ಕೆಎಲ್ ರಾಹುಲ್-ಝೈನಬ್ ಅಬ್ಬಾಸ್
ಜೈಪುರ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಅತೀ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ.
ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಅಜೇಯ 95 ರನ್ ಗಳಿಸಿದ್ದರು. ಇದರೊಂದಿಗೆ ಅಂಬಟಿ ರಾಯುಡು ಹಿಂದಿಕ್ಕಿ ಗರಿಷ್ಠ ರನ್ ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಹೀಗಾಗಿ ಅವರಿಗೆ ಆರೆಂಜ್ ಕ್ಯಾಪ್ ಗೌರವ ಸಿಕ್ಕಿದೆ.
ಐಪಿಎಲ್ 11ನೇ ಆವೃತ್ತಿಯಲ್ಲಿ ಒಟ್ಟು 10 ಇನ್ನಿಂಗ್ಸ್ ಆಡಿರುವ ಕೆಎಲ್ ರಾಹುಲ್ 471 ರನ್ ಗಳಿಸಿ ಮುನ್ನಡೆಯಲ್ಲಿದ್ದಾರೆ. ರಾಯುಡು 423 ರನ್ ಗಳೊಂದಿಗೆ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ವೈಖರಿಗೆ ಪಾಕಿಸ್ತಾನ ಆ್ಯಂಕರ್ ಝೈನಬ್ ಅಬ್ಬಾಸ್ ಫಿದಾ ಆಗಿ ಟ್ವೀಟ್ ಮಾಡಿದ್ದಾರೆ. 'ಕೆಎಲ್ ರಾಹುಲ್ ಪ್ರಭಾವಶಾಲಿ, ಅತ್ಯುತ್ತಮ ಸಮಯಜ್ಞಾನ, ನೋಡಲು ಉತ್ತಮ' ಎಂದು ಬರೆದುಕೊಂಡಿದ್ದಾರೆ.