ಪುಣೆ: ಭಾರತ - ದಕ್ಷಿಣ ಆಫ್ರಿಕಾ ನಡುವೆ ದ್ವಿತೀಯ ಟೆಸ್ಟ್ ಪಂದ್ಯ ನಡೆಯುತ್ತಿದ್ದ ವೇಳೆ ಅಭಿಮಾನಿಯೊಬ್ಬ ಭದ್ರತೆಯನ್ನು ಬೇಧಿಸಿ ಮೈದಾನಕ್ಕೆ ನುಗ್ಗಿದ್ದ ಘಟನೆ ಶನಿವಾರ ನಡೆದಿದ್ದು, ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಆಟಗಾರರ ಭದ್ರತೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇಂದು ಅಭಿಮಾನಿಯೊಬ್ಬ ಭದ್ರತೆ ಬೇಧಿಸಿ ಮೈದಾನಕ್ಕೆ ನುಗ್ಗಿ, ರೋಹಿತ್ ಶರ್ಮಾ ಅವರ ಕಾಲಿಗೆ ಬಿದ್ದ ಘಟನೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆದಿದೆ.
ಈ ವೇಳೆ ಕಾಮೆಂಟ್ರಿ ಪ್ಯಾನೆಲ್ ನಲ್ಲಿದ್ದ ಸುನಿಲ್ ಗವಾಸ್ಕರ್ ಅವರು, ಭದ್ರತಾ ಸಿಬ್ಬಂದಿ ಜನರನ್ನು ಗಮನಿಸುತ್ತಿಲ್ಲ. ಬದಲಾಗಿ ಪಂದ್ಯ ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಬಹಳ ದಿನದಿಂದಲೂ ಈ ಸಮಸ್ಯೆ ಇದೆ. ಭದ್ರತಾ ಸಿಬ್ಬಂದಿ ಇರುವುದು ಪಂದ್ಯ ನೋಡುವುದಕ್ಕಲ್ಲ. ಅವರು ಇಂತಹ ಘಟನೆಗಳನ್ನು ತಡೆಯಬೇಕು ಎಂದು ಹೇಳಿದ್ದಾರೆ.
ಭದ್ರತಾ ಸಿಬ್ಬಂದಿ ಬಳಿಯೂ ಕ್ಯಾಮೆರಾ ಅಳವಡಿಸಬೇಕು ಮತ್ತು ಅವರು ಪಂದ್ಯ ನೋಡುತ್ತಿದ್ದಾರಾ ಅಥವಾ ಜನರನ್ನು ಗಮನಿಸುತ್ತಿದ್ದಾರಾ ಎಂಬುದನ್ನು ಪರಿಶೀಲಿಸಬೇಕು. ಇದು ಅತ್ಯಂತ ಅಪಾಯಕಾರಿಯಾಗಿದ್ದು, ಯಾರೊಬ್ಬರೂ ಮೈದಾನ ಪ್ರವೇಶಿಸಬಾರದು ಎಂದು ಗವಾಸ್ಕರ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ನಡೆಯುತ್ತಿರುವ ಮೂರನೇ ಘಟನೆ ಇದಾಗಿದ್ದು, ವೈಜಾಗ್ ನಲ್ಲಿ ಮೊದಲ ಟೆಸ್ಟ್ ನಡೆಯುತ್ತಿದ್ದ ವೇಳೆ ಮೈದಾನಕ್ಕೆ ನುಗ್ಗಿದ್ದ ಅಭಿಮಾನಿಯೊಬ್ಬ, ವಿರಾಟ್ ಕೊಹ್ಲಿ ಕೈ ಕುಲುಕಿ, ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದನು.