ನಾಗ್ಪುರ: ಟಿ20 ವಿಶ್ವಕಪ್ ಸರಣಿಯಲ್ಲಿ ಫೇವರಿಟ್ ಪಟ್ಟ ಪಡೆದಿರುವ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿಯೇ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಾಣುವ ಮೂಲಕ ತೀವ್ರ ಒತ್ತಡಕ್ಕೆ ಸಿಲುಕಿದೆ.
ಸರಣಿಯಲ್ಲಿ ಇನ್ನು ಭಾರತ ತಂಡದ ಅಭಿಯಾನ ಮುಂದುವರೆಯಬೇಕಾದರೆ ಉಳಿದಿರುವ ಎಲ್ಲ ಪಂದ್ಯಗಳನ್ನೂ ಕೂಡ ಗೆಲ್ಲಬೇಕಾದ ಒತ್ತಡ ಅದರ ಮೇಲಿದೆ. ಅದೂ ಕೂಡ ಉತ್ತಮ ರನ್ ರೇಟ್ ನೊಂದಿಗೆ. ಸರಣಿಯಲ್ಲಿ ಭಾರತ ಇನ್ನೊಂದು ಪಂದ್ಯ ಸೋತರೂ ಅದರ ಸೆಮಿ ಫೈನಲ್ ಹಾದಿ ದುರ್ಗಮವಾಗಲಿದೆ. ಹೀಗಾಗಿ ಪ್ರಸ್ತುತ ಟೀ ಇಂಡಿಯಾ ಮಾಡು ಇಲ್ಲವೆ ಮಡಿ ಧ್ಯೇಯದೊಂದಿಗೆ ಆಡಬೇಕಿದೆ. ಏಕೆಂದರೆ ಕಡಿಮೆ ಮೊತ್ತದ ಪಂದ್ಯದಲ್ಲಿ ಭಾರತ ತಂಡ ಬರೊಬ್ಬರಿ 47 ರನ್ ಅಂತರದ ಭಾರಿ ಸೋಲು ಕಂಡಿರುವುದು ಭಾರತದ ರನ್‌ರೇಟ್ ಗೆ ದೊಡ್ಡ ಹೊಡೆತ ನೀಡಿದೆ.
ಹೀಗಾಗಿ ತಲಾ 2 ಪಂದ್ಯ ಜಯ-ಸೋಲು ಕಂಡರೆ ಆಗ ರನ್ ರೇಟ್ ನಿರ್ಣಾಯಕವಾಗುತ್ತದೆ ಮತ್ತು ಇದರಲ್ಲಿ ಭಾರತಕ್ಕೆ ಹಿನ್ನಡೆಯಾಗುವ ಅಪಾಯವಿರುತ್ತದೆ. ಹೀಗಾಗಿ ಉಳಿದೆಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡ ಧೋನಿ ಪಡೆಯ ಮೇಲಿದೆ. ಇನ್ನು ಕಿವೀಸ್ ತಂಡದ ವಿರುದ್ಧದ ಸೋಲು ಟೀಂ ಇಂಡಿಯಾಗೆ ಒಂದು ಎಚ್ಚರಿಕೆಯ ಕರೆಗಂಟೆಯಾಗಿದ್ದು, ಮುಂದಿನ ಪಂದ್ಯಗಳಲ್ಲಿ ತನ್ನ ತಪ್ಪನ್ನು ಅರಿತು ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಲೀಗ್ ಹಂತದಲ್ಲಿಯೇ ಭಾರತ ತಂಡ ಸೋತಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ ಎಂದು ಭಾವಿಸಬೇಕು. ಒಂದು ವೇಳೆ ಇದೇ ಸೋಲು ನಾಕೌಟ್ ಹಂತದಲ್ಲಿ ಸಂಭವಿಸಿದ್ದರೆ ಆಗ ತಪ್ಪನ್ನು ತಿದ್ದಿಕೊಳ್ಳುವ ಅವಕಾಶವೇ ಇರುತ್ತಿರಲಿಲ್ಲ. ನೇರವಾಗಿ ಭಾರತ ಟೂರ್ನಿಯಿಂದ ಔಟ್ ಆಗುತ್ತಿತ್ತು.
ಕಳೆದ 2014ರ ಟಿ20 ವಿಶ್ವಕಪ್ ಮತ್ತು 2015ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ಇಂಥದ್ದೇ ಎಡವಟ್ಟು ಮಾಡಿಕೊಂಡಿತ್ತು. ಅಜೇಯವಾಗಿ ಫೈನಲ್ ಮತ್ತು ಸೆಮಿಫೈನಲಿಗೇರಿದ್ದರೂ ಭಾರತಕ್ಕೆ ಪ್ರಶಸ್ತಿ ಕೈತಪ್ಪಿತ್ತು.