ನವದೆಹಲಿ: ಇತ್ತೀಚೆಗಷ್ಟೇ ಐಸಿಸಿ ಪ್ರತಿಷ್ಠಿತ ಹಾಲ್ ಆಫ್ ಫೇಮ್ ಗೌರವಕ್ಕೆ ಭಾರತ ತಂಡದ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಪಾತ್ರರಾಗಿದ್ದರು. ದ್ರಾವಿಡ್ ಈ ಗೌರವ ಸಿಕ್ಕಿದ್ದು ಎಲ್ಲರಿಗೂ ಖುಷಿಯ ವಿಚಾರವೇ ಆದರೆ ದಾಖಲೆಗಳ ವೀರ ಮತ್ತು ಭಾರತೀಯ ಕ್ರಿಕೆಟ್ ದೇವರು ಸಚಿನ್ ಗೆ ಏಕೆ ಈ ಗೌರವ ಇನ್ನೂ ಸಿಕ್ಕಿಲ್ಲ ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ದ್ರಾವಿಡ್ ಗೆ ಹಾಲ್ ಆಫ್ ಫೇಮ್ ಗೌರವ ನೀಡಿ ಐಸಿಸಿ ಆದರಿಸಿದೆ. ಆದರೆ ಇದು ಕೆಲವರಲ್ಲಿ ಗೊಂದಲ ಮೂಡಿಸಿರುವುದು ನಿಜ. ಏಕೆಂದರೆ ದ್ರಾವಿಡ್ ಗಿಂತ ಸಚಿನ್ ಎಲ್ಲ ದಾಖಲೆಗಳಲ್ಲೂ ಮುಂದಿದ್ದಾರೆ. ಟೆಸ್ಟ್, ಏಕದಿನ ಕ್ರಿಕೆಟ್ ನಲ್ಲಿ ಅತಿಹೆಚ್ಚು ರನ್ ಬಾರಿಸಿದ್ದಾರೆ. ಅತಿ ಹೆಚ್ಚು ಶತಕ ಹಾಗೂ ಅತಿ ಹೆಚ್ಚು ಅರ್ಧಶತಕ ಹೀಗೆ ಎಲ್ಲ ದಾಖಲೆಗಳು ಸಚಿನ್ ಹೆಸರಲ್ಲೇ ಇವೆ. ದ್ರಾವಿಡ್ 164 ಟೆಸ್ಟ್ ಹಾಗೂ 344 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ನಲ್ಲಿ 13, 288 ಹಾಗೂ ಏಕದಿನದಲ್ಲಿ 10, 889 ರನ್ ಗಳನ್ನ ಸಿಡಿಸಿದ್ದಾರೆ. ಸಚಿನ್ 200 ಟೆಸ್ಟ್ ಪಂದ್ಯಗಳನ್ನಾಡಿದ್ದು 15,921 ಮತ್ತು 463 ಏಕದಿನ ಪಂದ್ಯಗಳಲ್ಲಿ 18, 426 ರನ್ ಗಳ ಬೃಹತ್ ಮೊತ್ತವನ್ನೇ ಪೇರಿಸಿದ್ದಾರೆ.
ಹೀಗಿದ್ದರೂ ಸಚಿನ್ಗೂ ಮೊದಲೇ ದ್ರಾವಿಡ್ ಗೇಕೆ ಹಾಲ್ ಆಫ್ ಫೇಮ್ ಗೌರವ?
ಐಸಿಸಿಯ ಹಾಲ್ ಆಫ್ ಫೇಮ್ ಗೆ ಆಯ್ಕೆಯಾಗುವ ಯಾವುದೇ ಆಟಗಾರ ಹಿಂದಿನ 4 ರಿಂದ 5 ವರ್ಷ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡಿರಬಾರದು. ಆದರೆ ಸಚಿನ್ ತಮ್ಮಕೊನೆಯ ಹಾಗೂ ದಾಖಲೆ 200 ನೇ ಟೆಸ್ಟ್ ಪಂದ್ಯವನ್ನು 2013ರ ನವೆಂಬರ್ ತಿಂಗಳಲ್ಲಿ ವಿಂಡೀಸ್ ವಿರುದ್ಧ ಆಡಿದ್ದರು. ಅದರ ಪ್ರಕಾರ ಸಚಿನ್ ಗೆ ಮುಂಬರುವ ನವೆಂಬರ್ ಗೆ ನಿವೃತ್ತಿ ಘೋಷಿಸಿ 5 ವರ್ಷ ಪೂರೈಸಿದಂತಾಗುತ್ತದೆ. ಈ ಕಾರಣದಿಂದಲೇ ಸಚಿನ್ ಗಿಂತಲೂ ಮೊದಲೇ ದ್ರಾವಿಡ್ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.
ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ 6 ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಐಸಿಸಿಯ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ. ದ್ರಾವಿಡ್ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ 2012ರ ಮಾರ್ಚ್ 9ರಂದು ಆಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics