ಕ್ರಿಕೆಟ್

ಮಹಿಳಾ ಕ್ರಿಕೆಟ್ ನಲ್ಲೂ ಮ್ಯಾಚ್ ಫಿಕ್ಸಿಂಗ್ ಭೂತ!

Nagaraja AB

ನವದೆಹಲಿ: ಮಹತ್ವದ ಬೆಳವಣಿಯೊಂದರಲ್ಲಿ ಭಾರತದ ಮಹಿಳಾ ಕ್ರಿಕೆಟ್   ತಂಡದ ಆಟಗಾರರೊಬ್ಬರು ಮ್ಯಾಚ್ ಫಿಕ್ಸಿಂಗ್ ನಲ್ಲಿ  ಸಿಕ್ಕಿ ಬಿದಿದ್ದಾರೆ. ಈ ಸಂಬಂಧ ಬಿಸಿಸಿಐ ಭ್ರಷ್ಟಾಚಾರ ನಿಯಂತ್ರಣ ಘಟಕ ಇಬ್ಬರ ವಿರುದ್ಧ ಸೋಮವಾರ ಎಫ್ ಐಆರ್ ದಾಖಲಿಸಿದೆ. 

ಫೆಬ್ರವರಿ ತಿಂಗಳಲ್ಲಿ ಸ್ವದೇಶದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆಘಾತಕಾರಿ ಸಂಗತಿಯನ್ನು ಬಿಸಿಸಿಐ ಭ್ರಷ್ಟಾಚಾರ ನಿಯಂತ್ರಣ ಘಟಕ - ಎಸಿಯು ಮುಖ್ಯಸ್ಥ ಅಜಿಂತ್ ಸಿಂಗ್ ಶೇಖಾವತ್ ಸ್ಪಷ್ಟಪಡಿಸಿದ್ದಾರೆ.

ಮ್ಯಾಚ್ಸ್ ಫಿಕ್ಸಿಂಗ್ ನಲ್ಲಿ ಸಿಕ್ಕಿ ಬಿದ್ದಿರುವ ಭಾರತೀಯ ಆಟಗಾರ್ತಿ ಅಂತಾರಾಷ್ಟ್ರೀಯ ಆಟಗಾರ್ತಿಯಾಗಿದ್ದಾರೆ. ಆದ್ದರಿಂದ ಐಸಿಸಿ ವಿಚಾರಣೆ ನಡೆಸಲಿದೆ ಎಂದು ಶೇಖಾವತ್ ಸುದ್ದಿಸಂಸ್ಥೆಯೊಂದಕ್ಕೆ  ತಿಳಿಸಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ರಾಕೇಶ್ ಬಾಪ್ನಾ ಹಾಗೂ ಜಿತೇಂದ್ರ ಕೊಠರಿಯಾ ವಿರುದ್ಧ ಬೆಂಗಳೂರು ಠಾಣೆಯಲ್ಲಿ ಎಸಿಯು ಎಫ್ ಐಆರ್ ದಾಖಲಿಸಿದೆ.  ಐಪಿಸಿ ಸೆಕ್ಷನ್ 420 ಸೇರಿದಂತೆ ನಾಲ್ಕು ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಸಂಬಂಧ ಆಟಗಾರ್ತಿ ಆರೋಪಿಯೊಬ್ಬನ ಜೊತೆಗೆ ಮಾತಾಡಿರುವ ದೂರವಾಣಿ ಸಂಭಾಷಣೆ ದಾಖಲೆ ಇದೆ ಎಂದು ಅವರು ಹೇಳಿದ್ದಾರೆ. 

ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಮ್ಯಾನೇಜರ್ ರೀತಿಯಲ್ಲಿ ಗುರುತಿಸಿಕೊಳ್ಳಲು ಯತ್ನಿಸುತ್ತಿದ್ದ ಕೊಠಾರಿಯಾ, ಬಾಪ್ನಾನನ್ನು ಆಟಗಾರ್ತಿಗೆ ಪರಿಚಯಿಸಿದ್ದ. ಆಕೆಯನ್ನು ಮ್ಯಾಚ್ ಫಿಕ್ಸಿಂಗ್ ಗೆ ಆತನೇ ಮನವೊಲಿಸುತ್ತಿದ್ದ ಎಂಬುದು ತಿಳಿದುಬಂದಿದೆ. 

 ಭಾರತ- ಇಂಗ್ಲೆಂಡ್ ನಡುವಣ ಸರಣಿಯಲ್ಲಿ ಪಂದ್ಯವೊಂದಕ್ಕೆ 1 ಲಕ್ಷ ರೂಪಾಯಿ ಕೊಡುವುದಾಗಿ ಬಾಪ್ನಾ ಆಟಗಾರ್ತಿಗೆ ಆಮಿಷವೊಡ್ಡಿದ್ದ. ಒಡಿಶಾ ಮೂಲದ ಬಾಪ್ನಾ, ವಾಟ್ಸಾಪ್ ಮೂಲಕ ಕರೆ ಮಾಡುತ್ತಿದ್ದ. ಇದು ಬೇಡ ಎಂದು ಹೇಳಿ ರೆಗ್ಯುಲರ್ ನಂಬರ್ ಗೆ ಕರೆ ಮಾಡುವಂತೆ  ಆ ಆಟಗಾರ್ತಿ ಹೇಳಿರುವುದು ಕಂಡುಬಂದಿದೆ ಎಂದು ಶೇಖಾವತ್ ತಿಳಿಸಿದ್ದಾರೆ. 

SCROLL FOR NEXT