ಮಮತಾ ಬ್ಯಾನರ್ಜಿ 
ಅಂಕಣಗಳು

ಕಾಂಗ್ರೆಸ್‌, ಕಮ್ಯುನಿಸ್ಟರ ದೋಸ್ತಿಗೆ ಹಾತೊರೆಯುತ್ತಿರುವ ಮಮತಾ (ನೇರ ನೋಟ)

ಯಾರ ಆಳ್ವಿಕೆಗೆ ಅಂತ್ಯ ಹಾಡಿದರೋ ಅವರೊಂದಿಗೆ ದೋಸ್ತಿಗೆ ತವಕ. ಇದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಇಂದಿನ ಅಸಹಾಯಕ ಸ್ಥಿತಿ.

ಅವತ್ತು ಅವರು 34 ವರ್ಷಗಳ ಸುದೀರ್ಘ ಕಮ್ಯುನಿಸ್ಟ್ ಆಳ್ವಿಕೆಗೆ ಅಂತ್ಯ ಹಾಡಿದರು. ಇದಕ್ಕೂ ಮುನ್ನ ಕಾಂಗ್ರೆಸ್‌ನಿಂದ ಹೊರಬಂದು ಪ್ರತ್ಯೇಕ ಪಕ್ಷ ಸ್ಥಾಪಿಸಿ ಮೂಲಪಕ್ಷಕ್ಕೆ ಸಡ್ಡು ಹೊಡೆದು ನಗೆ ಬೀರಿದ್ದರು. ಆದರೆ, ಇವತ್ತು ಮೂಲ ಪಕ್ಷದೊಂದಿಗೆ ಮೈತ್ರಿಗೆ ಹಾತೊರೆಯುವ ಪರಿಸ್ಥಿತಿ ಅವರದು. ಯಾರ ಆಳ್ವಿಕೆಗೆ ಅಂತ್ಯ ಹಾಡಿದರೋ ಅವರೊಂದಿಗೆ ದೋಸ್ತಿಗೆ ತವಕ. ಇದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಇಂದಿನ ಅಸಹಾಯಕ ಸ್ಥಿತಿ.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟರು ಬಿಜೆಪಿ ಜೊತೆ ಕೈಜೋಡಿಸಿವೆ ಎಂದು ಇದೇ ಮಮತಾ ಆರೋಪಿಸಿದ್ದವರು. ಇವತ್ತು ಅವರೊಂದಿಗೆ ಸ್ನೇಹಕ್ಕೆ ಸಿದ್ದ. ಇದು ಪರಿಸ್ಥಿತಿಯ ವ್ಯಂಗ್ಯ. ಇದೇ ಮಮತಾ ಬ್ಯಾನರ್ಜಿ ಒಂದು ಕಾಲದಲ್ಲಿ ಟಿಎಂಸಿಗೆ ಬಿಜೆಪಿಯು ಸಹಜವಾದ ಮಿತ್ರ ಪಕ್ಷ ಎಂದಿದ್ದವರು. ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ ರೈಲ್ವೆ ಸಚಿವರೂ ಆಗಿದ್ದವರು. ಕಾಂಗ್ರೆಸ್ಸಿಗೆ ಎಡಪಕ್ಷಗಳೊಂದಿಗೆ ಮೈತ್ರಿ. ಹೀಗಾಗಿ, ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಸಾಧ್ಯವೇ ಇಲ್ಲ ಅಂದಿದ್ದು ಈಗಲೂ ಅನೇಕರಿಗೆ ನೆನಪು. ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ.

ಅದು 2024ರ ಲೋಕಸಭಾ ಚುನಾವಣೆ ಸಂದರ್ಭ. ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸಿಗೆ ಎರಡು ಕ್ಷೇತ್ರಗಳನ್ನು ಬಿಟ್ಟುಕೊಡಲು ಮುಂದಾದರು. ಆದರೆ, ಕಾಂಗ್ರೆಸ್ಸಿನದು ಇನ್ನೂ ಹೆಚ್ಚಿನ ಕ್ಷೇತ್ರಗಳು ಬೇಕೆಂಬ ಹಟ. ಮಾತುಕತೆ ವಿಫಲ. “ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸಿನ ಒಬ್ಬನೇ ಒಬ್ಬ ಎಂಎಲ್‌ಎ ಇಲ್ಲ. ಆದರೂ ಅವರಿಗೆ ಎರಡು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುತ್ತಿದ್ದೇನೆ. ಈ ಎರಡೂ ಕ್ಷೇತ್ರಗಳಲ್ಲೂ ನಿಮ್ಮನ್ನು ಗೆಲ್ಲಿಸಿಕೊಂಡು ಬರ್ತೀನಿ ಅಂತನೂ ಭರವಸೆ ನೀಡಿದ್ದೇನೆ. ಆದರೆ, ಕಾಂಗ್ರೆಸ್ ಕೇಳಲಿಲ್ಲ. ಈಗ ನಾನು ಅವರಿಗೆ ಒಂದು ಕ್ಷೇತ್ರವನ್ನೂ ಬಿಡಲಾರೆ’’ ಎಂದು ಮಮತಾ ಬಹಿರಂಗ ಸಭೆಯಲ್ಲಿ ಗುಡುಗಿದ್ದರು. ಇದಾಗಿ ಎರಡೂವರೆ ವರ್ಷಗಳಲ್ಲೇ ಇವತ್ತು ಉಪ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಕಾಂಗ್ರೆಸ್‌ ಬೆಂಬಲಕ್ಕೆ ನಿಂತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಈಗ ಉಪ ಚುನಾವಣೆ ಸದ್ದು. ನಂದಿಗ್ರಾಮ ಹಾಗೂ ರೇಜಿನಗರ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ಟೋಬರ್‌ 6 ರಂದು ಉಪ ಚುನಾವಣೆ. ತಮ್ಮ ಪಕ್ಷ ಹೋಳಾದ ನಂತರ ಮಮತಾ ಬ್ಯಾನರ್ಜಿ ಅವರಿಗೆ ಇದು ಮೊದಲ ಎಲೆಕ್ಷನ್‌. ಮಮತಾ ಅವರಿಗೆ ಈ ಎರಡು ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸುವುದೇ ಈಗ ಸಂಕಷ್ಟ.

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ನಾಯಕರ ಮೇಲೆ ದಾಳಿಗಳಾಗುತ್ತಿವೆ. ನನಗೆ ಈಗ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂಬುದು ಮಮತಾ ಅವರ ಅಳಲು. ಇದಕ್ಕೆ ಬಿಜೆಪಿ ಹೊಣೆ ಎಂಬುದು ಅವರ ದೂರು. ಆದರೆ, ಬಿಜೆಪಿ ಇದನ್ನು ಜನತೆಯ ಆಕ್ರೋಶ ಅಂತ ಕರೆದಿದೆ. ಹಾಗಿದ್ದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಹೊಣೆಯಲ್ಲವೇ? ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸುವೇಂದು ಸರಕಾರಕ್ಕೆ ಸಾಧ್ಯವಿಲ್ಲ. ಮಮತಾ ಅವರ ಆಳ್ವಿಕೆಯಲ್ಲಿಯೂ ರಾಜಕೀಯ ವಿರೋಧಿಗಳ ಮೇಲೆ ದಾಳಿಗಳೂ ನಡೆದಿವೆ. ಚುನಾವಣಾ ಪ್ರಚಾರದಲ್ಲಿ ಜಂಗಲ್‌ ರಾಜ್‌ ಪ್ರಮುಖ ವಿಚಾರವೂ ಆಗಿತ್ತು.

ಮಮತಾ ಅವರಿಗೆ ಅವರೇ ಜನವರಿ 1998ರಲ್ಲಿ ಹುಟ್ಟುಹಾಕಿದ್ದ ತೃಣಮೂಲ ಕಾಂಗ್ರೆಸ್‌ ಪಕ್ಷದ ಹೆಸರು, ಚಿಹ್ನೆ ಈಗ ಅವರ ಬಳಿಯೇ ಇಲ್ಲ. ಮಮತಾ ಹಾಗೂ ರಿತುಬ್ರತಾ ಬ್ಯಾನರ್ಜಿ ಬಣಗಳ ನಡುವೆ ಪಕ್ಷದ ಹೆಸರು ಹಾಗೂ ಚಿಹ್ನೆಗಾಗಿ ಕದನ ನಡೆಯುತ್ತಿದೆ. ಚುನಾವಣಾ ಆಯೋಗ ಮಮತಾ ಅವರ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಸ್ಥಗಿತಗೊಳಿಸಿದೆ. ಮಮತಾ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ಈ ಎರಡೂ ಬಣಗಳಿಗೆ ಈಗ ಹೊಸ ಹೆಸರು ಹಾಗೂ ಚಿಹ್ನೆ ಇದೆ. ಮಮತಾ ಅವರ ಪಕ್ಷದ ಹೆಸರು ಮಮತಾ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌. ಫುಟ್‌ಬಾಲ್‌ ಆಟಗಾರ ಆ ಪಕ್ಷದ ಚಿಹ್ನೆ. ರಿತುಬ್ರತಾ ಬ್ಯಾನರ್ಜಿ ಪಕ್ಷದ ಹೆಸರು ಡೆಮಾಕ್ರಟಿಕ್‌ ತೃಣಮೂಲ ಕಾಂಗ್ರೆಸ್‌. ಎನ್ವಲಪ್‌ ಆ ಪಕ್ಷದ ಗುರುತು.

ತಾವೇ ಸ್ಥಾಪಿಸಿದ ಪಕ್ಷದ ಹೆಸರು, ಚಿಹ್ನೆಯನ್ನು ಕಳೆದುಕೊಂಡ ಮಮತಾ ಈಗ ನೊಂದಿದ್ದಾರೆ. ಎದುರಾಳಿ ಬಣ ನಿಜಕ್ಕೂ ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ಪ್ರೀತಿಸುತ್ತಿದ್ದರೆ ಈ ಪಕ್ಷದಿಂದ ತನ್ನ ತಾಯಿಯನ್ನು ಕಸಿಯುತ್ತಿರಲಿಲ್ಲ ಎಂದು ರೋಧಿಸುತ್ತಿದ್ದಾರೆ. ಮಮತಾ ಅವರ ಒಂದು ಕಾಲದ ನಿಕಟವರ್ತಿಗಳೇ ಅವರಿಗೆ ಈಗ ತಿರುಗಿ ಬಿದ್ದಿದ್ದಾರೆ. ತಮ್ಮಿಂದ ದೂರ ಸರಿದ ಅವರನ್ನು ಮಮತಾ ಈಗ ಅವರೆಲ್ಲರೂ ಭ್ರಷ್ಟರು. ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಬಿಜೆಪಿಯ ನಂಬರ್‌ ಒನ್‌ ಟೀಮ್‌ ಆಗಿದ್ದಾರೆ ಅಂತ ಆರೋಪಿಸಿದ್ದಾರೆ. ಹಾಗಿದ್ದರೆ ಇವರು ಭ್ರಷ್ಟಾಚಾರ ಎಸಗಲು ಅವಕಾಶ ಮಾಡಿಕೊಟ್ಟಿದ್ದು ಮಮತಾ ಅವರೇ ಅಲ್ಲವೇ? ಅವತ್ತೇ ಏಕೆ ಇಂಥವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ?

ನಂದಿಗ್ರಾಮದಲ್ಲಿ ಮಮತಾ ಅವರ ಪಕ್ಷದ ಅಭ್ಯರ್ಥಿ ಸಂಚಿತಾ ಪ್ರಧಾನ್‌ ದೇವ್‌ ತಮ್ಮ ನಾಮಪತ್ರವನ್ನು ಹಿಂಪಡೆದು ಅಚ್ಚರಿ ಮೂಡಿಸಿದ್ದಾರೆ. ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕೆ ಹೂಡಲು ಅವಕಾಶವೇ ಇರಲಿಲ್ಲ. ರೇಜಿನಗರ ಕ್ಷೇತ್ರದಲ್ಲೂ ಮಮತಾ ಅವರ ಅಭ್ಯರ್ಥಿ ರಬ್ಯುಲ್‌ ಅಲಂ ಚೌಧರಿ ತಮ್ಮ ನಾಮಪತ್ರವನ್ನು ವಾಪಸ್‌ ಪಡೆಯುವುದಾಗಿ ಮೊದಲು ಘೋಷಿಸಿ ನಂತರ ಎರಡು ತಾಸುಗಳಲ್ಲೇ ಮಮತಾ ಅವರ ಇಚ್ಛೆಯಂತೆ ಕಣದಲ್ಲಿ ಉಳಿಯುವುದಾಗಿ ಹೇಳಿದರು. ನಂದಿಗ್ರಾಮದಲ್ಲಿ ತಾನು ಕಾಂಗ್ರೆಸ್‌ ಬೆಂಬಲಿಸಿ ಇದಕ್ಕೆ ಪ್ರತಿಯಾಗಿ ರೇಜಿನಗರದಲ್ಲಿ ಕಾಂಗ್ರೆಸ್‌ ತನ್ನ ಪಕ್ಷವನ್ನು ಬೆಂಬಲಿಸಬೇಕೆಂಬ ಸೂತ್ರವನ್ನು ಮಮತಾ ಪಕ್ಷ ಮುಂದಿಟ್ಟಿತು. ಆದರೆ, ಕಾಂಗ್ರೆಸ್‌ ಇದಕ್ಕೆ ಒಪ್ಪಲಿಲ್ಲ. ಆದರೂ ನಂದಿಗ್ರಾಮದಲ್ಲಿ ಮಮತಾ ಪಕ್ಷವು ಈಗ ಕಾಂಗ್ರೆಸ್‌ ಬೆಂಬಲಿಸಿದೆ. ಮಮತಾ ಕೈಕುಲುಕಲು ಮುಂದೆ ಬಂದರೂ ಕೈ ಹಿಡಿಯಲು ಕಾಂಗ್ರೆಸ್‌ ಸಿದ್ದವಿಲ್ಲ. ಬಂಗಾಳದ ಕಾಂಗ್ರೆಸ್‌ ನಾಯಕರು ಮಮತಾ ಜೊತೆ ಹೆಜ್ಜೆ ಹಾಕಲು ಬಿಲ್‌ಕುಲ್‌ ಒಪ್ಪುತ್ತಿಲ್ಲ. ಬಂಗಾಳವನ್ನು ಸತತ 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಳಿದ ಮಮತಾ ಅವರ ಇಂದಿನ ಪರಿಸ್ಥಿತಿ ಇದು.

ಇನ್ನು ಎಸ್‌ಐಆರ್‌ ವಿಚಾರದಲ್ಲಿ ಜನತೆಯ ಹಿತಕ್ಕಾಗಿ ತಾವು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಲು ಸಿದ್ದನಿದ್ದೇನೆ ಎಂದಿದ್ದಾರೆ ಮಮತಾ. ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಅವರು ಮಮತಾ ಅವರಿಗೆ ಪತ್ರ ಬರೆದು ಮುಖ್ಯ ಚುನಾವಣಾ ಆಯುಕ್ತರ ಕಾರ್ಯ ನಿರ್ವಹಣೆಯನ್ನು ವಿರೋಧಿಸಲು ಪ್ರತಿಪಕ್ಷಗಳು ವಿಶಾಲ ತಳಹದಿಯ ಮೇಲೆ ಒಗ್ಗೂಡಬೇಕೆಂದು ಹೇಳಿದ್ದಾರೆ. ಇದಕ್ಕೆ ಮಮತಾ ಒಪ್ಪಿದ್ದಾರೆ. ದೆಹಲಿಯಲ್ಲಿ ಬುಧವಾರ ನಡೆದ ಇಂಡಿಯಾ ಕೂಟದ ಸಭೆಯಲ್ಲೂ ಮಮತಾ ಪಾಲ್ಗೊಂಡಿದ್ದರು.

ಮಮತಾ ಬ್ಯಾನರ್ಜಿ ಅವರಿಗೆ ಸೋತ ನಂತರ ಪ್ರತಿಪಕ್ಷಗಳ ಇಂಡಿಯಾ ಕೂಟ ನೆನಪಾಗಿದೆ. ಏಪ್ರಿಲ್‌ನಲ್ಲಿ ನಡೆದ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಇಂಡಿಯಾ ಕೂಟದ ಅಂಗಪಕ್ಷಗಳೊಂದಿಗೆ ಸ್ಥಾನ ಹೊಂದಾಣಿಕೆಗೆ ಅವರು ಸಿದ್ದವಿರಲಿಲ್ಲ. ಕಾಂಗ್ರೆಸ್‌ , ಕಮ್ಯುನಿಸ್ಟ್‌ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಚುನಾವಣಾ ಪ್ರಚಾರದಲ್ಲಿ ಮಾತಾಡುತ್ತಾ ಬಂಗಾಳದಲ್ಲಿ ಬಿಜೆಪಿ ಬೆಳೆಯಲು ಮಮತಾ ಬ್ಯಾನರ್ಜಿ ಅವರೇ ಕಾರಣ ಅಂದಿದ್ದರು.

ಪಶ್ಚಿಮ ಬಂಗಾಳದ ವಿಧಾನಸಭೆ ಒಟ್ಟು ಬಲ 294. ಬಿಜೆಪಿ ಏಪ್ರಿಲ್‌ನಲ್ಲಿ ನಡೆದ ಚುನಾವಣೆಯಲ್ಲಿ 207 ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ಟಿಎಂಸಿ 80 ಸ್ಥಾನ ಪಡೆಯಿತು. ಬಿಜೆಪಿ ಹಾಗೂ ಟಿಎಂಸಿಗೆ ಶೇಕಡಾವಾರು ಮತಗಳ ಅಂತರ ಶೇ.5.04. ಆದರೆ, ಸೀಟುಗಳ ಅಂತರ 127. ಬಿಜೆಪಿ 2.92 ಕೋಟಿ, ತೃಣಮೂಲ ಪಕ್ಷ 2.6 ಕೋಟಿ ಮತಗಳು ಪಡೆಯಿತು.

ಮಮತಾ ದೀದಿ ಇವತ್ತು ಪಶ್ಚಿಮ ಬಂಗಾಳದಲ್ಲಿ ರಾಜಕೀಯವಾಗಿ ಏಕಾಂಗಿಯಾಗಿದ್ದಾರೆ. ಸೋಲು ಕಾಣುತ್ತಿದ್ದಂತೆ ನಂಬಿದವರೇ ಕೈಕೊಟ್ಟಿದ್ದಾರೆ. ಅಷ್ಟಾಗಿದ್ದರೆ ಮಮತಾ ಚಿಂತಿಸುತ್ತಿರಲಿಲ್ಲವೇನೋ. ಒಂದು ಕಾಲದ ಈ ಆಪ್ತರೇ ಈಗ ತಮ್ಮ ರಾಜಕೀಯಕ್ಕೆ ಇತಿಶ್ರೀ ಹಾಡಲು ಜಿದ್ದಿಗೆ ಬಿದ್ದಿರುವುದು ಮಮತಾ ಅವರನ್ನು ಕಂಗೆಡಿಸಿದೆ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

FlyDubai ವಿಮಾನ ಪತನ ಯತ್ನದ ಹಿಂದೆ ಇರಾನ್ ಕೈವಾಡ..? ತುಂಬಾ ಕಠಿಣ ಹೊಡೆತ ಬೀಳಲಿದೆ; ಟ್ರಂಪ್ ಕಠಿಣ ಎಚ್ಚರಿಕೆ

ಫಾರಂ-7 ದುರ್ಬಳಕೆ ಆರೋಪ: ಕ್ರಮಕ್ಕೆ ಚು.ಆಯೋಗ ಸೂಚನೆ, ಐತಿಹಾಸಿಕ ದಿನ ಎಂದ ಸಿಎಂ ಡಿಕೆಶಿ

‘ನಿಮ್ಮ ಪ್ರಾರ್ಥನೆಗೆ ಧನ್ಯವಾದ’: ಭಾರತದ ಹೀರೋ ಪೈಲಟ್ ಸ್ಮಿತ್ ಮಚ್ಚರ್ ಅಪಾಯದಿಂದ ಪಾರು!

ರಕ್ತದ ಮಡುವಿನಲ್ಲಿ ಪೈಲಟ್`ಗಳು, ಫ್ಲೈಟ್ ಲ್ಯಾಂಡ್ ಮಾಡಿದ ಪ್ಲಂಬರ್; FlyDubai ವಿಮಾನ ಪತನವಾಗದಿದ್ದದ್ದೇ ಅಚ್ಚರಿ!

ICC Cricket World Cup 2027 ವೇಳಾಪಟ್ಟಿ; ಅ.7ರಿಂದ ಭಾರತದ ಅಭಿಯಾನ ಆರಂಭ, 3 ಬಾರಿ ಬದ್ಧ ಶತ್ರುಗಳ ಕದನ?