ಮೈದಾನದಲ್ಲಿ ಭಾವುಕರಾದ ವಾಟ್ಸನ್
ಮುಂಬೈ: ಐಪಿಎಲ್ ಫೈನಲ್ ಪಂದ್ಯದ ಹೀರೋ ಶೇನ್ ವಾಟ್ಸನ್ ಶತಕ ಸಿಡಿಸಿ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಆದರೆ ಅದೇ ಪಂದ್ಯದಲ್ಲಿ ಶೇನ್ ವಾಟ್ಸನ್ ಕ್ರಿಕೆಟ್ ಜೀವನವನ್ನೇ ಹಾಳುಮಾಡಬಲ್ಲ ಘಟನೆ ಕೂಡ ನಡೆದಿದೆ.
ಹೌದು.. ಕೇವಲ 57 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 11 ಬೌಂಡರಿಗಳ ಮೂಲಕ 117 ರನ್ ಚಚ್ಚಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವಂತೆ ಮಾಡಿದ್ದ ಶೇನ್ ವಾಟ್ಸನ್ ಫೈನಲ್ ಪಂದ್ಯದ ವೇಳೆ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಅಷ್ಟು ಮಾತ್ರವಲ್ಲದೇ ಇಡೀ ಪಂದ್ಯದುದಕ್ಕೂ ಒಂದೇ ಕಾಲಿನಲ್ಲಿ ಆಡಿದ್ದರು. ವಾಟ್ಸನ್ ಬ್ಯಾಟಿಂಗ್ ಅನ್ನು ಯಾರಾದರೂ ಸೂಕ್ಷ್ಮವಾಗಿ ಗಮನಿಸಿದ್ದರೆ ಈ ಅಂಶ ತಿಳಿಯುತ್ತದೆ. ಒಂಟಿ ರನ್ ಓಡಲು ಪರದಾಡುತ್ತಿದ್ದ ವಾಟ್ಸನ್ ಓಡುವ ರನ್ ಗಳ ಬದಲಿಗೆ ಬೌಂಡರಿ ಸಿಕ್ಸರ್ ಗಳ ಮೂಲಕವೇ ರನ್ ಗಳಿಸಲು ಮುಂದಾಗಿದ್ದರು.
ಅವರ ಒಟ್ಟು 117 ರನ್ ಗಳ ಪೈಕಿ 92 ರನ್ ಗಳು ಬೌಂಡರಿ ಮತ್ತು ಸಿಕ್ಸರ್ ಗಳಿಂದಲೇ ಬಂದಿದ್ದು ಇದಕ್ಕೆ ಸಾಕ್ಷಿ. ಹೌದು ಪಂದ್ಯದ ವೇಳೆ ಶೇನ್ ವಾಟ್ಸನ್ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇನಿಂಗ್ಸ್ ಆರಂಭದಲ್ಲೇ ಸ್ನಾಯುಸೆಳೆತಕ್ಕೆ ಒಳಗಾದ ವಾಟ್ಸನ್ ನೋವಿನಲ್ಲೇ ಬ್ಯಾಟಿಂಗ್ ಮುಂದುವರೆಸಿದರು. ಆರಂಭದಲ್ಲೇ ನೋವಿಗೆ ತುತ್ತಾಗಿ ರನ್ ಗಳಿಸಲು ಪರದಾಡುತ್ತಾ ಇದ್ದ ವಾಟ್ಸನ್ ಕ್ರೀಸ್ನಲ್ಲಿ ನೆಲೆ ನಿಲ್ಲೋದಕ್ಕೆ ತಡಬಡಾಯಿಸುತ್ತಿದ್ದರು. ಆದರೆ ಬಳಿಕ ಲಯ ಕಂಡುಕೊಂಡ ಆಸಿಸ್ ಕ್ರಿಕೆಟಿಗ ಬಳಿಕ ಹೈದರಾಬಾದ್ ಬೌಲರ್ ಗಳ ಮೇಲೆ ಸವಾರಿ ಮಾಡಿದರು.
ಪವರ್ ಪ್ಲೇನಲ್ಲಿ ಶಾಂತವಾಗಿದ್ದ ಅವರು, ಪವರ್ ಪ್ಲೇ ಮುಗಿಯುತ್ತಿದ್ದಂತೆಯೇ ಎದುರಾಳಿಗಳ ಮೇಲೆ ಎರಗಿದರು. ಬೌಂಡರಿ, ಸಿಕ್ಸರ್ ಗಳ ಮೂಲಕ ಅರ್ಧಶತಕ ಸಿಡಿಸಿದ ವಾಟ್ಸನ್, ಬಳಿಕ ನೋಡ ನೋಡುತ್ತಿದ್ದಂತೆಯೇ ಶತಕ ಕೂಡ ಸಿಡಿಸಿದರು. ಇದು ಟೂರ್ನಿಯಲ್ಲಿ ಅವರ 2ನೇ ಶತಕವಾಗಿತ್ತು. ಅಂತೆಯೇ ತಂಡದ ಪರ ಕೊನೆಯ ಎಸೆತದವರೆಗೂ ಕ್ರೀಸ್ ನಲ್ಲಿ ನಿಂತು ಗೆಲುವು ತಂದುಕೊಟ್ಟರು.
ಮೈದಾನದಲ್ಲೇ ವಾಟ್ಸನ್ ಅತ್ತಿದ್ದೇಕೆ
ಗೆಲುವಿನ ನಂತರ ಗಾಯದ ನಡುವೆಯೂ ಅದ್ಭುತ ಇನಿಂಗ್ಸ್ ಕಟ್ಟಿದ ವಾಟ್ಸನ್ ಸಂತೋಷಕ್ಕೆ, ಪಾರವೇ ಇರಲಿಲ್ಲ. ಫೈನಲ್ ಪಂದ್ಯದಲ್ಲಿ ವಾಟ್ಸನ್ ಸಿಡಿಸಿದ ಸೆಂಚುರಿ ಎಲ್ಲರ ಗಮನ ಸೆಳೆಯಿತಾದರೂ, ಈ ಶತಕದ ಹಿಂದಿದ್ದ ನೋವು, ವಾಟ್ಸನ್ ಒಬ್ಬರಿಗೇ ಗೊತ್ತು. ಕಾಲಿನ ಸ್ನಾಯು ನೋವಿನ ನಡುವೆಯೇ ಒಂದು ಕಾಲಿನ ನೆರವಿನಿಂದ ಬ್ಯಾಟಿಂಗ್ ಮಾಡಿದ ವಾಟ್ಸನ್ ಗೆ ತಂಡವನ್ನು ಗೆಲುವಿನ ದಡ ಸೇರಿಸಿದ ತೃಪ್ತಿ ಇತ್ತು. ಇದೇ ಕಾರಣಕ್ಕೆ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಮೈದಾನದಲ್ಲೇ ಗಳಗಳನೆ ಅತ್ತರು. ಭಾವುಕರಾಗಿದ್ದ ವಾಟ್ಸನ್ ರನ್ನು ಸಹ ಆಟಗಾರರು ಸಂತೈಸಿದರು.
ನೋವಿನ ವಿಚಾರ ಬಹಿರಂಗ ಪಡಿಸಿದ ಬ್ರಾವೋ
ಇನ್ನು ವಾಟ್ಸನ್ ಮೈದಾನದಲ್ಲಿ ಕಣ್ಣೀರು ಹಾಕಿದ್ದು ಎಲ್ಲರಿಗೂ ತಿಳಿದ ವಿಚಾರವೇ ಆದರೂ, ಅವರ ಕಣ್ಣೀರಿನ ಕಥೆ ಬಹಿರಂಗ ಮಾಡಿದ್ದು ಮಾತ್ರ ಸಹ ಆಟಗಾರ ಡ್ವೇಯ್ನ್ ಬ್ರಾವೋ. ಪಂದ್ಯದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಬ್ರಾವೋ, ಬ್ಯಾಟಿಂಗ್ ವೇಳೆ ವಾಟ್ಸನ್ ಸ್ನಾಯು ಸೆಳೆತಕ್ಕೆ ತುತ್ತಾಗಿದ್ದ ವಿಚಾರವನ್ನು ಹೇಳಿದರು. ಅಲ್ಲದೇ ಇಡೀ ಇನ್ನಿಂಗ್ಸ್ ಉದ್ದಕ್ಕೂ ಒಂದು ಕಾಲಿನ ನೆರವಿನಿಂದ ಬ್ಯಾಟಿಂಗ್ ಮಾಡಿದರು ಎಂದು ಹೇಳಿದ್ದರು. ಬ್ರಾವೋ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ವಾಟ್ಸನ್ ಸಾಹಸಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.