ಜರ್ಮನಿಯ ವಿಜ್ಞಾನಿಗಳ ಹೊಸ ಅಧ್ಯಯನದಲ್ಲಿ, ವಿಭಿನ್ನ ವ್ಯಕ್ತಿಗಳ ಮೆದುಳಿನಲ್ಲೂ ಬಣ್ಣಗಳನ್ನು ಗುರುತಿಸುವ ನರ-ಸಂಕೇತಗಳು ಅಚ್ಚರಿಯ ಮಟ್ಟಿಗೆ ಒಂದೇ ರೀತಿಯಾಗಿರಬಹುದು ಎಂಬ ಸುಳಿವು ದೊರೆತಿದೆ.
ಒಂದೇ ಬಣ್ಣ, ಒಂದೇ ನರ-ಭಾಷೆ?
ನಾವು ಒಂದೇ ಕೆಂಪು ಗುಲಾಬಿಯನ್ನು ನೋಡಿದಾಗ, ನಮ್ಮಿಬ್ಬರ ಮನಸ್ಸಿನಲ್ಲಿ ಮೂಡುವ ಅನುಭವ ಒಂದೇ ಆಗಿದೆಯೇ ಎಂಬ ಪ್ರಶ್ನೆಗೆ ನಿಖರ ಉತ್ತರ ನೀಡುವುದು ಕಷ್ಟ. ಆದರೆ, ನಮ್ಮಿಬ್ಬರ ಮೆದುಳು ಆ ಕೆಂಪು ಬಣ್ಣವನ್ನು ಬಹುತೇಕ ಒಂದೇ ರೀತಿಯಲ್ಲಿ ಸಂಹಿತಗೊಳಿಸುತ್ತದೆಯೇ? ಒಬ್ಬ ವ್ಯಕ್ತಿಯ ಮೆದುಳಿನ ನರ-ಚಟುವಟಿಕೆಯನ್ನು ಮಾತ್ರ ನೋಡಿ, ಆತ ಯಾವ ಬಣ್ಣವನ್ನು ನೋಡುತ್ತಿದ್ದಾನೆ ಎಂಬುದನ್ನು ಮತ್ತೊಬ್ಬರ ಮೆದುಳಿನ ಮಾಹಿತಿಯ ನೆರವಿನಿಂದ ಊಹಿಸಬಹುದೇ?
ಇಂತಹ ಪ್ರಶ್ನೆಗಳು ಇತ್ತೀಚಿನವರೆಗೂ ವಿಜ್ಞಾನಿಗಳ ಕುತೂಹಲವಷ್ಟೇ ಆಗಿದ್ದವು. ಆದರೆ ಜರ್ಮನಿಯ ಟ್ಯೂಬಿಂಗನ್ ವಿಶ್ವವಿದ್ಯಾಲಯದ ನರ ವಿಜ್ಞಾನಿಗಳ ಹೊಸ ಅಧ್ಯಯನವು ಈ ಪ್ರಶ್ನೆಗೆ ಅಚ್ಚರಿಯ ಉತ್ತರದ ಒಂದು ಸುಳಿವನ್ನು ನೀಡಿದೆ. ವಿಭಿನ್ನ ವ್ಯಕ್ತಿಗಳ ಮೆದುಳಿನಲ್ಲಿ ಬಣ್ಣಗಳನ್ನು ಪ್ರತಿನಿಧಿಸುವ ನರ-ಚಟುವಟಿಕೆಯ ಮಾದರಿಗಳು, ಇದುವರೆಗೆ ಊಹಿಸಿದ್ದಕ್ಕಿಂತ ಹೆಚ್ಚು ಏಕರೂಪವಾಗಿರಬಹುದು ಎಂಬುದನ್ನು ಈ ಅಧ್ಯಯನ ಸೂಚಿಸಿದೆ.
ಅಧ್ಯಯನದ ಉದ್ದೇಶವೇನು?
ಈ ಅಧ್ಯಯನದ ಉದ್ದೇಶ ಕೇವಲ ಮೆದುಳಿನಲ್ಲಿ ಬಣ್ಣವನ್ನು ಗುರುತಿಸುವುದಷ್ಟೇ ಅಲ್ಲ. ಒಬ್ಬ ವ್ಯಕ್ತಿಯ ಮೆದುಳಿನ ಮಾಹಿತಿಯಿಂದ ಮತ್ತೊಬ್ಬ ವ್ಯಕ್ತಿ ನೋಡುತ್ತಿರುವ ಬಣ್ಣವನ್ನು ಊಹಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವುದಾಗಿತ್ತು. ಅಂದರೆ, ಮಾನವ ಮೆದುಳುಗಳು ಬಣ್ಣವನ್ನು ಅರ್ಥೈಸುವಲ್ಲಿ ಯಾವುದಾದರೂ ಸಾಮಾನ್ಯ "ನರ-ಭಾಷೆ"ಯನ್ನು ಬಳಸುತ್ತವೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಇದರ ಪ್ರಮುಖ ಉದ್ದೇಶವಾಗಿತ್ತು.
ಬಣ್ಣಗಳನ್ನು ಬಳಸದೆ ನಿರ್ಮಿಸಿದ ಮೆದುಳಿನ ನಕ್ಷೆ
ಅದಕ್ಕಾಗಿ ಅಧ್ಯಯನದ ತಂಡ ಮೊದಲು ಬಣ್ಣಗಳನ್ನು ಬಳಸಲೇ ಇಲ್ಲ.
ಬದಲಾಗಿ, ಬಣ್ಣವಿಲ್ಲದ (Achromatic) ಸ್ಥಳೀಯ (Spatial) ದೃಶ್ಯ ಪ್ರೇರಣೆಗಳಿಗೆ ಮೆದುಳು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾರ್ಯಾತ್ಮಕ ಚುಂಬಕೀಯ ಅನುರಣನ ಚಿತ್ರಿಕರಣ (Functional MRI – fMRI) ಮೂಲಕ ದಾಖಲಿಸಲಾಯಿತು. ಈ ಮಾಹಿತಿಯ ಆಧಾರದ ಮೇಲೆ, ವಿಭಿನ್ನ ವ್ಯಕ್ತಿಗಳ ಮೆದುಳಿನ ದೃಶ್ಯ ಪ್ರತಿಕ್ರಿಯೆಗಳನ್ನು ಒಂದೇ ಸಾಮಾನ್ಯ ಪ್ರತಿಕ್ರಿಯಾ ವಲಯದಲ್ಲಿ ಹೊಂದಾಣಿಕೆ ಮಾಡಲಾಯಿತು. ನಂತರ ಮಾತ್ರ, ಈ ಸಾಮಾನ್ಯ ವಿನ್ಯಾಸದ ನೆರವಿನಿಂದ ಅವರು ನೋಡುತ್ತಿರುವ ಬಣ್ಣವನ್ನು ಗುರುತಿಸಲು ಪ್ರಯತ್ನಿಸಲಾಯಿತು.
ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡ ಈ ಅಧ್ಯಯನದಲ್ಲಿ ಒ. ಹ್ಯಾನ್ಸನ್ ಮತ್ತು ಎಂ. ಗಾರ್ಟ್ಸ್, ಸ್ಥಳೀಯ ಬಣ್ಣ ಪೂರ್ವಾಗ್ರಹಗಳು (Spatial Color Biases) ವ್ಯಕ್ತಿಯಿಂದ ವ್ಯಕ್ತಿಗೆ ಹಂಚಿಕೆಯಾಗಿವೆಯೇ ಮತ್ತು ಅವು ಮೆದುಳಿನ ನಿರ್ದಿಷ್ಟ ದೃಶ್ಯ ಪ್ರದೇಶಗಳಿಗೆ ವೈಶಿಷ್ಟ್ಯವಾಗಿವೆಯೇ ಎಂಬುದನ್ನು ಪರಿಶೀಲಿಸಿದರು.
ಹೊಸ ವ್ಯಕ್ತಿಯ ಮೆದುಳಿನಲ್ಲೂ ಬಣ್ಣವನ್ನು ಗುರುತಿಸಿದರು
ಭಾಗವಹಿಸಿದವರು ಕೆಂಪು, ಹಸಿರು ಮತ್ತು ಹಳದಿ ಬಣ್ಣಗಳನ್ನು ವೀಕ್ಷಿಸುತ್ತಿದ್ದಾಗ, ಅವರ ಮೆದುಳಿನ ನರ-ಚಟುವಟಿಕೆಯನ್ನು fMRI ಮೂಲಕ ದಾಖಲಿಸಲಾಯಿತು. ಪ್ರತಿಯೊಂದು ಬಣ್ಣಕ್ಕೂ ವಿಭಿನ್ನ ಚಟುವಟಿಕೆಯ ಮಾದರಿಗಳು ಕಂಡುಬಂದವು.
ಆದರೆ ಕಥೆ ಅಲ್ಲಿಗೆ ಮುಗಿಯಲಿಲ್ಲ.
ಅಧ್ಯಯನದಲ್ಲಿ ಹಿಂದೆ ಭಾಗವಹಿಸದ ಹೊಸ ವ್ಯಕ್ತಿಗಳ ಮೆದುಳಿನ ಮಾಹಿತಿಯನ್ನು ಬಳಸಿದಾಗಲೂ, ಅವರು ನೋಡುತ್ತಿರುವ ಬಣ್ಣವನ್ನು ಇದೇ ಮಾದರಿಗಳ ನೆರವಿನಿಂದ ವಿಶ್ವಾಸಾರ್ಹವಾಗಿ ಊಹಿಸಲು ಸಾಧ್ಯವಾಯಿತು. ಅಂದರೆ, ಬಣ್ಣಗಳ ಮೆದುಳಿನ ಪ್ರತಿನಿಧಾನ (Representation) ವ್ಯಕ್ತಿಯಿಂದ ವ್ಯಕ್ತಿಗೆ ನಿರೀಕ್ಷೆಗಿಂತ ಹೆಚ್ಚು ಸಾಮ್ಯತೆಯನ್ನು ಹೊಂದಿದೆ ಎಂಬುದು ಸ್ಪಷ್ಟವಾಯಿತು.
ಇದುವರೆಗೆ fMRI ನೆರವಿನಿಂದ, ಅದೇ ವ್ಯಕ್ತಿಯ ಮೆದುಳಿನಲ್ಲಿ ಆತ ಯಾವ ಬಣ್ಣವನ್ನು ನೋಡುತ್ತಿದ್ದಾನೆ ಎಂಬುದನ್ನು ಗುರುತಿಸುವುದು ಸಾಧ್ಯವಾಗಿತ್ತು. ಆದರೆ ವಿಭಿನ್ನ ವ್ಯಕ್ತಿಗಳ ಮೆದುಳಿನ ನಡುವೆ ಈ ಸಾಮ್ಯತೆ ಎಷ್ಟರ ಮಟ್ಟಿಗೆ ಇದೆ ಎಂಬುದು ಸ್ಪಷ್ಟವಾಗಿರಲಿಲ್ಲ. ಈ ಅಧ್ಯಯನವು ಆ ಪ್ರಶ್ನೆಗೆ ಮೊದಲ ಬಾರಿಗೆ ಪ್ರಾಯೋಗಿಕ ಆಧಾರವನ್ನು ಒದಗಿಸಿದೆ.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದ ಸಂಗತಿ
"ವಿಭಿನ್ನ ಮೆದುಳಿನಲ್ಲಿ ಬಣ್ಣಗಳು ಹೇಗೆ ಸಂಹಿತಗೊಳಿಸಲ್ಪಡುತ್ತವೆ ಮತ್ತು ಅವು ಎಷ್ಟರ ಮಟ್ಟಿಗೆ ಒಂದೇ ರೀತಿಯಲ್ಲಿವೆ ಎಂಬುದನ್ನು ತಿಳಿಯಲು ನಾವು ಬಯಸಿದ್ದೆವು," ಎಂದು ಅಧ್ಯಯನದ ತಂಡ ತಿಳಿಸಿದೆ.
ಈ ಪ್ರಯತ್ನಕ್ಕಾಗಿ ಮೆದುಳಿನ ಸಂಕೇತಗಳನ್ನು ವಿಶ್ಲೇಷಿಸಿ, ಬಣ್ಣಗಳ ಆಧಾರದ ಮೇಲೆ ಅವುಗಳನ್ನು ಗುರುತಿಸುವ ವಿಶೇಷ ವರ್ಗೀಕರಣ ತರ್ಕಾಧಾರಿತ ಸರಣಿಗಳನ್ನು (Algorithms) ತರಬೇತಿಗೊಳಿಸಲಾಯಿತು.
ಈ ಅಧ್ಯಯನದ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಮೆದುಳಿನ ಸಾಮಾನ್ಯ ದೃಶ್ಯ ನಕ್ಷೆಯನ್ನು ರೂಪಿಸುವಾಗ ಯಾವುದೇ ಬಣ್ಣಗಳನ್ನು ಬಳಸಲಿಲ್ಲ. ಕೇವಲ ಕಪ್ಪು–ಬಿಳಿ ದೃಶ್ಯ ಮಾದರಿಗಳ ನೆರವಿನಿಂದ ನಿರ್ಮಿಸಲಾದ ಈ ನಕ್ಷೆಯನ್ನು ನಂತರ ಬಣ್ಣ ಮಾಹಿತಿಯೊಂದಿಗೆ ಸಂಯೋಜಿಸಿದಾಗ, ಹೊಸ ವ್ಯಕ್ತಿಯ ಮೆದುಳಿನ ಚಟುವಟಿಕೆಯಿಂದಲೇ ಅವರು ನೋಡುತ್ತಿರುವ ಬಣ್ಣವನ್ನು ಗುರುತಿಸಲು ಸಾಧ್ಯವಾಯಿತು.
ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಮೆದುಳಿನ ನಿರ್ದಿಷ್ಟ ದೃಶ್ಯ ಪ್ರದೇಶಗಳಲ್ಲಿ ಬಣ್ಣಗಳನ್ನು ಸಂಸ್ಕರಿಸುವಾಗ ಉಂಟಾಗುವ ಚಟುವಟಿಕೆಯ ಮಾದರಿಗಳು, ಸೂಕ್ಷ್ಮ ಬಣ್ಣ ವ್ಯತ್ಯಾಸಗಳ ಮಟ್ಟದಲ್ಲಿಯೂ ವಿಭಿನ್ನ ವ್ಯಕ್ತಿಗಳಲ್ಲಿ ಆಶ್ಚರ್ಯಕರವಾಗಿ ಒಂದೇ ರೀತಿಯಲ್ಲಿದ್ದವು.
ಈ ಸಂಶೋಧನೆಯ ಮಹತ್ವವೇನು?
ಅಧ್ಯಯನವು ಮತ್ತೊಂದು ಮಹತ್ವದ ಸೂಚನೆಯನ್ನು ನೀಡುತ್ತದೆ. ಮೆದುಳಿನಲ್ಲಿ ಬಣ್ಣಗಳ ಸ್ಥಳೀಯ ಸಂಹಿತಗೊಳಿಸುವಿಕೆ (Spatial Encoding) ಪ್ರದೇಶ-ನಿರ್ದಿಷ್ಟವಾಗಿದ್ದು (Region-specific), ವಿಭಿನ್ನ ವ್ಯಕ್ತಿಗಳಲ್ಲಿಯೂ ಸತತವಾಗಿ ಸಂಘಟಿತವಾಗಿದೆ. ಇಂತಹ ಏಕರೂಪ ಸಂಘಟನೆಗೆ ಕಾರ್ಯಾತ್ಮಕ ಅಥವಾ ವಿಕಾಸಾತ್ಮಕ ಒತ್ತಡಗಳು ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಸಾಮ್ಯತೆಯ ಮೂಲವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಇನ್ನೂ ಹೆಚ್ಚಿನ ಅಧ್ಯಯನಗಳು ಅಗತ್ಯವೆಂದು ಅವರು ಹೇಳಿದ್ದಾರೆ.
ಮೆದುಳಿನ ಭಾಷೆ ಎಲ್ಲರಿಗೂ ಒಂದೇ ಆಗಿರಬಹುದೇ?
ಈ ಅಧ್ಯಯನದ ವಿವರಗಳು Journal of Neuroscience (2025, 45(42)) ನಲ್ಲಿ ಪ್ರಕಟವಾದ "Large-Scale Color Biases in the Retinotopic Functional Architecture Are Region Specific and Shared Across Human Brains" ಎಂಬ ಸಂಶೋಧನಾ ಲೇಖನದಲ್ಲಿ ಲಭ್ಯವಿವೆ.
ನಾವು ಬಣ್ಣವನ್ನು ಕಣ್ಣಿನಿಂದ ನೋಡುತ್ತೇವೆ ಎಂದು ಸಾಮಾನ್ಯವಾಗಿ ಹೇಳುತ್ತೇವೆ. ಆದರೆ ಕಣ್ಣು ಬೆಳಕನ್ನು ಮಾತ್ರ ಸ್ವೀಕರಿಸುತ್ತದೆ; ಬಣ್ಣಕ್ಕೆ ಅರ್ಥ ನೀಡುವುದು ಮೆದುಳು.
ಈ ಅಧ್ಯಯನವು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗುತ್ತದೆ.
ನಮ್ಮ ಅನುಭವಗಳು ವೈಯಕ್ತಿಕವಾಗಿರಬಹುದು; ಆದರೆ ಅವುಗಳನ್ನು ರೂಪಿಸುವ ಮೆದುಳಿನ ಮೂಲಭೂತ ಭಾಷೆ ಅಚ್ಚರಿಯ ಮಟ್ಟಿಗೆ ಸಾಮಾನ್ಯವಾಗಿರಬಹುದು ಎಂಬ ಹೊಸ ಸಾಧ್ಯತೆಯನ್ನು ಇದು ನಮ್ಮ ಮುಂದೆ ತೆರೆದಿಡುತ್ತದೆ.
ಬಹುಶಃ ಪ್ರಕೃತಿಯು ಪ್ರತಿಯೊಬ್ಬರ ಮೆದುಳನ್ನು ವಿಭಿನ್ನವಾಗಿ ರೂಪಿಸಿರಬಹುದು; ಆದರೆ ಬಣ್ಣಗಳನ್ನು ಓದುವ ಅದರ ಮೂಲ ವ್ಯಾಕರಣವನ್ನು ಮಾತ್ರ ಎಲ್ಲರಿಗೂ ಒಂದೇ ರೀತಿಯಲ್ಲಿ ಬರೆದಿರಬಹುದು.
ಪ್ರೊ. ಸತೀಶ್. ಎಲ್.ಎ
ಭೌತಶಾಸ್ತ್ರ ಪ್ರಾಧ್ಯಾಪಕರು
lasgayit@gmail.com