ಕೋಲ್ಕತ್ತಾ ನೈಟ್ ರೈಡರ್ಸ್ ವೇಗಿ ಪ್ರಸಿದ್ಧ್ ಕೃಷ್ಣಅವರಿಗೆ ಕೊರೋನಾ ದೃಢವಾಗಿದೆ. ಸದ್ಯ ಅವರು ಬೆಂಗಳೂರಿನಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಬಿಸಿಸಿಐ ಮೂಲವು ಶನಿವಾರ ತಿಳಿಸಿದೆ.
ಶುಕ್ರವಾರ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ತಂಡದಲ್ಲಿ ಸ್ಥಾನ ಪಡೆದ 25 ವರ್ಷದ ಕ್ರಿಕೆಟಿಗ ಪ್ರಸಿದ್ಧ್ ಕೃಷ್ಣ ಕೊರೋನಾ ಸೋಂಕು ಖಚಿತವಾಗಿರುವ ಕೆಕೆಆರ್ ಟೀಂನ ನಾಲ್ಕನೇ ಆಟಗಾರರೆನಿಸಿದ್ದಾರೆ. ಇದಕ್ಕೆ ಮುನ್ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ ಮತ್ತು ಟಿಮ್ ಸೀಫರ್ಟ್ ಅವರಿಗೆ ಕೋವಿಡ್ ಕಾಣಿಸಿಕೊಂಡಿತ್ತು.
ಬಿಸಿಸಿಐ ಮೂಲದ ಪ್ರಕಾರ, ಕೃಷ್ಣ ಮತ್ತು ವಾರಿಯರ್ ಇಬ್ಬರೂ ತರಬೇತಿ ಅವಧಿಯಲ್ಲಿ ಚಕ್ರವರ್ತಿ ಅವರಿಂದ ಸೋಂಕಿಗೆ ತುತ್ತಾಗಿದ್ದಾರೆ. ಕೃಷ್ಣ ಚಕ್ರವರ್ತಿಯ ಆಪ್ತ ಸ್ನೇಹಿತರಾಗಿದ್ದಾರೆ ಎಂದು ಹೇಳಲಾಗಿದೆ.
ನ್ಯೂಜಿಲೆಂಡ್‌ನ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸೀಫರ್ಟ್ ಅವರು ಅಹಮದಾಬಾದ್‌ನಲ್ಲಿದ್ದು ಅವರನ್ನು ಚೆನ್ನೈಗೆ ಸ್ಥಳಾಂತರಿಸಿ ಚಿಕಿತ್ಸೆ ಒದಗಿಸಲಾಗುವುದು.
ಬಯೋ ಬಬಲ್ ಹೊರತಾಗಿಯೂ ಹಲವಾರು ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸದಸ್ಯರಿಗೆ ಸೋಂಕು ತಗುಲಿದ ನಂತರ ಐಪಿಎಲ್ ಅನ್ನು ಅನಿರ್ದಿಷ್ಟಾವಧಿಗೆ ಮುಂಡೂಡಲಾಗಿದೆ.