ನವದೆಹಲಿ: ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ಹಾಗೂ ದಂತಕತೆ ಸಚಿನ್ ತೆಂಡೂಲ್ಕರ್ ಅವರ ನೆಚ್ಚಿನ ಇಲೆವೆನ್ ಕ್ರಿಕೆಟ್ ತಂಡ ಪ್ರಕಟಿಸಿದ್ದು, ಐವರು ಭಾರತೀಯರಿಗೆ ಸ್ಥಾನ ನೀಡಿದ್ದಾರೆ. ಆದರೆ, 2011ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಹಾಗೂ ಹಾಲಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಭಾನುವಾರ ಮುಕ್ತಾಯವಾದ ಐಸಿಸಿ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಎಲ್ಲ ಆಟಗಾರರ ಪ್ರದರ್ಶನ ಆಧರಿಸಿ ತಮ್ಮ ನೆಚ್ಚಿನ ತಂಡವನ್ನು ಸಚಿನ್ ಆರಿಸಿದ್ದಾರೆ. ತಂಡವನ್ನು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮುನ್ನಡೆಸಲಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ,ರವೀಂದ್ರ ಜಡೇಜಾ ಹಾಗೂ ಜಸ್ಪ್ರಿತ್ ಬುಮ್ರಾ ಸೇರಿ ಒಟ್ಟು ಐವರು ಭಾರತೀಯರು ಸ್ಥಾನ ಪಡೆದಿದ್ದಾರೆ.
ರೋಹಿತ್ ಶರ್ಮಾ ಹಾಗೂ ಇಂಗ್ಲೆಂಡ್ ಜಾನಿ ಬೈರ್‌ಸ್ಟೋ ಆರಂಭಿಕರಾಗಿ ಬ್ಯಾಟಿಂಗ್ ಮಾಡಲಿದ್ದಾರೆ. ವಿಲಿಯಮ್ಸನ್ ಮೂರನೇ ಕ್ರಮಾಂಕ, ವಿರಾಟ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಇನ್ನುಳಿದಂತೆ ಶಕೀಬ್ ಅಲ್ ಹಸನ್, ಬೆನ್ ಸ್ಟೋಕ್ಸ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಕ್ರಮವಾಗಿ ಬ್ಯಾಟಿಂಗ್ ಮಾಡಲಿದ್ದಾರೆ.
ತಂಡದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಜೊಫ್ರಾ ಆರ್ಚರ್ ಹಾಗೂ ಜಸ್ಪ್ರಿತ್ ಬುಮ್ರಾ ಸೇರಿ ಮೂವರು ವೇಗಿಗಳನ್ನು ಪರಿಗಣಿಸಲಾಗಿದೆ. ಇದಕ್ಕೂ ಮುನ್ನ ಐಸಿಸಿ ಕೂಡ 2019 ವಿಶ್ವಕಪ್ ಇಲೆವೆನ್ ತಂಡದಲ್ಲಿ ಭಾರತದಿಂದ ರೋಹಿತ್ ಶರ್ಮಾ ಹಾಗೂ ಜಸ್ಪ್ರಿತ್ ಬುಮ್ರಾಗೆ ಮಾತ್ರ ಅವಕಾಶ ನೀಡಿತ್ತು.
ತೆಂಡೂಲ್ಕರ್ ವಿಶ್ವಕಪ್-2019 ಇಲೆವೆನ್: ರೋಹಿತ್ ಶರ್ಮಾ, ಜಾನಿ ಬೈರ್ ಸ್ಟೋವ್ (ವಿ.ಕೀ), ಕೇನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ, ಶಕೀಬ್ ಅಲ್ ಹಸನ್, ಹಾರ್ದಿಕ್ ಪಾಂಡ್ಯ, ಬೆನ್ ಸ್ಟೋಕ್ಸ್, ರವೀಂದ್ರ ಜಡೇಜಾ, ಮಿಚೆಲ್ ಸ್ಟಾರ್ಕ್, ಜೊಫ್ರಾ ಆರ್ಚರ್, ಜಸ್ಪ್ರಿತ್ ಬುಮ್ರಾ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos