ಕ್ರಿಕೆಟ್

ಎಬಿಡಿ ಅನುಪಸ್ಥಿತಿ ಆರ್ ಸಿಬಿಗೆ ದುಬಾರಿಯಾಗಿ ಪರಿಣಮಿಸಿತು: ಬ್ರೆಂಡನ್ ಮೆಕ್ಕಲಮ್

Srinivasamurthy VN
ಬೆಂಗಳೂರು: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಸ್ಫೋಟಕ ಬ್ಯಾಟ್ಸಮನ್ ಎಬಿಡಿವಿಲಿಯರ್ಸ್ ಅನುಪಸ್ಥಿತಿ ದುಬಾರಿಯಾಗಿ ಪರಿಣಮಿಸಿತು ಎಂದು ಆರ್ ಸಿಬಿ ತಂಡದ ಆಟಗಾರ ಬ್ರೆಂಡನ್ ಮೆಕ್ಕಲಮ್ ಹೇಳಿದ್ದಾರೆ.
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಂಗಣದಲ್ಲಿ ನಡೆದ ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ 6 ವಿಕೆಟ್ ಗಳ ಅಂತರದಲ್ಲಿ ಸೋಲು ಕಂಡಿತ್ತು. ಟೂರ್ನಿಯಲ್ಲಿ ಮುಂದುವರೆಯಬೇಕಾದರೆ ಆರ್ ಸಿಬಿಗೆ ಈ ಪಂದ್ಯ ಗೆಲ್ಲಲೇ ಬೇಕಾದ ಅವಶ್ಯಕತೆ ಇತ್ತು. ಆದರೆ ನಿರ್ಣಾಯಕ ಪಂದ್ಯವನ್ನು ಆರ್ ಸಿಬಿ ಕೈ ಚೆಲ್ಲಿದೆ. 
ಪಂದ್ಯದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬ್ರೆಂಡನ್ ಮೆಕ್ಕಲಮ್, ನಿನ್ನೆಯ ಪಂದ್ಯದಲ್ಲಿ ನಿಜಕ್ಕೂ ತಂಡದ ಫೀಲ್ಡಿಂಗ್ ಕಳಪೆಯಾಗಿತ್ತು. ಪ್ರಮುಖ ಕ್ಯಾಚ್ ಗಳನ್ನು ಕೆೈ ಚೆಲ್ಲಿ, ಗೆಲ್ಲಲೇ ಬೇಕಾದ ಪಂದ್ಯವನ್ನು ನಾವು ಸೋತೆವು. ಪ್ರಮುಖವಾಗಿ ತಂಡ ಫೀಲ್ಡಿಂಗ್ ಕಳಪೆಯಾಗಿತ್ತು ಎಂದು ಹೇಳಿದ್ದಾರೆ. ಇದೇ ವೇಳೆ ಎಬಿಡಿ ಕುರಿತು ಮಾತನಾಡಿದ ಮೆಕ್ಕಲಮ್, ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ ಅನುಪಸ್ಥಿತಿ ಬಲವಾಗಿ ಕಾಡಿತು. ಒಂದರ್ಥದಲ್ಲಿ ಅವರ ಅನುಪಸ್ಥಿತಿ ನಮಗೆ ದುಬಾರಿಯಾಯಿತು. ನಮ್ಮ ಇನ್ನಿಂಗ್ಸ್ ನಲ್ಲಿ ಇನ್ನೂ 20-30ರನ್ ಹೆಚ್ಚುವರಿಯಾಗಿ ಪೇರಿಸುವ ಅವಕಾಶ ನಮಗೆ ಇತ್ತು ಎಂದು ಮೆಕ್ಕಲಮ್ ಅಭಿಪ್ರಾಯಪಟ್ಟಿದ್ದಾರೆ. 
ಎಬಿಡಿ ವಿಶ್ವ ಪ್ರಮುಖ ಮತ್ತು ಅತ್ಯುತ್ತಮ ಆಟಗಾರರಲ್ಲಿ ಒಬ್ಬರು, ಬೌಲರ್ ಗಳಿಗೆ ಯಾವಾಗಲೂ ಎಬಿಡಿ ಕಬ್ಬಿಣದ ಕಡಲೆಯಾಗಿರುತ್ತಾರೆ. ಆದರೆ ದುರಾದೃಷ್ಟವಶಾತ್ ಅವರು ವೈರಾಣು ಜ್ವರದಿಂದ ಬಳಲುತ್ತಿದ್ದು, ನಿನ್ನೆಯ ಪಂದ್ಯಕ್ಕೆ ಅಲಭ್ಯರಾಗಿದ್ದರು. ಶೀಘ್ರ ಅವರು ಗುಣಮುಖರಾಗಲಿದ್ದು, ಮುಂದಿನ ಪಂದ್ಯದಳಿಗೆ ಖಂಡಿತಾ ಲಭ್ಯರಿರುವ ವಿಶ್ವಾಸವಿದೆ ಎಂದು ಮೆಕ್ಕಲಮ್ ಹೇಳಿದ್ದಾರೆ.
SCROLL FOR NEXT