ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಈ ಮಧ್ಯೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದ 19 ವರ್ಷದ ಆಫ್ಘಾನಿಸ್ತಾನದ ಖ್ಯಾತ ಸ್ಪಿನ್ನರ್ ರಶೀದ್ ಖಾನ್ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರರಾಗಿದ್ದರು. ಇನ್ನು 2018ರ ಐಪಿಎಲ್ ನಲ್ಲಿ ರಶೀದ್ ಒಟ್ಟು 21 ವಿಕೆಟ್ಗಳನ್ನು ಪಡೆದಿದ್ದರು.
ಇನ್ನು ಕ್ರಿಕೆಟ್ ನಲ್ಲಿ ಇದೀಗ ಹೆಸರು ಮಾಡುತ್ತಿರುವ ಆಫ್ಘಾನಿಸ್ತಾನ ತಂಡ ಜೂನ್ ನಲ್ಲಿ ಭಾರತದ ಜೊತೆಗೆ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಲಿದೆ.
ಐಪಿಎಲ್ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿರುವ ರಶೀದ್ ಖಾನ್ ಇದೀಗ ಸ್ವದೇಶಕ್ಕೆ ಮರಳಿದ್ದು ಅಲ್ಲಿ ತಮ್ಮ ತಂಡವನ್ನು ಬಲಗೊಳಿಸಲಿದ್ದಾರೆ. ಈ ಮಧ್ಯೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಐಪಿಎಲ್ ನನಗೆ ಒಂದು ಉತ್ತಮ ವೇದಿಕೆ ನಿರ್ಮಿಸಿದ್ದು ಜತೆಗೆ ದೊಡ್ಡ ಮಟ್ಟದಲ್ಲಿ ಹೆಸರನ್ನು ತಂದುಕೊಟ್ಟಿದೆ. ಇದರಿಂದ ನಾನು ಅಧ್ಯಕ್ಷರ ನಂತರ ಆಫ್ಘಾನಿಸ್ತಾನದಲ್ಲಿ ಬಹುಶಃ ನಾನೇ ಹೆಚ್ಚು ಜನಪ್ರಿಯ ಎಂದು ಹೇಳಿದ್ದಾರೆ.
ಐಪಿಎಲ್ ನಲ್ಲಿ ರಶೀದ್ ಖಾನ್ ಉತ್ತಮ ಪ್ರದರ್ಶನ ನೀಡುವ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ವೇಳೆ ಕೆಲವರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ರಶೀದ್ ಖಾನ್ ನನ್ನು ಶಾಶ್ವತವಾಗಿ ಭಾರತಕ್ಕೆ ಕಳುಹಿಸಿಬಿಡಿ ಎಂಬ ಟ್ವೀಟ್ ಗಳನ್ನು ಮಾಡಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಐಪಿಎಲ್ ನಲ್ಲಿನ ರಶೀದ್ ಖಾನ್ ಪ್ರದರ್ಶನವನ್ನು ಕೊಂಡಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿರುವ ಘನಿ ನಾವು ರಶೀದ್ ಖಾನ್ ನನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಟ್ವೀಟಿಸಿದ್ದು ಸೋಜಿಗದ ಸಂಗತಿ.
ಐಪಿಎಲ್ ನಲ್ಲಿನ ರಶೀದ್ ಖಾನ್ ಸಾಧನೆಗೆ ಆಫ್ಘಾನಿಗರು ಹೆಮ್ಮೆ ಪಡುತ್ತಾರೆ. ನಮ್ಮ ಆಟಗಾರರಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಕಲ್ಪಿಸಿದ ಭಾರತೀಯರಿಗೆ ನಾನ್ನ ಧನ್ಯವಾದಗಳು. ಆಫ್ಘಾನ್ ಏನು ಎಂಬುದನ್ನು ರಶೀದ್ ಖಾನ್ ನಿರೂಪಿಸಿದ್ದಾರೆ. ಅವರು ಕ್ರಿಕೆಟ್ ಜಗತ್ತಿಗೆ ಒಂದು ಆಸ್ತಿಯಾಗಿ ಉಳಿದಿದ್ದಾರೆ. ನಾವು ಅವನನ್ನು ಬಿಟ್ಟುಕೊಡುವುದಿಲ್ಲ ಎಂದು ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದರು.