ದುಬೈ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದು ಐಸಿಸಿ ಏಕದಿನ ಬ್ಯಾಟ್ಸ್ ಮನ್ ರ್ಯಾಂಕಿಂಗ್ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದಾರೆ.
ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯ 5 ಪಂದ್ಯಗಳಿಂದ ಡೇವಿಡ್ ವಾರ್ನರ್ 367 ರನ್ ಸಿಡಿಸಿದ್ದು, ಆಮೂಲಕ ಐಸಿಸಿ ರ‌್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇದರೊಂದಿಗೆ ಅಗ್ರಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ 2ನೇ ಸ್ಥಾನಕ್ಕೆ ಕುಸಿದಿದ್ದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಕಳೆದ ಹನ್ನೊಂದು ಏಕದಿನ ಪಂದ್ಯಗಳ ಪೈಕಿ ಡೇವಿಡ್ ವಾರ್ನರ್ 6 ಶತಕ ಸಿಡಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಅಂತಿಮ ಪಂದ್ಯದಲ್ಲಿ ವಾರ್ನರ್ 128 ಎಸೆತಗಳಲ್ಲಿ 179 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ಡೇವಿಡ್ ವಾರ್ನರ್ 880 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 861 ಅಂಕಗಳೊಂದಿಗೆ ಎಬಿಡಿ ವಿಲಿಯರ್ಸ್ 2ನೇ ಸ್ಥಾನ ಮತ್ತು 852 ಅಂಕಗಳೊಂದಿಗೆ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics