ಮುಂಬೈ: ಉದ್ಘಾಟನಾ ಪಂದ್ಯಗೆಲುವಿನ ಬಳಿಕ ಸತತ 2 ಗೆಲುವು ದಾಖಲಿಸಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮುಂಬೈ ಬುಧವಾರ ಆಘಾತ ನೀಡಿದ್ದು, 4 ವಿಕೆಟ್ ಅಂತರದಿಂದ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8ವಿಕೆಟ್ ನಷ್ಟಕ್ಕೆ 158 ರನ್ ಗಳನ್ನು ಕಲೆಹಾಕಿತು. ಆರಂಭಿಕರಾದ ಧವನ್ ಮತ್ತು ನಾಯಕ ವಾರ್ನರ್ ರನ್ನು ಹೊರತು ಪಡಿಸಿ ಇನ್ನಾವುದೇ ಆಟಗಾರರೂ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಬೀಸಲಿಲ್ಲ. ಪರಿಣಾಮ ಹೈದರಾಬಾದ್ ತಂಡ ಧವನ್ ಅವರ 48, ನಾಯಕ ವಾರ್ನರ್ ಅವರ 49 ಮತ್ತು ಕಟ್ಟಿಂಗ್ ಅವರ 20 ರನ್ ಗಳ ನೆರವಿನಿಂದ 158 ರನ್ ಗಳಿಸಿತು.
159 ರನ್ ಗಳ ಮೊತ್ತವನ್ನು ಬೆನ್ನು ಹತ್ತಿದ ಮುಂಬೈ ತಂಡ ಆರಂಭಿಕ ಆಘಾತದ ಹೊರತಾಗಿಯೂ 18.4 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಜಯ ಸಾಧಿಸಿತು. ಮುಂಬೈ ಪರ ಪಟೇಲ್ 39 ರನ್, ರಾಣಾ 45 ರನ್ ಹಾಗೂ ಪಾಂಡ್ಯಾ 35 ರನ್ ಗಳ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಮುಂಬೈ ಗೆಲುವು ಸಾಧಿಸಿತು.
ಹೈದರಾಬಾದ್ ಪರ ಭುವನೇಶ್ವರ ಕುಮಾರ್ 3 ವಿಕೆಟ್ ಪಡೆದರೆ, ನೆಹ್ರಾ ಮತ್ತು ರಷೀದ್ ಖಾನ್ ತಲಾ 1 ವಿಕೆಟ್ ಪಡೆದರು.