ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ 
ಅಂಕಣಗಳು

ಸ್ಟಿಂಗ್ ಸುಳಿಯಲಿ ಸಿಲುಕುತ್ತಿರುವ ಸರಕಾರ (ನೇರ ನೋಟ)

ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲ ನಾಲ್ಕು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಸೋಲಿಗೆ ಈ ಸ್ಟಿಂಗ್‌ ಕಾರ್ಯಾಚರಣೆ ಪ್ರಕರಣವೂ ಒಂದು ಕಾರಣ ಎಂದು ಕಾಂಗ್ರೆಸ್ಸಿಗರೇ ಈಗ ವಿಶ್ಲೇಷಿಸುತ್ತಿದ್ದಾರೆ.

ಕರ್ನಾಟಕ ರಾಜಕಾರಣ ಈಗ ಸ್ಟಿಂಗ್‌ ಆಪರೇಷನ್‌ ಸುತ್ತ ಸುಳಿದಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿರುವ ಸ್ಟಿಂಗ್‌ ಆಪರೇಷನ್‌ ಹಾಗೂ ನಂತರದ ಬೆಳವಣಿಗೆಗಳು ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರುತ್ತಿದೆ. ಅದರಲ್ಲೂ ಕಾಂಗ್ರೆಸ್ಸಿನ ಬಣ ರಾಜಕಾರಣವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಸ್ಟಿಂಗ್‌ ಕಾರ್ಯಾಚರಣೆ ಪ್ರಕರಣದ ಸುಳಿಯಲಿ ರಾಜ್ಯ ಸರಕಾರ ನಿಧಾನವಾಗಿ ಸಿಲುಕುತ್ತಿರುವ ಲಕ್ಷಣಗಳು ಗೋಚರಿಸಿವೆ.

ಸಿದ್ದರಾಮಯ್ಯ ತಮ್ಮ ವಿರುದ್ಧ ನಡೆದಿರುವ ಸ್ಟಿಂಗ್‌ ಆಪರೇಷನ್‌ ಬಗ್ಗೆ ಕೆರಳಿದ್ದಾರೆ. ತಮ್ಮಸುದೀರ್ಘ ರಾಜಕೀಯ ಜೀವನಕ್ಕೆ ಕಪ್ಪು ಮಸಿ ಬಳಿಯಲು ಈ ಷಡ್ಯಂತ್ರ ನಡೆದಿದೆ ಎಂದು ಆಕ್ರೋಶಗೊಂಡಿದ್ದಾರೆ. ತಾವೇ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ. ಸ್ವಪಕ್ಷೀಯರೇ ಈ ಷಡ್ಯಂತ್ರ ನಡೆಸಿದ್ದಾರೆ ಎಂದು ಸಿದ್ದರಾಮಯ್ಯ ಪುತ್ರ, ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ. ತನಿಖೆ ನಡೆಸಿರುವ ಬೆಂಗಳೂರು ಸಿಸಿಬಿ ಪೊಲೀಸರು ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್‌ ಆಪರೇಷನ್‌ ಕಟ್ಟುಕಥೆ ಎಂದು ಕ್ಲೀನ್‌ ಚಿಟ್‌ ನೀಡಿದ್ದಾರೆ. ಅಲ್ಲಿಗೆ ಈ ಪ್ರಕರಣ ಅಂತ್ಯವಾಗಬಹುದೆಂಬುದು ಅಧಿಕಾರಸ್ಥರ ಲೆಕ್ಕಾಚಾರವಾಗಿತ್ತು. ಆದರೆ, ಅದಾಗಿಲ್ಲ. ಈ ಪ್ರಕರಣದ ಮತ್ತೊಂದು ಮಗ್ಗಲು ತೆರೆದುಕೊಂಡಿದೆ.

ಸಿದ್ದರಾಮಯ್ಯ ಅವರದು ಈ ಸ್ಟಿಂಗ್‌ ಆಪರೇಷನ್ನಿನ ಪಾತ್ರಧಾರಿಗಳಿಗಿಂತ ಸೂತ್ರಧಾರಿಗಳ ಪತ್ತೆಗೆ ಬಿಗಿಪಟ್ಟು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಈ ಬಗ್ಗೆ ಅವರ ಹಕ್ಕೊತ್ತಾಯ. ತನಿಖೆಯ ಚೆಂಡನ್ನು ರಾಜ್ಯ ಸರಕಾರದ ಅಂಗಳಕ್ಕೆ ಎಸೆದಿದ್ದ ಅವರು ರಾಹುಲ್‌ ಗಾಂಧಿ ಅವರಿಗೆ ಅಹವಾಲು ಸಲ್ಲಿಸಿ ಸೂತ್ರಧಾರರನ್ನು ಪತ್ತೆ ಮಾಡಬೇಕು. ಪಿತೂರಿಯನ್ನು ಬಯಲಿಗೆಳೆಯಬೇಕು ಎಂಬ ಒತ್ತಾಯ. ಹೈಕಮಾಂಡ್‌ ಮೇಲೆ ಹೊಣೆಗಾರಿಕೆ. ಹೈಕಮಾಂಡ್‌ಗೆ ಇಕ್ಕಟ್ಟಿನ ಪರಿಸ್ಥಿತಿ. ಮೌನವಹಿಸಿದರೆ ಕಷ್ಟ.

ಕರ್ನಾಟಕದ ವಿದ್ಯಮಾನಗಳ ಬಗ್ಗೆ ಹೈಕಮಾಂಡ್‌ ಗೆ ಬೇಸರ!

ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಸಿದ್ದರಾಮಯ್ಯ ಅವರಾಗಲಿ ಅಥವಾ ಅವರ ಪುತ್ರ, ಸಚಿವ ಡಾ.ಯತೀಂದ್ರ ಅವರಾಗಲಿ ಈ ಭೇಟಿಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಪತ್ರಿಕಾ ವರದಿಗಳು ಪ್ರಕಟವಾಗಿದ್ದರೂ ಅವುಗಳು ಮೂಲಗಳನ್ನು ಆಧರಿಸಿದ್ದು. ಹಾಗಂತ ಪತ್ರಿಕಾ ವರದಿಗಳನ್ನೂ ಸಿದ್ದರಾಮಯ್ಯ ಅಥವಾ ಡಾ.ಯತೀಂದ್ರ ಅವರು ಅಲ್ಲಗಳೆದಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ 2028ರ ವಿಧಾನಸಭಾ ಚುನಾವಣೆಗೆ ತಾವು ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗೆ ಹೇಳಿದ್ದಾರೆನ್ನಲಾದ ಮಾತು ಗಂಭೀರವಾದುದು. ಇತ್ತೀಚೆಗೆ ನಡೆದ ವಿಧಾನಪರಿಷತ್‌ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಪ್ರಚಾರ ನಡೆಸಲಿಲ್ಲ ಎಂಬುದನ್ನು ಮರೆಯಬಾರದು.

ಇನ್ನು ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಿದರೆ, ಪೊಲೀಸರು ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚೀಟ್‌ ನೀಡಿದ್ದಾರೆ. ದೂರುದಾರರಿಗೇ ಪೊಲೀಸರು ಕ್ಲೀನ್‌ಚೀಟ್‌ ನೀಡಿರುವ ವಿಚಿತ್ರ ಪ್ರಸಂಗ ಇದು. ವಿಡಿಯೋ ಹಂಚಿದವರನ್ನು ಪತ್ತೆ ಮಾಡಿದ ಪೊಲೀಸರು, ಸ್ಟಿಂಗ್‌ ಕಾರ್ಯಾಚರಣೆ ಮಾಡಿದವರು ಹಾಗೂ ಇದರ ಹಿಂದಿರುವವರ ಬಗ್ಗೆ ನಡೆಸಿರುವ ತನಿಖೆಯ ಹಾದಿ ಬಗ್ಗೆ ಸಿದ್ದರಾಮಯ್ಯ ಅವರಿಗೆ ಸಮಾಧಾನವಿಲ್ಲ. ಅದಕ್ಕೇ ಅವರು ಹೈಕಮಾಂಡ್‌ ಬಾಗಿಲು ತಟ್ಟಿದ್ದು. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರದ್ದೂ ಪೊಲೀಸ್‌ ತನಿಖೆ ವಿಚಾರದಲ್ಲಿ ಸಿದ್ದರಾಮಯ್ಯ ಅವರದ್ದೇ ಅಭಿಪ್ರಾಯ. ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಳುತ್ತಿರುವ ಪ್ರಶ್ನೆ ಒಂದೇ- ತನಿಖೆಯ ದಿಕ್ಕು ಯಾವುದು?

ಸ್ಟಿಂಗ್‌ ಆಪರೇಷನ್‌ ಪ್ರಕರಣವು ಪೊಲೀಸರ ತನಿಖೆಯ ಎಲ್ಲೆಯನ್ನು ದಾಟಿ ಈಗ ರಾಜಕಾರಣದ ಮೈದಾನವನ್ನು ಪ್ರವೇಶಿಸಿದೆ. ಈ ಪ್ರಕರಣದಲ್ಲಿ ಪೊಲೀಸರ ತನಿಖೆ ಒಂದೆಡೆಯಾದರೆ, ರಾಜಕೀಯದ ಆಯಾಮಗಳು ಮತ್ತೊಂದೆಡೆ. ಕರ್ನಾಟಕದಲ್ಲಿ ಈ ಹಿಂದೆಯೂ ಸ್ಟಿಂಗ್‌ ಆಪರೇಷನ್‌ ಪ್ರಕರಣಗಳು ಸಾಕಷ್ಟು ನಡೆದಿವೆ. ಆದರೆ, ಆ ಪ್ರಕರಣಗಳು ವೈಯಕ್ತಿಕ ಮಟ್ಟದಲ್ಲಿ ಪರಿಣಾಮಗಳನ್ನು ಬೀರಿತ್ತು. ಆದರೆ, ಸಿದ್ದರಾಮಯ್ಯ ಅವರ ವಿರುದ್ಧ ನಡೆದಿರುವ ಈ ಸ್ಟಿಂಗ್‌ ಆಪರೇಷನ್‌ ಪ್ರಕರಣ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರುವ ಲಕ್ಷಣಗಳನ್ನು ತೋರಿವೆ. ಸ್ಟಿಂಗ್‌ ಬಗ್ಗೆ ಚರ್ಚೆ ನಡೆದಷ್ಟೂ ಕಾಂಗ್ರೆಸ್ಸಿಗೆ ಮಾರಕ. ಕಾಂಗ್ರೆಸ್‌ನಲ್ಲೇ ಆರಂಭವಾದ ಈ ಚರ್ಚೆಗೆ ಕಾಂಗ್ರೆಸ್ಸೇ ತಾರ್ಕಿಕ ಅಂತ್ಯ ಹಾಡಬೇಕು. ಇಲ್ಲದಿದ್ದರೆ ಇದು ಪಡೆಯುವ ತಿರುವುಗಳನ್ನು ಕಾಂಗ್ರೆಸ್ಸೇ ಎದುರಿಸಬೇಕಾಗುತ್ತದೆ. ಸಿದ್ದರಾಮಯ್ಯ ಅವರು ಮುನಿಸಿಕೊಂಡರೆ ಕಾಂಗ್ರೆಸ್ಸಿಗೆ ಹಿನ್ನಡೆ ಗ್ಯಾರಂಟಿ.

ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲ ನಾಲ್ಕು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಸೋಲಿಗೆ ಈ ಸ್ಟಿಂಗ್‌ ಕಾರ್ಯಾಚರಣೆ ಪ್ರಕರಣವೂ ಒಂದು ಕಾರಣ ಎಂದು ಕಾಂಗ್ರೆಸ್ಸಿಗರೇ ಈಗ ವಿಶ್ಲೇಷಿಸುತ್ತಿದ್ದಾರೆ. ಸ್ಟಿಂಗ್ ಆಪರೇಷನ್‌ ಪ್ರಕರಣದ ಸುತ್ತ ನಿಧಾನವಾಗಿ ಸಿದ್ದರಾಮಯ್ಯ- ಶಿವಕುಮಾರ್ ಪರ-ವಿರೋಧ ಗುಂಪುಗಾರಿಕೆ ಶುರುವಾಗಿದೆ. ಇದಕ್ಕೆ ಶಾಸಕ ಕೆ.ಎನ್.ರಾಜಣ್ಣ ಹಾಗೂ ಸಚಿವ ಬಾಲಕೃಷ್ಣ ಅವರ ನಡುವಿನ ವಾಗ್ವಾದವೇ ಸಾಕ್ಷಿ. ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ, ಒಳಜಗಳ ಸದಾ ಇದ್ದದ್ದೇ.

ಸ್ಟಿಂಗ್‌ ಆಪರೇಷನ್‌ ಕಥೆ ಇದಾದರೆ, ಸಿದ್ದರಾಮಯ್ಯ ಅವರ ಬಳಿ ಶಿವಕುಮಾರ್ ಸರಕಾರವನ್ನು ಕಟ್ಟಿ ಹಾಕಲು ಇರುವ ಒಂದು ಅಸ್ತ್ರ ಜಾತಿ ಗಣತಿ ವರದಿ. ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸರಕಾರಕ್ಕೆ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷಾ ವರದಿ ಜಾರಿಗೊಳಿಸುವಂತೆ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳು ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿರುವುದು ಈ ನಿಟ್ಟಿನಲ್ಲಿ ಒಂದು ಬೆಳವಣಿಗೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ರಾಹುಲ್ ಗಾಂಧಿ ಅವರು ಸೂಚಿಸಿದ ಮರುದಿನ ಸಿದ್ದರಾಮಯ್ಯ ಅವರು ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ ಅವರಿಂದ ಈ ವರದಿ ಸ್ವೀಕರಿಸಿದ್ದರು. ನಂತರ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದು ಸಿದ್ದರಾಮಯ್ಯ ಅವರ ‘ದೂರದೃಷ್ಟಿ’. ಜಾತಿ ಗಣತಿ ವರದಿ ಜಾರಿಗೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದಾಗ ವಿರೋಧಿಸಿದ್ದರು. ಹೈಕಮಾಂಡ್‌ನಲ್ಲೂ ತಮ್ಮ ವಿರೋಧ ದಾಖಲಿಸಿದ್ದರು. ಜಾತಿಗಣತಿ ವರದಿ ಜಾರಿಗೆ ಸಿದ್ದರಾಮಯ್ಯ ಅವರು ಮುಂಬರುವ ದಿನಗಳಲ್ಲಿ ಒತ್ತಾಯಿಸಲು ಆರಂಭಿಸಿದರೆ ಶಿವಕುಮಾರ್ ಸರಕಾರ ಇಕ್ಕಟ್ಟಿಗೆ ಸಿಲುಕುತ್ತದೆ.

ಕಾಂಗ್ರೆಸ್ಸಿಗೆ ಅಹಿಂದ ಮತದಾರರೇ ಆಧಾರ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಅಹಿಂದ ಮತದಾರರೇ ಕಾಂಗ್ರೆಸ್‌ ಕೈಯನ್ನು ಬಲವಾಗಿ ಹಿಡಿದವರು. ಆದರೆ, ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಹಿಂದುಳಿದವರು, ದಲಿತರ ಮತಗಳನ್ನು ಹಿಡಿದಿಡುವುದು ಕಾಂಗ್ರೆಸ್ಸಿಗೆ ಸವಾಲು.

ಸಿದ್ದರಾಮಯ್ಯ ಅವರು ಇದೇ ವರ್ಷ ಸಾಮಾಜಿಕ ನ್ಯಾಯದ ದಿನ ಫೆಬ್ರುವರಿ 20 ರಂದು ಪತ್ರಿಕೆಯೊಂದರಲ್ಲಿ ಬರೆದ ಲೇಖನದ ಸಾಲುಗಳನ್ನು ಈಗ ಅವರ ಬೆಂಬಲಿಗರು ಮತ್ತೆ ಮೆಲುಕು ಹಾಕುತ್ತಿದ್ದಾರೆ. ಅದು - ‘’ಸಾಮಾಜಿಕ ಬದಲಾವಣೆಗೆ ಕೈಹಾಕಿದವರನ್ನು ಇತಿಹಾಸದಲ್ಲಿ ವ್ಯವಸ್ಥಿತವಾಗಿ ದಮನಿಸಲಾಗಿದೆ. ಈಗ ಅದೇ ಇತಿಹಾಸ ಪುನರಾವರ್ತನೆ ಆಗುತ್ತಿದೆ. ರಾಜಕೀಯ ಷಡ್ಯಂತ್ರಗಳಿಗೆ ಮಣಿಯದೇ ಶೋಷಿತರ ಪರವಾಗಿ ಹೋರಾಡುವೆ. ನೀವು ನನ್ನನ್ನು ಎಷ್ಟು ತುಳಿಯಲು ಪ್ರಯತ್ನಿಸುತ್ತೀರೋ ನಾನು ಅಷ್ಟೇ ಬಲವಾಗಿ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಎದ್ದು ಬರುತ್ತೇನೆ’’.

ಸಿದ್ದರಾಮಯ್ಯ ಅವರ ಮುಂದಿನ ಹೆಜ್ಜೆಗಳು ಕುತೂಹಲಕಾರಿ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕಕ್ಕೆ ಬಿಗ್ ಶಾಕ್; ಪರಮಾಣು ಸ್ಥಾವರಗಳ ಮೇಲಿನ ದಾಳಿಗೆ ಖಂಡನೆ, ಇರಾನ್ ಪರ ನಿಂತ ರಷ್ಯಾ; ಯುದ್ಧ ನಿಲ್ಲಿಸಲು ಸರ್ವಪ್ರಯತ್ನ ಎಂದ ಪುಟಿನ್..!

ಅಮೆರಿಕ ಚುನಾವಣೆಯಲ್ಲಿ ಹಿನ್ನಡೆ ಬೆನ್ನಲ್ಲೇ ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; ಯುದ್ಧ ಮತ್ತಷ್ಟು ಭೀಕರಗೊಳಿಸುವ ಸುಳಿವು, ಇಡೀ ದೇಶವನ್ನೇ ನಾಶಪಡಿಸುವ ಎಚ್ಚರಿಕೆ..!

ಕಬ್ಬು ಬೆಳೆಗಾರರ ಹೋರಾಟ ಅಂತ್ಯ, ಶುಕ್ರವಾರದಿಂದ ಕಾರ್ಖಾನೆಗಳು ಆರಂಭ: ರೈತ ಮುಖಂಡ ಚೂನಪ್ಪ ಪೂಜಾರಿ

Asian Champions Trophy 2026 Final: ಜಪಾನ್ ವಿರುದ್ಧ 4-1 ಅಂತರದ ಗೆಲುವು; ದಾಖಲೆ ನಿರ್ಮಿಸಿದ ಭಾರತಕ್ಕೆ 6ನೇ ಟ್ರೋಫಿ

ಬೆಂಗಳೂರು ಟರ್ಫ್ ಕ್ಲಬ್‌ಗೆ 4 ಎಕರೆ ಜಮೀನು ಗುತ್ತಿಗೆ; ₹20 ಸಾವಿರ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಸಂಪುಟ ಅಸ್ತು!