ಕ್ರಿಕೆಟ್

ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ಸಾಗರೋತ್ತರ ಮೊದಲ ಟೆಸ್ಟ್ ಸರಣಿ ವೈಟ್ ವಾಷ್ ಗುರಿ

Vishwanath S
ಕಾಂಡಿ: ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಸದ್ಯ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಂಡಿದ್ದು ಇದೀಗ ಅಂತಿಮ ಪಂದ್ಯದಲ್ಲೂ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡುತ್ತೇವೆ ಎಂದು ನಾಯಕ ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಲಂಕಾ ವಿರುದ್ಧದ ಮೂರನೇ ಪಂದ್ಯ ಟೀಂ ಇಂಡಿಯಾ ಗೆದ್ದರೆ ಸಾಗರೋತ್ತರ ಮೂರು-ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾವನ್ನು ವೈಟ್ ವಾಷ್ ಮಾಡಿದ ಮೊದಲ ಭಾರತೀಯ ತಂಡ ಎಂಬ ಖ್ಯಾತಿಗೆ ಭಾಜನವಾಗಲಿದೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 304 ರನ್ ಗಳಿಂದ ಭರ್ಜರಿ ಜಯಗಳಿಸಿತ್ತು. ನಂತರ ಕೊಲಂಬೊದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 53 ರನ್ ಗಳಿಂದ ಲಂಕಾ ವಿರುದ್ಧ ಟೀಂ ಇಂಡಿಯಾ ಜಯಗಳಿಸಿದೆ. 
ಇನ್ನು ಲಂಕಾ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ನುವಾನ್ ಪ್ರದೀಪ್ ಮತ್ತು ರಂಗನ ಹೆರಾತ್ ಗಾಯದಿಂದ ಬಳಲುತ್ತಿದ್ದು ಅವರ ಸ್ಥಾನಕ್ಕೆ ವೇಗಿ ದುಷ್ಮನತ್ ಚಮೇರಾ ಮತ್ತು ಲಹಿರು ಗಮಗೇ ತಂಡವನ್ನು ಸೇರಿಕೊಂಡಿದ್ದಾರೆ. 
ಪಲ್ಲೇಕೆಲೆ ಮೈದಾನ ವೇಗಿಗಳಿಗೆ ಪೂರಕವಾಗಲಿದ್ದು ಹೀಗಾಗಿ ವಿರಾಟ್ ಕೊಹ್ಲಿ ನಿಷೇಧಗೊಂಡಿರುವ ರವೀಂದ್ರ ಜಡೇಜಾ ಬದಲಿಗೆ ವೇಗಿ ಭುವನೇಶ್ವರ್ ಕುಮಾರ್ ರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಇನ್ನು ಹಾರ್ದಿಕ್ ಪಾಂಡ್ಯ ಬದಲಿಗೆ ಕುಲದೀಪ್ ಯಾದವ್ ರನ್ನು ಎರಡನೇ ಸ್ಪಿನ್ನರ್ ಆಗಿ ಕಣಕ್ಕಿಳಿಸುವ ಸಾಧ್ಯತೆ ಇದೆ.
SCROLL FOR NEXT