ಆಸಿಸ್ ವಿರುದ್ಧ ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ; ಮೊದಲ ಟೆಸ್ಟ್ ಗೆ ಪೃಥ್ವಿ ಶಾ ಅಲಭ್ಯ!
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಸರಣಿ ಆರಂಭಕ್ಕೂ ಮೊದಲೇ ಆಘಾತ ಎದುರಾಗಿದ್ದು, ಮೊದಲ ಟೆಸ್ಟ್ ಪಂದ್ಯದಿಂದ ಉದಯೋನ್ಮುಖ ಆಟಗಾರ ಪೃಥ್ವಿ ಶಾ ಹೊರಗುಳಿದಿದ್ದಾರೆ.
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಸರಣಿ ಆರಂಭಕ್ಕೂ ಮೊದಲೇ ಆಘಾತ ಎದುರಾಗಿದ್ದು, ಮೊದಲ ಟೆಸ್ಟ್ ಪಂದ್ಯದಿಂದ ಉದಯೋನ್ಮುಖ ಆಟಗಾರ ಪೃಥ್ವಿ ಶಾ ಹೊರಗುಳಿದಿದ್ದಾರೆ.
ಹಿಮ್ಮಡಿ ಗಾಯದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಪೃಥ್ವಿಶಾ ಚೇತರಿಸಿಕೊಳ್ಳಲು ಕಾಲಾವಕಾಶ ಬೇಕಿರುವುದರಿಂದ ಮೊದಲ ಟೆಸ್ಟ್ ಪಂದ್ಯದಿಂದ ಅವರನ್ನು ಹೊರಗಿಡಲಾಗಿದೆ ಎಂದು ಬಿಸಿಸಿಐ ಟ್ವಿಟರ್ ನಲ್ಲಿ ಮಾಹಿತಿ ನೀಡಿದೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಎಸ್ ಸಿಜಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಅಭ್ಯಾಸ ಪಂದ್ಯದಲ್ಲಿ ಇಂದು ಬೆಳಗ್ಗೆ ಪೃಥ್ವಿ ಶಾ ಗಾಯಗೊಂಡಿದ್ದರು. ಆಸ್ಟ್ರೇಲಿಯಾ ಎಲೆವನ್ ತಂಡದ ಆರಂಭಿಕ ಆಟಗಾರ ಮ್ಯಾಕ್ಸ್ ಬ್ರಾಂಟ್ ಅವರು ಸಿಡಿಸಿದ ಚೆಂಡನ್ನು ಪೃಥ್ವಿ ಶಾ ಬೌಂಡರಿ ಗೆರೆ ಬಳಿ ಹಿಡಿಯಲು ಜಂಪ್ ಮಾಡಿದರು. ಈ ವೇಳೆ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರೂ ಅವರ ಹಿಮ್ಮಡಿಗೆ ಬಲವಾದ ಗಾಯವಾಯಿತು. ಕನಿಷ್ಠ ಪಕ್ಷ ಎದ್ದು ನಿಲ್ಲಲೂ ಸಾಧ್ಯವಾಗದೇ ಪೃಥ್ವಿ ಶಾ ಕಷ್ಟುಪಟ್ಟರು. ಈ ವೇಳೆ ಮೈದಾನಕ್ಕೆ ಆಗಮಿಸಿದ ಫಿಸಿಯೋಗಳು ಅವರನ್ನು ಎತ್ತಿಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಅವರನ್ನು ಆಸ್ಪತ್ರೆ ದಾಖಲು ಮಾಡಲಾಯಿತು. ಶಾಗೆ ಕಾಲಿನ ಸ್ಕ್ಯಾನಿಂಗ್ ಮಾಡಿಸಲಾಗಿದ್ದು, ಅದರ ವರದಿ ಇನ್ನೂ ಲಭ್ಯವಾಗಿಲ್ಲ.
ಇದೀಗ ಬಿಸಿಸಿಐ ಮಾಹಿತಿ ನೀಡಿದ್ದು ಮೊದಲ ಟೆಸ್ಟ್ ಪಂದ್ಯದಿಂದ ಪೃಥ್ವಿ ಶಾರನ್ನು ಕೈ ಬಿಡಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.