ಹೈದರಾಬಾದಿನ ಒಂದು ಮೌನವಾಗಿ ಕಾರ್ಯಾಚರಿಸುವ ಪ್ರಯೋಗಾಲಯದೊಳಗೆ, ಯುವ ಭಾರತೀಯ ಇಂಜಿನಿಯರ್ಗಳ ತಂಡ ಕಳೆದ ಹಲವಾರು ವರ್ಷಗಳಿಂದ ಒಂದು ಕಠಿಣ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಾ ಬಂದಿದೆ. ಅದುವೇ ಶತ್ರುಗಳು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಚಲಿಸುವ ಕ್ಷಿಪಣಿಯೊಂದರ ನಿರ್ಮಾಣ. ನವೆಂಬರ್ 5ರ ಮಂಗಳವಾರದಂದು, ಈ ಪರಿಕಲ್ಪನೆ ಬಂಗಾಳ ಕೊಲ್ಲಿಯ ಮೇಲ್ಭಾಗದಲ್ಲಿ ಸಾಕಾರಗೊಂಡಿತು. ಈ ಮೂಲಕ, ಭಾರತ ತನ್ನ ನೆಲದಲ್ಲೇ ವಿನ್ಯಾಸಗೊಂಡು, ನಿರ್ಮಾಣಗೊಂಡು, ಪರೀಕ್ಷಿಸಲ್ಪಟ್ಟ ಆಯುಧವೊಂದರ ಸೇರ್ಪಡೆಯತ್ತ ಇನ್ನೊಂದು ಹೆಜ್ಜೆ ಇಟ್ಟಿತು.
ಈ ಆಯುಧದ ಹೆಸರೇ ಪ್ರಳಯ್. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಈ ಆಯುಧವನ್ನು ಒಡಿಶಾದ ಕರಾವಳಿಯಾಚೆಗಿನ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಬೆಳಗ್ಗೆ 11:10ಕ್ಕೆ ಉಡಾವಣೆಗೊಳಿಸಿತು ಎಂದು ರಕ್ಷಣಾ ಸಚಿವಾಲಯ ಖಚಿತಪಡಿಸಿದೆ. ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜಿನಲ್ಲಿ ಅಳವಡಿಸಿದ ಉಪಕರಣಗಳು ಕ್ಷಿಪಣಿಯ ಹಾರಾಟವನ್ನು ದಾಖಲಿಸಿ, ಅದು ತನ್ನ ಎಲ್ಲ ಗುರಿಗಳನ್ನೂ ಪೂರೈಸಿದೆ ಎಂದು ಖಚಿತಪಡಿಸಿತು. ಇದೊಂದು ಬಳಕೆದಾರರ ಪರೀಕ್ಷಾ ಪ್ರಯೋಗವಾಗಿದ್ದು, ಪ್ರಳಯ್ ಯೋಧರ ಬಳಕೆಗೆ ಸಿದ್ಧವಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಉದ್ದೇಶ ಹೊಂದಿತ್ತು. ಈ ಪ್ರಶ್ನೆಗೆ ಸಚಿವಾಲಯ ಹೌದು ಎಂದೇ ಉತ್ತರಿಸಿದ್ದು, ಪ್ರಳಯ್ ಸದ್ಯದಲ್ಲೇ ಭಾರತೀಯ ಸೇನಾ ಪಡೆಗಳಿಗೆ ಸೇರ್ಪಡೆಗೊಳ್ಳುವ ನಿರೀಕ್ಷೆಗಳಿವೆ.
ಒಂದು ಸಾಂಪ್ರದಾಯಿಕ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಎತ್ತರಕ್ಕೆ ಎಸೆದ ಕ್ರಿಕೆಟ್ ಚೆಂಡಿಗೆ ಹೋಲಿಸಿಕೊಳ್ಳಿ. ಅದು ಸಾಮಾನ್ಯವಾಗಿ ಊಹಿಸಲು ಸಾಧ್ಯವಿರುವ ಬಾಗಿದ ಪಥದಲ್ಲಿ ಸಾಗುತ್ತದೆ. ಆದ್ದರಿಂದ, ಅದನ್ನು ನೋಡುತ್ತಿದ್ದಂತೆಯೇ ಕ್ಷೇತ್ರರಕ್ಷಕ ಅದು ಎಲ್ಲಿ ಬೀಳಬಹುದು ಎನ್ನುವುದನ್ನು ಸರಿಯಾಗಿ ಅಂದಾಜಿಸಬಹುದು. ರಕ್ಷಣಾ ರೇಡಾರ್ಗಳು ಇದೇ ರೀತಿಯಲ್ಲಿ ಕಾರ್ಯಾಚರಿಸುತ್ತವೆ. ಅವು ಕ್ಷಿಪಣಿ ಎಲ್ಲಿಗೆ ಚಲಿಸುತ್ತದೆ ಎನ್ನುವುದನ್ನು ಅಂದಾಜಿಸಿ, ಅದು ಚಲಿಸುವ ಪಥದಲ್ಲಧ ಇಂಟರ್ಸೆಪ್ಟರ್ ಅಳವಡಿಸಿ, ಕ್ಷಿಪಣಿಯನ್ನು ಹೊಡೆದುರುಳಿಸುತ್ತವೆ. ಆದರೆ, ಪ್ರಳಯ್ ಮಾತ್ರ ಆ ಕ್ರಿಕೆಟ್ ಚೆಂಡಿನ ರೀತಿಯಲ್ಲಿ ಕಾರ್ಯಾಚರಿಸುವುದಿಲ್ಲ. ಇದೊಂದು ಕ್ವಾಸಿ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಬಹಳಷ್ಟು ಕೆಳ ಹಂತದಲ್ಲಿ, ಸಪಾಟಾಗಿ ಚಲಿಸುತ್ತದೆ. ಗಮನಾರ್ಹ ಅಂಶವೆಂದರೆ, ಇದು ಹಾರಾಟದ ಮಧ್ಯದಲ್ಲೇ ತನ್ನ ಪಥವನ್ನು ಬದಲಿಸಲಬಲ್ಲದು. ಇದರಿಂದ, ಕ್ಷೇತ್ರ ರಕ್ಷಕ ಕೊನೆಯ ಕ್ಷಣದ ತನಕವೂ ಚೆಂಡು ಎಲ್ಲಪ್ಪಾ ಬರುತ್ತದೆ ಎಂದು ಗೊಂದಲದಲ್ಲೇ ಊಹಿಸುತ್ತಿರಬೇಕಾಗುತ್ತದೆ. ಈ ಊಹಿಸಲು ಸಾಧ್ಯವಿಲ್ಲದಂತಹ ಚಲನೆಯೇ ಕ್ಷಿಪಣಿಯ ಬಹುಮುಖ್ಯ ಸಾಮರ್ಥ್ಯ.
ರಕ್ಷಣಾ ಸಚಿವಾಲಯ ಯಶಸ್ವಿ ಪರೀಕ್ಷೆಯನ್ನು ಖಚಿತಪಡಿಸಿದರೂ, ಡಿಆರ್ಡಿಒ ಪ್ರತ್ಯೇಕವಾಗಿ ಕ್ಷಿಪಣಿಯ ಹಾರಾಟ ಪ್ರದರ್ಶನದ ಕುರಿತು ವಿಸ್ತೃತವಾದ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ. ಲಭ್ಯವಿರುವ ವರದಿಗಳ ಪ್ರಕಾರ, ಮ್ಯಾಕ್ 1.6 ವೇಗದಲ್ಲಿ, ಅಂದರೆ ಶಬ್ದದ ವೇಗಕ್ಕಿಂತ 1.6 ಪಟ್ಟು ಹೆಚ್ಚಿನ ವೇಗದಲ್ಲಿ ಉಡಾವಣೆಗೊಂಡ ಬಳಿಕ, ಕ್ಷಿಪಣಿ ತನ್ನ ಪಥವನ್ನು ಬದಲಿಸುತ್ತದೆ ಎನ್ನಲಾಗಿದೆ. ಅದು ಬಳಿಕ ಹೆಚ್ಚು ವೇಗ ಪಡೆದುಕೊಳ್ಳುತ್ತಾ, ಮೇಲಕ್ಕೆ ಏರುತ್ತದೆ. ತನ್ನ ಗುರಿಯ ಸನಿಹ ತಲುಪಿದಾಗ, ಕ್ಷಿಪಣಿ ಬಹುತೇಕ ಮ್ಯಾಕ್ 5, ಅಂದರೆ ಶಬ್ದದ ವೇಗಕ್ಕಿಂತ ಐದು ಪಟ್ಟು ಹೆಚ್ಚು, ಅಥವಾ ಪ್ರತಿ ಗಂಟೆಗೆ 6,174 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿರುತ್ತದೆ. ಲಭ್ಯ ವರದಿಗಳ ಪ್ರಕಾರ, ಕ್ಷಿಪಣಿ ಕೊನೆಯ 30 ಸೆಕೆಂಡುಗಳ ಅವಧಿಯಲ್ಲೂ ತನ್ನ ಹಾರಾಟದ ಪಥವನ್ನು ಬದಲಿಸಬಲ್ಲದು. ಇದರ ಅಸಾಧಾರಣ ವೇಗ ಮತ್ತು ಪಥ ಬದಲಿಸುವ ಸಾಮರ್ಥ್ಯದ ಕಾರಣದಿಂದ ಇಸ್ರೇಲಿನ ಐರನ್ ಡೋಮ್, ಚೀನಾದ ಎಚ್ಕ್ಯು-9 ರೀತಿಯ ಶತ್ರುಗಳ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಅದನ್ನು ತಡೆಯುವುದು ಕಷ್ಟಕರವಾಗಲಿದೆ. ಆದರೆ, ಯಾವುದಾದರೂ ನಿರ್ದಿಷ್ಟ ವಾಯು ರಕ್ಷಣಾ ವ್ಯವಸ್ಥೆಯ ವಿರುದ್ಧ ಪ್ರಳಯ್ ಸಾಮರ್ಥ್ಯ ಇನ್ನೂ ಸಾಬೀತಾಗಿಲ್ಲ. ಅವೇ ವರದಿಗಳ ಪ್ರಕಾರ, ಪ್ರಳಯ್ ಕೇವಲ ಏಳರಿಂದ ಎಂಟು ನಿಮಿಷಗಳ ಒಳಗೇ ತನ್ನ ಸಂಪೂರ್ಣ 500 ಕಿಲೋಮೀಟರ್ ಪ್ರಯಾಣವನ್ನು ಪೂರ್ಣಗೊಳಿಸಿದೆ.
ಇನ್ನು ಪ್ರಳಯ್ ಕ್ಷಿಪಣಿ ಅತ್ಯಂತ ನಿಖರವೂ ಹೌದು. ಪ್ರಳಯ್ ಕ್ಷಿಪಣಿಯ ಸರ್ಕ್ಯುಲರ್ ಎರರ್ ಪ್ರೊಬಾಬಲ್ ಅಥವಾ ಸಿಇಪಿ 10 ಮೀಟರ್ಗಿಂತಲೂ ಕಡಿಮೆಯಿದೆ. ಅಂದರೆ, ಹಲವು ಕ್ಷಿಪಣಿಗಳನ್ನು ಒಂದೇ ಗುರಿಯತ್ತ ಪ್ರಯೋಗಿಸಿದರೆ, ಅವುಗಳ ಪೈಕಿ ಅರ್ಧದಷ್ಟಾದರೂ ಗುರಿಯ 10 ಮೀಟರ್ ವ್ಯಾಪ್ತಿಯೊಳಗೆ ತಲುಪುತ್ತವೆ. ನೂರಾರು ಕಿಲೋಮೀಟರ್ ದೂರದಿಂದ ಬರುವ ಕ್ಷಿಪಣಿ ಅಷ್ಟು ನಿಖರತೆ ಹೊಂದುವುದು ನಿಜಕ್ಕೂ ಅಸಾಧಾರಣ ಸಾಮರ್ಥ್ಯವೇ ಸರಿ.
ಪ್ರಳಯ್ ಕ್ಷಿಪಣಿ ಭೂ ಗುರಿಗಳ ಮೇಲೆ ದಾಳಿ ನಡೆಸಲು ಗುರಿಯಿಂದ ಸುಮಾರು 150ರಿಂದ 500 ಕಿಲೋಮೀಟರ್ ದೂರದಲ್ಲಿರುವ ಭೂ ಉಡಾವಣಾ ವ್ಯವಸ್ಥೆಯಿಂದ ಚಿಮ್ಮುತ್ತದೆ. ಇದು ತನ್ನ ಕಾರ್ಯಕ್ಕೆ ಸೂಕ್ತವಾಗುವ ರೀತಿಯಲ್ಲಿ ಸುಮಾರು 500ರಿಂದ 1,000 ಕೆಜಿ ತನಕ, ಪರಮಾಣು ಸಿಡಿತಲೆಯಲ್ಲದ, ಸಾಂಪ್ರದಾಯಿಕ ಸಿಡಿತಲೆಗಳನ್ನು ಹೊತ್ತು ಸಾಗುತ್ತದೆ. ಈ ಅಸಾಧಾರಣ ಸ್ಫೋಟಕಗಳು ಅಪಾಯಕಾರಿ ಲೋಹದ ತುಣುಕುಗಳನ್ನು ಚದುರಿಸುತ್ತವೆ. ಇನ್ನು ವಿಶೇಷ ಸಿಡಿತಲೆಗಳು ಸ್ಫೋಟಗೊಳ್ಳುವ ಮೊದಲು ಬಲವಾದ ಕಟ್ಟಡಗಳಂತಹ ರಚನೆಗಳನ್ನು ಭೇದಿಸಿ, ಒಳ ನುಗ್ಗಿ ಸಿಡಿಯುತ್ತವೆ. ಇನ್ನುಳಿದ ಸಿಡಿತಲೆಗಳನ್ನು ರನ್ವೇಗಳನ್ನು ನಾಶಪಡಿಸಲು, ಏರ್ಫೀಲ್ಡ್ಗಳನ್ನು ಹಾಳುಗೆಡವಲು ಬಳಸಲಾಗುತ್ತದೆ. ಇದು ಒಂದೇ ರೀತಿಯ ದಾಳಿ ನಡೆಸುವ ಬದಲಿಗೆ, ಹಲವಾರು ಬಗೆಯ ದಾಳಿಗಳನ್ನು ನಡೆಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ.
ಎರಡು ಇಂಜಿನಿಯರಿಂಗ್ ಆಯ್ಕೆಗಳು ಪ್ರಳಯ್ ಕ್ಷಿಪಣಿಯನ್ನು ಯುದ್ಧದಲ್ಲಿ ಪ್ರಾಯೋಗಿಕವಾಗಿಸುತ್ತವೆ. ಇದು ಘನ ಇಂಧನ ರಾಕೆಟ್ ಮೋಟಾರ್ ಹೊಂದಿದ್ದು, ಇದನ್ನು ಈಗಾಗಲೇ ಚಾರ್ಜ್ ಮಾಡಿರುವ ಬ್ಯಾಟರಿಗೆ ಹೋಲಿಸಬಹುದು. ದ್ರವ ಇಂಧನ ರಾಕೆಟ್ಗಳನ್ನು ಉಡಾವಣೆಗೊಳಿಸುವ ಮುನ್ನವಷ್ಟೇ ಇಂಧನ ತುಂಬಬೇಕಾಗುತ್ತದೆ. ಆದರೆ, ಘನ ಇಂಧನ ರಾಕೆಟ್ಗಳಿಗೆ ಮೊದಲೇ ಇಂಧನ ತುಂಬಿ, ವರ್ಷಗಟ್ಟಲೆ ಸಂಗ್ರಹಿಸಿ ಇಡಲು ಸಾಧ್ಯವಾಗುತ್ತದೆ. ಇದು ಮೊಬೈಲ್ ಲಾಂಚರ್ ಮೂಲಕ ಪ್ರಯೋಗಿಸಲ್ಪಡುವುದರಿಂದ, ಇದನ್ನು ಯಾವುದೇ ನಿರ್ದಿಷ್ಟ ಸ್ಥಳದಿಂದಲೇ ಉಡಾವಣೆಗೊಳಿಸಬೇಕಿಲ್ಲ. ಆದ್ದರಿಂದ, ಕ್ಷಿಪಣಿಯ ಉಡಾವಣಾ ಸ್ಥಳದ ಛಾಯಾಚಿತ್ರವನ್ನೂ ಶತ್ರುಗಳು ಪಡೆಯಲು ಸಾಧ್ಯವಿಲ್ಲ. ಮೊಬೈಲ್ ಲಾಂಚರ್ ಕಾಣಿಸಿಕೊಂಡು, ಕ್ಷಿಪಣಿಯನ್ನು ಉಡಾವಣೆಗೊಳಿಸಿ, ಅಲ್ಲಿಂದ ತೆರಳಬಹುದು.
ಈ ಸಂಪೂರ್ಣ ಯೋಜನೆ ಭಾರತೀಯ ಇಂಜಿನಿಯರಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಹೈದರಾಬಾದಿನ ರಿಸರ್ಚ್ ಸೆಂಟರ್ ಇಮಾರತ್ ಇತರ ಡಿಆರ್ಡಿಒ ಪ್ರಯೋಗಾಲಯಗಳ ನೆರವಿನಿಂದ ವಿನ್ಯಾಸದ ನೇತೃತ್ವ ವಹಿಸಿತ್ತು. ಅಭಿವೃದ್ಧಿ ಮತ್ತು ಉತ್ಪಾದನೆ ಎರಡರಲ್ಲೂ ಪಾಲುದಾರನಾಗಿರುವ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಇದರ ಉತ್ಪಾದನೆ ನಡೆಸಿದೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಬರೆದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಸಂಶೋಧನೆಯಲ್ಲಿ ಸ್ವಾವಲಂಬನೆ ಸಾಧಿಸುವ ಭಾರತದ ಪ್ರಯತ್ನದಲ್ಲಿ ಇದೊಂದು ಮೈಲಿಗಲ್ಲು ಎಂದಿದ್ದು, ಡಿಆರ್ಡಿಒ, ರಕ್ಷಣಾ ಪಡೆಗಳು ಮತ್ತು ಪಾಲ್ಗೊಂಡ ಕಂಪನಿಗಳನ್ನು ಶ್ಲಾಘಿಸಿದ್ದಾರೆ. ಪ್ರಳಯ್ ಕ್ಷಿಪಣಿಯ ಆಧುನಿಕ ತಂತ್ರಜ್ಞಾನ ಮಿಲಿಟರಿಯನ್ನು ಇನ್ನಷ್ಟು ಬಲಪಡಿಸಿ, ಅತ್ಯಾಧುನಿಕ ಆಯುಧಗಳನ್ನು ಅಳವಡಿಸಿಕೊಂಡು ಹೊಸ ಭದ್ರತಾ ಅಪಾಯಗಳನ್ನು ಎದುರಿಸಲು ದೇಶವನ್ನು ಸಜ್ಜಾಗಿಸಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಅಂಕಿಅಂಶಗಳು ಕ್ಷಿಪಣಿಯ ಮಹತ್ವವನ್ನು ವಿವರಿಸುತ್ತವೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ರಕ್ಷಣಾ ಪಡೆಗಳು 370 ಪ್ರಳಯ್ ಕ್ಷಿಪಣಿಗಳನ್ನು ಖರೀದಿಸಲು ಮುಂದಾಗಿದ್ದು, 120 ಕ್ಷಿಪಣಿಗಳು ಭಾರತೀಯ ವಾಯುಪಡೆಗೆ ಮತ್ತು 250 ಕ್ಷಿಪಣಿಗಳು ಭೂ ಸೇನೆಗೆ ಲಭಿಸಲಿದ್ದು, ಇವುಗಳನ್ನು ಕಾರ್ಯಾಚರಿಸಲು ಸೇನೆ ಪ್ರತ್ಯೇಕ ಪ್ರಳಯ್ ಕ್ಷಿಪಣಿ ರೆಜಿಮೆಂಟ್ಗಳನ್ನು ಆರಂಭಿಸಲಿದೆ. ವರ್ಷಗಳ ಕಾಲ ಒಂದು ಕ್ಷಿಪಣಿಯನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸುತ್ತಾ, ಅಂತಿಮ ಕ್ಷಣದ ತನಕ ಅದು ತನ್ನ ರಹಸ್ಯವನ್ನು ಬಿಟ್ಟುಕೊಡದಂತೆ ಮಾಡಿರುವ ವಿಜ್ಞಾನಿಗಳು, ಇಂಜಿನಿಯರ್ಗಳಿಗೆ ಗುರುವಾರದ ಪ್ರಯೋಗ ಕೇವಲ ಒಂದು ಪರೀಕ್ಷೆ ಮಾತ್ರವಲ್ಲ. ಬದಲಿಗೆ, ತಾಳ್ಮೆ, ನಿರಂತರ ಪ್ರಯತ್ನ, ಮತ್ತು ದೇಶೀಯವಾಗಿ ನಡೆಸಿದ ಅಭಿವೃದ್ಧಿ ಭಾರತಕ್ಕೆ ಅಪಾಯಗಳನ್ನು ಎದುರಿಸಲು ಪ್ರಬಲ ಆಯುಧಗಳನ್ನು ಒದಗಿಸಬಲ್ಲದು ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com