ನಾಟಿಂಗ್ಹ್ಯಾಮ್: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 242 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದ್ದು ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ನಾಟಿಂಗ್ಹ್ಯಾಮ್ ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ವಿಶ್ವ ದಾಖಲೆ ಗರಿಷ್ಠ 481 ರನ್ ಪೇರಿಸಿತು. ಇಂಗ್ಲೆಂಡ್ ನೀಡಿದ 482 ರನ್ ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 37ನೇ ಓವರ್ ಮುಕ್ತಾಯಕ್ಕೆ 239 ರನ್ ಗಳಿಗೆ ಸರ್ವಪತನ ಕಂಡಿದ್ದು 242 ರನ್ ಗಳಿಂದ ಪರಾಭವಗೊಂಡಿತು.
ಆಸ್ಟ್ರೇಲಿಯಾ ಪರ ಹೇಡ್ 51, ಮಾರ್ಶ್ 24, ಸ್ಟೋನೀಸ್ 44 ಮತ್ತು ಅಗಾರ್ 25 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ರಶೀದ್ 4, ಮೋಹಿನ್ ಅಲಿ 3 ಮತ್ತು ವಿಲ್ಲೆ 2 ವಿಕೆಟ್ ಪಡೆದಿದ್ದಾರೆ.
ಇಂಗ್ಲೆಂಡ್ ಪರ ಜಾಸನ್ ರಾಯ್ 82, ಬೈರ್ಸ್ಟೋವ್ 139, ಹಾಲೇಸ್ 147, ಮೊರ್ಗನ್ 67 ರನ್ ಬಾರಿಸಿದ್ದಾರೆ.
ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ರಿಚರ್ಡ್ಸನ್ 3 ಮತ್ತು ಅಗಾರ್ 1 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾದ ಆಂಡ್ರ್ಯೂ ಟೈ 9 ಓವರ್ ಗಳಲ್ಲಿ 100 ಹೊಡೆಸಿಕೊಂಡು ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಆದಾಗಲೇ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.
2016ರಲ್ಲಿ ಇದೇ ನಾಟಿಂಗ್ಹ್ಯಾಮ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ 444 ರನ್ ಬಾರಿಸಿದ್ದು ಇದು ತಂಡವೊಂದರ ಗರಿಷ್ಠ ರನ್ ಆಗಿತ್ತು. ಇದೀಗ ಇಂಗ್ಲೆಂಡ್ ತನ್ನ ದಾಖಲೆಯನ್ನು ತಾನೇ ಮುರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics