ನಾಗ್ಪುರ: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 6 ವಿಕೆಟ್ ಗಳ ಮೂಲಕ ಮಣಿಸಿದ ನ್ಯೂಜಿಲೆಂಡ್ ವನಿತೆಯರು ಉಪಾಂತ್ಯದಲ್ಲಿ ತಮ್ಮ ಸ್ಥಾನವನ್ನು ಖಚಿತ ಪಡಿಸಿಕೊಂಡಿದ್ದಾರೆ.
ಸೋಮವಾರ ನಾಗ್ಪುರದ ವಿಧರ್ಭ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ ಗಳಲ್ಲಿ ಪೆರ್ರಿ (43 ರನ್) ಮತ್ತು ಜೋನಾಸೆನ್ (23 ರನ್) ಅವರ ನೆರವಿನಿಂದಾಗಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 103 ರನ್ ಗಳನ್ನಷ್ಟೇ ಕಲೆ ಹಾಕಿತು. ನ್ಯೂಜಿಲೆಂಡ್ ಪರ ಕ್ಯಾಸ್ಪರೆಕ್ 3 ವಿಕೆಟ್ ಪಡೆದರೆ, ಬರ್ಮಿಂಗ್ ಹ್ಯಾಮ್ 2, ಡೆವಿನ್ ಮತ್ತು ಸ್ಯಾಟ್ಟರ್ತ್ ವೆಟ್ ತಲಾ 1 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾ ಅಲ್ಪ ಮೊತ್ತಕ್ಕೆ ಕಾರಣರಾದರು.
ಬಳಿಕ ಆಸ್ಟ್ರೇಲಿಯಾ ನೀಡಿದ 104 ರನ್ ಗಳ ಗುರಿ ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ ಆರಂಭಿಕರಾದ ಸೂಜಿ ಬೇಟ್ಸ್ (23 ರನ್) ಮತ್ತು ಪ್ರೀಸ್ಟ್ (34 ರನ್) ಅವರು ಉತ್ತಮ ಆರಂಭ ಒದಗಿಸಿದರು. ಅಂತಿಮವಾಗಿ ಕಿವೀಸ್ ವನಿತೆಯರ ಪಡೆ 16.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿ ಆಸ್ಚ್ರೇಲಿಯಾ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಆಸ್ಟ್ರೇಲಿಯಾ 3 ಪ್ರಮುಖ ವಿಕೆಟ್ ಪಡೆದು ಕಿವೀಸ್ ಗೆಲುವಿಗೆ ಕಾರಣರಾಜ ಕ್ಯಾಸ್ಪರೆಕ್ ಪಂದ್ಯ ಶ್ರೇಷ್ಢ ಪ್ರಶಸ್ತಿ ಪಡೆದರು.