ನವದೆಹಲಿ: ಟೀಂ ಇಂಡಿಯಾದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದಲೇ ಖ್ಯಾತಿ ಗಳಿಸಿದ್ದ ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಭಯಪಡುತ್ತಿದ್ದ ವಿಶ್ವದ ಏಕೈಕ ಬೌಲರ್ ಬಗ್ಗೆ ಇದೇ ಮೊದಲ ಬಾರಿಗೆ ಮಾಹಿತಿ ಹೊರ ಹಾಕಿದ್ದಾರೆ.
14 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಸೆಹ್ವಾಗ್ ಬ್ಯಾಟ್ ನಿಂದ ದಂಡನೆಗೆ ಒಳಗಾಗದ ಬೌಲರ್ ಗಳಿಲ್ಲ. ಬಲಿಷ್ಟ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಸೇರಿದಂತೆ ವಿಶ್ವದ ಪ್ರಬಲ ಬೌಲರ್ ಗಳೂ ಸೆಹ್ವಾಗ್ ರಿಂದ ದಂಡಿಸಿಕೊಂಡವರೇ..ಆದರೆ ಇಂತಹ ಬ್ಯಾಟ್ಸಮನ್ ಓರ್ವ ಬೌಲರ್ ಗೆ ಹೆದರುತ್ತಿದ್ದರಂತೆ. ಹೌದು... ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಕಂಡರೆ ಸೆಹ್ವಾಗ್ ಗೆ ಹೆದರಿಕೆಯಾಗುತ್ತಿತ್ತಂತೆ. ಈ ವಿಚಾರವನ್ನು ಅವರ ಸ್ವತಃ ಹೇಳಿಕೊಂಡಿದ್ದು, ಮುರಳ ಅವರ ಪ್ರತೀ ಎಸೆತವೂ ಆಕ್ರಮಣಕಾರಿಯಾಗಿರುತ್ತಿತ್ತು. ಯಾವ ಹಂತದಲ್ಲಿ ಯಾವಕಡೆ ತಿರುವು ಪಡೆಯುತ್ತಿತ್ತು ಎಂದು ಊಹಿಸುವುದೇ ಕಷ್ಟವಾಗುತ್ತಿತ್ತು ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ.
ಖಾಸಗಿ ಪತ್ರಿಕೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೆಹ್ವಾಗ್, ಮುರಳಿ ಬೌಲಿಂಗ್ ಮಾಡುವಾಗ ಮನದಲ್ಲಿ ಏನೋ ಒಂದು ರೀತಿಯ ಅಳುಕು ಕಾಡುತ್ತಿರುತ್ತದೆ. ಇದಕ್ಕೆ ಬಹುಶಃ ಅವರ ಬೌಲಿಂಗ್ ಶೈಲಿ ಮತ್ತು ಅವರ ಪ್ರತೀ ಎಸೆತಗಳು ಪಡೆಯುತ್ತಿದ್ದ ತಿರುವು ಕಾರಣವಾಗಿರಬಹುದು. ಅವರ ಎಸೆತಗಳನ್ನು ಊಹಿಸಿ ಬ್ಯಾಟ್ ಮಾಡುವುದು ಪ್ರಯಾಸಕರಾವಾಗುತ್ತಿತ್ತು. ಎಷ್ಟೋ ಬಾರಿ ಅದರಲ್ಲಿ ನಾನು ವಿಫಲನಾಗಿದ್ದೇನೆ ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ.
ಇನ್ನು ಇದೇ ಸೆಹ್ವಾಗ್ 2008ರಲ್ಲಿ ನಡೆದ ಲಂಕಾ ಪ್ರವಾಸದಲ್ಲಿ ಅಜೇಯ 201 ರನ್ ಗಳಿಸಿದ್ದರು. 2009ರಲ್ಲಿ ಮತ್ತೆ ಸೆಹ್ವಾಗ್ ಇದೇ ಶ್ರೀಲಂಕಾ ತಂಡದ ವಿರುದ್ಧ 293 ರನ್ ಗಳಿಸಿದ್ದರು.