ಬೌಲರ್ ತಲೆಗೆ ಸಿಡಿದ ಚೆಂಡು ಸಿಕ್ಸರ್ ಗೆ
ಆಕ್ಲೆಂಡ್: ಬ್ಯಾಟ್ಸಮನ್ ಬಾರಿಸಿದ ಚೆಂಡು ನೇರ ಬೌಲರ್ ನ ತಲೆಗೆ ಸಿಡಿದು ಸಿಕ್ಸರ್ ಹೋದ ಅಪರೂಪದ ಮತ್ತು ಅಪಾಯಕಾರಿ ಘಟನೆ ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ನಡೆದಿದೆ.
2014 ರಲ್ಲಿ ಆಸ್ಟ್ರೇಲಿಯಾದ ದೇಶಿಯ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ತಂಡದ ಆಟಗಾರರ ಫಿಲಿಪ್ ಹ್ಯೂಸ್ ಮೈದಾನಲ್ಲಿ ಬೌಲರ್ ಎಸೆದ ಬೌನ್ಸರ್ ಗೆ ಬಲಿಯಾದ ದುರಂತ ನೆನಪು ಮಾಸುವ ಮುನ್ನವೇ ಸಂಭವಿಸಬಹುದಾಗಿದ್ದ ಅಂತಹುದೇ ಮತ್ತೊಂದು ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಬೌಲರ್ ಎಸೆತವನ್ನು ಸಿಕ್ಸರ್ ಗಟ್ಟುವ ಪ್ರಯತ್ನದಲ್ಲಿ ಬ್ಯಾಟ್ಸ್ ಮನ್ ಹೊಡೆದ ಚೆಂಡು ನೇರವಾಗಿ ಬೌಲರ್ ನ ತಲೆಗೆ ಬಡಿದು ನಂತರ ಸಿಕ್ಸರ್ ಗೆರೆ ದಾಟಿದೆ.
ನ್ಯೂಜಿಲೆಂಡ್‍ನಲ್ಲಿ ದೇಶಿಯ ತಂಡಗಳ ನಡುವೆ ನಡೆಯುತ್ತಿದ್ದ ಫೋರ್ಡ್ ಟ್ರೋಫಿ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಆಕ್ಲೆಂಡ್ ಹಾಗೂ ಕ್ಯಾಂಟ್ ರ್ಬರಿ ತಂಡಗಳ ನಡುವಿನ ಪಂದ್ಯದಲ್ಲಿ ಕ್ಯಾಂಟ್ ರ್ಬರಿ ತಂಡದ ಆಂಡ್ರ್ಯೂ ಎಲಿಸ್ ಬೌಲಿಂಗ್ ನಲ್ಲಿ ಆಕ್ಲೆಂಡ್ ತಂಡದ ಜೀತ್ ರವಲ್ ನೇರವಾಗಿ ಹೊಡೆದಿದ್ದಾರೆ. ಚೆಂಡು ನೇರವಾಗಿ ಎಲಿಸ್ ತಲೆಗೆ ಬಡಿದು ನಂತರ ಸಿಕ್ಸರ್ ಗೆರೆ ದಾಟಿದೆ. ಜೀತ್ ರವಲ್ ಹೊಡೆದ ಚೆಂಡು ಏಲಿಸ್ ತಲೆಗೆ ಬಡಿದಿದೆ. ತಲೆಯ ಅಂಚಿಗೆ ಬಾಲ್ ತಾಗಿದ್ದರಿಂದ ಹೆಚ್ಚಿನ ಅಪಾಯವಾಗಲಿಲ್ಲ. ಏಲಿಸ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.
ಕೂಡಲೇ ಬೌಲರ್ ಬಳಿ ತೆರಳಿದ ಜೀತ್ ರವಲ್ ಬೌಲರ್ ಪರಿಸ್ಥಿತಿ ವಿಚಾರಿಸಿದ್ದಾರೆ. ಅಲ್ಲದೆ ಕ್ಷಮೆ ಕೂಡ ಕೇಳಿ ಕ್ರೀಡಾ ಸ್ಪೂರ್ತಿ ಮೆರೆದಿದ್ದಾರೆ. ಈ ವೇಳೆ ತುರ್ತಾಗಿ ಬೌಲರ್ ಏಲಿಸ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರಿಗೆ ಎಲ್ಲ ರೀತಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ವೈದ್ಯರು ತಿಳಿಸಿರುವಂತೆ ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಹೇಳಿದರು. ಬಳಿಕ ಆಂಡ್ರ್ಯೂ ಎಲಿಸ್ ಮತ್ತೆ ಮೈದಾನಕ್ಕೆ ಮರಳಿ ಆಟ ಮುಂದುವರಿಸಿದರು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.