ಬಿಸಿಸಿಐಗೆ 1.6 ಮಿಲಿಯನ್ ಪರಿಹಾರ ನೀಡಿದ ಪಿಸಿಬಿ
ಬಿಸಿಸಿಐನಿಂದ ಪರಿಹಾರ ಕೇಳಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಬಿಸಿಸಿಐಗೆ ಬರೊಬ್ಬರಿ 1.6 ಮಿಲಿಯನ್ ಡಾಲರ್ ಹಣವನ್ನು ಪರಿಹಾರವಾಗಿ ನೀಡಿದೆ.
ದುಬೈ: ಭಾರತ ಹಾಗೂ ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಯೋಜನೆ ವಿವಾದವನ್ನ ಐಸಿಸಿ ಮಟ್ಟಕ್ಕೆ ಎಳೆದೊಯ್ದು ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆಯಾಗಿದ್ದು, ಬಿಸಿಸಿಐನಿಂದ ಪರಿಹಾರ ಕೇಳಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಬಿಸಿಸಿಐಗೆ ಬರೊಬ್ಬರಿ 1.6 ಮಿಲಿಯನ್ ಡಾಲರ್ ಹಣವನ್ನು ಪರಿಹಾರವಾಗಿ ನೀಡಿದೆ.
ಹೌದು.. ಈ ಹಿಂದೆ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಅನುರಾಗ್ ಠಾಕೂರ್ ಕೆಳಗಿಳಿಯುತ್ತಿದ್ದಂತೆಯೇ ಖ್ಯಾತೆ ತೆಗೆದಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಿಸಿಸಿಐ ವಿರುದ್ಧ ಕಾನೂನು ಹೋರಾಟ ಆರಂಭಿಸಿತ್ತು. ಭಾರತ ಸರಣಿ ಆಯೋಜನೆಯಿಂದ ಹಿಂದೆ ಸರಿದ ಕಾರಣ ತನಗೆ 447 ಕೋಟಿ ರೂಪಾಯಿ ನಷ್ಟವಾಗಿದೆ. ಹೀಗಾಗಿ ಪರಿಹಾರ ನೀಡಬೇಕೆಂದು ಐಸಿಸಿ ಕದ ತಟ್ಟಿತ್ತು.
2015ರಿಂದ 2023ರ ವರೆಗೂ 6 ದ್ವಿಪಕ್ಷೀಯ ಸರಣಿಗಳನ್ನು ಆಡುತ್ತೇವೆ ಎಂದು ಮಾಡಿಕೊಂಡ ಒಪ್ಪಂದವನ್ನು ಬಿಸಿಸಿಐ ಉಲ್ಲಂಘಿಸಿದೆ ಎಂದು ಆರೋಪಿಸಿ, ಪಿಸಿಬಿ ಐಸಿಸಿಗೆ ದೂರು ದಾಖಲಿಸಿತ್ತು. ಜತೆಗೆ 480 ಕೋಟಿ ರುಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿತ್ತು. ವಿಚಾರಣೆ ನಡೆಸಿದ ಐಸಿಸಿಯ ವಿವಾದ ನಿರ್ಣಯ ಸಮಿತಿ, ಪಾಕ್ ಬೇಡಿಕೆಯನ್ನು ತಿರಸ್ಕರಿಸಿತ್ತು. ವಿಚಾರಣೆ ವೇಳೆ ಸರಣಿ ಆಡುವುದಾಗಿ ಪ್ರಸ್ತಾಪಿಸಲಾಗಿತ್ತೇ ಹೊರತು ಒಪ್ಪಂದ ಮಾಡಿಕೊಂಡಿರಲಿಲ್ಲ ಎಂದು ಬಿಸಿಸಿಐ ಸಾಬೀತು ಪಡಿಸಿ, ಪ್ರಕರಣ ಜಯಿಸಿತ್ತು.
ದ್ವಿಪಕ್ಷೀಯ ಒಪ್ಪಂದ ಮುರಿಯಲಾಗಿದೆ ಎಂದು ಆರೋಪಿಸಿ ಬಿಸಿಸಿಐ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಗೆ ದೂರು ಸಲ್ಲಿಸಿ ಮುಖಭಂಗಕ್ಕೊಳಗಾಗಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಬಿಸಿಸಿಐಗೆ 1.6 ಮಿಲಿಯನ್ ಡಾಲರ್ (10.98 ಕೋಟಿ ರುಪಾಯಿ) ಪರಿಹಾರ ನೀಡಿದೆ. ಪಿಸಿಬಿ ಅಧ್ಯಕ್ಷ ಇಹ್ಸಾನ್ ಮಣಿ ಸೋಮವಾರ ಈ ವಿಷಯನ್ನು ಬಹಿರಂಗ ಪಡಿಸಿದ್ದಾರೆ.
ಆ ಮೂಲಕ ಭಾರತದ ಎದುರು ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾದಂತಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.