ನಾಗ್ಪುರ: ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ ಆಫ್ಘಾನಿಸ್ತಾನ 6 ವಿಕೆಟ್ ಗಳ ಭರ್ಜರಿ ಜಯಭೇರಿ ಬಾರಿಸಿತು.
ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆಫ್ಘಾನಿಸ್ತಾನ ಹಾಂಗ್ ಕಾಂಗ್ ವಿರುದ್ಧ ಆಫ್ಘಾನಿಸ್ತಾನ ಅಮೋಘ ಬೌಲಿಂಗ್ ನಿರ್ವಹಣೆ ಮತ್ತು ಮಹಮದ್ ಶಹಜಾದ್ (41 ರನ್) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಹಾಂಗ್ ಕಾಂಗ್ ತಂಡ ಕ್ಯಾಂಪ್ ಬೆಲ್ (27 ರನ್) ಹಾಗೂ ಅಂಶುಮಾನ್ ರತ್ (28 ರನ್) ಅವರ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 116 ರನ್ ಗಳನ್ನಷ್ಟೇ ಪೇರಿಸಲು ಶಕ್ತವಾಯಿತು. ಆಫ್ಘನ್ ನ ಪ್ರಭಾವಿ ಬೌಲಿಂಗ್ ದಾಳಿಯನ್ನು ಹಾಂಗ್ ಕಾಂಗ್ ಯಾವೊಬ್ಬ ಬ್ಯಾಟ್ಸಮನ್ ಕೂಡ ದಿಟ್ಟವಾಗಿ ಎದುರಿಸಲಿಲ್ಲ. ಹೀಗಾಗಿ ಹಾಂಗ್ ಕಾಂಗ್ ಅಲ್ಪ ಮೊತ್ತಕ್ಕೆ ಕುಸಿಯಿತು.
ಬಳಿಕ ಹಾಂಗ್ ಕಾಂಗ್ ನೀಡಿದ ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ ಮಹಮದ್ ಶಹಜಾದ್ (41 ರನ್) ಮತ್ತು ನೂರ್ ಅಲಿ ಝರ್ಡಾನ್ (35 ರನ್) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಇನ್ನೂ 12 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗುರಿ ಮುಟ್ಟಿ ಸಂಭ್ರಮಿಸಿತು. ಆಫ್ಘಾನಿಸ್ತಾನ ಪರ ಉತ್ತಮವಾಗಿ ಬೌಲಿಂಗ್ ಮಾಡಿ ಹಾಂಗ್ ಕಾಂಗ್ ನ ಪ್ರಮುಖ 4 ವಿಕೆಟ್ ಕಬಳಿಸಿದ ಮೊಹಮದ್ ನಬಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.