ಮೌಂಟ್ ಮೌಂಗನ್ಯುಯಿ: ತಮ್ಮ ಅದ್ಭುತ ವಿಕೆಟ್ ಕೀಪಿಂಗ್ ಮೂಲಕ ದಾಖಲೆ ಬರೆದಿರುವ ಟೀಂ ಇಂಡಿಯಾ ಮಾಸ್ಟರ್ ಬ್ರೈನ್ ಎಂಎಸ್ ಧೋನಿ, ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ತಮ್ಮ ಅದ್ಭುತ ಕೈ ಚಳಕದ ಮೂಲಕ ಅಂಪೈರ್ ಗಳನ್ನೇ ಸುಸ್ತು ಹೊಡೆಸಿದ್ದಾರೆ.
ಹೌದು.. ಬೇ ಓವಲ್ ನ ಮೌಂಟ್ ಮೌಂಗನ್ಯುಯಿಯಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಧೋನಿ ಮಿಂಚಿನ ಸ್ಟಂಪಿಂಗ್ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ಈ ಬಾರಿ ಧೋನಿ ಅದ್ಭುತ ಸ್ಟಂಪಿಂಗ್ ಗೆ ನ್ಯೂಜಿಲೆಂಡ್ ತಂಡದ ಹಿರಿಯ ಅನುಭವಿ ಮತ್ತು ಸ್ಫೋಟಕ ಬ್ಯಾಟ್ಸಮನ್ ರಾಸ್ ಟೇಲರ್ ಬಲಿಯಾಗಿದ್ದಾರೆ.
ಇನ್ನಿಂಗ್ಸ್ ನ 18ನೇ ಓವರ್ ನಲ್ಲಿ ಕೇದಾರ್ ಜಾದವ್ ಎಸೆದ ಮೊದಲ ಎಸೆತವನ್ನು ರಾಸ್ ಟೇಲರ್ ರಕ್ಷಣಾತ್ಮಕವಾಗಿ ಆಡಲು ಮುಂದಾದರು. ಆದರೆ ಚೆಂಡು ಬ್ಯಾಟ್ ನಿಂದ ತಪ್ಪಿಸಿಕೊಂಡು ವಿಕೆಟ್ ಹಿಂದೆ ನಿಂತಿದ್ದ ಧೋನಿ ಕೈ ಸೇರಿತು. ಆದರೆ ಬಾಲ್ ಕೈ ಸೇರುತ್ತಿದ್ದಂತೆಯೇ ಧೋನಿ ಬೇಲ್ಸ್ ಎಗರಿಸಿದ್ದರು.
ಆ ಕ್ಷಣದಲ್ಲಿ ಮೇಲ್ನೋಟಕ್ಕೆ ಇದು ನಾಟೌಟ್ ಎಂದು ತಿಳಿದರೂ, ಬಳಿಕ ಟಿವಿ ಅಂಪೈರ್ ಕೂಲಂಕುಷವಾಗಿ ಪರಿಶೀಲಿಸಿ ಧೋನಿ ಮನವಿಗೆ ಪುರಸ್ತರಿಸಿ ಔಟ್ ಎಂದು ತೀರ್ಪು ನೀಡಿದರು. ಧೋನಿ ಬೇಲ್ಸ್ ಎಗರಿಸುವ ಹೊತ್ತಿಗೆ ಟೇಲರ್ ಕಾಲು ಕೊಂಚ ಕ್ರೀಸ್ ನಿಂದ ಮೇಲೆ ಗಾಳಿಯಲ್ಲಿತ್ತು. ಹೀಗಾಗಿ ರಾಸ್ ಟೇಲರ್ ರನ್ನು ಧೋನಿ ಕಣ್ಣು ಮಿಟುಕಿಸುವಷ್ಟರಲ್ಲೇ ಬಲಿ ಪಡೆದಿದ್ದರು. ಆ ಮೂಲಕ ಧೋನಿ ವಿಕೆಟ್ ಹಿಂದುಗಡೆ ತಾವೆಷ್ಟು ನಿಖರವಾಗಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇನ್ನು ಈ ಹಿಂದೆ ನೇಪಿಯರ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲೂ ಧೋನಿ ಜಾದೂ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics