ಒಬ್ಬ ಮುಸ್ಲಿಂಮರಿಗೂ ಟಿಕೆಟ್‌ ನೀಡಿಲ್ಲ. ಕಳೆದ ಚುನಾವಣೆಯಲ್ಲಿ ಏಳು ಮಂದಿ ಮುಸ್ಲಿಂಮರು ಬಿಜೆಪಿಯಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನಿಂದ ಈ ಬಾರಿ 20 ಮುಸ್ಲಿಂಮರು ಕಣಕ್ಕೆ ಇಳಿದಿದ್ದಾರೆ.

ಬಾಂಗ್ಲಾದೇಶಿ ಮುಸ್ಲಿಂಮರು ಅಸ್ಸಾಮಿನ ನೆಲವನ್ನು ಆಕ್ರಮಿಸಿದ್ದಾರೆ. ನಾವು ಈಗ ಅಕ್ರಮಣಕಾರರನ್ನು ತೆರವುಗೊಳಿಸಲು ಆರಂಭಿಸಿದ್ದೇವೆ. ಅಸ್ಸಾಮಿನ ನೆಲ, ಸಂಸ್ಕೃತಿ, ಅಸ್ಮಿತೆಯನ್ನು ರಕ್ಷಿಸಲು ತಮ್ಮ ಸರಕಾರ ಬದ್ಧ ಎಂಬುದು ಹಿಮಂತ ಅವರ ಘೋಷಣೆ.

ಅಸ್ಸಾಂ ಸರಕಾರದ ಪ್ರಕಾರವೇ 1.5 ಲಕ್ಷ ಬಿಗಾ ಸರಕಾರಿ ಜಾಗವನ್ನು ಬಾಂಗ್ಲಾ ನುಸುಳುಕೋರರಿಂದ ತೆರವುಗೊಳಿಸಲಾಗಿದೆ. ಹೀಗಿರುವಾಗ ಅವರ ಮಿತ್ರ ಪಕ್ಷ ಅಸ್ಸಾಂ ಗಣ ಪರಿಷತ್‌ ಬಂಗಾಳಿ ಭಾಷೆ ಮಾತಾಡುವ ಮುಸ್ಲಿಂಮರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಯಲ್ಲಿ ಟಿಕೆಟ್‌ ನೀಡಿರುವುದು ಹಲವರ ಹುಬ್ಬೇರಿಸಿದೆ. ಹಿಮಂತ ಇತ್ತೀಚೆಗೆ ಮಿಯಾ ಮುಸ್ಲಿಂಮರನ್ನು ಬಿಜೆಪಿ ತನ್ನ ಶತ್ರುಗಳೆಂದು ಭಾವಿಸುವುದಿಲ್ಲ ಎಂದು ಮೃದು ಧೋರಣೆ ಪ್ರದರ್ಶಿಸಿದ್ದು ಇಲ್ಲಿ ಗಮನಾರ್ಹ.

ಕಾಂಗ್ರೆಸ್‌ ಪಕ್ಷವು ಅಖಿಲ್ ಗೊಗೊಯಿ ನೇತೃತ್ವದ ರಾಯ್‌ಜೋರ್‌ ದಳ, ಅಸ್ಸಾಂ ಜತಿಯಾ ಪರಿಷದ್‌ (ಎಜೆಪಿ), ಸಿಪಿಐ (ಎಂ), ಸಿಪಿಐ (ಎಂಎಲ್‌), ಆಲ್‌ ಪಾರ್ಟಿ ಹಿಲ್ ಲೀಡರ್ಸ್‌ ಕಾನ್ಫರೆನ್ಸ್‌ ಜೊತೆ ಸಖ್ಯ ಸಾಧಿಸಿದೆ.

ಅಸ್ಸಾಮಿನ ಸರಕಾರ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತಿತರ ತನ್ನ ಸಾಧನೆಗಳನ್ನು ಮುಂದಿಟ್ಟಿದೆ. ಒರುನೊಡೊಯ್‌ ಯೋಜನೆಯಲ್ಲಿ ಮಾರ್ಚ್‌ 10 ರಂದು ಒಂದೇ ದಿನ ಸುಮಾರು 40 ಲಕ್ಷ ಮಹಿಳಾ ಫಲಾನುಭವಿಗಳಿಗೆ 3,600 ಕೋಟಿ ರೂಪಾಯಿಗಳನ್ನು ಅವರ ಬ್ಯಾಂಕುಗಳ ಖಾತೆಗೆ ಜಮಾ ಮಾಡಿದೆ. ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೆ ಒಂಬತ್ತು ಸಾವಿರ ರೂಪಾಯಿ ಜಮಾ ಆಗಿದೆ. ಇದರಲ್ಲಿ ಬಿಹು ಬೋನಸ್‌ ನಾಲ್ಕು ಸಾವಿರ ರೂಪಾಯಿಗಳು.

ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ನೆರೆಯ ಬಾಂಗ್ಲಾದೇಶದ ನುಸುಳುಕೋರರನ್ನು ಹೊರ ಹಾಕುವುದು, ಬಾಲ್ಯ ವಿವಾಹ ತಡೆ, ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳು, ಹೆಸರಾಂತ ಗಾಯಕ ಜುಬಿನ್‌ ಗರ್ಗ್‌ ಸಾವು, ಹಿಮಂತ ಬಿಸ್ವಾ ಶರ್ಮಾ ಅವರ ಮೇಲಿನ ಭ್ರಷ್ಟಾಚಾರದ ಆರೋಪಗಳು ಹೆಚ್ಚು ಸದ್ದು ಮಾಡುತ್ತಿರುವ ಸಂಗತಿಗಳು.

ಅಸ್ಸಾಂನಲ್ಲಿ ಬಿಜೆಪಿಯನ್ನು ಸತತ ಮೂರನೇ ಬಾರಿಗೆ ಚುನಾಯಿಸಿದರೆ ಬಾಂಗ್ಲಾದೇಶಿ ನುಸುಳುಕೋರರನ್ನು ಅಸ್ಸಾಂನಿಂದ ಮಾತ್ರವೇ ಅಲ್ಲ, ದೇಶದಿಂದಲೇ ಹೊರ ಹಾಕುತ್ತೇವೆ ಎಂಬುದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಘೋಷಣೆ. ಹಿಮಂತ ಬಿಸ್ವಾ ಶರ್ಮಾ ಅವರದು ಬುಲ್ಡೋಜರ್‌ಗಳನ್ನು ತಂದು ಅಕ್ರಮ ವಲಸಿಗರ ನೆಲೆಗಳನ್ನು ಉರುಳಿಸುವ ಘರ್ಜನೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ ಅವರ ಹಾದಿ ತುಳಿಯುವ ಸುಳಿವು.

ಅಸ್ಸಾಂ ವಿಧಾನಸಭೆಗೆ 2016ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 60 (ಶೇಕಡವಾರು ಪಡೆದ ಮತಗಳು 29.8), ಕಾಂಗ್ರೆಸ್‌ 26 (ಶೇ.31.3), ಅಸ್ಸಾಂ ಗಣ ಪರಿಷತ್‌ 14 (ಶೇ.8.2), ಎಐಯುಡಿಎಫ್‌ 13 (ಶೇ.13.2), ಬಿಪಿಎಫ್‌ 12 (ಶೇ.4) ಸ್ಥಾನಗಳನ್ನು ಪಡೆದಿತ್ತು. ಅಸ್ಸಾಂನಲ್ಲಿ 2021ರ ಚುನಾವಣೆಯಲ್ಲಿ ಬಿಜೆಪಿ, ಎಜಿಪಿ, ಯುಪಿಪಿಎಲ್‌ ಮೈತ್ರಿಕೂಟ 75 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಬಿಜೆಪಿ 60, ಕಾಂಗ್ರೆಸ್‌ 29 ಸ್ಥಾನಗಳನ್ನು ಗೆದ್ದಿತ್ತು.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict- ಗ್ರಾಹಕರಿಗೆ ಸ್ವಲ್ಪ ನಿರಾಳ, ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿದ ಕೇಂದ್ರ ಸರ್ಕಾರ

ಯುದ್ಧ ನಡುವಲ್ಲೇ ಅಮೆರಿಕಾ ರಾಜತಾಂತ್ರಿಕ ಹೆಜ್ಜೆ: ಇರಾನ್ ಮೇಲಿನ ದಾಳಿ ಗಡುವು ಮುಂದೂಡಿಕೆ, ಶಾಂತಿ ಮಾತುಕತೆಗಳಿಗೆ ಒತ್ತು..!

ಒಳ ಮೀಸಲಾತಿ: ಮತಬ್ಯಾಂಕ್ ಲೆಕ್ಕಾಚಾರದಲ್ಲಿ ಸಿದ್ದು ಸರ್ಕಾರ, ಉಪಚುನಾವಣೆ ಮುಗಿಯುವವರೆಗೂ ತೀರ್ಮಾನಕ್ಕೆ ಬ್ರೇಕ್..!

chopper ಪ್ರಯಾಣ ವಿವಾದ: ‘ಬೊಮ್ಮಾಯಿ ಕಾಲದಲ್ಲೇ ಕೋಟಿ ಕೋಟಿ ಖರ್ಚು’; ಪ್ರತಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಭದ್ರಾ ಮೇಲ್ದಂಡೆ ಸೇರಿ ಪ್ರಮುಖ ಯೋಜನೆಗಳಿಗೆ ಅನುದಾನ ನೀಡಿಲ್ಲ: ರಾಜ್ಯದ ಆರ್ಥಿಕ ಹೊಡೆತಕ್ಕೆ ಕೇಂದ್ರವೇ ಕಾರಣ; ಸಿಎಂ ಸಿದ್ದರಾಮಯ್ಯ

SCROLL FOR NEXT