ನವದೆಹಲಿ: ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ದಾಖಲೆ ಬರೆದಿರುವ ಟೀಂ ಇಂಡಿಯಾವನ್ನು ಕ್ರಿಕೆಟ್ ಅಭಿಮಾನಿಗಳು ಶ್ಲಾಘಿಸಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಸಹ ಟೀಂ ಇಂಡಿಯಾಗೆ ಶುಭ ಕೋರಿದ್ದು ಇದಕ್ಕೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟೀಂ ಇಂಡಿಯಾಗೆ ಶುಭ ಕೋರಿದ್ದು ಅದರಲ್ಲಿ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದ ಮೆನ್-ಇನ್-ಬ್ಲೂ ಪಡೆಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದೆ. ಇದನ್ನೇ ಕೆಲವರು ಟ್ವೀಟ್ ನಲ್ಲಿ ಕುಹಕವಾಡಿದ್ದಾರೆ.
ಟೆಸ್ಟ್ ಪಂದ್ಯದಲ್ಲಿ ಬಿಳಿ ಬಣ್ಣದ ಜೆರ್ಸಿಯನ್ನು ಧರಿಸುತ್ತಾರೆ. ಆದರೆ ಕಾಂಗ್ರೆಸ್ ಮೆನ್-ಇನ್-ಬ್ಲೂ ಎಂದು ಟ್ವೀಟ್ ಮಾಡಿರುವುದೇ ಟ್ವೀಟರಿಗರ ಟ್ರೋಲ್ ಗೆ ಕಾರಣವಾಗಿದೆ.
ಸಾಮಾನ್ಯವಾಗಿ ಟೀಂ ಇಂಡಿಯಾವನ್ನು ಮೆನ್ ಇನ್ ಬ್ಲೂ ಅಥವಾ ಬ್ಲೂ ಬಾಯ್ಸ್ ಎಂದು ಕರೆಯಲಾಗುತ್ತದೆ. ಅದೇ ಅರ್ಥದಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಇದನ್ನೇ ಕೆಲವರು ಟ್ರೋಲ್ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭಾರತ ಪ್ರಸ್ತುತ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿತ್ತು. ಇದೀಗ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ 2013 ರಿಂದ ಸ್ವದೇಶದಲ್ಲಿ ಸತತ 10 ಸರಣಿ ಗೆದ್ದು ಐತಿಹಾಸಿಕ ದಾಖಲೆ ಮಾಡಿದೆ.