ನವದೆಹಲಿ: ಅನಿಲ್ ಕುಂಬ್ಳೆ ರಾಜಿನಾಮೆ ಬಳಿಕ ಟೀಂ ಇಂಡಿಯಾ ಕೋಚ್ ಹುದ್ದೆಗೆ ಸೂಕ್ತ ಅಭ್ಯರ್ಥಿ ದೊರೆಯದ ಹಿನ್ನಲೆಯಲ್ಲಿ ಬಿಸಿಸಿಐ ಅರ್ಜಿ ಸಲ್ಲಿಕೆ ಅಂತಿಮ ಗಡುವನ್ನು ವಿಸ್ತರಿಸಿದೆ.
ಬಿಸಿಸಿಐ ಮೂಲಗಳು ತಿಳಿಸಿರುವಂತೆ ಪ್ರಧಾನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ಗಡುವನ್ನು ಬಿಸಿಸಿಐ ಜುಲೈ 9ರವರೆಗೂ ವಿಸ್ತರಿಸಿದೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ ಟೀಂ ಇಂಡಿಯಾ ಕೋಚ್ ಹುದ್ದೆಗೆ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಹೇಳಲಾಗುತ್ತಿದ್ದು, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಕರ್ನಾಟಕದ ಮಾಜಿ ಆಟಗಾರ ದೊಡ್ಡ ಗಣೇಶ್, ಲಾಲ್ ಚಂದ್ ರಜಪೂತ್, ಟಾಮ್ ಮೂಡಿ ಮತ್ತು ರಿಚರ್ಡ್ ಪೈಬುಸ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಈ ಅರ್ಜಿಗಳ ಹೊರತಾಗಿಯೂ ಬಿಸಿಸಿಐಗೆ ಸೂಕ್ತ ಅಭ್ಯರ್ಥಿ ದೊರೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಇತ್ತೀಚೆಗಷ್ಟೇ ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿಸಲ್ಲಿಸುವಂತೆ ಕೇಳಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ಶಾಸ್ತ್ರಿ ತಮ್ಮನ್ನು ಕೋಚ್ ಆಗಿ ಆಯ್ಕೆ ಮಾಡುವ ಭರವಸೆ ನೀಡಿದರಷ್ಟೇ ಅರ್ಜಿ ಸಲ್ಲಿಸುವುದಾಗಿ ಷರತ್ತು ವಿಧಿಸಿದ್ದಾರೆ. ಕಳೆದ ಭಾರಿಯೂ ಟೀಂ ಇಂಡಿಯಾ ಕೋಚ್ ಸ್ಥಾನಕ್ಕಾಗಿ ರವಿಶಾಸ್ತ್ರಿ ಅರ್ಜಿ ಸಲ್ಲಿಕೆ ಮಾಡಿದ್ದರಾದರೂ, ಅಂದು ಕೋಚ್ ಹುದ್ದೆಯ ಆಕಾಂಕ್ಷಿಗಳ ಸಂದರ್ಶನ ಪಡೆದ ಸಿಎಸಿ ಸದಸ್ಯರಾದ ಸಚಿನ್, ಗಂಗೂಲಿ ಮತ್ತು ಲಕ್ಷ್ಮಣ್ ಕುಂಭ್ಲೆ ಅವರನ್ನು ನೂತನ ಕೋಚ್ ಆಗಿ ಆಯ್ಕೆ ಮಾಡಿದ್ದರು. ಅಂದಿನ ಕೋಚ್ ಆಯ್ಕೆ ಪ್ರಕ್ರಿಯೆ ವೇಳೆ ಶಾಸ್ತ್ರಿ ಅವರ 2 ವರ್ಷಗಳ ನಿರ್ದೇಶಕ ಸ್ಥಾನದ ಅನುಭವದ ಹೊರತಾಗಿಯೂ ಶಾಸ್ತ್ರಿ ಅವರನ್ನು ಪಕ್ಕಕ್ಕಿಟ್ಟು, ಕುಂಬ್ಳೆ ಅವರನ್ನು ಕೋಚ್ ಆಗಿ ಆಯ್ಕೆ ಮಾಡಲಾಗಿತ್ತು.
ಅಂದು ಸಚಿನ್ ರವಿಶಾಸ್ತ್ರಿ ಪರವಾಗಿ ಮತ ಹಾಕಿದ್ದರೆ, ಗಂಗೂಲಿ ಕುಂಬ್ಳೆ ಪರವಾಗಿ ಮತಹಾಕಿದ್ದರಂತೆ. ಹೀಗಾಗಿ ಲಕ್ಷ್ಮಣ್ ಅವರ ಮತ ನಿರ್ಣಾಯಕವಾಗಿ ಅವರೂ ಕೂಡ ಕುಂಬ್ಳೆ ಪರವಾಗಿ ಮತಹಾಕಿದ್ದರಿಂದ ಕೋಚ್ ಹುದ್ದೆ ಕುಂಬ್ಳೆ ಪಾಲಾಗಿತ್ತು. ಹೀಗಾಗಿ ಅಂದು ಮುಖಭಂಗ ಅನುಭವಿಸಿದ್ದ ರವಿಶಾಸ್ತ್ರಿ ಮತ್ತೆ ಅಂತಹ ಸ್ಥಿತಿ ಎದುರಾಗದರಲಿ ಎನ್ನುವ ಕಾರಣಕ್ಕೆ ಇಂತಹುದೊಂದು ಷರತ್ತು ವಿಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics