ಕ್ರಿಕೆಟ್

ಜನಪ್ರಿಯತೆ ಜೊತೆಗೆ ಬಳುವಳಿಯಾಗಿ ಬಂದದ್ದು ನಿಂದನೆ ಮತ್ತು ಮಾನಸಿಕ ಹಿಂಸೆ: ಆರ್‏ಸಿಬಿ ಆಭಿಮಾನಿಯ ನೋವಿನ ನುಡಿ

Srinivas Rao BV
ಏನಕೇನ ಪ್ರಕಾರೇಣ... ಎಂಬ ಮಾತಿನಂತೆ  ಯಾವುದಾದರೂ ರೀತಿಯಲ್ಲಿ ಜನಪ್ರಿಯತೆ ಪಡೆಯಬಹುದು, ಆದರೆ ಅದನ್ನು ಜೀರ್ಣಿಸಿಕೊಳ್ಳುವ ಹೊತ್ತಿಗೆ ಅನೇಕ ಸವಾಲುಗಳು ಎದುರಾಗಿರುತ್ತವೆ. ಆರ್ ಸಿಬಿ ಫ್ಯಾನ್ ಗರ್ಲ್ ದೀಪಿಕಾ ಘೋಷ್ ಗೆ ಈ ಮಾತು ಸದ್ಯಕ್ಕೆ ಅತ್ಯಂತ ಸೂಕ್ತವಾಗಿ ಹೊಂದುವಂತಿದೆ. 
ಐಪಿಎಲ್ ಪಂದ್ಯದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದ ಆರ್ ಸಿಬಿ ಫ್ಯಾನ್ ಗರ್ಲ್ ದೀಪಿಕಾ ಘೋಷ್ ರಾತ್ರೋರಾತ್ರಿ ಪ್ರಸಿದ್ಧರಾಗಿದ್ದರು. ಆದರೆ ಈಗ ಅವರಿಗೆ ಜನಪ್ರಿಯತೆ ಜೊತೆ ಜೊತೆಗೇ ನಿಂದನೆ ಮತ್ತು ಮಾನಸಿಕ ಹಿಂಸೆಯೂ ಬಳುವಳಿಯಾಗಿ ಬಂದಿವೆ. 
ಸ್ವತಃ ದೀಪಿಕಾ ಘೋಷ್ ಈ ಬಗ್ಗೆ ನೋವಿನಿಂದ ಹೇಳಿಕೊಂಡಿದ್ದಾರೆ. ತಮಗೆ ಜನಪ್ರಿಯತೆ ಜೊತೆ ಜೊತೆಗೇ ಬಂದ ನಿಂದನೆ ಮತ್ತು ಮಾನಸಿಕ ಹಿಂಸೆಯ ಬಗ್ಗೆ ದೀಪಿಕಾ ಘೋಷ್ "ನನ್ನ ಹೆಸರು ದೀಪಿಕಾ ಘೋಷ್ ಹಾಗೂ ನನ್ನ ಬಗ್ಗೆ ಹೇಳಲಾಗುತ್ತಿರುವ ವಿಷಯಗಳಲ್ಲಿ ಇದೊಂದೇ ಶೇ.100 ರಷ್ಟು ಸತ್ಯವಾದದ್ದು ಎಂದು ಮನನೊಂದು ಇಸ್ಟಾಗ್ರಾಮ್ ನಲ್ಲಿ ಸ್ಟೇಟಸ್ ಹಾಕಿದ್ದಾರೆ. 
"ನನಗೆ ಯಾವುದೇ ಮನ್ನಣೆ ಬೇಡ, ಅಥವಾ ನಾನೆಷ್ಟು ಬಾರಿ ಕ್ಯಾಮರಾ ಮುಂದೆ ಕಾಣಿಸಿದ್ದೇನೆ ಎಂಬುದೂ ಬೇಡ. ನಾನು ಯಾವುದೇ ಸೆಲಬ್ರಿಟಿಯಲ್ಲ, ಪಂದ್ಯವನ್ನು ಆಸ್ವಾದಿಸುತ್ತಿದ್ದ ಓರ್ವ ಸಾಮಾನ್ಯ ಹುಡುಗಿಯಷ್ಟೇ, ನನಗೆ ಯಾವ ಜನಪ್ರಿಯತೆಯೂ ಬೇಡ" ಎಂದು ದೀಪಿಕಾ ಘೋಷ್ ಹೇಳಿದ್ದಾರೆ. 
ತನಗೆ ಸಿಗುತ್ತಿರುವ ಪ್ರೀತಿಗೆ ಕೃತಜ್ಞಳಾಗಿದ್ದೇನೆ ಎಂದು ಹೇಳಿರುವ ದೀಪಿಕಾ ಘೋಷ್, ತನ್ನ ಬಗ್ಗೆ ಅನಗತ್ಯವಾಗಿ ಹರಡುತ್ತಿರುವ ನಕಾರಾತ್ಮಕತೆಗಳಿಂದ ಬೇಸತ್ತಿರುವುದಾಗಿ ಹೇಳಿದ್ದಾರೆ. "ನನ್ನ ಹೆಸರು ಹಾಗೂ ಪ್ರೊಫೈಲ್ ಜನರಿಗೆ ಹೇಗೆ ಸಿಕ್ಕಿತು ಎಂಬ ಗೊಂದಲಕ್ಕೀಡಾಗಿದ್ದೇನೆ, ಇದು ಮಾನಸಿಕ ಕಿರುಕುಳ, ನಿಂದನೆಯ ಅತಿರೇಕ ಎಂದು ಘೋಷ್ ಹೇಳಿದ್ದಾರೆ. 
ತಮ್ಮ ಪ್ರೊಫೈಲ್ ನ್ನು ಹುಡುಕಿರುವ ಹಲವಾರು ಪುರುಷರು ತಮ್ಮೊಂದಿಗೆ ಅಸಭ್ಯವಾಗಿ ಹಾಗೂ ಅಗೌರವಾಗಿ ನಡೆದುಕೊಂಡಿದ್ದಾರೆ. ಇದೇ ವೇಳೆ ಮಹಿಳೆಯರೂ ತಮ್ಮ ಬಗ್ಗೆ ದ್ವೇಷದಿಂದ ಮಾತನಾಡಿದ್ದಾರೆ ಎಂದು ದೀಪಿಕಾ ಘೋಷ್ ತಮ್ಮ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 
SCROLL FOR NEXT