ಕ್ರಿಕೆಟ್

ಕರ್ನಾಟಕದ ಆಟಗಾರರ ಕಮಾಲ್; ಹೈದರಾಬಾದ್ ವಿರುದ್ಧ ಪಂಜಾಬ್ ಗೆ 6 ವಿಕೆಟ್ ಜಯ

Srinivasamurthy VN
ಮೊಹಾಲಿ: ಮೊಹಾಲಿಯಲ್ಲಿ ಇಂದು ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಪ್ರಬಲ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 6 ವಿಕೆಟ್ ಗಳ ಜಯ ದಾಖಲಿಸಿದೆ.
ಮೊಹಾಲಿ ಕ್ರೀಡಾಂಗಣದಲ್ಲಿ ನಡೆದ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧದ ರೋಚಕ ಪಂದ್ಯದಲ್ಲಿ ಸನ್ ​ರೈಸರ್ಸ್​ ಹೈದರಾಬಾದ್ ತಂಡ ಸೋಲು ಕಂಡಿದ್ದು, ಕನ್ನಡಿಗರಾದ ಕೆ ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್​ರ ಅಮೋಘ ಅರ್ಧಶತಕದ ನೆರವಿನಿಂದ ಪಂಜಾಬ್ ತಂಡ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ ಡೇವಿಡ್ ವಾರ್ನರ್ (ಅಜೇಯ 70ರನ್) ಅವರ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 150 ರನ್ ಗಳ ಸವಾಲಿನ ಗುರಿ ಪೇರಿಸಿತು.
ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 19.5 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ ರೋಚಕ ಗೆಲುವು ಸಾಧಿಸಿತು.  151 ರನ್​​ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಪಂಜಾಬ್ ಆರಂಭದಲ್ಲೇ ಕ್ರಿಸ್ ಗೇಲ್(16 ರನ್) ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಕೆಎಲ್ ರಾಹುಲ್ (ಅಜೇಯ 71ರನ್) ಜೊತೆಯಾದ ಮಯಾಂಕ್ ಅಗರ್ವಾಲ್ (55 ರನ್) ಉತ್ತಮ ಆಟ ಪ್ರದರ್ಶಿಸಿದರು. ಬಿರುಸಿನ ಹೊಡೆತಕ್ಕೆ ಮುಂದಾದ ಈ ಜೋಡಿ ಅರ್ಧಶತಕ ಸಿಡಿಸಿ ಶತಕದ ಜೊತೆಯಾಟ ಆಡಿತು. 
ಕೊನೆಯ ಹಂತದಲ್ಲಿ 55 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್ ರನ್ನು ಔಟ್ ಮಾಡುವ ಮೂಲಕ ಮತ್ತೆ ಹೈದರಾಬಾದ್ ತಂಡ ಮೇಲುಗೈ ಸಾಧಿಸಿತು. ಮಯಾಂಕ್ ಅಗರ್ವಾಲ್ ಬೆನ್ನಲ್ಲೆ ಡೇವಿಡ್ ಮಿಲ್ಲರ್(1 ರನ್) ಹಾಗೂ ಮಂದೀಪ್ ಸಿಂಗ್(2 ರನ್) ನಿರ್ಗಮಿಸಿ ಆಘಾತ ನೀಡಿದರು. ಹೀಗಾಗಿ ಕೊನೆಯ ಓವರ್​ನಲ್ಲಿ ಪಂಜಾಬ್​ ಗೆ ಗೆಲ್ಲಲು 11 ರನ್​ಗಳ ಅವಶ್ಯಕತೆಯಿತ್ತು. ಇತ್ತ ಅರ್ಧಶತಕ ಬಾರಿಸಿದ್ದ ರಾಹುಲ್ ಕ್ರೀಸ್ ತೆಗೆದುಕೊಂಡು ಯಾವುದೇ ಒತ್ತಡವಿಲ್ಲದೆ 1 ಎಸೆತ ಬಾಕಿ ಇರುವಂತೆಯೆ ತಂಡಕ್ಕೆ ಗೆಲುವು ತಂದಿಟ್ಟರು. 
ರಾಹುಲ್ 53 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸ್ ಬಾರಿಸಿ ಅಜೇಯ 71 ರನ್ ಕಲೆಹಾಕಿದರು. ಹೈದರಾಬಾದ್ ಪರ ಸಂದೀಪ್ ಶರ್ಮಾ 2, ರಶೀದ್ ಖಾನ್ ಹಾಗೂ ಸಿದ್ಧಾರ್ಥ್​ ಕೌಲ್ ತಲಾ 1 ವಿಕೆಟ್ ಕಿತ್ತರು. 6 ವಿಕೆಟ್​ಗಳ ಜಯದ ಮೂಲಕ ಪಂಜಾಬ್ ತಂಡ 8 ಅಂಕದೊಂದಿಗೆ 3ನೇ ಸ್ಥಾನಕ್ಕೇರಿದೆ. ಉತ್ತಮ ಆಟ ಪ್ರದರ್ಶಿಸಿದ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.
SCROLL FOR NEXT