ಕ್ರಿಕೆಟ್

2ನೇ ಏಕದಿನ: ಮೇಲುಗೈ ಸಾಧಿಸಿದ್ದ ಲಂಕಾಗೆ ಭಾರತ ತಂಡ ಚಾಂಪಿಯನ್ ಗಳ ರೀತಿ ತಿರುಗೇಟು ನೀಡಿದೆ: ರಾಹುಲ್ ದ್ರಾವಿಡ್

Srinivasamurthy VN

ಕೊಲಂಬೊ: ತೀವ್ರ ಕುತೂಹಲ ಕೆರಳಿಸಿದ್ದ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಕೈಯಿಂದ ಗೆಲುವು ಕಸಿದ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಸಂತಸ ಹಂಚಿಕೊಂಡಿದ್ದು, ಭಾರತ ತಂಡ ಚಾಂಪಿಯನ್ ಗಳ ರೀತಿ ತಿರುಗೇಟು ನೀಡಿದೆ ಎಂದು ಹೇಳಿದ್ದಾರೆ.

ಪಂದ್ಯ ಮುಕ್ತಾಯದ ಬಳಿಕ ಡ್ರೆಸ್ಸಿಂಗ್ ಕೋಣೆಯಲ್ಲಿ ಆಟಗಾರರೊಂದಿಗೆ ವಿಜಯದ ಸಂತಸ ಹಂಚಿಕೊಂಡ ರಾಹುಲ್ ದ್ರಾವಿಡ್, ಅವರು ಉತ್ತಮವಾಗಿ ಆಡಿದರು. ಅವರ ಆಟಕ್ಕೆ ನಾವು ತಕ್ಕ ತಿರುಗೇಟು ನೀಡಿದೆವು. ನಾವು ಎದುರಾಳಿಗಳನ್ನು ಗೌರವಿಸಬೇಕು. ಅವರದ್ದು ಅಂತಾರಾಷ್ಟ್ರೀಯ ತಂಡ ಕೂಡ ಆಗಿದೆ. ಅವರು  ಉತ್ತಮ ಪ್ರದರ್ಶನದೊಂದಿಗೆ ನಮ್ಮ ಮೇಲೆ ಒತ್ತಡ ಹೇರಿದರು. ನಾವು ಚಾಂಪಿಯನ್ ಗಳ ರೀತಿಯಲ್ಲಿ ಅವರಿಗೆ ಪ್ರತಿಕ್ರಿಯಿಸಿದೆವು ಎಂದು ದ್ರಾವಿಡ್ ಹೇಳಿದ್ದಾರೆ.

"ನಿಸ್ಸಂಶಯವಾಗಿ ಅದು ನಂಬಲಾಗದ ಮತ್ತು ಅದ್ಭುತವಾದ ಫಲಿತಾಂಶವಾಗಿತ್ತು. ವೈಯಕ್ತಿಕ ಆಟಗಾರರ ಬಗ್ಗೆ ಮಾತನಾಡಲು ಸಮಯವಲ್ಲ. ಆದರೆ ಕೊನೆಯಲ್ಲಿ ಅದ್ಭುತವಾದ ವೈಯಕ್ತಿಕ ಪ್ರದರ್ಶನಗಳಿವೆ. ಇದು ಅತ್ಯಂತ ಅದ್ಭುತವಾದ ತಂಡದ ಪ್ರದರ್ಶನವಾಗಿತ್ತು ಎಂದು ದ್ರಾವಿಡ್ ಹೇಳಿದರು.

ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಈ ವಿಡಿಯೋ ಕ್ರಿಕೆಟ್ ಪ್ರೇಮಿಗಳು ವ್ಯಾಪಕ ಫಿದಾ ಆಗಿದ್ದಾರೆ. 

ಕೊನೆಯ ಮೂರು ಓವರ್‌ ಗಳಲ್ಲಿ ಗೆಲ್ಲಲು ಭಾರತಕ್ಕೆ 16 ರನ್‌ಗಳ ಅಗತ್ಯವಿತ್ತು. ಭುವನೇಶ್ವರ್ ಕುಮಾರ್ ಮತ್ತು ದೀಪಕ್ ಚಹರ್ ಜೋಡಿಯು ತಂಡವು ಯಾವುದೇ ವಿಕೆಟ್‌ಗಳನ್ನು ಕಳೆದುಕೊಳ್ಳದಂತೆ ನೋಡಿಕೊಂಡರು. ಬಳಿಕ ಚಹರ್ ಬೌಂಡರಿ ಸಿಡಿಸುವ ಮೂಲಕ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ  ಲಂಕಾ ತಂಡದಿಂದ ಗೆಲುವು ಕಸಿದರು. ಈ ಗೆಲುವಿನೊಂದಿಗೆ ಭಾರತ 2-0 ಅಂತರದಲ್ಲಿ ಸರಣಿ ಮುನ್ನಡೆ ಸಾಧಿಸಿದೆ.

ಬಳಿಕ ಮಾತನಾಡಿದ್ದ ವಿನ್ನಿಂಗ್ ಹೀರೋ ದೀಪಕ್ ಚಹರ್, ಪಂದ್ಯದ ಗೆಲುವು ಸಂತಸ ನೀಡಿದೆ. ನಾವು 50 ಓವರ್‌ಗಳಿಗೆ ನಾವು ಫೀಲ್ಡಿಂಗ್ ಮಾಡಿದ್ದೆವು. ನನ್ನ ಬ್ಯಾಟಿಂಗ್ ಪ್ರದರ್ಶನ ಖುಷಿ ನೀಡಿತು ಎಂದು ದೀಪಕ್ ಚಹರ್ ವೀಡಿಯೊದಲ್ಲಿ ಹೇಳಿದ್ದಾರೆ.  

ಇತ್ತ ಧವನ್ ಪಡೆ ಲಂಕಾ ತಂಡದ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆಯೇ ಅತ್ತ ಇಂಗ್ಲೆಂಡ್ ನ ಡರ್ಹಾಮ್ ನಲ್ಲಿರುವ ವಿರಾಟ್ ಕೊಹ್ಲಿ ಪಡೆ ಗೆಲುವಿನ ಸಂಭ್ರಮಾಚರಣೆ ನಡೆಸಿತು. ಅಲ್ಲದೆ ತಂಡದ ಆಟಗಾರರಿಗೆ ಶುಭ ಕೋರಿತು.
 

SCROLL FOR NEXT