ಲಂಡನ್: ಜಾಗತಿಕ ಕ್ರಿಕೆಟ್ ರಂಗದಲ್ಲಿ ತಂತ್ರಜ್ಞಾನ ಸಾಕಷ್ಟು ಮಟ್ಟಿಗೆ ಬೆಳೆದಿದ್ದು, ಇದರ ಮುಂದುವರಿದ ಭಾಗ ಎಂಬಂತೆ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತೀಯ ಬ್ಯಾಟ್ಸಮನ್ ಗಳಾದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಮತ್ತು ಆರ್ ಅಶ್ವಿನ್ ಬ್ಯಾಟ್ ನಲ್ಲಿ ವಿಶೇಷ ಕಂಪ್ಯೂಟರೈಸ್ಡ್ ಚಿಪ್ ಅಳವಡಿಸಲಾಗಿದೆಯಂತೆ.
ಹೌದು..ಮಿನಿ ವಿಶ್ವಕಪ್ ಸಮರವೆಂದೇ ಖ್ಯಾತಿಗಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದ್ದು, ಇಂದಿನಿಂದ ಆರಂಭವಾಗಲಿರುವ ಜಾಗತಿಕ ಟೂರ್ನಿಯಲ್ಲಿ ಬ್ಯಾಟ್ಸಮನ್ ಗಳ ಕೈಗೆ ವಿಶೇಷ ಚಿಪ್ ಅಳವಡಿಕೆ ಮಾಡಿರುವ ಬ್ಯಾಟ್ ಗಳನ್ನು ನೀಡಲಿದೆ. ಐಸಿಸಿ ನೀಡುತ್ತಿರುವ ಈ ವಿಶೇಷ ಬ್ಯಾಟ್ ಗಳು ಬ್ಯಾಟ್ಸಮನ್ ಗಳ ಪ್ರದರ್ಶನ ಉತ್ತಮಪಡಿಸಲು ನೆರವಾಗುತ್ತದೆಯಂತೆ. ಅಲ್ಲದೆ ಆಟಗಾರ ಪ್ರದರ್ಶನದ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆಯಂತೆ..
ಇದರಿಂದ ಬೌಲರ್ ಎಸೆತ ಎದುರಿಸುವಲ್ಲಿ ಎಡವಿದ್ದು ಹೇಗೆ, ಬ್ಯಾಟ್ ನ ಆ್ಯಂಗಲ್ ಯಾವ ರೀತಿ ಇದ್ದರೆ ಬೌಲ್ಡ್ ಆಗುವುದನ್ನು ತಪ್ಪಿಸಬಹುದಿತ್ತು ಎನ್ನುವುದನ್ನು ಇನ್ನು ಮುಂದೆ ಬ್ಯಾಟ್ಸ್ ಮನ್ ಗಳು ಸುಲಭವಾಗಿ ತಿಳಿಯಬಹುದಾಗಿದೆ. ಈ ಚಿಪ್ ಅನ್ನು ಬ್ಯಾಟ್ ನ ಹ್ಯಾಂಡಲ್ ಬಳಿ ಇರಿಸಲಾಗುವುದು. ಇದರಿಂದ ಬ್ಯಾಟ್ ನ ದಿಕ್ಕುಗಳು ಹಾಗೂ ಬ್ಯಾಕ್ ಲಿಫ್ಟ್ ಅರಿಯಲು ಬ್ಯಾಟ್ಸ್ ಮನ್ ಗಳಿಗೆ ಸಾಧ್ಯವಾಗಲಿದೆ.
ಪಂದ್ಯದ ಬಳಿಕ ಬ್ಯಾಟ್ಸ್ ಮನ್ ಗಳು ತಮ್ಮ ನಿರ್ವಹಣೆಯನ್ನು ವಿಮರ್ಶೆ ಮಾಡಲು ನೆರವಾಗಲಿದೆ. ಚಿಪ್ ನಲ್ಲಿ ದಾಖಲಾದ ಚಿತ್ರಗಳನ್ನು ಕಂಪ್ಯೂಟರ್ ನಲ್ಲಿ ಸಾಫ್ಟ್ ವೇರ್ ಮೂಲಕ ಡೌನ್ ಲೋಡ್ ಮಾಡಿಕೊಂಡು ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ.
ಇನ್ನು ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಹಾಗೂ ಆರ್ ಅಶ್ವಿನ್ ಚಿಪ್ ಇರುವ ಬ್ಯಾಟ್ ನಿಂದ ಆಟವಾಡಲಿದ್ದಾರೆ.
ಹೀಗಾಗಿ ಇಂತಹ ವಿಶಿಷ್ಠ ಬ್ಯಾಟ್ ಗಳನ್ನು ಐಸಿಸಿ ರೋಹಿತ್ ಶರ್ಮಾ ಮತ್ತು ಅಂಜಿಕ್ಯಾ ರಹಾನೆ ಅವರಿಗೆ ನೀಡಿದೆ. ಕೇವಲ ಭಾರತದ ಶರ್ಮಾ ಮತ್ತು ರಹಾನೆ ಮಾತ್ರವಲ್ಲ. ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ತಂಡಗಳ ತಲಾ ಮೂವರು ಪ್ರಮುಖ ಬ್ಯಾಟ್ಸಮನ್ ಗಳಿಗೆ ನೀಡಲಾಗುತ್ತದೆ ಎಂದು ಐಸಿಸಿ ಮೂಲಗಳು ತಿಳಿಸಿವೆ. ಈ ವಿಶಿಷ್ಟ ಚಿಪ್ ನ ಮೂಲಕ ಕಂಪ್ಯೂಟರ್ ಸಾಫ್ಟ್ ವೇರ್ ಬಳಕೆ ಮಾಡಿಕೊಂಡು ದತ್ತಾಂಶಗಳ ಸಂಗ್ರಹ ಮಾಡಬಹುದಾಗಿದೆ. ಆ ಮೂಲಕ ಬ್ಯಾಟ್ಸಮನ್ ತನ್ನ ಬ್ಯಾಟ್ಸಮನ್ ತನ್ನ ಬ್ಯಾಟಿಂಗ್ ನಲ್ಲಿ ಲೋಪದೋಷಗಳನ್ನು ತಿಳಿಯಲು ನೆರವಾಗಲಿದ್ದು, ಬ್ಯಾಟ್ ನ ಪ್ರತೀ ಚಲನೆ ಕೂಡ ಚಿಪ್ ನಲ್ಲಿ ದಾಖಲಾಗಿರುತ್ತದೆ.
ಆದರೆ ಈ ಚಿಪ್ ನ ಕಾರ್ಯ ನಿರ್ವಹಣೆ ಮತ್ತು ಅದರಲ್ಲಿನ ದತ್ತಾಂಶ ಅವಲೋಕನ ಪ್ರಕ್ರಿಯೆ ಪಂದ್ಯ ನಡೆಯುತ್ತಿರುವಾಗಲೇ ನಡೆಯುತ್ತದೆಯೇ ಅಥವಾ ಪಂದ್ಯದ ಬಳಿಕ ನಡೆಸಲಾಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತಿದ್ದು, ಈ ಪ್ರಶ್ನೆಗೆ ಐಸಿಸಿ ಸ್ಪಷ್ಟನೆ ನೀಡಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಐಸಿಸಿಯಿಂದ ನಿರೀಕ್ಷಿಸಲಾಗುತ್ತಿದೆ.