ಕೊಲಂಬೋ: ತ್ರಿಕೋನ ಟಿ20 ಸರಣಿ ನಿಡಹಾಸ್ ಸರಣಿಯುದ್ದಕ್ಕೂ ಭಾರಿ ಸದ್ದು ಮಾಡಿದ್ದು ಮಾತ್ರ, ಬಾಂಗ್ಲಾದೇಶ ಆಟಗಾರರ ನಾಗಿನ್ ಡ್ಯಾನ್ಸ್..ಇಷ್ಟಕ್ಕೂ ಬಾಂಗ್ಲಾ ಆಟಗಾರರ ಈ ನಾಗಿನ್ ಡ್ಯಾನ್ಸ್ ಹಿನ್ನಲೆ ಏನು ಗೋತ್ತಾ?
ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಒಂದಷ್ಟು ಕೆಟ್ಟ ಸಂಗತಿಗಳಿಗೆ ಸುದ್ದಿಯಾಗಿತ್ತು. ಮೈದಾನದಲ್ಲಿ ಆಟಗಾರರ ವಾಗ್ವಾದ ಪ್ರಚೋದನೆ ಮತ್ತು ಅಪಹಾಸ್ಯದಂತಹ ಘಟನೆಗಳ ನಡೆದಿತ್ತು. ಬಾಂಗ್ಲಾದೇಶ ಆಟಗಾರರ ದುರ್ವವರ್ತನೆ ವಿರುದ್ಧ ಐಸಿಸಿ ಕೂಡ ಕ್ರಮ ಕೈಗೊಂಡು ಆಟಗಾರರಿಗೆ ದಂಡ ವಿಧಿಸಿತ್ತು. ಆದರೆ ಇಷ್ಟಕ್ಕೂ ಬಾಂಗ್ಲಾದೇಶ ಆಟಗಾರರ ಈ ನಾಗಿನ್ ಡ್ಯಾನ್ಸ್ ಮತ್ತು ಇತರೆ ಘಟನೆಗಳ ಕಾರಣವಾದ ಅಂಶಗಳ ಕುರಿತು ಒಂದು ಸಣ್ಣ ವಿಶ್ಲೇಷಣೆ ಇಲ್ಲಿದೆ.
ಬಾಂಗ್ಲಾದೇಶ ಆಟಗಾರರ ನಾಗಿನ್ ಡ್ಯಾನ್ಸ್ ಸರಣಿ ಆರಂಭವಾಗಿದ್ದು, ಬಾಂಗ್ಲಾದೇಶದಲ್ಲಿ. ಹೌದು ಕಳೆದ ವರ್ಷ ಶ್ರೀಲಂಕಾ ಕ್ರಿಕೆಟ್ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಂಡಿತ್ತು. ಬಾಂಗ್ಲಾ ವಿರುದ್ಧ ಮೊದಲ ಪಂದ್ಯದಲ್ಲಿ ಬಾಂಗ್ಲಾ ಆಟಗಾರ ನಜ್ಮುಲ್ ಇಸ್ಲಾಂ ಉಪುಲ್ ತರಂಗಾರನ್ನು ಔಟ್ ಮಾಡಿದ ಬಳಿಕ ಮೈದಾನದಲ್ಲಿ ಸಂಭ್ರಮ ವ್ಯಕ್ತಪಡಿಸುವ ವೇಳೆ ನಾಗಿನ್ ಡ್ಯಾನ್ಸ್ ಮಾಡಿದ್ದರು. ಶೇರ್ ಇ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಈ ಘಟನೆಗೆ ವಿಕೆಟ್ ಕೀಪರ್ ಮುಶ್ಫಿಕರ್ ರಹೀಂ ಕೂಡ ಇಸ್ಲಾಂಗೆ ಸಾಥ್ ನೀಡಿದ್ದರು.
ಆ ಬಳಿಕ ಈ ಘಟನೆ ಮತ್ತೆ ಮರುಕಳಿಸಿದ್ದು ಕಳೆದ ಶುಕ್ರವಾರ. ಅಂದರೆ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ನಡುವಿನ ಪಂದ್ಯದಲ್ಲಿ. ಈ ಪಂದ್ಯದಲ್ಲಿ ಅಂದು ಬಾಂಗ್ಲಾದಲ್ಲಿ ನಾಗಿನ್ ಡ್ಯಾನ್ಸ್ ಮಾಡಿದ್ದ ರಹೀಂ 25ರನ್ ಗಳಿಸಿ ಲಂಕಾದ ಅಮಿಲಾ ಅಪೊನ್ಸೋ ಬೌಲಿಂಗ್ ನಲ್ಲಿ ಔಟ್ ಆಗಿದ್ದರು. ಈ ವೇಳೆ ಅಪೋನ್ಸೋ ಕೂಡ ರಹೀಮ್ ರನ್ನು ಪುಂಗಿ ಉದುವ ರೀತಿಯಲ್ಲಿ ಅಣಕಿಸಿ ಪೆವಿಲಿಯನ್ ಗೆ ಹೋಗುವಂತೆ ಸೂಚಿಸಿದರು. ಆದರೆ ಆ ಬಳಿಕ ಪಂದ್ಯ ಬಿಸಿ ಏರಿಲ ಪಂದ್ಯ ರೋಚಕ ಅಂತ್ಯ ಕಂಡಿತ್ತು. ಅಲ್ಲದೆ ಮೈದಾನದಲ್ಲಿ ನಡೆದ ಕೆಲ ಪ್ರಚೋದನಕಾರಿ ಘಟನೆಗಳು ಬಾಂಗ್ಲಾ ಆಟಗಾರರು ಮೈದಾನದಲ್ಲೇ ನಾಗಿನ್ ಡ್ಯಾನ್ಸ್ ಮಾಡುವಂತೆ ಮಾಡಿದ್ದವು. ಶ್ರೀಲಂಕಾ ಪಂದ್ಯ ಸೋತ ಬಳಿಕ ಬಾಂಗ್ಲಾ ಕ್ರಿಕೆಟಿಗರು ಮತ್ತು ಅಭಿಮಾನಿಗಳು ನಾಗಿನ್ ಡ್ಯಾನ್ಸ್ ಮಾಡಿ ಲಂಕಾ ಅಭಿಮಾನಿಗಳನ್ನು ಕೆಣಕಿದ್ದರು.
ಇದೀಗ ಇದೇ ನಾಗಿನ್ ಡ್ಯಾನ್ಯ್ ಮೂಲಕ ಲಂಕಾ ಅಭಿಮಾನಿಗಳು ಬಾಂಗ್ಲಾ ತಂಡಕ್ಕೆ ಟಾಂಗ್ ನೀಡಿದ್ದಾರೆ. ವಿಂಡೀಸ್ ತಂಡದ ಚಾಂಪಿಯನ್ಸ್ ಡ್ಯಾನ್ಸ್ ಮಾದರಿಯಲ್ಲೇ ಬಾಂಗ್ಲಾ ತಂಡದ ನಾಗಿನ್ ಡ್ಯಾನ್ಸ್ ಕೂಡ ಸುದ್ದಿಗೆ ಗ್ರಾಸವಾಗಿದೆ.