ಕೋಲ್ಕತಾ: ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ನಾಯಕ ಡರೇನ್ ಸಾಮಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆಯೇ ತಂಡದ ಮತ್ತೋರ್ವ ಆಟಗಾರ ಡ್ವೇಯ್ನ್ ಬ್ರಾವೋ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತೆಯೇ ತಮ್ಮ ಬೆಂಬಲಕ್ಕೆ ನಿಂತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಬ್ರಾವೋ ಧನ್ಯವಾದ ತಿಳಿಸಿದ್ದಾರೆ.
ಕೋಲ್ಕತಾದಲ್ಲಿ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಜಯಭೇರಿ ಭಾರಿಸಿ 2ನೇ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದ ಬಳಿಕ ಮಾತನಾಡಿದ ಬ್ರಾವೋ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ನಿಯಂತ್ರಣ ಸೂಕ್ತವ್ಯಕ್ತಿಗಳ ಕೈಯಲ್ಲಿ ಇಲ್ಲ. 2ನೇ ಬಾರಿಗೆ ವಿಶ್ವಕಪ್ ಗೆದ್ದು ವಿಶ್ವಮಟ್ಟದಲ್ಲಿ ಸಾಧನೆ ಮಾಡಿದ್ದೇವೆ. ಆದರೂ ಮಂಡಳಿಯ ಯಾವುದೇ ಒಬ್ಬ ನಿರ್ದೇಶಕರಾಗಲಿ ಅಥವಾ ಅಧಿಕಾರಿಗಳಾಗಲಿ ನಮಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿಲ್ಲ. ನಮ್ಮ ಗೆಲುವು ಅವರಲ್ಲಿ ಸಂತಸ ಮೂಡಿಸಿಲ್ಲ ಎಂದೆನಿಸುತ್ತದೆ. ಮಂಡಳಿ ನಮ್ಮ ವಿರುದ್ಧವಾಗಿದ್ದು, ನಮ್ಮ ಮಂಡಳಿಕೆ ಹೋಲಿಕೆ ಮಾಡಿದರೆ ಭಾರತ ಕ್ರಿಕೆಟ್ ಸಂಸ್ಥೆ ನಮ್ಮ ಬೆಂಬಲಕ್ಕೆ ನಿಂತಿತ್ತು ಎಂದು ಬ್ರಾವೋ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಇದೇ ವೇಳೆ ವಿಂಡೀಸ್ ನ ಏಕದಿನ ಸರಣಿಗಳಲ್ಲಿ ಕ್ರಿಸ್ ಗೇಯ್ಲ್, ರಸೆಲ್ ಮತ್ತು ಡರೇನ್ ಸಾಮಿಯಂತಹ ಆಟಗಾರರು ಕಾಣಿಸುತ್ತಿಲ್ಲವೇಕೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬ್ರಾವೋ, ನಮ್ಮನ್ನು ಏಕದಿನ ಕ್ರಿಕೆಟ್ ಸರಣಿಗೆ ಆಯ್ಕೆ ಮಾಡುತ್ತಿಲ್ಲ. ಮಂಡಳಿಯಲ್ಲಿ ಹಲವು ರಾಜಕೀಯ ನಡೆಯುತ್ತಿದ್ದು, ಉತ್ತಮ ಪ್ರದರ್ಶನದ ಹೊರತಾಗಿಯೂ ನಾವು ಏಕದಿನ ಕ್ರಿಕೆಟ್ ಸರಣಿಗೆ ಆಯ್ಕೆಯಾಗುತ್ತಿಲ್ಲ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ವೆಸ್ಟ್ ಇಂಡೀಸ್ ಪಾಲ್ಗೊಳ್ಳುತ್ತಿದ್ದು, ತಂಡಕ್ಕೆ ನಮ್ಮನ್ನು ಆಯ್ಕೆ ಮಾಡುತ್ತಿಲ್ಲ ಎಂದು ಬ್ರಾವೋ ಹೇಳಿದರು.
ಇದೇ ವೇಳೆ ಬಿಸಿಸಿಐ ಗೆ ಧನ್ಯವಾದ ತಿಳಿಸಿದ ಬ್ರಾವೋ ವಿಂಡೀಸ್ ಕ್ರಿಕೆಟ್ ಮಂಡಳಿಗಿಂತಲೂ ಬಿಸಿಸಿಐ ನಮಗೆ ಸಾಕಷ್ಟು ನೆರವು ನೀಡಿದೆ. ಭಾರತ ನಮಗೆ ಸಾಕಷ್ಟು ಪ್ರೀತಿ ನೀಡಿದೆ. ಇದಕ್ಕೆ ನಾವು ಅಭಾರಿಗಳಾಗಿದ್ದು, ನಮ್ಮ ಕ್ಯಾರಿಕೊಮ್ ಸಿಬ್ಬಂದಿಗಳಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಟೂರ್ನಿಯುದ್ದಕ್ಕೂ ನಮ್ಮ ಬೆಂಬಲಕ್ಕೆ ನಿಂತು ಸಾಕಷ್ಟು ಪ್ರೇರಣೆ ನೀಡಿದ್ದರು ಎಂದು ಬ್ರಾವೋ ಹೇಳಿದರು.
ಆಟಗಾರರಿಗೆ ಸಚಿನ್ ಬೆಂಬಲ
ಇನ್ನು ಇದೇ ವೇಳೆ ವಿಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ತಿರುಗಿ ಬಿದ್ದಿರುವ ಆಟಗಾರರಿಗೆ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಬೆಂಬಲ ವ್ಯಕ್ತಪಡಿಸಿದ್ದು, ಸಾಕಷ್ಟು ಅಡೆತಡೆಗಳ ನಡುವೆಯೂ ವಿಂಡೀಸ್ ಕ್ರಿಕೆಟ್ ತಂಡ ಚಾಂಪಿಯನ್ನರಾಗಿ ಹೊರಹೊಮ್ಮಿದ್ದಾರೆ. ವಿಂಡೀಸ್ ಕ್ರಿಕೆಟ್ ಮಂಡಳಿ ಅವರನ್ನು ಬೆಂಬಲಿಸಬೇಕು ಮತ್ತು ಅವರ ಬೇಡಿಕೆಗಳನ್ನು ಈಡೇರಿಸುವತ್ತ ಗಮನ ಹರಿಸಬೇಕು ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.