ಕ್ರಿಕೆಟ್

ದ್ರಾವಿಡ್ ಟೀಮ್‌ ಇಂಡಿಯಾದ ಕೋಚ್‌ ಸ್ಥಾನ ನಿರಾಕರಿಲು ಅಸಲಿ ಕಾರಣ ಬಯಲು

Lingaraj Badiger

ನವದೆಹಲಿ: ಟೀಮ್‌ ಇಂಡಿಯಾ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಜೊತೆಗಿನ ಬಾಂಧವ್ಯ ಹದಗೆಟ್ಟಿದ್ದ ಕಾರಣ 2017ರಲ್ಲಿ ಅಚಾನಕ್ಕಾಗಿ ಭಾರತ ತಂಡದ ಮುಖ್ಯ ಕೋಚ್‌ ಹುದ್ದೆಯಿಂದ ಮಾಜಿ ನಾಯಕ ಅನುಲ್‌ ಕುಂಬ್ಳೆ ಕೆಳಗಿಳಿದಿದ್ದರು.

ಅಂದು ಬಿಸಿಸಿಐ ಆಡಳಿತ ನಡೆಸುತ್ತಿದ್ದ ಸುಪ್ರೀಂ ಕೋರ್ಟ್‌ ನೇಮಿತ ಆಡಳಿತ ಸಮಿತಿಯ ಮುಖ್ಯಸ್ಥ ವಿನೋದ್‌ ರಾಯ್‌, ಕೂಡಲೇ ಭಾರತ ಕಿರಿಯರ ಮತ್ತು ಭಾರತ 'ಎ' ತಂಡದ ಕೋಚ್‌ ಆಗಿದ್ದ ರಾಹುಲ್‌ ದ್ರಾವಿಡ್‌ ಅವರನ್ನು ಟೀಮ್‌ ಇಂಡಿಯಾ ಕೋಚ್‌ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದರು ಎಂಬುದನ್ನು ಇದೀಗ ಬಹಿರಂಗ ಪಡಿಸಿದ್ದಾರೆ.

ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌, ಭವಿಷ್ಯದ ತಾರೆಗಳನ್ನು ರೂಪಿಸುವ ಉದ್ದೇಶದಿಂದ ಭಾರತ 'ಎ' ಮತ್ತು ಭಾರತ ಕಿರಿಯರ(19 ವರ್ಷದೊಳಗಿನವರ) ತಂಡದ ಮುಖ್ಯ ಕೋಚ್‌ ಆಗಿದ್ದ ಕಾರಣ ಅವರ ಮೇಲೆ ಜವಾಬ್ದಾರಿಗಳು ಹೆಚ್ಚಿದ್ದವು. ಈ ಮಧ್ಯೆ ತಮ್ಮ ಕುಟುಂಬದ ಕಡೆಗೆ ಗಮನ ನೀಡುವ ಉದ್ದೇಶದಿಂದ ಭಾರತ ತಂಡದ ಮುಖ್ಯ ಕೋಚ್‌ ಆಗಲು ನಿರಾಕರಿಸಿದ್ದರು ಎಂದು ವಿನಾದ್‌ ರಾಯ್‌ ಇದೀಗ ಹೇಳಿಕೊಂಡಿದ್ದಾರೆ. 

"ಟೀಮ್‌ ಇಂಡಿಯಾ ಮುಖ್ಯ ಕೋಚ್‌ ಸ್ಥಾನಕ್ಕೆ ರಾಹುಲ್‌ ನಮ್ಮ ಆಯ್ಕೆ ಆಗಿತ್ತು. ಅಂತೆಯೇ ಅವರನ್ನ ಸಂಪರ್ಕಿಸಿದ್ದೆವು ಕೂಡ. ಆದರೆ, 'ನೋಡಿ ನನಗೆ ಇಬ್ಬರು ಬೆಳೆಯುತ್ತಿರುವ ಮಕ್ಕಳಿದ್ದಾರೆ. ಭಾರತ ತಂಡದಲ್ಲಿ ಆಡುತ್ತಿರುವಾಗ ಪ್ರವಾಸವೇ ಹೆಚ್ಚಿದ್ದ ಕಾರಣ ಅವರ ಕಡೆಗೆ ಗಮನ ನೀಡಿಲ್ಲ. ಈಗ ಮನೆಯಲ್ಲೇ ಉಳಿದು ಅವರತ್ತ ಮತ್ತು ಕುಟುಂಬದ ಕಡೆಗೆ ಗಮನ ನೀಡಬೇಕೆಂದಿದ್ದೇನೆ.' ಎಂದಿದ್ದರು. ಅವರ ಆಯ್ಕೆ ಸಮಂಜಸವಾಗಿತ್ತು ಕೂಡ. ಹೀಗಾಗಿ ನಾವು ಒತ್ತಾಯ ಮಾಡಲಿಲ್ಲ. ಇಲ್ಲವಾದರೆ ಕೋಚ್‌ ಹುದ್ದೆಗೆ ಅವರೇ ಮುಂಚೂಣಿಯಲ್ಲಿ ಇದ್ದದ್ದು," ಎಂದು ವಿನೋದ್‌ ರಾಯ್‌ ಹೇಳಿದ್ದಾರೆ.

SCROLL FOR NEXT