ಕ್ರಿಕೆಟ್

ಪಾಕ್ ವಿರುದ್ಧದ 2007ರ ಟಿ20 ವಿಶ್ವಕಪ್‌ನ ಬೌಲ್‌ಔಟ್‌ ಘಟನೆ ಸ್ಮರಿಸಿದ ವೆಂಕಟೇಶ್‌ ಪ್ರಸಾದ್‌

Vishwanath S

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ 2007ರ ಐಸಿಸಿ ಟಿ20 ಉದ್ಘಾಟನಾ ವಿಶ್ವಕಪ್‌ ಟೂರ್ನಿಯು ಅಚ್ಚರಿಯಿಂದ ಕೂಡಿತ್ತು. ಏಕೆಂದರೆ, ಮೊದಲ ಚುಟುಕು ವಿಶ್ವಕಪ್‌ ಆಗಿದ್ದರಿಂದ ಆಟಗಾರರೆಲ್ಲರಿಗೂ ನಿಯಮಗಳೆಲ್ಲವೂ ಹೊಸದಾಗಿ ಕಾಣುತ್ತಿತ್ತು. ಆದರೆ, ತಂಡದ ಆಟಗಾರರಿಗೆ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. ವಿಶೇಷವೇನೆಂದರೆ ಪಂದ್ಯ ಟೈಯಾದರೆ ಬೌಲ್ ಔಟ್‌ ಪರಿಚಯ ಮಾಡಿಸಲಾಗಿತ್ತು.

ಫುಟ್‌ಬಾಲ್‌ ಹಾಗೂ ಹಾಕಿಯಿಂದ ಉತ್ತೇಜನಗೊಂಡು ಮೊದಲ ಟಿ20 ವಿಶ್ವಕಪ್‌ಗೆ ಬೌಲ್‌ ಔಟ್‌ ಪರಿಚಯ ಮಾಡಿಸಲಾಗಿತ್ತು. ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಭಾರತ ತಂಡ ಉದ್ಘಾಟನಾ ಟಿ20 ವಿಶ್ವಕಪ್‌ ಗೆಲುವಿನ ಹಾದಿಯನ್ನು ಕ್ರಿಕೆಟ್‌ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. 

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎರಡು ಬಾರಿ ಸೋಲಿಸಿತ್ತು. ಫೈನಲ್‌ ಹಣಾಹಣಿಯಲ್ಲಿ ಮಣಿಸಿ ಭಾರತ ಚೊಚ್ಚಲ ಚುಟುಕು ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು.

ಫೈನಲ್‌ಗೂ ಮುನ್ನ ಗುಂಪು ಹಂತದ ಪಂದ್ಯದಲ್ಲೂ ಭಾರತ ತಂಡ ಪಾಕಿಸ್ತಾನದ ವಿರುದ್ಧ ರೋಚಕವಾಗಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ 20 ಓವರ್‌ಗಳಿಗೆ 141 ರನ್‌ಗಳಿಸಿದ್ದವು. ಪಂದ್ಯ ಟೈ ಆಗಿತ್ತು. ಫಲಿತಾಂಶಕ್ಕಾಗಿ ಬೌಲ್‌ ಔಟ್‌ಗೆ ಮೊರೆ ಹೋಗಲಾಗಿತ್ತು. ಇದು ವಿಶ್ವಕಪ್‌ನಲ್ಲಿಯೇ ಮೊದಲ ಬೌಲ್‌ ಔಟ್‌ ಆಗಿತ್ತು.

ಭಾರತ ತಂಡದ ಮೊದಲು ಚೆಂಡು ಕೈಗೆತ್ತಿಕೊಂಡಿತು. ವಿರೇಂದ್ರ ಸೆಹ್ವಾಗ್‌ ಮೊದಲ ಪ್ರಯತ್ನದಲ್ಲಿಯೇ ವಿಕೆಟ್‌ ಎಗರಿಸಿದರು. ನಂತರ, ಇನ್ನುಳಿದ ಸತತ ಎರಡೂ ಪ್ರಯತ್ನಗಳಲ್ಲಿ ರಾಬಿನ್‌ ಉತ್ತಪ್ಪ ಹಾಗೂ ಹರಭಜನ್‌ ಸಿಂಗ್‌ ಕೂಡ ವಿಕೆಟ್‌ಗೆ ಚೆಂಡು ಹಾಕಿದರು. ಆದರೆ, ಪಾಕಿಸ್ತಾನ ತಂಡ ಹಾಕಿದ ಮೂರು ಎಸೆತಗಳಲ್ಲಿ ಒಮ್ಮೆಯೂ ಚೆಂಡು ವಿಕೆಟ್‌ಗೆ ತಾಗಲೇ ಇಲ್ಲ. ಅಂತಿಮವಾಗಿ ಭಾರತ ಜಯ ಸಾಧಿಸಿತು.

ಆ ವೇಳೆ ಭಾರತ ತಂಡದ ಬೌಲಿಂಗ್‌ ಕೋಚ್‌ ಕರ್ನಾಟಕದ ವೆಂಕಟೇಶ್‌ ಪ್ರಸಾದ್‌ ಆಗಿದ್ದರು. ವಿರೇಂದ್ರ ಸೆಹ್ವಾಗ್ ಹಾಗೂ ರಾಬಿನ್ ಉತ್ತಪ್ಪ ಅವರು ನಿಯಮಿತ ಬೌಲರ್‌ಗಳಲ್ಲದೇ ಇದ್ದರೂ, ಅವರಿಗೆ ಬೌಲ್‌ ಔಟ್‌ನಲ್ಲಿ ಏಕೆ ಚೆಂಡು ನೀಡಲಾಗಿತ್ತು ಎಂಬುದಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ನಾವು ವಿಶ್ವಕಪ್‌ ನಿಯಮಗಳನ್ನು ಅನುಸರಿಸಿದ್ದೆವು. ಆಗ ಪಂದ್ಯ ಟೈ ಆದಾಗ ಸೂಪರ್ ಓವರ್ ಇರಲಿಲ್ಲ, ಬೌಲ್ ಔಟ್ ಇತ್ತು. ಈ ಕಾರಣದಿಂದ ನಾವು ಅದನ್ನು ನೆಟ್ಸ್‌ನಲ್ಲಿ ನಿಯಮಿತವಾಗಿ ಅಭ್ಯಾಸ ನಡೆಸಿದ್ದೆವು ಎಂದು ವೆಂಕಟೇಶ್‌ ಪ್ರಸಾದ್‌ 'ಡಿಎಸ್‌ಆರ್‌ ವಿಥ್‌ ಅಶ್‌' ಯೂಟ್ಯೂಬ್‌ ಶೋನಲ್ಲಿಆರ್‌. ಅಶ್ವಿನ್‌ ಜತೆ 2007 ವಿಶ್ವಕಪ್‌ ಬೌಲ್‌ ಔಟ್‌ ಘಟನೆಯನ್ನು ಸ್ಮರಿಸಿಕೊಂಡರು.

ಆಗ ನಾವು ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳಿಗೆ ಬೌಲ್‌ ಔಟ್‌ ಸ್ಪರ್ಧೆ ಏರ್ಪಡಿಸಿದ್ದೆವು. ಆ ವೇಳೆ ಬಹುತೇಕ ಬ್ಯಾಟ್ಸ್‌ಮನ್‌ಗಳು ವಿಕೆಟ್‌ಗೆ ಚೆಂಡು ತಾಗಿಸುವಲ್ಲಿ ಯಶಸ್ವಿಯಾದರು. ಎಂ.ಎಸ್‌ ಧೋನಿ, ಸೆಹ್ವಾಗ್‌ ಹಾಗೂ ರಾಬಿನ್‌ ಉತ್ತಪ್ಪ ವಿಕೆಟ್‌ಗೆ ಚೆಂಡು ಹಾಕುವುದರಲ್ಲಿ ಚೆನ್ನಾಗಿ ಪಳಗಿದ್ದರು ಎಂದು ಪ್ರಸಾದ್‌ ವಿವರಿಸಿದರು.

ನಾನು ಎಲ್ಲವನ್ನು ವಿಕೆಟ್‌ ಹಿಂದಿನಿಂದ ನಿಂತು ನೋಡುತ್ತಿದ್ದೆ. ವಿಕೆಟ್‌ಗೆ ಚೆಂಡು ಹೊಡೆಯುವಲ್ಲಿ ಯಾರು ಸ್ಥಿರತೆಯನ್ನು ಹೊಂದಿದ್ದಾರೆ ಎಂಬುದು ಗೊತ್ತಿತ್ತು. ಈ ಕಾರಣದಿಂದಲೇ ವಿರೇಂದ್ರ ಸೆಹ್ವಾಗ್‌, ರಾಬಿನ್‌ ಉತ್ತಪ್ಪ ಹಾಗೂ ಹರಭಜನ್‌ ಸಿಂಗ್‌ ಅವರನ್ನುಅಂತಿಮಗೊಳಿಸಿದೆವು ಎಂದು ಮಾಜಿ ಭಾರತ ತಂಡದ ವೇಗಿ ತಿಳಿಸಿದರು.

SCROLL FOR NEXT